ಕರ್ನಾಟಕ

karnataka

ETV Bharat / opinion

ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ಕರಡು ನೀತಿಯೊಂದಿಗೆ ನಕ್ಷತ್ರಗಳತ್ತ ದೃಷ್ಟಿ ನೆಟ್ಟಿದೆ: ಬಾಹ್ಯಾಕಾಶ ತಜ್ಞ ಗಿರೀಶ್ ಲಿಂಗಣ್ಣ - SPACE EXPERT GIRISH LINGANNA

ಬಾಹ್ಯಾಕಾಶ ತಜ್ಞ ಗಿರೀಶ್ ಲಿಂಗಣ್ಣ ಅವರು ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿಯ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

space-expert-girish-linganna
ಗಿರೀಶ್ ಲಿಂಗಣ್ಣ (ETV Bharat)

By ETV Bharat Karnataka Team

Published : Nov 24, 2024, 10:44 PM IST

ಬೆಂಗಳೂರು:ಕರ್ನಾಟಕ ರಾಜ್ಯ ಬಾಹ್ಯಾಕಾಶ ತಂತ್ರಜ್ಞಾನ ಕರಡು ನೀತಿಯನ್ನು ಬಿಡುಗಡೆಗೊಳಿಸುವ ಮೂಲಕ ರಾಜ್ಯವು ಚಂದ್ರ ಮತ್ತು ಅದರಾಚೆಗಿನ ನಕ್ಷತ್ರಗಳತ್ತ ದೃಷ್ಟಿಯನ್ನು ನೆಟ್ಟಿದೆ ಎಂದು ಬಾಹ್ಯಾಕಾಶ ತಜ್ಞ ಗಿರೀಶ್ ಲಿಂಗಣ್ಣ ಹೇಳಿದ್ದಾರೆ.

ಬೆಂಗಳೂರಿನಲ್ಲಿ ನವೆಂಬರ್ 20ರಿಂದ ನಡೆದ ಬೆಂಗಳೂರು ಟೆಕ್ ಸಮಾವೇಶದಲ್ಲಿ ಕರ್ನಾಟಕ ಸರ್ಕಾರ ಮಹತ್ವಾಕಾಂಕ್ಷಿಯ ಕರ್ನಾಟಕ ಬಾಹ್ಯಾಕಾಶ ತಂತ್ರಜ್ಞಾನ ನೀತಿ 2024-2029ರ ಕರಡು ವರದಿಯನ್ನು ಬಿಡುಗಡೆಗೊಳಿಸಿದೆ. ಈ ಕುರಿತು ಈಟಿವಿ ಭಾರತಕ್ಕೆ ಪ್ರತಿಕ್ರಿಯೆಯನ್ನು ನೀಡಿರುವ ಅವರು, ಈ ನೀತಿ ಸ್ಪಷ್ಟವಾದ ದೃಷ್ಟಿಯನ್ನು ಹೊಂದಿದೆ. ಬಾಹ್ಯಾಕಾಶ ತಂತ್ರಜ್ಞಾನ ವಲಯದಲ್ಲಿ ಕರ್ನಾಟಕವನ್ನು ಭಾರತದಲ್ಲಿ ಮತ್ತು ಜಾಗತಿಕ ಮಟ್ಟದಲ್ಲಿ ಒಂದು ಪ್ರಮುಖ ಶಕ್ತಿಯನ್ನಾಗಿಸುವುದು ನೀತಿಯ ಉದ್ದೇಶವಾಗಿದೆ ಎಂದಿದ್ದಾರೆ.

ಭಾರತ ಬಾಹ್ಯಾಕಾಶ ವಲಯದ ಮಾರುಕಟ್ಟೆಯಲ್ಲಿ ಶೇಕಡಾ 50ರಷ್ಟು ಪಾಲನ್ನು ಹೊಂದಿದೆ. ಈ ನೀತಿಯಿಂದ ಕರ್ನಾಟಕವನ್ನು ಭಾರತದ ತಂತ್ರಜ್ಞಾನದ ಕೇಂದ್ರ ಎನ್ನುವ ಸ್ಥಾನ ಮತ್ತಷ್ಟು ಭದ್ರವಾಗಲಿದೆ. ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯಲ್ಲಿ 5ರಷ್ಟು ಪಾಲು ಸಂಪಾದಿಸಲು ಅನುವು ಮಾಡಿಕೊಡಲಿದೆ. ಆ ಮೂಲಕ ಅಂತಾರಾಷ್ಟ್ರೀಯ ಬಾಹ್ಯಾಕಾಶ ಉದ್ಯಮಕ್ಕೆ ಮಹತ್ವದ ಕೊಡುಗೆ ನೀಡಲು ರಾಜ್ಯ ಮುಂದಾಗಿದೆ ಎಂದು ತಿಳಿಸಿದ್ದಾರೆ.

ಕರ್ನಾಟಕ ಭದ್ರ ತಳಹದಿಯನ್ನು ಹೊಂದಿದೆ: ಇಸ್ರೋ ಮತ್ತು ನ್ಯಾಷನಲ್ ಏರೋನಾಟಿಕ್ಸ್ ಲಿಮಿಟೆಡ್​ನಂತಹ ಪ್ರಮುಖ ಸಂಸ್ಥೆಗಳಿಗೆ ನೆಲೆಯಾಗಿದೆ. ಈಗಾಗಲೇ ಸಾಕಷ್ಟು ಸಂಖ್ಯೆಯ ಬಾಹ್ಯಾಕಾಶ ಸಂಬಂಧಿ ಸ್ಟಾರ್ಟಪ್ ಸಂಸ್ಥೆಗಳು ಕರ್ನಾಟಕದಿಂದ ಕಾರ್ಯ ನಿರ್ವಹಿಸುತ್ತಿವೆ. ಆಧುನಿಕ ಬಾಹ್ಯಾಕಾಶ ತಂತ್ರಜ್ಞಾನಗಳಿಗೆ ಅತ್ಯಂತ ಅವಶ್ಯಕವಾದ ಐಟಿ, ಸಾಫ್ಟ್‌ವೇರ್ ಮತ್ತು ಮಾಹಿತಿ ಸಂಸ್ಕರಣೆಯಲ್ಲಿ ಕರ್ನಾಟಕ ಭದ್ರ ತಳಹದಿಯನ್ನು ಹೊಂದಿದೆ ಎಂದು ಲಿಂಗಣ್ಣ ಹೇಳಿದ್ದಾರೆ.

ಬಾಹ್ಯಾಕಾಶ ನೀತಿಯಿಂದ ಉಪಗ್ರಹ ಅಭಿವೃದ್ಧಿ, ನಿರ್ಮಾಣ, ಉಡಾವಣೆ ಮತ್ತು ನಿರ್ವಹಣೆಗೆ ಅವಶ್ಯಕವಾದ ಸಮಗ್ರ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸಲು ಅನುವು ಮಾಡಿಕೊಡಲಿದೆ. ಶ್ರೀಹರಿಕೋಟಾದಂತಹ ಭಾರತೀಯ ಉಪಗ್ರಹ ಉಡಾವಣಾ ಕೇಂದ್ರಗಳಿಂದ ಕರ್ನಾಟಕ ನಿರ್ಮಿತ ಉಪಗ್ರಹಗಳನ್ನು ತಡೆಯಿಲ್ಲದೆ ಉಡಾವಣೆಗೊಳಿಸುವ ಕ್ರಮಕ್ಕೆ ಪುಷ್ಠಿ ನೀಡಲಿದೆ. ಕರ್ನಾಟಕ ಐಟಿ ಸಾಮರ್ಥ್ಯಗಳನ್ನು ಬಳಸಿಕೊಂಡು, ಯೋಜನೆಗಳ ರೂಪಿಸುವಿಕೆ, ಉಪಗ್ರಹ ಕಾರ್ಯಾಚರಣೆ, ಮತ್ತು ವೈವಿಧ್ಯಮಯ ಬಾಹ್ಯಾಕಾಶ ಬಳಕೆಗಳು ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಜಗತ್ತಿನ ಕುರಿತ ಅನ್ವೇಷಣೆಯನ್ನು ಹೆಚ್ಚಿಸಬೇಕು : ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣಾ ಉದ್ದೇಶಗಳಿಗೆ ಸಂಬಂಧಿಸಿದ ಬಾಹ್ಯಾಕಾಶ ತಂತ್ರಜ್ಞಾನಗಳನ್ನು ರೂಪಿಸಿ, ಅಳವಡಿಸಿಕೊಳ್ಳಬೇಕು. ಬಾಹ್ಯಾಕಾಶ ಸಂಶೋಧನೆ, ಖಗೋಳಶಾಸ್ತ್ರ, ಖಗೋಳ ಭೌತಶಾಸ್ತ್ರ, ವೈಜ್ಞಾನಿಕ ಜ್ಞಾನ ಮತ್ತು ಜಗತ್ತಿನ ಕುರಿತ ಅನ್ವೇಷಣೆಯನ್ನು ಹೆಚ್ಚಿಸಬೇಕು ಎನ್ನುವುದು ಪ್ರಮುಖ ಉದ್ದೇಶವಾಗಿದೆ ಎಂದಿದ್ದಾರೆ.

ಬಾಹ್ಯಾಕಾಶ ವಲಯದ ಉದ್ಯೋಗವನ್ನು ಹೆಚ್ಚಿಸಲು 5 ಸಾವಿರ ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ತರಬೇತಿ ನೀಡುವುದು. ಅದರಲ್ಲಿಯೇ 1.5 ಸಾವಿರ ಮಹಿಳೆಯರಿಗೆ ಆದ್ಯತೆ ನೀಡಿ, ಮಹಿಳಾ ಸಬಲೀಕರಣದತ್ತ ಕಾರ್ಯಾಚರಿಸುವುದು. ಶೈಕ್ಷಣಿಕ ಮತ್ತು ಔದ್ಯಮಿಕ ವಲಯಗಳ ನಡುವೆ ಇರುವ ಅಂತರವನ್ನು ಕಡಿಮೆಗೊಳಿಸುವುದು. ಈ ಮೂಲಕ, ಭಾರತ ಮತ್ತು ಜಾಗತಿಕ ಬಾಹ್ಯಾಕಾಶ ಸಂಸ್ಥೆಗಳಿಗೆ ಅವಶ್ಯಕವಾದ ಪ್ರತಿಭೆಗಳನ್ನು ಸಿದ್ಧಪಡಿಸುವುದು ನೀತಿಯ ಪ್ರಮುಖ ಗುರಿಯಾಗಿದೆ ಎಂದು ತಿಳಿಸಿದ್ದಾರೆ.

ಬಾಹ್ಯಾಕಾಶ ಉತ್ಪಾದನಾ ಸಮೂಹ ಸ್ಥಾಪಿಸುವುದು: ಪ್ರೋತ್ಸಾಹ ಧನ, ಔಟ್ ರೀಚ್, ಮತ್ತು ಪ್ರಚಾರ ಅಭಿಯಾನಗಳ ಮೂಲಕ 3 ಬಿಲಿಯನ್ ಡಾಲರ್ ಹೂಡಿಕೆಯನ್ನು ಆಕರ್ಷಿಸುವುದು. ಕರ್ನಾಟಕ ಬಾಹ್ಯಾಕಾಶ ವ್ಯವಸ್ಥೆಯನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಭಾರತ ಮತ್ತು ಅಂತಾರಾಷ್ಟ್ರೀಯ ಹೂಡಿಕೆದಾರರಿಂದ ನಿಧಿ ಸಂಗ್ರಹಿಸುವುದು. ಸಹಯೋಗ ಮತ್ತು ಆರ್ಥಿಕತೆಯ ಪ್ರಮಾಣವನ್ನು ಹೆಚ್ಚಿಸಲು ಬಾಹ್ಯಾಕಾಶ ಉತ್ಪಾದನಾ ಸಮೂಹಗಳನ್ನು ಸ್ಥಾಪಿಸುವುದು. ಸಾರ್ವಜನಿಕ ಮತ್ತು ಖಾಸಗಿ ಸಹಯೋಗದಲ್ಲಿ ಆಧುನಿಕ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸುವುದು. ರಾಜ್ಯಾದ್ಯಂತ ಮುಕ್ತ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಿ, ಅವುಗಳನ್ನು ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಬಳಕೆಗೆ ಒದಗಿಸುವುದು.

500 ಸ್ಟಾರ್ಟ್ ಅಪ್ ಸಂಸ್ಥೆಗಳು ಮತ್ತು ಎಂಎಸ್ಎಂಇಗಳಿಗೆ ಈಕ್ವಿಟಿ ಹೂಡಿಕೆ, ಐಪಿ ನೋಂದಣಿಗಳಿಗೆ, ಪರೀಕ್ಷೆಗಳಿಗೆ, ಸರ್ಟಿಫಿಕೇಶನ್ ಮತ್ತು ಮಾರ್ಕೆಟಿಂಗ್‌ಗೆ ಅನುದಾನ ಒದಗಿಸುವುದು. ಕರ್ನಾಟಕ ಮೂಲದ ಕಂಪನಿಗಳಿಗೆ ಉನ್ನತ ಮಟ್ಟದ ಸ್ಥಳೀಯ ತಂತ್ರಜ್ಞಾನದ ಮೂಲಕ 50ಕ್ಕೂ ಹೆಚ್ಚು ಉಪಗ್ರಹಗಳನ್ನು ಉಡಾವಣೆಗೊಳಿಸಲು ನೆರವಾಗುವುದು. ಬಾಹ್ಯಾಕಾಶ ತಂತ್ರಜ್ಞಾನದ ಪ್ರಯೋಜನಗಳು ಮತ್ತು ಬಳಕೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ನೀತಿಯ ಧ್ಯೇಯೋದ್ದೇಶವಾಗಿದೆ ಎಂದು ತಿಳಿಸಿದ್ದಾರೆ.

ಬಾಹ್ಯಾಕಾಶ ತಂತ್ರಜ್ಞಾನ ಬಳಕೆಯನ್ನು ಪ್ರಚುರಪಡಿಸುವುದು: ಡಿಜಿಟಲ್ ಪಬ್ಲಿಕ್ ಇನ್‌ಫ್ರಾಸ್ಟ್ರಕ್ಚರ್ ಮತ್ತು ಡಿಜಿಟಲ್ ಪಬ್ಲಿಕ್ ಗೂಡ್ಸ್​ಗಳನ್ನು ಬಳಸಿ, ಆಡಳಿತ ಮತ್ತು ಸಾರ್ವಜನಿಕ ಸೇವೆಯಲ್ಲಿ ಬಾಹ್ಯಾಕಾಶ ತಂತ್ರಜ್ಞಾನಗಳ ಬಳಕೆಯನ್ನು ಪ್ರಚುರಪಡಿಸುವುದು. ಆಡಳಿತ ಮತ್ತು ಸಾರ್ವಜನಿಕ ಸೇವೆಯನ್ನು ಉತ್ತಮಗೊಳಿಸಲು ಬಾಹ್ಯಾಕಾಶ ತಂತ್ರಜ್ಞಾನದ ಬಳಕೆಯನ್ನು ಗುರುತಿಸಿ ಬಳಸಲು ವಿಶೇಷ ಸಮಿತಿಯನ್ನು ರಚಿಸುವುದು. ಕೃಷಿ, ಅರಣ್ಯ, ಮೀನುಗಾರಿಕೆ, ಗಣಿಗಾರಿಕೆ, ನಗರ ಮತ್ತು ಗ್ರಾಮೀಣ ಅಭಿವೃದ್ಧಿಯಂತಹ ಕ್ಷೇತ್ರಗಳಲ್ಲಿ ಪ್ರಯೋಜನಕಾರಿ ಎಂದು ಸಾಬೀತಾಗಿರುವ ಸ್ಟಾರ್ಟಪ್‌ಗಳಿಗೆ ಮತ್ತು ಎಂಎಸ್ಎಂಇಗಳಿಗೆ ಆದಾಯ ಆಧರಿತ ಸಹಾಯ ಧನ ಒದಗಿಸುವುದು, ಬಾಹ್ಯಾಕಾಶ ತಂತ್ರಜ್ಞಾನ ಕರಡು ನೀತಿಯ ಉದ್ದೇಶಗಳಲ್ಲಿ ಒಂದಾಗಿದೆ ಎಂದಿದ್ದಾರೆ.

ಟೆಕ್ ಸಮಾವೇಶದ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಎಂಒಯುಗೆ ಸಹಿ ಹಾಕಿವೆ. ಇದರಿಂದ ರಾಜ್ಯ ರಕ್ಷಣಾ ಔದ್ಯಮಿಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ನೆರವು ಸಿಗಲಿದೆ. ಇನ್ನಿತರ ಪ್ರಮುಖ ಕ್ಷೇತ್ರಗಳತ್ತ ಗಮನ ಹರಿಸುವ ಮೂಲಕ ಕರ್ನಾಟಕ ಕೆಲವು ಗುರಿಗಳನ್ನು ಈಡೇರಿಸಲು ಪ್ರಯತ್ನ ನಡೆಸಲಿದೆ. ಸಮಗ್ರ ಕರಡು ನೀತಿ ಈಗಾಗಲೇ ಇರುವ ಕರ್ನಾಟಕದ ವ್ಯವಸ್ಥೆಯನ್ನು ಬಳಸಿಕೊಂಡು, ಭವಿಷ್ಯದ ಬಾಹ್ಯಾಕಾಶ ಅನ್ವೇಷಣೆಗಳಿಗೆ ಮತ್ತು ತಂತ್ರಜ್ಞಾನಗಳಿಗೆ ಭದ್ರ ಬುನಾದಿ ನಿರ್ಮಿಸಲು ನೆರವಾಗಲಿದೆ. ಕರ್ನಾಟಕದ ಸಂಪೂರ್ಣ ಬಾಹ್ಯಾಕಾಶ ನೀತಿ ರಾಜ್ಯ ಬಜೆಟ್ ಮಂಡನೆಯ ವೇಳೆ ಬಿಡುಗಡೆಯಾಗುವ ನಿರೀಕ್ಷೆಗಳಿವೆ ಎಂದು ಗಿರೀಶ್ ಲಿಂಗಣ್ಣ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ರಾಷ್ಟ್ರೀಯ ಬಾಹ್ಯಾಕಾಶ ದಿನ: ಸಾಧನೆಗಳ ಸ್ಮರಣೆ, ಭವಿಷ್ಯದ ಅನ್ವೇಷಣೆಗಳ ಮಹತ್ವ ತಿಳಿಸಲು ಮುಖ್ಯ- ಗಿರೀಶ್ ಲಿಂಗಣ್ಣ - National Space Day

ABOUT THE AUTHOR

...view details