Aus vs SA:ಚಾಂಪಿಯನ್ಸ್ ಟ್ರೋಫಿಯ ಭಾಗವಾಗಿ ಇಂದು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ನಡುವೆ ಮೆಗಾ ಫೈಟ್ ನಡೆಯಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡ ಸೆಮಿಫೈನಲ್ಗೆ ಪ್ರವೇಶ ಪಡೆಯಲಿದೆ. ಈಗಾಗಲೇ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಚಾಂಪಿಯನ್ಸ್ ಟ್ರೋಫಿಯಲ್ಲಿ ತಲಾ ಎರಡು ಪಂದ್ಯ ಗೆದ್ದು ಸೆಮಿಫೈನಲ್ಗೆ ಲಗ್ಗೆ ಇಟ್ಟಿವೆ. ಇಂದು ಮೂರನೇ ತಂಡದ ನಿರ್ಧಾರವಾಗಲಿದೆ.
ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಎರಡೂ ತಂಡಗಳು ಬಲಿಷ್ಠ ಆಗಿದ್ದು ಸದ್ಯ ನಡೆಯುತ್ತಿರುವ ಟೂರ್ನಿಯಲ್ಲಿ ಮೊದಲ ಪಂದ್ಯವನ್ನು ಗೆದ್ದುಕೊಂಡಿವೆ. ಗ್ರೂಪ್ ಹಂತದ ಪಂದ್ಯದಲ್ಲಿ ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿದ್ದರೆ, ದಕ್ಷಿಣ ಆಫ್ರಿಕಾ ಅಫ್ಘಾನ್ ವಿರುದ್ದ ಜಯಗಳಿಸಿದೆ.
ಹೆಡ್ ಟು ಹೆಡ್ ದಾಖಲೆ:ಚಾಂಪಿಯನ್ಸ್ ಟ್ರೋಫಿಯಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಒಮ್ಮೆಯೂ ಮುಖಾಮುಖಿಯಾಗಿಲ್ಲ. ಆದರೆ, ಈ ಎರಡೂ ತಂಡಗಳು ಕೊನೆಯ ಬಾರಿಗೆ 2023ರ ಏಕದಿನ ವಿಶ್ವಕಪ್‌ನಲ್ಲಿ ಎದುರು ಬದುರಾಗಿದ್ದವು. ಹರಿಣ ಪಡೆ, ಗುಂಪು ಹಂತದ ಪಂದ್ಯದಲ್ಲಿ ಆಸೀಸ್ ವಿರುದ್ಧ ಗೆಲುವು ಸಾಧಿಸಿತ್ತು. ಆದರೆ, ಆಸ್ಟ್ರೇ ಸೆಮಿಫೈನಲ್‌ನಲ್ಲಿ ಹರಿಣ ಪಡೆ ವಿರುದ್ಧ ಗೆಲುವು ಪಡೆದುಕೊಂಡಿದೆ.
ಈ ಎರಡೂ ತಂಡಗಳ ನಡುವೆ ಈ ವರೆಗೂ 110 ಏಕದಿನ ಪಂದ್ಯಗಳನ್ನು ನಡೆದಿವೆ. ಇದರಲ್ಲಿ ಆಸ್ಟ್ರೇಲಿಯಾ 51 ಪಂದ್ಯಗಳನ್ನು ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ 55 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಮೂರು ಪಂದ್ಯಗಳು ಟೈನಲ್ಲಿ ಅಂತ್ಯಗೊಂಡರೆ, ಒಂದು ಪಂದ್ಯ ಡ್ರಾನಲ್ಲಿ ಕೊನೆಗೊಂಡಿತು. ಆದರೆ ಕಳೆದ ಐದು ಏಕದಿನ ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ಮೇಲುಗೈ ಸಾಧಿಸಿದೆ. ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಪಂದ್ಯಗಳನ್ನು ಗೆದ್ದುಕೊಂಡಿದೆ, ಆಸ್ಟ್ರೇಲಿಯಾ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ.
ಸಂಭಾವ್ಯ ತಂಡಗಳು - ದಕ್ಷಿಣ ಆಫ್ರಿಕಾ ತಂಡ:ಟೆಂಬಾ ಬವುಮಾ (ನಾಯಕ), ರಯಾನ್ ರಿಕಲ್ಟನ್, ಟೋನಿ ಡಿಜಾಯ್, ರಾಸ್ ವ್ಯಾನ್ ಡೆರ್ ಡಸ್ಸೆನ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಮಲ್ಡರ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಲುಂಗಿ ಎನ್‌ಗಿಡಿ, ಶಮ್ಸಿ, ಹೆನ್ರಿಕ್ ಕ್ಲಾಸೆನ್, ಟ್ರಿಸ್ಟಾನ್ ಸ್ಟಬ್ಸ್, ಬೋಷ್
ಆಸ್ಟ್ರೇಲಿಯಾ:ಸ್ಟೀವ್ ಸ್ಮಿತ್ (ನಾಯಕ), ಜೋಶ್ ಇಂಗ್ಲಿಸ್, ಮ್ಯಾಥ್ಯೂ ಶಾರ್ಟ್, ಟ್ರಾವಿಸ್ ಹೆಡ್, ಮಾರ್ನಸ್ ಲ್ಯಾಬುಶೇನ್, ಅಲೆಕ್ಸ್ ಕ್ಯಾರಿ, ಬೆನ್ ದ್ವಾರ್ಶುಯಿಸ್, ಗ್ಲೆನ್ ಮ್ಯಾಕ್ಸ್‌ವೆಲ್, ಆಡಮ್ ಜಂಪಾ, ನಾಥನ್ ಎಲ್ಲಿಸ್, ಸ್ಪೆನ್ಸರ್ ಜಾನ್ಸನ್, ಸೀನ್ ಅಬಾಟ್, ಜ್ಯಾಕ್ ಫ್ರೇಸರ್-ಮೆಕ್‌ಗುರ್ಕ್, ಆರನ್ ಹಾರ್ಡಿ, ತನ್ವೀರ್ ಸಂಘ.
ಇದನ್ನೂ ಓದಿ:ಚಾಂಪಿಯನ್ಸ್ ಟ್ರೋಫಿ: ಬಾಂಗ್ಲಾ ವಿರುದ್ಧ ಗೆದ್ದ ಕಿವೀಸ್; ಸೆಮೀಸ್ ರೇಸ್ನಿಂದ ಪಾಕ್ ಔಟ್