Bajrang Puniya on BJP:ದೇಶದ ತಾರಾ ಕುಸ್ತಿಪಟು ಹಾಗೂ ಒಲಿಂಪಿಕ್ ಪದಕ ವಿಜೇತ ಬಜರಂಗ್ ಪುನಿಯಾ ಅವರ ವಿರುದ್ಧ ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ (NADA) ನಾಲ್ಕು ವರ್ಷಗಳ ಕಾಲ ನಿಷೇಧ ಹೇರಿದ್ದು, ಈ ಸಲುವಾಗಿ ಪುನಿಯಾ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. "ಬಿಜೆಪಿ ಸರ್ಕಾರ ಮತ್ತು ಫೆಡರೇಶನ್ ನನ್ನ ವೃತ್ತಿಜೀವನ ನಾಶಪಡಿಸಲು ಉದ್ದೇಶಪೂರ್ವಕವಾಗಿ ನಿಷೇಧ ಹೇರಿದೆ" ಎಂದು ಗಂಭೀರ ಆರೋಪ ಮಾಡಿದ್ದಾರೆ.
ಈ ಕುರಿತು ತಮ್ಮ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಮಾಡಿರುವ ಅವರು, "ಈ ನಾಲ್ಕು ವರ್ಷಗಳ ನಿಷೇಧ ನನ್ನ ವಿರುದ್ಧದ ವೈಯಕ್ತಿಕ ದ್ವೇಷ ಮತ್ತು ರಾಜಕೀಯ ಪಿತೂರಿ. ಮಹಿಳಾ ಕುಸ್ತಿಪಟುಗಳನ್ನು ಬೆಂಬಲಿಸಿ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ಚಳವಳಿಗೆ ಸೇಡು ತೀರಿಸಿಕೊಳ್ಳಲು ಇಂಥ ಕ್ರಮ ಕೈಗೊಳ್ಳಲಾಗಿದೆ. ಆದರೆ ಆ ಚಳವಳಿಯಲ್ಲಿ ನಾವು ಅನ್ಯಾಯ ಮತ್ತು ಶೋಷಣೆಯ ವಿರುದ್ಧ ಧ್ವನಿ ಎತ್ತಿದ್ದೆವು" ಎಂದು ತಿಳಿಸಿದ್ದಾರೆ.
ಮುಂದುವರೆದು, "ಡೋಪಿಂಗ್ ಪರೀಕ್ಷೆಗೆ ಒಳಗಾಗಲು ನಾನೆಂದಿಗೂ ನಿರಾಕರಿಸಿಲ್ಲ. ನಾಡಾ ತಂಡ ಪರೀಕ್ಷೆಗೆಂದು ನನ್ನಲ್ಲಿಗೆ ಬಂದಾಗ ಅವರಲ್ಲಿದ್ದ ಡೋಪ್ ಕಿಟ್ ಅವಧಿ ಮುಗಿದಿತ್ತು. ಇದು ಗಂಭೀರ ನಿರ್ಲಕ್ಷ್ಯ. ಹಾಗಾಗಿ, ಮಾನ್ಯವಾದ ಮತ್ತು ಮೌಲ್ಯೀಕರಿಸಿದ ಕಿಟ್‌ನೊಂದಿಗೆ ಪರೀಕ್ಷೆ ಮಾಡುವಂತೆ ನಾನು ತಿಳಿಸಿದ್ದೆ. ಏಕೆಂದರೆ ನನ್ನ ಆರೋಗ್ಯವನ್ನು ಕಾಪಾಡಿಕೊಳ್ಳುವುದೂ ಸಹ ಅಗತ್ಯ. ಆದರೆ, ಇದನ್ನು ಉದ್ದೇಶಪೂರ್ವಕವಾಗಿ ನನ್ನ ವಿರುದ್ಧ ಅಸ್ತ್ರವಾಗಿ ಬಳಸಿಕೊಂಡಿದ್ದಾರೆ" ಎಂದು ದೂರಿದ್ದಾರೆ.