ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷೆಯಂತೆ 400 ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಿಲ್ಲ. ಆದರೆ, ಸರ್ಕಾರ ರಚನೆಗೆ ಬೇಕಾದ ಬಹುಮತ ಪಡೆದಿದೆ. ಕಳೆದ 10 ವರ್ಷಗಳಲ್ಲಿ ಸಿಕ್ಕಿದ್ದಕ್ಕಿಂತ ಭಿನ್ನವಾಗಿ ಫಲಿತಾಂಶ ಪಡೆದಿದೆ. ಸರ್ಕಾರ ರಚನೆಯಾದರೂ, ಸಮ್ಮಿಶ್ರ ಸರ್ಕಾರವಾಗಿರುತ್ತದೆ. ಬಿಜೆಪಿ ತನ್ನದೇ ಆದ ಸರ್ಕಾರವನ್ನು ರಚಿಸಲು ಇನ್ನೂ 42 ಸ್ಥಾನಗಳ ಕೊರತೆಯಿದೆ. ಹೀಗಾಗಿ ನಿತೀಶ್ ಕುಮಾರ್, ಚಂದ್ರಬಾಬು ನಾಯ್ಡು ಮತ್ತು ಜಯಂತ್ ಚೌಧರಿಯಂತಹ ಮೂರು ಜಾತ್ಯತೀತ ಮಿತ್ರರ ಮೇಲೆ ಅವಲಂಬಿತವಾಗಿದೆ. ಜೊತೆಗೆ, ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು (ಸಿಎಂಪಿ) ರೂಪಿಸಬೇಕಾದ ಅನಿವಾರ್ಯಕ್ಕೂ ಸಿಲುಕಲಿದೆ.
ಈ ಬಾರಿಯ ಸಂಸತ್ ಚುನಾವಣೆಯಲ್ಲಿ 400 ಸೀಟುಗಳನ್ನು ಗೆಲ್ಲುವುದು ಮಾತ್ರವಲ್ಲ, 2047ರ ವರೆಗೆ ಅಧಿಕಾರದಲ್ಲಿ ಇರಬೇಕೆಂಬ ಕನಸು ಕಾಣುತ್ತಿದ್ದ ಬಿಜೆಪಿಗೆ ಹೊಡೆತ ಬಿದ್ದಿದ್ದು ಹೇಗೆ?. ಪ್ರಸ್ತುತತೆಗಿಂತ ಭವಿಷ್ಯದ ಚಿಂತನೆಯು 2024 ರ ಸಂಸತ್ ಚುನಾವಣೆಯಲ್ಲಿ ಹಿನ್ನಡೆ ಉಂಟಾಗಲು ಕಾರಣವಾಯಿತೇ?. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಯು ಹಲವು ಕ್ಷೇತ್ರಗಳಲ್ಲಿ ತಂತ್ರ ರೂಪಿಸಿ ಸಲೀಸಾಗಿ ಗೆಲುವು ಪಡೆಯಲು ಸಾಧ್ಯವಾಯಿತು.
ಉತ್ತರ ಪ್ರದೇಶ ರಾಜ್ಯವೇ ಇದಕ್ಕೆ ನಿದರ್ಶನ. ಅತಿ ಹೆಚ್ಚು ಪ್ರಚಾರ ನಡೆಸಿದ ಪ್ರಧಾನಿ ನರೇಂದ್ರ ಮೋದಿ, ತಮಗೆ ಎದುರಾಳಿ ಇಲ್ಲ ಎಂಬಂತೆ ನಡೆದುಕೊಂಡರು. ಟಿಕೆಟ್ ಹಂಚಿಕೆ ವೇಳೆಯೂ ಅಭ್ಯರ್ಥಿಗಳ ಬದಲಾವಣೆ ಮಾಡಿದ್ದು, ಅನೇಕ ಹಾಲಿ ಸಂಸದರನ್ನು ಬದಲಿಸಿದ್ದು ಕೂಡ ಹಿನ್ನಡೆಗೆ ಕಾರಣವಾಯಿತು ಎಂದು ಹೇಳಬಹುದು. ಜೊತೆಗೆ ಧರ್ಮ ಸೂಕ್ಷ್ಮ ವಿಚಾರಗಳನ್ನು ಬಹಿರಂಗವಾಗಿ ಹೇಳಿದ್ದು, ಕೂಡ ಉತ್ತರಪ್ರದೇಶದಲ್ಲಿ ಪೆಟ್ಟು ನೀಡಿತು.
2024 ರ ಜನವರಿ 22 ರಂದು ಮೋದಿ ಸರ್ಕಾರದಿಂದ ರಾಮ ಮಂದಿರವನ್ನು ಉದ್ಘಾಟಿಸಲಾಯಿತು. ಸಂಸತ್ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಮರಳಲು ರಾಮ ಮಂದಿರದ ಪ್ರತಿಷ್ಠಾಪನೆಯ ದಿನಾಂಕವನ್ನೇ ಆಯ್ಕೆ ಮಾಡಿಕೊಳ್ಳಲಾಗಿತ್ತು. ಹಿಂದೂ ಸನ್ಯಾಸಿಯಾದ ಯೋಗಿ ಆದಿತ್ಯನಾಥರನ್ನು ರಾಜ್ಯದ ಸಿಎಂ ಆಗಿ ಮಾಡಿದ್ದು, ಪ್ರಚಾರದಲ್ಲಿ ಮಂದಿರ ನಿರ್ಮಾಣವನ್ನೇ ಬಳಸಿಕೊಂಡಿತು. ಆದರೆ, ಅದು ದೊಡ್ಡ ಯಶಸ್ಸನ್ನು ತಂದುಕೊಡಲಿಲ್ಲ. ಪ್ರತಿ ಚುನಾವಣೆಯಲ್ಲಿ ಯಾವುದೋ ದೊಡ್ ವಿಚಾರವನ್ನು ಮುನ್ನೆಲೆಗೆ ತಂದು ಮತ ಪಡೆಯಲಾಗುತ್ತಿತ್ತು. ಈ ಬಾರಿ 'ಮುಸ್ಲಿಂ' ಮೀಸಲಾತಿ ಬಳಸಿ ಮತ ಸೆಳೆಯುವ ತಂತ್ರ ಕೈಕೊಟ್ಟಿತು.
ಈಚೆಗೆ ಮುಗಿದ ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿಯು ಹಮಾಸ್- ಇಸ್ರೇಲ್ ಯುದ್ಧದಲ್ಲಿ ಸಿಲುಕಿದವರನ್ನು ಕರೆತಂದು ವಿಷಯವನ್ನು ಬಳಸಿಕೊಂಡಿತ್ತು. ಇದು ಬಿಜೆಪಿಗೆ ಅಪಾರ ಲಾಭವೂ ತಂದುಕೊಟ್ಟತು. ಇಂಥದ್ದನ್ನೇ ಲೋಕಸಭೆ ಚುನಾವಣೆಯಲ್ಲಿ ದೊಡ್ಡದಾಗಿ ಬಳಸಿಕೊಳ್ಳಲು ತಂತ್ರ ರೂಪಿಸಲಾಗಿತ್ತು. ಜೊತೆಗೆ ಕಾಂಗ್ರೆಸ್ ನಾಯಕರಾದ ರಾಹುಲ್ ಮತ್ತು ಪ್ರಿಯಾಂಕಾ ವಿಚಾರದಲ್ಲಿ ತಪ್ಪು ಹೆಜ್ಜೆಗಳನ್ನಿಟ್ಟರು. ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಬಿಜೆಪಿಯನ್ನು ಅದುರಿಸಲು ಸರ್ವಪ್ರಯತ್ನ ನಡೆಸಿದರು. ಎಕ್ಸಿಟ್ಪೋಲ್ನಲ್ಲಿ ಒಂದು ದಿನದ ಮಟ್ಟಿಗೆ ಬಿಜೆಪಿ ಖುಷಿ ಪಟ್ಟುಕೊಂಡಿತು. ಫಲಿತಾಂಶ ಮಾತ್ರ ಉಲ್ಟಾ ಬಂದಿತು.