ಕರ್ನಾಟಕ

karnataka

ETV Bharat / opinion

’ಅಟಲ್​​​​​​​​​​​​ ಜೀ  ಎಲ್ಲರಿಗಿಂತ ವಿಭಿನ್ನ ನಾಯಕರು’: ವಾಜಪೇಯಿ 100 ನೇ ಜನ್ಮ ವಾರ್ಷಿಕೋತ್ಸವದ ನಿಮಿತ್ತ ಪ್ರಧಾನಿ ಮೋದಿ ವಿಶೇಷ ಲೇಖನ - MODI PENS ARTICLE ON VAJPAYEE

ಅಟಲ್​​ಜೀ ಅವರು ಅವಕಾಶವಾದಿ ಮಾರ್ಗಗಳ ಮೂಲಕ ಅಧಿಕಾರಕ್ಕೆ ಅಂಟಿಕೊಂಡವರಲ್ಲ. ಕುದುರೆ ವ್ಯಾಪಾರದ ಮಾರ್ಗವನ್ನು ಅನುಸರಿಸುವ ಬದಲು ರಾಜೀನಾಮೆ ನೀಡುವ ಮೂಲಕ ಅವರ ವ್ಯಕ್ತಿತ್ವ ತೋರಿಸಿದವರು

Vajpayee Architect Of India's Transition Into 21st Century: PM Modi
’ಅಟಲ್​​​​​​​​​​​​ ಜೀ ಅವರು ಎಲ್ಲರಿಗಿಂತ ವಿಭಿನ್ನ ನಾಯಕರು’: ವಾಜಪೇಯಿ 100 ನೇ ಜನ್ಮ ವಾರ್ಷಿಕೋತ್ಸವದ ನಿಮಿತ್ತ ಪ್ರಧಾನಿ ಮೋದಿ ವಿಶೇಷ ಲೇಖನ (ETV Bharat)

By Narendra Modi

Published : 24 hours ago

Updated : 24 hours ago

ನವದೆಹಲಿ: ಇಂದು ಡಿಸೆಂಬರ್ 25 ನಮಗೆಲ್ಲರಿಗೂ ಬಹಳ ವಿಶೇಷವಾದ ದಿನ. ನಮ್ಮ ದೇಶವು ಪ್ರೀತಿಯ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100 ನೇ ಜಯಂತಿಯನ್ನು ಸಂಭ್ರಮದಿಂದ ಆಚರಿಸುತ್ತಿದೆ. ಅವರು ಅಸಂಖ್ಯಾತ ಜನರಿಗೆ ಸ್ಫೂರ್ತಿದಾಯ ರಾಜನೀತಿಜ್ಞರಾಗಿ ಎತ್ತರದಲ್ಲಿ ನಿಂತಿದ್ದಾರೆ.

21 ನೇ ಶತಮಾನಕ್ಕೆ ಭಾರತದ ಪರಿವರ್ತನೆಯ ಶಿಲ್ಪಿಯಾಗಿರುವದಕ್ಕೆ ದೇಶ ಅಟಲ್ ಜಿ ಅವರಿಗೆ ಯಾವಾಗಲೂ ಕೃತಜ್ಞರಾಗಿರಬೇಕಾಗಿದೆ. ಅವರು 1998 ರಲ್ಲಿ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗ ನಮ್ಮ ರಾಷ್ಟ್ರವು ರಾಜಕೀಯ ಅಸ್ಥಿರತೆಯ ಅವಧಿಯನ್ನು ದಾಟಿತ್ತು. ಸುಮಾರು 9 ವರ್ಷಗಳಲ್ಲಿ ನಾವು 4 ಲೋಕಸಭಾ ಚುನಾವಣೆಗಳನ್ನು ನೋಡಿದ್ದೇವು. ಭಾರತದ ಜನರು ಈ ಕಾರಣಕ್ಕಾಗಿ ಅಸಹನೆ ಹೊಂದಿದ್ದರು. ಮತ್ತು ಸರ್ಕಾರಗಳು ಉತ್ತಮ ಆಡಳಿತ ನೀಡಲು ಸಮರ್ಥರಾಗಿದ್ದಾರೆ ಎಂಬುದರ ಬಗ್ಗೆ ಸಂದೇಹವನ್ನು ಹೊಂದಿದ್ದರು. ಆದರೆ, ವಾಜಪೇಯಿ ಅವರು ಇವೆಲ್ಲವನ್ನು ಮೀರಿ, ಸ್ಥಿರ ಮತ್ತು ಪರಿಣಾಮಕಾರಿ ಆಡಳಿತ ನೀಡುವ ಮೂಲಕ ಈ ಸಂದೇಹವನ್ನು ಅಳಸಿ ಹಾಕಿದರು. ವಿನಮ್ರತೆಯ ತತ್ತ್ವಗಳ ಬೇರುಗಳಿಂದ ಬಂದ ಅವರು, ಸಾಮಾನ್ಯ ನಾಗರಿಕರ ಹೋರಾಟಗಳನ್ನು ಮತ್ತು ಪರಿಣಾಮಕಾರಿ ಆಡಳಿತದ ಪರಿವರ್ತಕ ಶಕ್ತಿಯನ್ನು ಅರಿತುಕೊಂಡು ಆಡಳಿತ ನಡೆಸಿದರು.

ತಂತ್ರಜ್ಞಾನಕ್ಕೆ ಮುನ್ನುಡಿ ಬರೆದ ದೂರದೃಷ್ಟಿಯ ನಾಯಕ:ನಮ್ಮ ಸುತ್ತಮುತ್ತಲಿನ ಹಲವು ಕ್ಷೇತ್ರಗಳಲ್ಲಿ ಅಟಲ್ ಜೀಯವರ ನಾಯಕತ್ವದ ದೀರ್ಘಕಾಲೀನ ಪ್ರಭಾವವನ್ನು ನೋಡಬಹುದು. ಅವರ ಯುಗವು ಮಾಹಿತಿ ತಂತ್ರಜ್ಞಾನ, ದೂರಸಂಪರ್ಕ ಮತ್ತು ಸಂವಹನಗಳ ಜಗತ್ತಿನಲ್ಲಿ ದೈತ್ಯಾಕಾರವಾಗಿರುವುದನ್ನು ಗುರುತಿಸಿತು. ಇದು ನಮ್ಮಂತಹ ರಾಷ್ಟ್ರಕ್ಕೆ ವಿಶೇಷವಾಗಿ ಪ್ರಮುಖವಾಗಿತ್ತು. ಇದು ಅತ್ಯಂತ ಕ್ರಿಯಾತ್ಮಕ ಯುವ ಶಕ್ತಿಯಿಂದ ಕೂಡ ಆಶೀರ್ವದಿಸಲ್ಪಟ್ಟಿದೆ. ಅಟಲ್ ಜಿ ನೇತೃತ್ವದ ಎನ್‌ಡಿಎ ಸರ್ಕಾರವು ಸಾಮಾನ್ಯ ನಾಗರಿಕರಿಗೆ ತಂತ್ರಜ್ಞಾನವನ್ನು ಪ್ರವೇಶಿಸಲು ಮೊದಲ ಪ್ರಯತ್ನವನ್ನು ಮಾಡಿಕೊಟ್ಟಿತು ಎಂಬ ವಿಚಾರವನ್ನು ನಾವು ನೀವೆಲ್ಲ ಮರೆಯಬಾರದು.

ಹಳ್ಳಿಯಿಂದ ದಿಲ್ಲಿಗೆ ಸಂಪರ್ಕ ಕಲ್ಪಿಸಿದ ಗ್ರಾಮ್ ಸಡಕ್: ಅದೇ ಸಮಯದಲ್ಲಿ ಭಾರತವನ್ನು ವಿಶ್ವದೊಂದಿಗೆ ಹಾಗೂ ತನ್ನೊಳಗೇ ಸಂಪರ್ಕಿಸುವ ದೂರದೃಷ್ಟಿ ಇತ್ತು. ಇಂದಿಗೂ ಹೆಚ್ಚಿನ ಜನರು ಭಾರತದ ಉದ್ದ ಮತ್ತು ಅಗಲವನ್ನು ಸಂಪರ್ಕಿಸುವ ಸುವರ್ಣ ಚತುಷ್ಪಥ ಯೋಜನೆಯನ್ನು ನೆನಪಿಸಿಕೊಳ್ಳುತ್ತಾರೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಂತಹ ಉಪಕ್ರಮಗಳ ಮೂಲಕ ಸ್ಥಳೀಯ ಸಂಪರ್ಕ ಜಾಲವನ್ನು ವಿಸ್ತಾರ ಮಾಡಲು ವಾಜಪೇಯಿ ಸರ್ಕಾರದ ಪ್ರಯತ್ನಗಳು ಅಷ್ಟೇ ಗಮನಾರ್ಹವಾಗಿದೆ. ಅದೇ ರೀತಿ, ವಿಶ್ವ ದರ್ಜೆಯ ಮೂಲಸೌಕರ್ಯ ಯೋಜನೆಯಾಗಿ ಎದ್ದು ಕಾಣುವ ದೆಹಲಿ ಮೆಟ್ರೋಗಾಗಿ ವ್ಯಾಪಕವಾದ ಕೆಲಸವನ್ನು ಮಾಡುವ ಮೂಲಕ ಅವರ ಸರ್ಕಾರವು ಮೆಟ್ರೋ ಸಂಪರ್ಕಕ್ಕೆ ಒತ್ತು ನೀಡಿತು. ಹೀಗಾಗಿ, ವಾಜಪೇಯಿ ಸರ್ಕಾರವು ದೇಶದ ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ದೂರದ ಪ್ರದೇಶಗಳನ್ನು ಹತ್ತಿರಕ್ಕೆ ತಂದಿತು, ಏಕತೆ ಮತ್ತು ಏಕೀಕರಣ ಮಾಡುವ ಮೂಲಕ ಭಾರತದ ಉದಯೋನ್ಮುಖ ಬೆಳವಣಿಗೆಗೆ ಅಡಿಪಾಯ ಹಾಕಿತು.

ಸರ್ವಶಿಕ್ಷಾ ಅಭಿಯಾನ ತಂದ ಶಿಕ್ಷಣ ಕ್ರಾಂತಿ: ಸಾಮಾಜಿಕ ವಲಯಕ್ಕೆ ಬಂದಾಗ, ಸರ್ವಶಿಕ್ಷಾ ಅಭಿಯಾನದಂತಹ ಉಪಕ್ರಮವು ಅಟಲ್ ಜಿ ಅವರು ಹೇಗೆ ಆಧುನಿಕ ಶಿಕ್ಷಣವನ್ನು ರಾಷ್ಟ್ರದಾದ್ಯಂತ ಜನರಿಗೆ, ವಿಶೇಷವಾಗಿ ಬಡ ಮತ್ತು ಅಂಚಿನಲ್ಲಿರುವ ವರ್ಗಗಳಿಗೂ ತಲುಪಬಹುದಾದ ಭಾರತವನ್ನು ನಿರ್ಮಿಸುವ ಕನಸು ಕಂಡಿದ್ದರು ಎಂಬುದನ್ನು ಎತ್ತಿ ತೋರಿಸುತ್ತದೆ. ಅದೇ ಸಮಯದಲ್ಲಿ ಆಗಿನ ಎನ್​​ ಡಿಎ ಸರ್ಕಾರವು ಅನೇಕ ಆರ್ಥಿಕ ಸುಧಾರಣೆಗಳಿಗೆ ಮುನ್ನುಡಿ ಬರೆಯಿತು. ಇದು ಹಲವಾರು ದಶಕಗಳ ನಂತರ ಆರ್ಥಿಕ ಭಾರತದ ಆರ್ಥಿ ಶಕ್ತಿ ಹೆಚ್ಚಿಸಲು ವೇದಿಕೆ ಮಾಡಿಕೊಟ್ಟಿತು.

ವಿಶ್ವಕ್ಕೆ ಪರಿಚಯವಾದ ಅಟಲ್​​ ಜೀ ನಾಯಕತ್ವ: ವಾಜಪೇಯಿ ಅವರ ನಾಯಕತ್ವದ ಅದ್ಭುತ ಉದಾಹರಣೆ ಎಂದರೆ ಅದು 1998 ಅವಧಿ. ಅದೇ ವರ್ಷದ ಮೇ 11 ರಂದು ಭಾರತವು ಆಪರೇಷನ್ ಶಕ್ತಿ ಎಂದು ಕರೆಯಲ್ಪಡುವ ಪೋಖ್ರಾನ್ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿತು. ಈ ಪರೀಕ್ಷೆಗಳು ಭಾರತದ ವೈಜ್ಞಾನಿಕ ಸಮುದಾಯದ ಪರಾಕ್ರಮಕ್ಕೆ ಪಕ್ಕಾ ಉದಾಹರಣೆಯಾಗಿದೆ. ಭಾರತ ಆಗ ನಡೆಸಿದ ಪರೀಕ್ಷೆಗಳು ಜಗತ್ತು ಬೆರಗುಗೊಳಿಸಿದ್ದಂತೂ ಸುಳ್ಳಲ್ಲ.

ಮೇ 11, 1998ರ ಪರೀಕ್ಷೆಗಳು ವೈಜ್ಞಾನಿಕ ಕೌಶಲ್ಯವನ್ನು ತೋರಿಸಿದರೆ, ಮೇ 13 ರಂದು ನಡೆದ ಪರೀಕ್ಷೆಗಳು ನಿಜವಾದ ನಾಯಕತ್ವವನ್ನು ತೋರಿಸಿದವು. ಭಾರತವು ಬೆದರಿಕೆ ಅಥವಾ ಒತ್ತಡಕ್ಕೆ ಸಿಲುಕುವ ದಿನಗಳು ಯಾವತ್ತೋ ಮುಗಿದು ಹೋಗಿವೆ ಎಂದು ಜಗತ್ತಿಗೆ ಅವರು ನೀಡಿರುವ ಸಂದೇಶವಾಗಿದೆ. ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಎದುರಿಸುತ್ತಿದ್ದರೂ, ಎನ್‌ಡಿಎ ಸರ್ಕಾರವು ದೃಢವಾಗಿ ನಿಂತಿದೆ. ತನ್ನ ಸಾರ್ವಭೌಮತ್ವವನ್ನು ಕಾಪಾಡುವ ಭಾರತದ ಹಕ್ಕನ್ನು ಸ್ಪಷ್ಟಪಡಿಸುತ್ತದೆ ಮತ್ತು ಏಕಕಾಲದಲ್ಲಿ ವಿಶ್ವಶಾಂತಿಯ ಪ್ರಬಲ ಪ್ರತಿಪಾದಕನಾಗಿಯು ಮುನ್ನೆಲೆಗೆ ಬಂತು.

ಸಂಸದೀಯ ತೇಜಸ್ಸು ಬೀರಿದ ಮಹಾನ್​ ಚೇತನ:ಅಟಲ್ ಜೀ ಭಾರತೀಯ ಪ್ರಜಾಪ್ರಭುತ್ವವನ್ನು ಅರ್ಥಮಾಡಿಕೊಂಡಿದ್ದರು. ಮತ್ತು ಅದನ್ನು ಬಲಪಡಿಸುವ ಅಗತ್ಯವನ್ನು ಸಹ ಅರ್ಥಮಾಡಿಕೊಂಡಿದ್ದರು. ಅಟಲ್ ಬಿಹಾರಿ ವಾಜಪೇಯಿ ಅವರು NDA ಅಧ್ಯಕ್ಷತೆ ವಹಿಸಿದ್ದರು, ಇದು ಭಾರತೀಯ ರಾಜಕೀಯದಲ್ಲಿ ಒಕ್ಕೂಟಗಳನ್ನು ಹಾಗೂ ಅವುಗಳ ರಚನೆಯನ್ನ ಪುನರ್ ವ್ಯಾಖ್ಯಾನಿಸಿತು. ಅವರು ಜನರನ್ನು ಒಟ್ಟುಗೂಡಿಸಿದರು ಮತ್ತು ಎನ್​​​ಡಿಎ ಯನ್ನು ಅಭಿವೃದ್ಧಿ, ರಾಷ್ಟ್ರೀಯ ಪ್ರಗತಿ ಮತ್ತು ಪ್ರಾದೇಶಿಕ ಮಹತ್ವಾಕಾಂಕ್ಷೆಗಳಿಗೆ ಶಕ್ತಿಯನ್ನಾಗಿ ಮಾಡಿದರು. ಅವರ ರಾಜಕೀಯ ಪಯಣದ ಉದ್ದಕ್ಕೂ ಅವರ ಸಂಸದೀಯ ತೇಜಸ್ಸು ಎದ್ದು ಕಾಣುತ್ತಿತ್ತು.

ಅವರು ಬೆರಳೆಣಿಕೆಯಷ್ಟು ಸಂಸದರನ್ನು ಹೊಂದಿರುವ ಪಕ್ಷಕ್ಕೆ ಸೇರಿದವರಾಗಿದ್ದರೂ ಅವರ ಮಾತುಗಳು ಆ ಸಮಯದಲ್ಲಿ ಸರ್ವಶಕ್ತ ಕಾಂಗ್ರೆಸ್ ಪಕ್ಷದ ಶಕ್ತಿಯನ್ನು ಕೆಣಕಲು ಸಾಕಾಗಿತ್ತು. ಪ್ರಧಾನಿಯಾಗಿ ಪ್ರತಿಪಕ್ಷಗಳ ಟೀಕೆಗಳನ್ನು ಅವರ ಮಾತಿನ ಶೈಲಿ ಮತ್ತು ವಸ್ತುವಿನ ಮೂಲಕ ಮೊಂಡಾಗಿಸಿದ್ದರು. ಅವರ ವೃತ್ತಿಜೀವನವು ಹೆಚ್ಚಾಗಿ ವಿರೋಧ ಪಕ್ಷದ ಬೆಂಚುಗಳಲ್ಲೇ ಕಳೆದರೂ ಯಾರ ವಿರುದ್ಧವೂ ಕಹಿಯ ಕುರುಹುಗಳನ್ನು ಹೊತ್ತಿರಲಿಲ್ಲ.

ಅವರು ಅವಕಾಶವಾದಿ ಮಾರ್ಗಗಳ ಮೂಲಕ ಅಧಿಕಾರಕ್ಕೆ ಅಂಟಿಕೊಂಡವರಲ್ಲ. ಕುದುರೆ ವ್ಯಾಪಾರ ಮತ್ತು ಕೊಳಕು ರಾಜಕೀಯದ ಹಾದಿಯನ್ನು ಅನುಸರಿಸುವ ಬದಲು 1996 ರಲ್ಲಿ ರಾಜೀನಾಮೆ ನೀಡಲು ಅವರು ಆದ್ಯತೆ ನೀಡಿದರು. 1999ರಲ್ಲಿ ಅವರ ಸರ್ಕಾರವು 1 ಮತದಿಂದ ಸೋಲಿಸಲ್ಪಟ್ಟಿತು. ಆಗ ನಡೆಯುತ್ತಿದ್ದ ಅನೈತಿಕ ರಾಜಕಾರಣಕ್ಕೆ ಸವಾಲು ಹಾಕುವಂತೆ ಬಹಳಷ್ಟು ಜನ ಹೇಳಿದ್ದರು. ಆದರೆ, ಅವರು ನಿಯಮಗಳ ಪ್ರಕಾರ ಹೋಗಲು ಆದ್ಯತೆ ನೀಡಿದರು. ಅಂತಿಮವಾಗಿ ಅವರು ಜನರಿಂದ ಮತ್ತೊಂದು ಪ್ರತಿಧ್ವನಿಸುವ ಜನಾದೇಶದೊಂದಿಗೆ ಅಧಿಕಾರಕ್ಕೆ ಮರಳಿದರು.

ನಮ್ಮ ಸಂವಿಧಾನವನ್ನು ರಕ್ಷಿಸುವ ಬದ್ಧತೆಯ ವಿಷಯಕ್ಕೆ ಬಂದಾಗ, ಅಟಲ್ ಜೀ ಅತೀ ಎತ್ತರದಲ್ಲೇ ನಿಲ್ಲುತ್ತಾರೆ. ಡಾ. ಶ್ಯಾಮ ಪ್ರಸಾದ್ ಮುಖರ್ಜಿಯವರ ಹುತಾತ್ಮತೆಯಿಂದ ಅವರು ಆಳವಾಗಿ ಪ್ರಭಾವಿತರಾಗಿದ್ದರು. ವರ್ಷಗಳ ನಂತರ, ಅವರು ತುರ್ತು ಪರಿಸ್ಥಿತಿ ವಿರೋಧಿ ಚಳವಳಿಯ ಆಧಾರಸ್ತಂಭವಾಗಿದ್ದರು. ತುರ್ತು ಪರಿಸ್ಥಿತಿಯ ನಂತರ 1977 ರ ಚುನಾವಣೆಯ ಪೂರ್ವದಲ್ಲಿ, ಅವರು ಜನಸಂಘವನ್ನು ಜನತಾ ಪಕ್ಷದಲ್ಲಿ ವಿಲೀನಗೊಳಿಸಲು ಒಪ್ಪಿಕೊಂಡರು. ಇದು ಅವರಿಗೆ ಮತ್ತು ಇತರರಿಗೆ ನೋವಿನ ನಿರ್ಧಾರವಾಗಬಹುದೆಂದು ನನಗೆ ಖಾತ್ರಿಯಿದೆ, ಆದರೆ ಸಂವಿಧಾನವನ್ನು ರಕ್ಷಿಸುವುದು ಅಂದು ತೀರಾ ಮುಖ್ಯವಾಗಿತ್ತು.

ಭಾರತೀಯ ಸಂಸ್ಕೃತಿಯಲ್ಲಿ ಅಟಲ್ ಜಿ ಎಷ್ಟು ಆಳವಾಗಿ ಬೇರೂರಿದ್ದರು ಎಂಬುದು ಕೂಡ ಗಮನಾರ್ಹವಾಗಿದೆ. ಭಾರತದ ವಿದೇಶಾಂಗ ಸಚಿವರಾದ ನಂತರ ಅವರು ವಿಶ್ವಸಂಸ್ಥೆಯಲ್ಲಿ ಹಿಂದಿಯಲ್ಲಿ ಮಾತನಾಡಿದ ಮೊದಲ ಭಾರತೀಯ ನಾಯಕರಾದರು. ಅವರ ಈ ಒಂದು ಭಾಷಣ ಭಾರತದ ಪರಂಪರೆ ಮತ್ತು ಗುರುತಿನ ಬಗ್ಗೆ ಅಪಾರ ಹೆಮ್ಮೆಯನ್ನು ಪ್ರದರ್ಶಿಸಿತು.ಅಷ್ಟೇ ಅಲ್ಲ ಇದು ಜಾಗತಿಕ ವೇದಿಕೆಯಲ್ಲಿ ಅಳಿಸಲಾಗದ ಗುರುತನ್ನು ಮೂಡಿಸಿತು.

ಕವಿ ಹೃದಯದ ಅಟಲ್​​ಜೀ:ಅಟಲ್ ಜೀ ಯವರ ವ್ಯಕ್ತಿತ್ವವು ಕಾಂತಿಮಯವಾಗಿತ್ತು ಮತ್ತು ಅವರ ಜೀವನವು ಸಾಹಿತ್ಯ ಮತ್ತು ಅಭಿವ್ಯಕ್ತಿಯ ಮೇಲಿನ ಪ್ರೀತಿಯಿಂದ ಸಮೃದ್ಧವಾಗಿದೆ. ಅತ್ಯುತ್ತಮ ಬರಹಗಾರ ಮತ್ತು ಕವಿ, ಸ್ಫೂರ್ತಿ ನೀಡಲು, ಚಿಂತನೆಯನ್ನು ಪ್ರಚೋದಿಸಲು ಮತ್ತು ಸಾಂತ್ವನ ಹೇಳಲು ಹೃದಯಸ್ವರ್ಶಿ ಪದಗಳನ್ನು ಬಳಸಿದರು. ಅವರ ಕವನ, ಆಗಾಗ್ಗೆ ಅವರ ಆಂತರಿಕ ಹೋರಾಟಗಳು ಮತ್ತು ರಾಷ್ಟ್ರದ ಭರವಸೆಗಳನ್ನು ಪ್ರತಿಬಿಂಬಿಸುತ್ತಿದ್ದವು. ಅಷ್ಟೇ ಅಲ್ಲ ಅವು ಈಗಿನ ವಯೋಮಾನದ ಜನರೊಂದಿಗೆ ಪ್ರತಿಧ್ವನಿಸುತ್ತಲೇ ಇದೆ.

ಅವರೊಂದಿಗೆ ಬೆರತದ್ದು ನಮ್ಮ ಸೌಭಾಗ್ಯವೇ ಸರಿ:ನನ್ನಂತಹ ಅನೇಕ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಗೆ, ಅಟಲ್ ಜಿ ಅವರಂತಹ ವ್ಯಕ್ತಿಯೊಂದಿಗೆ ನಾವು ಕಲಿಯಲು ಮತ್ತು ಸಂವಹನ ನಡೆಸಲು ಸಾಧ್ಯವಾಗಿದ್ದು ನಮ್ಮ ಸೌಭಾಗ್ಯವೇ ಸರಿ. ಬಿಜೆಪಿಗೆ ಅವರ ಕೊಡುಗೆಯೇ ಅಡಿಪಾಯವಾಗಿದೆ. ಆ ದಿನಗಳಲ್ಲಿ ಪ್ರಬಲವಾದ ಕಾಂಗ್ರೆಸ್‌ಗೆ ಪರ್ಯಾಯವಾಗಿ ಬೆಳೆಯಲು ನಮಗೆಲ್ಲ ದಾರಿ ದೀಪವಾದರೂ ನಾಯಕತ್ವ ವಹಿಸಿದರು.

ಅಡ್ವಾಣಿ ಜೀ ಮತ್ತು ಡಾ. ಮುರಳಿ ಮನೋಹರ ಜೋಶಿ ಜೀ ಅವರ ಸಹಯೋಗದೊಂದಿಗೆ ಪಕ್ಷವನ್ನು ಸದೃಢವಾಗಿ ನಡೆಸಿದರು. ಸವಾಲುಗಳು, ಹಿನ್ನಡೆಗಳು ಮತ್ತು ವಿಜಯಗಳ ಮೂಲಕ ಪಕ್ಷಕ್ಕೆ ಮಾರ್ಗದರ್ಶನ ಮಾಡಿದರು. ಸಿದ್ಧಾಂತ ಮತ್ತು ಅಧಿಕಾರದ ನಡುವೆ ಆಯ್ಕೆ ಬಂದಾಗ, ಅವರು ಯಾವಾಗಲೂ ಮೊದಲಿನದನ್ನು ಆರಿಸಿಕೊಂಡರು.

ಅವರ 100 ನೇ ಜಯಂತಿಯಂದು, ಅವರ ಆದರ್ಶಗಳನ್ನು ಅರಿತುಕೊಳ್ಳಲು ಮತ್ತು ಭವ್ಯ ಭಾರತಕ್ಕಾಗಿ ಅವರ ದೃಷ್ಟಿಕೋನವನ್ನು ಪೂರೈಸಲು ನಮ್ಮನ್ನು ನಾವು ಮರು ಸಮರ್ಪಿಸಿಕೊಳ್ಳೋಣ. ಅವರ ಉತ್ತಮ ಆಡಳಿತ, ಏಕತೆ ಮತ್ತು ಪ್ರಗತಿಯ ತತ್ವಗಳನ್ನು ಒಳಗೊಂಡಿರುವ ಭಾರತವನ್ನು ನಿರ್ಮಿಸಲು ನಾವು ಶ್ರಮಿಸೋಣ. ನಮ್ಮ ರಾಷ್ಟ್ರದ ಸಾಮರ್ಥ್ಯದ ಬಗ್ಗೆ ಅಟಲ್ ಜಿ ಅವರ ಅಚಲವಾದ ನಂಬಿಕೆಯು ಉನ್ನತ ಗುರಿ ಮತ್ತು ಹೆಚ್ಚು ಶ್ರಮಿಸಲು ನಮಗೆ ಸ್ಫೂರ್ತಿ ನೀಡುತ್ತಿದೆ.

ಇದನ್ನು ಓದಿ:ಇಂದು ವಾಜಪೇಯಿ ಜನ್ಮಶತಮಾನೋತ್ಸವ: ಸುಶಾಸನ ದಿನದ ನಿಮಿತ್ತ ಅಟಲ್​​​​​ಜೀಗೆ ನಮನ ಸಲ್ಲಿಸಿದ ಪ್ರಧಾನಿ ಮೋದಿ

Last Updated : 24 hours ago

ABOUT THE AUTHOR

...view details