ಕರಾಚಿ(ಪಾಕಿಸ್ತಾನ್): ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ ಶನಿವಾರ (ಜನವರಿ 20) ಮತ್ತೊಂದು ವಿವಾಹವಾಗಿದ್ದಾರೆ. ಶೋಯೆಬ್ ಅವರ ಎರಡನೇ ಮದುವೆ ಪಾಕಿಸ್ತಾನಿ ನಟಿ ಸನಾ ಜಾವೇದ್ ಅವರ ಜೊತೆ ನಡೆದಿದೆ. ಈ ವಿಚಾರವನ್ನು ದಂಪತಿ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದ್ದಾರೆ.
ಇವರಿಬ್ಬರೂ ಕೆಲ ದಿನಗಳಿಂದ ಡೇಟಿಂಗ್ ಮಾಡುತ್ತಿದ್ದರು ಎಂಬ ವರದಿಗಳು ಬಂದಿದ್ದವು. ಕಳೆದ ವರ್ಷ, ಸನಾ ಜಾವೇದ್ ಅವರ ಜನ್ಮದಿನದಂದು, ಶೋಯೆಬ್ ಅವರಿಗೆ ಸಾಮಾಜಿಕ ಮಾಧ್ಯಮದಲ್ಲಿ ಶುಭ ಹಾರೈಸಿದರು ಮತ್ತು ಈ ಸುದ್ದಿ ಬಲವಾಗಿತ್ತು. ಇತ್ತೀಚೆಗಷ್ಟೇ ಮದುವೆಯಾಗಿ ಈ ಸುದ್ದಿಯನ್ನು ನಿಜ ಮಾಡಿದ್ದಾರೆ. ಇನ್ನು ಸನಾ ತನ್ನ ಸಾಮಾಜಿಕ ಜಾಲತಾಣ ಖಾತೆಯಲ್ಲಿ ತನ್ನ ಹೆಸರನ್ನು 'ಸನಾ ಶೋಯೆಬ್ ಮಲಿಕ್' ಎಂದು ಬದಲಾಯಿಸಿಕೊಂಡಿದ್ದಾರೆ. ಇದು ಸನಾ ಜಾವೇದ್ ಅವರಿಗೆ ಎರಡನೇ ಮದುವೆ ಕೂಡ. ಅವರು 2020 ರಲ್ಲಿ ಗಾಯಕ ಉಮರ್ ಜೈಸ್ವಾಲ್ ಅವರನ್ನು ವಿವಾಹವಾಗಿದ್ದರು ಎನ್ನಲಾಗಿದೆ. ಆದರೆ ವೈಯಕ್ತಿಕ ಕಾರಣಗಳಿಂದ ಎರಡೇ ತಿಂಗಳಲ್ಲಿ ಇಬ್ಬರೂ ಬೇರೆ ಬೇರೆಯಾದರು. ಶೋಯೆಬ್ ಮಲಿಕ್ 2010 ರಲ್ಲಿ ತಮ್ಮ ಮೊದಲ ಪತ್ನಿ ಆಯೇಶಾ ಸಿದ್ದಿಕಿ ಜೊತೆ ವಿಚ್ಛೇದನ ಪಡೆದರು ಎಂದು ಹೇಳಲಾಗಿತ್ತು. ಆದರೆ ಇದರ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಅದೇ ವರ್ಷದ ಏಪ್ರಿಲ್‌ನಲ್ಲಿ ಭಾರತದ ಸ್ಟಾರ್ ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರನ್ನು ಅಧಿಕೃತವಾಗಿ ವಿವಾಹವಾಗಿದ್ದರು. 2018 ರಲ್ಲಿ ಅವರಿಗೆ ಗಂಡು ಮಗು ಸಹ ಜನಿಸಿತ್ತು. ಆದರೆ ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಶೋಯೆಬ್ ಮತ್ತು ಸಾನಿಯಾ ಬೇರ್ಪಡುತ್ತಿದ್ದಾರೆ ಎಂಬ ವರದಿಗಳು ಹರಿದಾಡಿದ್ದವು.