ಹೈದರಾಬಾದ್: ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸಲು ಪ್ರಸ್ತಾವಿಸಿರುವ 'ಒಂದು ರಾಷ್ಟ್ರ ಒಂದು ಚುನಾವಣೆ' ವಿಧೇಯಕವನ್ನು ಮಂಡಿಸಲು ಕೇಂದ್ರ ಸರ್ಕಾರ ಸಿದ್ಧವಾಗಿದೆ. ಇದಕ್ಕೆ ಕಾಂಗ್ರೆಸ್ ಸೇರಿದಂತೆ I.N.D.I.A ಕೂಟದ ವಿಪಕ್ಷಗಳು ವಿರೋಧ ವ್ಯಕ್ತಪಡಿಸಿವೆ.
ಪ್ರಸ್ತಾವಿತ ಒಂದು ದೇಶ, ಒಂದು ಚುನಾವಣೆ ವಿಧೇಯಕವು ಸಂವಿಧಾನದ 129ನೇ ತಿದ್ದುಪಡಿ ಮಸೂದೆಯಾಗಿದ್ದು, ಇದು ದೇಶದಲ್ಲಿ ಏಕಕಾಲಕ್ಕೆ ಎಲ್ಲ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಮಹತ್ತರ ಉದ್ದೇಶ ಹೊಂದಿದೆ. ಈ ವಿಧೇಯಕದ ಜೊತೆಗೆ, ಜಮ್ಮು-ಕಾಶ್ಮೀರ ಮತ್ತು ದೆಹಲಿ ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಧಾನಸಭೆ ಜೊತೆಗೆ, ಲೋಕಸಭೆ ಚುನಾವಣೆ ನಡೆಸಲು ಪ್ರಸ್ತಾವಿತ ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ಮಸೂದೆ- 2024 ಮಂಡನೆಯಾಗಲಿದೆ.
ಈ ವಿಧೇಯಕಗಳು ಏನನ್ನು ಪ್ರಸ್ತಾಪಿಸುತ್ತದೆ? ಸಂವಿಧಾನದ 129ನೇ ತಿದ್ದುಪಡಿ ಮಸೂದೆಯು ಸಂವಿಧಾನದಲ್ಲಿ ಹೊಸ ವಿಧಿ 82ಎ ಅನ್ನು ಸೇರಿಸಲು ಪ್ರಸ್ತಾಪಿಸುತ್ತದೆ. ಇದು, ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆಗಳನ್ನು ನಡೆಸಲು ಅವಕಾಶ ಕಲ್ಪಿಸುತ್ತದೆ. ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆ ಅಧಿಕಾರಾವಧಿಯನ್ನು ನಿರ್ಧರಿಸಲು ಕಲಂ 83 ಮತ್ತು 172 ನೇ ವಿಧಿಗಳನ್ನು ತಿದ್ದುಪಡಿ ಮಾಡಲು ಅವಕಾಶ ನೀಡುತ್ತದೆ.
ಕೇಂದ್ರಾಡಳಿತ ಪ್ರದೇಶಗಳ ಕಾನೂನುಗಳು (ತಿದ್ದುಪಡಿ) ವಿಧೇಯಕವು, ಲೋಕಸಭೆ ಮತ್ತು ರಾಜ್ಯಗಳ ವಿಧಾನಸಭೆಗಳ ಚುನಾವಣೆಯ ಜೊತೆಗೆ ದೆಹಲಿ ಮತ್ತು ಜಮ್ಮು- ಕಾಶ್ಮೀರದ ವಿಧಾನಸಭೆಗೂ ಚುನಾವಣೆ ನಡೆಸಲು ಕೇಂದ್ರಾಡಳಿತ ಪ್ರದೇಶಗಳ ಕಾಯ್ದೆ 1963ರ ಸೆಕ್ಷನ್ 5, ರಾಷ್ಟ್ರೀಯ ರಾಜಧಾನಿ ದೆಹಲಿ ಸರ್ಕಾರದ ಕಾಯ್ದೆ 1991ರ ಸೆಕ್ಷನ್ 5 ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯ್ದೆ 2019 ರ ಸೆಕ್ಷನ್ 17 ಕ್ಕೆ ತಿದ್ದುಪಡಿ ಮಾಡಲು ಪ್ರಸ್ತಾಪಿಸುತ್ತದೆ.
ವಿಧೇಯಕಗಳ ಅಂಗೀಕಾರದ ನಂತರ ಏನಾಗುತ್ತದೆ? ವಿಧೇಯಕಗಳು ಅಂಗೀಕಾರದ ಬಳಿಕ, ಹೊಸ ವಿಧಿಯ (82A) ನಿಯಮಗಳು ಜಾರಿಗೆ ಬರುತ್ತವೆ. ಇದರ ಪ್ರಕಾರ, ಸಾರ್ವತ್ರಿಕ ಚುನಾವಣೆ ನಡೆದು ಲೋಕಸಭೆಯ ಮೊದಲ ಅಧಿವೇಶನದಲ್ಲಿ ದೇಶದ ರಾಷ್ಟ್ರಪತಿ ಒಂದು ಅಧಿಸೂಚನೆಯನ್ನು ಹೊರಡಿಸುತ್ತಾರೆ. ಅದರಲ್ಲಿ ಸಂಸತ್ ಅನ್ನು ಚುನಾಯಿಸಿದ ದಿನಾಂಕವನ್ನು ಘೋಷಿಸಲಾಗುತ್ತದೆ.
ಅಂದರೆ, ರಾಷ್ಟ್ರಪತಿಗಳು ನಿಗದಿ ಮಾಡಿದ ದಿನಾಂಕದಿಂದ ಹಿಡಿದು ಮುಂದಿನ ಐದು ವರ್ಷ ಸಂಸತ್ತಿನ ಅಧಿಕಾರದ ಅವಧಿಯಾಗಿರುತ್ತದೆ. ಇದರ ಜೊತೆಗೆ ರಾಜ್ಯಗಳ ವಿಧಾನಸಭೆಗಳ ಅಧಿಕಾರಾವಧಿಯು ಸಂಸತ್ ಅವಧಿಯ ದಿನಾಂಕದಂದೇ ಮುಗಿಯಲಿದೆ. ಬಳಿಕ ಲೋಕಸಭೆ ಮತ್ತು ಎಲ್ಲಾ ವಿಧಾನಸಭೆಗಳಿಗೆ ಒಮ್ಮೆಲೇ ಸಾರ್ವತ್ರಿಕ ಚುನಾವಣೆಗಳು ಜರುಗಲಿವೆ.
ಉದಾಹರಣೆಗೆ, ಪ್ರಸ್ತುತ ಲೋಕಸಭೆಯ ಮೊದಲ ಅಧಿವೇಶನದ ದಿನಾಂಕ ಜೂನ್ 24 ಆದಲ್ಲಿ, ಲೋಕಸಭೆ ಮತ್ತು ಎಲ್ಲಾ ವಿಧಾನಸಭೆಗಳಿಗೆ ಮೊದಲ ಏಕಕಾಲಿಕ ಚುನಾವಣೆಯು ಜೂನ್ 2029 ರಲ್ಲಿ ನಡೆಯಬೇಕು. ಹೀಗಾಗಿ, ಜೂನ್ 2024 ರ ನಂತರ ಮತ್ತು ಜೂನ್ 2029 ಕ್ಕೂ ಮೊದಲು ಯಾವುದೇ ರಾಜ್ಯ ವಿಧಾನಸಭೆಗಳ ಅಧಿಕಾರಾವಧಿ ಮುಗಿದಲ್ಲಿ, ಅವನ್ನು 2029 ರ ಸಾರ್ವತ್ರಿಕ ಚುನಾವಣೆವರೆಗೂ ವಿಸ್ತರಿಸಲು ಅವಕಾಶ ನೀಡುತ್ತದೆ.
ಲೋಕಸಭೆ ಅಥವಾ ವಿಧಾನಸಭೆ ವಿಸರ್ಜನೆಯಾದರೆ? ಲೋಕಸಭೆ ಅಥವಾ ವಿಧಾನಸಭೆಗಳ ಪೂರ್ಣಾವಧಿಗಿಂತ ಮುಂಚೆಯೇ ಸರ್ಕಾರ ವಿಸರ್ಜನೆಯಾದರೆ, ಈಗಿರುವಂತೆ ಮಧ್ಯಂತರ ಚುನಾವಣೆ ನಡೆಯತ್ತವೆ. ಆದರೆ, ಈ ಹಿಂದಿನಂತೆ ಚುನಾವಣೆ ನಡೆದು ಹೊಸ ಸರ್ಕಾರ ರಚನೆಯಾದ ದಿನಾಂಕದಿಂದ ಐದು ವರ್ಷಗಳು ಇರುವುದಿಲ್ಲ. ಬದಲಾಗಿ, ಲೋಕಸಭೆ ಅಥವಾ ರಾಜ್ಯಗಳ ವಿಧಾನಸಭೆಯ ಸಾರ್ವತ್ರಿಕ ಚುನಾವಣೆ ನಡೆದ ದಿನಾಂಕಕ್ಕೆ ಸಮಾನವಾಗಿ ಅಂದಿಗೆ ಅಧಿಕಾರಾವಧಿ ಮುಗಿಯುತ್ತದೆ.
ಉದಾಹರಣೆಗೆ, 2029 ರ ಸಾರ್ವತ್ರಿಕ ಚುನಾವಣೆಯ ನಂತರ ಲೋಕಸಭೆ ಅಥವಾ ಯಾವುದೇ ರಾಜ್ಯ ವಿಧಾನಸಭೆಗಳು ವಿಸರ್ಜನೆಯಾದರೆ, ಮಧ್ಯಂತರ ಚುನಾವಣೆಯನ್ನು ನಡೆಸಲಾಗುತ್ತದೆ. ಮಧ್ಯಂತರ ಚುನಾವಣೆಯ ಮೂಲಕ ರಚಿತವಾದ ಹೊಸ ಸರ್ಕಾರದ ಅಧಿಕಾರಾವಧಿಯು ಜೂನ್ 2034 ಕ್ಕೆ ಮುಗಿಯುತ್ತದೆ. ಅಂದರೆ, ಮಧ್ಯಂತರ ಚುನಾವಣೆಯ ಅವಧಿಯು ಆಗ ಐದು ವರ್ಷ ಆಗಿರುವುದಿಲ್ಲ.
ವಿಧಾನಸಭೆಗಳ ಚುನಾವಣೆ ಮುಂದೂಡಬಹುದೇ? ಲೋಕಸಭೆಯ ಜೊತೆಗೆ ವಿಧಾನಸಭೆಯ ಚುನಾವಣೆ ನಡೆದು, ಆ ವಿಧಾನಸಭೆಯು ಪೂರ್ಣಾವಧಿ ಮುಗಿಸದೆ ವಿಸರ್ಜನೆಯಾದಲ್ಲಿ ಅದಕ್ಕೆ ಮಧ್ಯಂತರ ಚುನಾವಣೆ ನಡೆಯಲಿದೆ. ಹಾಗೊಂದು ವೇಳೆ ಚುನಾವಣೆ ನಡೆಸಲು ಸಾಧ್ಯವಾಗದ ಪರಿಸ್ಥಿತಿ ಇದ್ದಲ್ಲಿ, ಅದನ್ನು ಕೇಂದ್ರ ಚುನಾವಣಾ ಆಯೋಗವು ನಿರ್ದಿಷ್ಟ ಅವಧಿಗೆ ಚುನಾವಣೆ ಮುಂದೂಡಬಹುದು. ಈ ಅವಧಿಯಲ್ಲಿ ರಾಷ್ಟ್ರಪತಿ ಆಡಳಿತ ಆ ರಾಜ್ಯದಲ್ಲಿ ಜಾರಿಯಲ್ಲಿರುತ್ತದೆ.
ಇದನ್ನೂ ಓದಿ: ಲೋಕಸಭೆಯಲ್ಲಿ 'ಆ ದಿನ' ಒಂದು ರಾಷ್ಟ್ರ ಒಂದು ಚುನಾವಣೆ ವಿಧೇಯಕ ಮಂಡಿಸಲಿರುವ ಕೇಂದ್ರ ಸರ್ಕಾರ