ಸ್ಟಾರ್ಟ್ ಅಪ್ ಉದ್ಯಮದ ಚಟುವಟಿಕೆಗಳು ಮತ್ತು ಹೂಡಿಕೆಗಳ ಬಗ್ಗೆ ಸಂಶೋಧನೆ ಮಾಡುವ ಟ್ಯಾಲೆಂಟ್ ಸಲ್ಯೂಷನ್ಸ್ ಸಂಸ್ಥೆ 'ಎಕ್ಸ್ ಫೆನೊ' ಇತ್ತೀಚೆಗೆ ಬಿಡುಗಡ ಮಾಡಿದ ವರದಿಯು ಸ್ಟಾರ್ಟ್ಅಪ್ ಉದ್ಯಮದಲ್ಲಿ ಕೋಲಾಹಲ ಎಬ್ಬಿಸಿದೆ. ಸ್ಟಾರ್ಟ್ಅಪ್ಗಳ ಮೇಲೆ ಸಾಲದ ಭಾರ ಹೆಚ್ಚುತ್ತಿರುವ ಬಗ್ಗೆ ಈ ವರದಿ ಉಲ್ಲೇಖಿಸಿದೆ. 2024 ರ ಕ್ಯಾಲೆಂಡರ್ ವರ್ಷದ ಮೊದಲ ಏಳು ತಿಂಗಳಲ್ಲಿ ಭಾರತೀಯ ಸ್ಟಾರ್ಟ್ ಅಪ್ ಉದ್ಯಮ ವಲಯದಲ್ಲಿ 68 ಸಾಲದ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ ಎಂದು ವರದಿ ಹೇಳಿದೆ. ಇದು ಕಳೆದ ಆರು ವರ್ಷಗಳಲ್ಲಿ ಸಾಲ ವ್ಯವಹಾರಗಳ ಗರಿಷ್ಠ ಸಂಖ್ಯೆಯಾಗಿದೆ.
2023 ರ ಇಡೀ ಕ್ಯಾಲೆಂಡರ್ ವರ್ಷದಲ್ಲಿ ಸಾಲದ ವ್ಯವಹಾರಗಳ ಒಟ್ಟು ಮೌಲ್ಯ 1.8 ಬಿಲಿಯನ್ ಡಾಲರ್ ಆಗಿರುವುದು ಮತ್ತು ಕಳೆದ ಏಳು ತಿಂಗಳಲ್ಲಿ ಸ್ಟಾರ್ಟ್ಅಪ್ಗಳು ಮಾಡಿದ ಸಾಲ ವ್ಯವಹಾರಗಳ ಮೌಲ್ಯವು 1.35 ಬಿಲಿಯನ್ ಡಾಲರ್ ಆಗಿದ್ದು, ಇನ್ನೂ ಹೆಚ್ಚು ಕಳವಳಕಾರಿ ಸಂಗತಿಯಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 75 ರಷ್ಟು ಹೆಚ್ಚಾಗಿದೆ. ಭಾರತದ ಆರ್ಥಿಕ ಬೆಳವಣಿಗೆಗೆ ಸ್ಟಾರ್ಟ್ಅಪ್ಗಳು ದೊಡ್ಡ ಕೊಡುಗೆ ನೀಡುವುದರಿಂದ ಈ ಅಂಕಿ - ಅಂಶಗಳು ಆತಂಕಕ್ಕೆ ಕಾರಣವಾಗಿವೆ.
ಫಿನ್ ಟೆಕ್, ಇ-ಕಾಮರ್ಸ್, ಸಾಫ್ಟ್ ವೇರ್ ಸೇವೆಗಳು, ಆಟೋಟೆಕ್ ಇತ್ಯಾದಿ ವಲಯದ ಸ್ಟಾರ್ಟ್ಅಪ್ಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ ಮತ್ತು ವ್ಯಾಪಾರ ಉತ್ತೇಜನದ ಜೊತೆಗೆ ಉದ್ಯೋಗ ಬೆಳವಣಿಗೆಗೂ ಕೊಡುಗೆ ನೀಡುತ್ತಿವೆ. ವಾಸ್ತವವಾಗಿ, ಭಾರತೀಯ ಸ್ಟಾರ್ಟ್ಅಪ್ಗಳು 2029-30 ರ ವೇಳೆಗೆ 50 ಮಿಲಿಯನ್ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಮತ್ತು ಆರ್ಥಿಕತೆಗೆ 1 ಟ್ರಿಲಿಯನ್ ಡಾಲರ್ ಕೊಡುಗೆ ನೀಡಲಿವೆ ಎಂದು ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ (ಸಿಐಐ) ವರದಿ ತಿಳಿಸಿದೆ. ಈ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಗಮನಿಸಿದರೆ, ಭಾರತೀಯ ಸ್ಟಾರ್ಟ್ಅಪ್ಗಳು ಲಾಭದಾಯಕವಾಗಿರುವುದು ಸ್ಥಿರ ಆರ್ಥಿಕತೆಗೆ ಅಗತ್ಯವಾಗಿದೆ. ಹೀಗಾಗಿ, ಹೆಚ್ಚುತ್ತಿರುವ ಸಾಲದ ಈ ವಿದ್ಯಮಾನದ ಹಿಂದಿನ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಮತ್ತು ಮುಂದಿನ ಮಾರ್ಗದ ಬಗ್ಗೆ ಯೋಚಿಸುವುದು ಸೂಕ್ತವಾಗಿದೆ.
ಸಾಲ ಹಣಕಾಸು ಮತ್ತು ಸ್ಟಾರ್ಟ್ ಅಪ್ಗಳು:ಅಸಲು ಮೊತ್ತವನ್ನು ಬಡ್ಡಿಯೊಂದಿಗೆ ಮರುಪಾವತಿಸುವ ಭರವಸೆಯೊಂದಿಗೆ, ಒಂದು ಸಂಸ್ಥೆಯು ಸಾಲವನ್ನು ತೆಗೆದುಕೊಳ್ಳುವ ಮೂಲಕ ತನ್ನ ವ್ಯವಹಾರದ ಮುಂದುವರಿಕೆಗೆ ಬಂಡವಾಳವನ್ನು ಕ್ರೋಢೀಕರಿಸಿದಾಗ ಆ ಸಂಸ್ಥೆಯು ಸಾಲದ ಮೂಲಕ ಹಣಕಾಸು ಸಂಗ್ರಹಿಸಿದೆ ಎಂದು ಅರ್ಥೈಸಬಹುದು. ಸಾಮಾನ್ಯವಾಗಿ, ಸ್ಟಾರ್ಟ್ಅಪ್ಗಳಿಗೆ ತಮ್ಮ ವ್ಯವಹಾರ ವಿಸ್ತರಿಸಬೇಕಾದರೆ ಅಥವಾ ಆದಾಯ ಹೆಚ್ಚಿಸಿಕೊಳ್ಳಬೇಕಾದರೆ ಮತ್ತು ತಮ್ಮ ಸಂಸ್ಥೆಯ ಮೌಲ್ಯವನ್ನು ಹೆಚ್ಚಿಸಲು ಹಣದ ಅಗತ್ಯವಿರುತ್ತದೆ. ಕಂಪನಿಗಳು ಹೀಗೆ ತಮಗೆ ಅಗತ್ಯವಾದ ಬಂಡವಾಳವನ್ನು ಸಾಲ ಅಥವಾ ಈಕ್ವಿಟಿ ಅಥವಾ ಹೈಬ್ರಿಡ್ ಮೋಡ್ನಲ್ಲಿ ಸಂಗ್ರಹಿಸಬಹುದು.
ವಹಿವಾಟು ವೆಚ್ಚಗಳು, ಏಜೆನ್ಸಿ ವೆಚ್ಚಗಳು, ಬಂಡವಾಳದ ಲಭ್ಯತೆ, ತೆರಿಗೆ ಮಾನದಂಡಗಳು ಮುಂತಾದ ಅಂಶಗಳ ಆಧಾರದ ಮೇಲೆ ಸಂಸ್ಥೆಯೊಂದು ಯಾವ ಮಾರ್ಗದಿಂದ ಹಣ ಸಂಗ್ರಹಿಸಬೇಕು ಎಂಬುದನ್ನು ನಿರ್ಧರಿಸುತ್ತದೆ. ಈಕ್ವಿಟಿ ಮೂಲಕ ಹಣವನ್ನು ಸಂಗ್ರಹಿಸಿದರೆ, ಮಾಲೀಕತ್ವವನ್ನು ಕಳೆದುಕೊಳ್ಳುವ ಭಯದಿಂದ ಅನೇಕ ಸ್ಟಾರ್ಟ್ಅಪ್ಗಳು ಸಾಲ ಪಡೆಯಲು ಮುಂದಾಗುತ್ತವೆ. ಇದಲ್ಲದೆ ಸಾಲ ಹಣಕಾಸಿನೊಂದಿಗೆ ಸಿಗುವ ತೆರಿಗೆ ಪ್ರಯೋಜನಗಳು ಸಹ ಸಂಸ್ಥೆಗಳನ್ನು ಅದರತ್ತ ಆಕರ್ಷಿಸುತ್ತವೆ.
ಭಾರತೀಯ ಸ್ಟಾರ್ಟ್ಅಪ್ಗಳ ಹೆಚ್ಚುತ್ತಿರುವ ಸಾಲದ ಮಟ್ಟವು ಹೊಸ ವಿದ್ಯಮಾನವಲ್ಲ, ಇದು 2021 ರಿಂದಲೇ ನಡೆಯುತ್ತಿದೆ. ಸ್ಟಾರ್ಟ್ಅಪ್ಗಳಿಗೆ, ವಿಶೇಷವಾಗಿ 'ಯುನಿಕಾರ್ನ್ಗಳಿಗೆ' ಅಂದರೆ 1 ಬಿಲಿಯನ್ ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯವನ್ನು ಹೊಂದಿರುವ ಸ್ಟಾರ್ಟ್ಅಪ್ಗಳಿಗೆ ಭಾರಿ ಫಂಡಿಂಗ್ ಆಗಿದ್ದ ವರ್ಷ ಅದು. ಇದರ ಪರಿಣಾಮವಾಗಿ, 115 ಭಾರತೀಯ 'ಯುನಿಕಾರ್ನ್'ಗಳ ಸಾಮೂಹಿಕ ಸಾಲವು 2022 ರಲ್ಲಿ ಮಾತ್ರ 50,000 ಕೋಟಿ ರೂ.ಗೆ ತಲುಪಿದೆ. ಈ ಕಂಪನಿಗಳು ಪರಿವರ್ತಿಸಬಹುದಾದ ನೋಟ್ಗಳು, ಅವಧಿ ಸಾಲಗಳು ಮತ್ತು ರಚನಾತ್ಮಕ ವಹಿವಾಟುಗಳಂತಹ ವಿವಿಧ ಸಾಲ ಸಾಧನಗಳನ್ನು ಬಳಸುವ ಮೂಲಕ ಇಷ್ಟು ದೊಡ್ಡ ಮಟ್ಟದ ಸಾಲವನ್ನು ಸಂಗ್ರಹಿಸಿವೆ.
ಐಪಿಒ ಮೂಲಕ ಬಂಡವಾಳ ಸಂಗ್ರಹ:ಐಪಿಒ ಮೂಲಕ ಬಂಡವಾಳ ಸಂಗ್ರಹಿಸಿದಾಗ ಹೆಚ್ಚಿನ ಮೊತ್ತದು ನಗದು ಲಭ್ಯವಾಗುತ್ತದೆ ಮತ್ತು ಇದರಿಂದ ಕಂಪನಿಗಳಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ. ಆದಾಗ್ಯೂ, 2022 ರ ನಂತರದ ತಿಂಗಳುಗಳಲ್ಲಿ, ಜಾಗತಿಕ ಆರ್ಥಿಕ ಬೆಳವಣಿಗೆಗಳಿಂದಾಗಿ ಪರಿಸ್ಥಿತಿಗಳು ಬದಲಾದವು. ಇದು ಐಪಿಒಗಳನ್ನು ವಿಳಂಬಗೊಳಿಸಿತು. ಇದರಿಂದಾಗಿ ಸ್ಟಾರ್ಟ್ಅಪ್ಗಳು ಆರ್ಥಿಕವಾಗಿ ಒತ್ತಡಕ್ಕೆ ಸಿಲುಕುವಂತಾಯಿತು ಮತ್ತು ಈ ಬೆಳವಣಿಗೆಗಳಿಂದ ಆಯಾ ಸಂಸ್ಥೆಗಳ ಮೌಲ್ಯಮಾಪನದ ಮೇಲೂ ಪರಿಣಾಮ ಉಂಟಾಯಿತು. ನಿಧಿಗಳು ಕಡಿಮೆಯಾಗುತ್ತಿರುವುದು ಮತ್ತು ಸಾಲದ ಹೊರೆ ಹೆಚ್ಚಾಗುತ್ತಿರುವ ಮಧ್ಯೆ ಅನೇಕ ಸ್ಟಾರ್ಟ್ಅಪ್ಗಳು ಈಕ್ವಿಟಿಯಿಂದ ಹಣ ಸಂಗ್ರಹಿಸಲು ಮುಂದಾದರೆ, ಇನ್ನೂ ಕೆಲ ಸ್ಟಾರ್ಟ್ಅಪ್ಗಳು ಮಾರುಕಟ್ಟೆಯಲ್ಲಿ ಉಳಿಯಲು ಮತ್ತಷ್ಟು ಸಾಲ ಪಡೆದುಕೊಳ್ಳುತ್ತಿವೆ.