ದೊಡ್ಡಬಳ್ಳಾಪುರ(ಬೆಂಗಳೂರು ಗ್ರಾಮಾಂತರ): ದೊಡ್ಡಬಳ್ಳಾಪುರ ನಗರಸಭೆಯಲ್ಲಿಂದು ಸಂಕ್ರಾಂತಿ ಸಂಭ್ರಮ ಮನೆ ಮಾಡಿತ್ತು. ಸಾಂಪ್ರದಾಯಿಕ ಉಡುಗೆ ತೊಟ್ಟ ನಗರಸಭಾ ಸದಸ್ಯರು ರಾಜಕೀಯ ಮರೆತು, ಪಕ್ಷಾತೀತವಾಗಿ ಸೇರಿ ಎಳ್ಳು – ಬೆಲ್ಲ ಹಂಚಿ ಪರಸ್ಪರ ಶುಭ ಕೋರಿದರು.
ಹೌದು, ದೊಡ್ಡಬಳ್ಳಾಪುರ ನಗರಸಭೆಯಲ್ಲಿ ಒಂದು ದಿನ ಮುಂಚೆಯೇ ಸಂಕ್ರಾಂತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ನಗರಸಭೆಯ ಪುರುಷ ಸದಸ್ಯರು ಪಂಚೆ, ಶಲ್ಯ ಧರಿಸಿ ಕೈಯಲ್ಲಿ ಕಬ್ಬಿನ ಜಲ್ಲೆ ಹಿಡಿದು ಆಗಮಿಸಿ ಎಲ್ಲರ ಗಮನ ಸೆಳೆದರು. ಮಹಿಳಾ ಸದಸ್ಯರು ಕೈಯಲ್ಲಿ ಎಳ್ಳು-ಬೆಲ್ಲ, ಪೊಂಗಲ್ ಹಿಡಿದು ಹಬ್ಬದ ಸಡಗರ ಹೆಚ್ಚಿಸಿದರು.
ರಂಗೋಲಿಯ ಮೇಲೆ ಕಡಲೆಕಾಯಿ, ಅವರೆಕಾಯಿ, ಗೆಣಸಿಟ್ಟು ಪೂಜೆ ಮಾಡಿದರು. ಗೋ ಪೂಜೆಯ ಮೂಲಕ ಸಂಕ್ರಾಂತಿ ಹಬ್ಬವನ್ನು ಆಚರಿಸಿದರು. ಎಳ್ಳು – ಬೆಲ್ಲ ಹಂಚಿ ಪರಸ್ಪರ ಶುಭ ಕೋರಿದರು. ನಗರಸಭೆ ಅಧ್ಯಕ್ಷೆ, ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷರು, ಸೇರಿದಂತೆ ಎಲ್ಲ ಸದಸ್ಯರು, ಅಧಿಕಾರಿ ವರ್ಗ ಸಂಕ್ರಾಂತಿ ಸಂಭ್ರಮದಲ್ಲಿ ಪಾಲ್ಗೊಂಡು ಸಂತೋಷದಿಂದ ಹಬ್ಬ ಆಚರಣೆ ಮಾಡಿದರು.
ಮೊದಲ ಬಾರಿಗೆ ಸಂಕ್ರಾಂತಿ ಆಚರಣೆ: ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್ ಮಾತನಾಡಿ, "ಇದೇ ಮೊದಲ ಬಾರಿಗೆ ನಗರಸಭೆಯಲ್ಲಿ ಸಂಕ್ರಾಂತಿ ಆಚರಿಸಲಾಗುತ್ತಿದೆ. ಪೌರಕಾರ್ಮಿಕರು, ಸಿಬ್ಬಂದಿ ಮತ್ತು ನಗರಸಭಾ ಸದಸ್ಯರ ಜೊತೆಯಲ್ಲಿ ಹಬ್ಬವನ್ನ ಆಚರಿಸಿದ್ದು ಸಂತಸ ತಂದಿದೆ. ಮುಂದಿನ ಬಜೆಟ್ನಲ್ಲಿ ದೊಡ್ಡಬಳ್ಳಾಪುರ ಜನತೆಗೆ ಒಳ್ಳೆಯ ಯೋಜನೆಗಳನ್ನು ಕೊಡುವುದಾಗಿ" ಹೇಳಿದರು.
ಸ್ಥಾಯಿ ಸಮಿತಿ ಅಧ್ಯಕ್ಷರಾದ ವಡ್ಡರಹಳ್ಳಿ ರವಿ ಮಾತನಾಡಿ, "ರಾಜಕೀಯವೇ ಜೀವನ ಅಲ್ಲ. ಗೆಲ್ಲುವ ತನಕ ಪಕ್ಷ, ಗೆದ್ದ ನಂತರ ನಾವೆಲ್ಲ ನಗರದ ಅಭಿವೃದ್ಧಿಗಾಗಿ ದುಡಿಯ ಬೇಕು, ಸಂಕ್ರಾಂತಿ ಹಬ್ಬವನ್ನ ಆಚರಣೆಯ ಮೂಲಕ ದೊಡ್ಡಬಳ್ಳಾಪುರ ನಗರಸಭೆಗೆ ಸರ್ಕಾರದಿಂದ ಅನುದಾನ ಹರಿದು ಬರಲಿ. ಮತ್ತಷ್ಟು ಪ್ರಗತಿ ಆಗಲಿ ಎಂಬುದೇ ನಮ್ಮ ಆಶಯವಾಗಿದೆ" ಎಂದು ತಿಳಿಸಿದರು.
ಈ ವೇಳೆ ನಗರಸಭಾ ಉಪಾಧ್ಯಕ್ಷರಾದ ಮಲ್ಲೇಶ್, ನಗರಸಭಾ ಸದಸ್ಯರುಗಳಾದ ಶಿವಶಂಕರ್, ಆನಂದ್, ಸುಧಾ ಲಕ್ಷ್ಮೀನಾರಾಯಣ್, ಬಂತಿ ವೆಂಕಟೇಶ್, ಶಿವು, ಶಿವಣ್ಣ, ರೂಪಿಣಿ ಮಂಜುನಾಥ್, ಪ್ರಭಾ ನಾಗರಾಜ್, ಪದ್ಮನಾಭ್, ನಾಗರಾಜು, ಪ್ರಭುದೇವ್ , ವತ್ಸಲಾ, ಸುರೇಶ್, ಮಂಜುಳಾ, ಆದಿಲಕ್ಷ್ಮೀ, ಹಸೀನಾ ತಾಜ್, ರಜನಿ ಸುಬ್ರಮಣಿ, ಭಾಸ್ಕರ್, ಚಂದ್ರಮೋಹನ್,ಲಕ್ಮೀಪತಿ,ಇಂದ್ರಾಣಿ, ನಾಗರತ್ಮಮ್ಮ, ಹಂಸಪ್ರಿಯ, ವಾಣಿ, ಕಾಂತರಾಜು, ಅಖಿಲೇಶ್ ಇದ್ದರು.
ಇದನ್ನೂ ಓದಿ: ಮೈಸೂರಿನಲ್ಲಿ ಸಂಕ್ರಾಂತಿ ಖರೀದಿ ಜೋರು: ಗ್ರಾಮೀಣ ಪ್ರದೇಶದಲ್ಲೂ ರೈತರು ಫುಲ್ ಬ್ಯುಸಿ
ಇದನ್ನೂ ಓದಿ: ಯಲ್ಲಮ್ಮನ ಗುಡ್ಡದಲ್ಲಿ ಬನದ ಹುಣ್ಣಿಮೆ ಸಂಭ್ರಮ: ದೇವಿಯ ದರ್ಶನಕ್ಕೆ ಹರಿದು ಬಂತು ಭಕ್ತಸಾಗರ