ಬೆಂಗಳೂರು: ಎರಡು ವರ್ಷದ ಮಗುವಿನ ಮೇಲೆ ಪಿಟ್‌ಬುಲ್ ನಾಯಿ ದಾಳಿ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಡಿಸೆಂಬರ್ 23ರಂದು ಬಾಣಸವಾಡಿಯ ವೆಂಕಟಸ್ವಾಮಿ ಲೇಔಟ್‌ನಲ್ಲಿ ಘಟನೆ ನಡೆದಿದ್ದು, ನಾಯಿಯ ಮಾಲೀಕರ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಯಿ ದಾಳಿಯಿಂದ 2 ವರ್ಷದ ಹೆಣ್ಣು ಮಗುವಿನ ಭುಜಕ್ಕೆ ಗಂಭೀರವಾಗಿ ಗಾಯಗಳಾಗಿವೆ ಎಂದು ತಂದೆ ನಬ್ರಾಜ್ ದಮಾಲ್, ಶ್ವಾನದ ಮಾಲೀಕರ ವಿರುದ್ಧ ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರಿನ ವಿವರ: ಗಾಯಾಳು ಮಗುವಿನ ಪೋಷಕರು ನೇಪಾಳ ಮೂಲದವರಾಗಿದ್ದು, ಬಾಣಸವಾಡಿಯ ವೆಂಕಟಸ್ವಾಮಿ ಲೇಔಟ್‌ನಲ್ಲಿ ವಾಸವಿದ್ದರು. ಅದೇ ಮನೆಯ ಪಕ್ಕದಲ್ಲೇ ವಾಸವಿರುವವರು ಪಿಟ್‌ಬುಲ್ ಹಾಗೂ ರಾಟ್‌ವೀಲ್ ತಳಿಯ ನಾಯಿಗಳನ್ನು ಸಾಕಿದ್ದರು. ಡಿಸೆಂಬರ್ 23ರಂದು ಸಂಜೆ 5.30ರ ವೇಳೆ ಮಗು ಎತ್ತಿಕೊಂಡಿದ್ದ ತಾಯಿ ಮನೆ ಬಳಿ ನಿಂತಿದ್ದಾಗ ಈ ವೇಳೆ ಏಕಾಏಕಿ ಪಕ್ಕದ ಮನೆಯಲ್ಲಿ ಸಾಕಿದ್ದ ಪಿಟ್ ಬುಲ್ ನಾಯಿ ದಾಳಿ ಮಾಡಿದೆ. ಮಗುವನ್ನು ನಾಯಿಯಿಂದ ರಕ್ಷಿಸಲು ತಾಯಿ ಯತ್ನಿಸಿದ್ದರಾದರೂ ಸಾಧ್ಯವಾಗಿಲ್ಲ. ಮಗುವಿನ ಭುಜಕ್ಕೆ ಕಚ್ಚಿ ನಾಯಿ ಗಾಯಗೊಳಿಸಿದೆ ಎಂದು ದೂರು ನೀಡಲಾಗಿದೆ.
ಇದನ್ನೂ ಓದಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ರೈತನನ್ನು ಎಳೆದೊಯ್ದು ಕೊಂದು ತಿಂದ ಹುಲಿ
ಸದ್ಯ ಮಗುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, 80 ಸಾವಿರ ರೂ. ಬಿಲ್ ಆಗಿದೆ. ನಾಯಿ ಮಾಲೀಕನ ನಿರ್ಲಕ್ಷ್ಯ ದಿಂದ ಘಟನೆ ನಡೆದಿದೆ ಎಂದು ಗಾಯಾಳು ಮಗುವಿನ ತಂದೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ಬೆಳಗಾವಿ: ಅಲಖನೂರ ಕರಿಸಿದ್ದೇಶ್ವರ ದೇವಸ್ಥಾನದಲ್ಲಿ ಆನೆ ತುಳಿದು ಮಾವುತ ಸಾವು