ದಾವಣಗೆರೆ: ದಾವಣಗೆರೆಯಲ್ಲಿ ಜಾತ್ರೆಗಳಿಗೆ ವಿಶೇಷ ಸ್ಥಾನಮಾನವಿದೆ. ಇಲ್ಲಿ ಜರಗುವ ವಿವಿಧ ದೇವರುಗಳ ಜಾತ್ರೆಗಳು ಅಷ್ಟೇ ಖ್ಯಾತಿಗಳಿಸಿವೆ. ಅದು ದುರ್ಗಾಂಭೀಕ ದೇವಿ ಜಾತ್ರೆಯಿಂದ ಹಿಡಿದು ಹರಿಹರದ ಉಕ್ಕಡಗಾತ್ರಿ ಜಾತ್ರೆವರೆಗೂ ಇಡೀ ರಾಜ್ಯಕ್ಕೆ ಹೆಸರುವಾಸಿ. ಅದರಂತೆ ದಾವಣಗೆರೆ ತಾಲೂಕಿನ ಯರಗುಂಟೆಯಲ್ಲಿ ಜರಗುವ ಮಹಿಳೆಯರ ಜಾತ್ರೆ ಅದ್ಧೂರಿಯಾಗಿ ನಡೆಯುವುದು ಮತ್ತೊಂದು ಗಮನ ಸೆಳೆಯುವ ವಿಶೇಷವಾಗಿದೆ.
ಇದರ ಮಧ್ಯೆ ದಾವಣಗೆರೆಯ ಹೊರವಲಯದ ಬಸಾಪುರದಲ್ಲಿ ಜರಗುವ ಮಹೇಶ್ವರನ ಜಾತ್ರೆ ಗಂಡು ಮಕ್ಕಳನ್ನು ಒಗ್ಗೂಡಿಸುವ ಜಾತ್ರೆಯಾಗಿದೆ. ಇಲ್ಲಿ ಮಹಿಳೆಯರ ಪ್ರವೇಶಕ್ಕೆ ನಿಷೇಧ ಇರುತ್ತದೆ. ಸದ್ಯ ಜಾತ್ರೆ ನಡೆದು, ಗಂಡು ಮಕ್ಕಳು ಮಾತ್ರ ಜಾತ್ರೆಗೆ ಆಗಮಿಸಿ ಗದ್ದುಗೆಯ ದರ್ಶನ ಪಡೆದು, ಊರ ಹೊರಗೆ ಊಟ ಮಾಡುವ ಮೂಲಕ ಪುನೀತರಾದರು.
ಮಹಿಳಾ ಭಕ್ತರ ಪ್ರವೇಶಕ್ಕೆ ನಿರ್ಬಂಧ: ದಾವಣಗೆರೆ ನಗರದ ಹೊರವಲಯದ ಬಸಾಪುರದಲ್ಲಿ ಮಹೇಶ್ವರ ಜಾತ್ರೆ ಸಂಭ್ರಮ ಮನೆ ಮಾಡಿತ್ತು. ಮಡದಿ ಮಕ್ಕಳೊಂದಿಗೆ ಆಗಮಿಸಿ ಜಾತ್ರೆ ಮಾಡುವ ಈ ಕಾಲದಲ್ಲಿ ಸ್ವಲ್ಪ ಭಿನ್ನ ಎಂಬಂತೆ ಗಂಡು ಮಕ್ಕಳು ಮಾತ್ರ ಸಾವಿರಾರು ಭಕ್ತರೊಂದಿಗೆ ಬಸಾಪುರದ ಮಹೇಶ್ವರಸ್ವಾಮಿ ಗದ್ದುಗೆ ದರ್ಶನ ಪಡೆದು ಪ್ರಸಾದ ಸ್ವೀಕರಿಸಿ, ತಮ್ಮ ಭಕ್ತಿಯನ್ನು ಸಮರ್ಪಿಸಿ ಧನ್ಯರಾದರು.
''ಪುಷ್ಯ ಮಾಸದ ಎಳ್ಳು ಅಮವಾಸ್ಯೆ ವೇಳೆ ಈ ವಿಶೇಷ ಮಹೇಶ್ವರಸ್ವಾಮಿಯ ಜಾತ್ರೆ ಜರುತ್ತದೆ. ಇದಲ್ಲದೇ, ಚನ್ನಗಿರಿ, ಹರಿಹರ, ದಾವಣಗೆರೆ ತಾಲೂಕು, ನ್ಯಾಮತಿ ಈ ಭಾಗದಲ್ಲಿ ಅತೀಹೆಚ್ಚು ಲಿಂಗಾಯತ ಸಮುದಾಯ ಈ ಮಹೇಶ್ವರ ಜಾತ್ರೆಯನ್ನು ಮಾಡಿಕೊಂಡು ಬರುತ್ತದೆ. ಸತತವಾಗಿ ಮೂರು ದಿನಗಳ ಕಾಲ ಜರಗುವ ಉತ್ಸವಕ್ಕೆ ಬುಧವಾರ ರಾತ್ರಿ ತೆರೆ ಬಿದ್ದಿದೆ. ಈ ಜಾತ್ರೆಗೆ ಮಹಿಳಾ ಭಕ್ತರ ಪ್ರವೇಶಕ್ಕೆ ನಿರ್ಬಂಧವಿದೆ. ಈ ಪ್ರತೀತಿಯನ್ನು 50-60 ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ'' ಎಂದು ದೇವಸ್ಥಾನ ಕಮಿಟಿಯವರಾದ ದೇವೆಂದ್ರಪ್ಪ ತಿಳಿಸಿದ್ದಾರೆ.
ಚನ್ನಗಿರಿಯ ಚಿಕ್ಕೂಲಿಕೆರೆಯ ಜಾತ್ರೆಗೂ ಬಸಾಪುರ ಜಾತ್ರೆಗೂ ಇದೆ ಅವಿನಾಭಾವ ಸಂಬಂಧ: ''ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಚಿಕ್ಕೂಲಿಕೆರೆಯಲ್ಲಿ ಮೊದಲ ಬಾರಿಗೆ ಮಹೇಶ್ವರನ ಜಾತ್ರೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಚಿಕ್ಕೂಲಿಕೆರೆಯ ಜಾತ್ರೆಗೂ ಬಸಾಪುರ ಜಾತ್ರೆಗೂ ನಂಟಿದೆ. ಬಸಾಪುರದ ಯಜಮಾನರೊಬ್ಬರು ಎತ್ತಿನ ವ್ಯಾಪಾರಕ್ಕಾಗಿ ಚಿಕ್ಕೂಲಿಕೆರೆಗೆ ತೆರಳಿದ್ದಾಗ ಮಹೇಶ್ವರ ಜಾತ್ರೆ ನೋಡಿ, ಜಾತ್ರೆಯಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದ್ದರು. ಜಾತ್ರೆಯ ಪ್ರಭಾವಕ್ಕೆ ಒಳಗಾದ ಬಸಾಪುರ ಗ್ರಾಮದ ಯಜಮಾನರೊಬ್ಬರು ಅಲ್ಲಿಂದ ಬಸಾಪುರದಲ್ಲಿ ಮಹೇಶ್ವರನ ಆರಾಧನೆ ಮಾಡಲಾರಂಭಿಸಿದರು. ಕಾಲಕ್ರಮೇಣ ಇದು ಗ್ರಾಮದ ಜಾತ್ರೆಯಾಗಿ ಪರಿವರ್ತನೆಯಾಯಿತು'' ಎಂದು ದೇವೆಂದ್ರಪ್ಪ ಅವರು ಮಾಹಿತಿ ನೀಡಿದ್ದಾರೆ.
40-50 ವರ್ಷದಿಂದ ಮಹಿಳೆಯರ ಪ್ರವೇಶಕ್ಕೆ ನಿಷೇಧ: ಮಹೇಶ್ವರ ಜಾತ್ರೆಗೆ 40-50 ವರ್ಷಗಳಿಂದ ಮಹಿಳೆಯರ ಪ್ರವೇಶಕ್ಕೆ ನಿಷೇಧ ಇದೆ. ಇದು ಬಿಟ್ಟು ಜಾತಿ, ಮತ ಪಂಥ ಹೊರತುಪಡಿಸಿ ಪ್ರತಿಯೊಬ್ಬರು ಈ ಜಾತ್ರೆಯಲ್ಲಿ ಭಾಗಿಯಾಗುತ್ತಾರೆ. ಹಲವು ವರ್ಷಗಳ ಹಿಂದೆಯೇ ಹೆಣ್ಣು ಮಕ್ಕಳು ಈ ಜಾತ್ರೆಗೆ ಆಗಮಿಸುವಂತಿಲ್ಲ ಎಂದು ಬಸಾಪುರ ಗ್ರಾಮದ ಯಜಮಾನರು ನಿರ್ಧಾರ ಮಾಡಿದ್ದರಂತೆ.
ಬಾಳೆಹಣ್ಣಿನ ಸಿಪ್ಪೆ ತೇಲಿದರೆ ಗ್ರಾಮಕ್ಕೆ ಒಳಿತು, ಮುಳುಗಿದರೆ ಆಪತ್ತು: ಮಹೇಶ್ವರಸ್ವಾಮಿ ಗದ್ದುಗೆ ಸಮೀಪದಲ್ಲಿ ಆನೆಕೊಂಡ ಬಸವೇಶ್ವರಸ್ವಾಮಿ, ಬಸಾಪುರದ ಗುರುಸಿದ್ಧೇಶ್ವರಸ್ವಾಮಿ ಹಾಗೂ ಹಾಲಸ್ವಾಮಿ ದೇವರುಗಳು ಸಮಾಗಮವಾಗುತ್ತವೆ. ಗದ್ದುಗೆಯ ಮೇಲೆ ಹಣ್ಣಿನ ಸಿಪ್ಪೆಗಳನ್ನು ಇಡಲಾಗುತ್ತದೆ. ಪೂಜಾರಿಯೊಬ್ಬರು ಪುಷ್ಕರಣಿಯಲ್ಲಿ ಈ ಬಾಳೆಹಣ್ಣಿನ ಸಿಪ್ಪೆಯನ್ನು ವಿಸರ್ಜನೆ ಮಾಡುತ್ತಾರೆ. ಈ ಸಿಪ್ಪೆಗಳು ಪುಷ್ಕರಣಿಯ ನೀರಿನಲ್ಲಿ ತೇಲಿದರೆ ಗ್ರಾಮಕ್ಕೆ ಒಳಿತು, ಮುಳುಗಿದರೆ ಆಪತ್ತು ಎಂಬುದು ಭಕ್ತರ ನಂಬಿಕೆಯಾಗಿದೆ. ಈ ಬಾರಿ ಪುಷ್ಕರಣಿಯಲ್ಲಿ ಬಿಟ್ಟ ಬಾಳೆಹಣ್ಣಿನ ಸಿಪ್ಪೆಗಳು ನೀರಿನಲ್ಲಿ ಕೆಲ ಹೊತ್ತು ತೇಲಿದ್ದರಿಂದ ಗ್ರಾಮಸ್ಥರ ಸಂತಸ ಮುಗಿಲುಮುಟ್ಟಿತ್ತು.
ಇಲ್ಲಿ ಈಡೇರುತ್ತವೆ ಇಷ್ಟಾರ್ಥಗಳು, ಕಣ್ತುಂಬಿಕೊಳ್ಳಬಹುದು ಪವಾಡಗಳು: "ವರ್ಷಕ್ಕೆ ಒಂದು ಬಾರಿ ಈ ಜಾತ್ರೆ ನಡೆಯುತ್ತದೆ. ಮುಂದೆ ನಡೆಯುವ ಸದೃಶ್ಯವನ್ನು ಗಂಗಾ ದೇವಿಗೆ ಪ್ರಸಾದ ತೇಲಿಬಿಟ್ಟಾಗ ಸ್ವಾಮಿಯಿಂದ ತಿಳಿಯಬಹುದಾಗಿದೆ. ಮಳೆ ಬೆಳೆ, ಜನರ ಕಷ್ಟಗಳ ಬಗ್ಗೆ ಇಲ್ಲಿ ಮಾಹಿತಿ ಗೊತ್ತಾಗುತ್ತದೆ, ಸರ್ವಜನಾಂದವರು ಇಲ್ಲಿ ಭಾಗಿಯಾಗಬಹುದು. ಬೇಕಾದಷ್ಟು ಪವಾಡಗಳು ಆಗಿವೆ, ಇಷ್ಟಾರ್ಥಗಳು ಕೂಡ ಈಡೇರಿವೆ. ಮದುವೆ, ಮಕ್ಕಳಾಗಿರುವ ಪವಾಡ ಆಗಿದೆ. ಹರಕೆ ಮೂಲಕ ಇದು ನಡೆಯುತ್ತದೆ" ಎಂದು ಅರ್ಚಕರಾದ ಜಗದೀಶ್ ತಿಳಿಸಿದರು.
ಮಹಿಳೆಯರೇ ರಥ ಎಳೆದುಕೊಂಡು ಹೋಗಬೇಕು, ಇದು ಮಹಿಳೆಯರ ಜಾತ್ರೆ: ಬಸಾಪುರದಲ್ಲಿ ನಡೆಯುವ ಗಂಡು ಮಕ್ಕಳ ಜಾತ್ರೆಯಂತೆ ದಾವಣಗೆರೆ ತಾಲೂಕಿನ ಯರಗುಂಟೆ ಗ್ರಾಮದಲ್ಲಿ ಕೂಡ ಮಹಿಳಾ ಮಣಿಗಳ ಜಾತ್ರೆ ನಡೆಯುತ್ತೆ. ಇಲ್ಲಿರುವ ಕರಿಬಸವೇಶ್ವರ ಗದ್ದಿಗೆ ಕೂಡ ಇದೆ. ಈ ಧಾರ್ಮಿಕ ಕೇಂದ್ರದಲ್ಲಿ ನಡೆಯುವ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮದಲ್ಲಿ ಮಹಿಳೆಯರೇ ಮೇಲುಗೈ ಸಾಧಿಸುತ್ತಾರೆ.
ಇಲ್ಲಿನ ಜರಗುವ ರಥೋತ್ಸವ ಮಹಿಳೆಯರಿಗಾಗಿಯೇ ನಡೆಯುತ್ತದೆ. ಜಾತ್ರೆಯಲ್ಲಿ ಮಹಿಳೆಯರೇ ರಥ ಎಳೆದುಕೊಂಡು ಹೋಗುತ್ತಾರೆ. ಹೀಗಾಗಿ ಇದು ಮಹಿಳಾ ಜಾತ್ರೆ ಎಂದೇ ಪ್ರಸಿದ್ಧಿ ಪಡೆದುಕೊಂಡಿದೆ. ಯರಗುಂಟೆಯಲ್ಲಿ ಕಳೆದ 11 ವರ್ಷಗಳಿಂದ ಈ ಮಹಿಳೆಯರ ರಥೋತ್ಸವ ಜರುಗುತ್ತಿದೆ.
ಇದನ್ನೂ ಓದಿ: ಬಾಗಲಕೋಟೆ: ಅದ್ಧೂರಿಯಾಗಿ ನೆರವೇರಿದ ಕಿಚಡಿ ಜಾತ್ರೆ, ಜಟಾ ಪ್ರದರ್ಶನ ಜಾತ್ರೆ - Fair In bagalkote - FAIR IN BAGALKOTE