ಬೆಂಗಳೂರು: ಮುಡಾ ಪ್ರಕರಣದ ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್ ಆದೇಶವನ್ನು ಕಾಂಗ್ರೆಸ್ ಸಚಿವರು ಸ್ವಾಗತಿಸಿದ್ದು, ರಾಜಕೀಯ ಮಾಡುವುದೇ ಇವರ ಗುರಿಯಾಗಿತ್ತು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ತೀರ್ಪು ನ್ಯಾಯಯುತ- ಪರಮೇಶ್ವರ್: ಗೃಹ ಸಚಿವ ಜಿ.ಪರಮೇಶ್ವರ್ ಮಾತನಾಡಿ, "ನಾವೂ ಕೂಡ ಇದನ್ನು ನಿರೀಕ್ಷೆ ಮಾಡಿದ್ದೆವು. ಸಿಬಿಐಗೆ ಕೊಡುವ ಅಂಶ ಇಲ್ಲ ಅಂತ ಲೋಕಾಯುಕ್ತದ ಮೇಲೆ ವಿಶ್ವಾಸವಿಟ್ಟು ಕೋರ್ಟ್ ಆದೇಶಿಸಿದೆ. ಲೋಕಾಯುಕ್ತ ವರದಿ ಸರಿಯಲ್ಲ ಅಂತ ಹೇಳಲು ಬರಲ್ಲ. ಅದಕ್ಕಾಗಿ ಪೀಠ ಈ ಆದೇಶ ಮಾಡಿದೆ. ಇ.ಡಿ ತನಿಖೆ ಬಗ್ಗೆ ಮುಂದೆ ನೋಡೋಣ. ಹೈಕೋರ್ಟ್, ಸುಪ್ರೀಂ ಕೋರ್ಟ್ ತೀರ್ಪುಗಳು ನ್ಯಾಯಯುತವಾಗಿರುತ್ತವೆ" ಎಂದರು.
ರಾಜಕೀಯ ಮಾಡುವುದೇ ಅವರ ಗುರಿ-ಸಚಿವ ಹೆಚ್.ಸಿ.ಮಹದೇವಪ್ಪ: ಸಚಿವ ಹೆಚ್.ಸಿ.ಮಹದೇವಪ್ಪ ಮಾತನಾಡಿ, "ನಾವು ಕಾನೂನನನ್ನು ಗೌರವಿಸುತ್ತೇವೆ. ಆದರೆ, ಈ ಕೇಸ್‌ನಲ್ಲಿ ರಾಜಕೀಯ ಮಾಡುವುದೇ ಅವರ ಗುರಿಯಾಗಿತ್ತು. ಆದರೀಗ ಹೈಕೋರ್ಟ್ ಎಲ್ಲಾ ಅಂಶಗಳನ್ನು ಪರಾಮರ್ಶಿಸಿ ಅರ್ಜಿ ವಜಾಗೊಳಿಸಿದೆ. ನಾವು ಲೋಕಾಯುಕ್ತಕ್ಕೆ ಗೌರವ ನೀಡಬೇಕು. ಅದೊಂದು ಸ್ವತಂತ್ರ ಸಂಸ್ಥೆ. ಇದನ್ನು ರಾಜಕೀಯ ಉದ್ದೇಶದಿಂದ ವಿರೋಧ ಮಾಡುತ್ತಲೇ ಬಂದಿದ್ದಾರೆ" ಎಂದು ದೂರಿದರು.
ತೀರ್ಪಿನಿಂದ 5 ವರ್ಷ ಸಿಎಂ ಆಗಿ ಮುಂದುವರೆಯಲು ಬೂಸ್ಟ್ ಸಿಗ್ತಾ ಎಂಬ ವಿಚಾರಕ್ಕೆ, "ಇದಕ್ಕೂ, ಸಿಎಂ ಸ್ಥಾನಕ್ಕೂ ಸಂಬಂಧ ಇಲ್ಲ. ಇದು ಸಿಎಂ ಅವರ ಜಾರಿತ್ರ್ಯ ಹರಣಗೊಳಿಸುವ ವಿರೋಧ ಪಕ್ಷಗಳ ಷಡ್ಯಂತ್ರ ಅಷ್ಟೇ" ಎಂದು ಟೀಕಿಸಿದ್ದಾರೆ.
ದ್ವೇಷದ ರಾಜಕಾರಣ-ಸಚಿವ ಎಂ.ಸಿ.ಸುಧಾಕರ್: ಸಚಿವ ಎಂ.ಸಿ.ಸುಧಾಕರ್ ಮಾತನಾಡಿ, "ನಾವು ಪ್ರಾರಂಭದಲ್ಲೇ ಹೇಳಿದ್ದೆವು. ಉಚ್ಚ ನ್ಯಾಯಾಲಯದ ಆದೇಶದ ಮೇಲೆ ಲೋಕಾಯುಕ್ತ ತನಿಖೆಗೆ ಕೊಡಲಾಗಿತ್ತು. ಅದರ ಬೆನ್ನಲ್ಲೇ ಸಿಬಿಐ ತನಿಖೆಗೆ ಕೇಳುವ ಅವಶ್ಯಕತೆ ಏನಿತ್ತು? ಇದು ಸಂಪೂರ್ಣ ರಾಜಕೀಯ ದುರುದ್ದೇಶ. ಸಿಬಿಐ ಬಳಸಿಕೊಂಡು ರಾಜಕೀಯ ಬೇಳೆ ಬೇಯಿಸಿಕೊಳ್ಳಲು ನೋಡಲಾಗಿತ್ತು. ಇದು ದ್ವೇಷದ ರಾಜಕಾರಣ. ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳುವುದನ್ನು ನಾವು ಮೊದಲಿನಿಂದಲೂ ನೋಡ್ತಿದ್ದೇವೆ. ಇದರಿಂದ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಬಂದಿದೆ" ಎಂದರು.
ಸಿಎಂಗೆ ಸಂತಸ- ಎಸ್.ಪೊನ್ನಣ್ಣ: ಸಿಎಂ ಕಾನೂನು ಸಲಹೆಗಾರ ಎಸ್.ಪೊನ್ನಣ್ಣ ಮಾತನಾಡಿ, "ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ಸಿದ್ದರಾಮಯ್ಯ ಅವರಿಗೆ ಸಂತಸ ಉಂಟು ಮಾಡಿದೆ. ತೀರ್ಪು ಬಂದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಮುಡಾ ಹಗರಣದಲ್ಲಿ ನ್ಯಾಯಾಲಯ ಮೂರು ಅಂಶಗಳನ್ನು ಉಲ್ಲೇಖಿಸಿದೆ. ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸುತ್ತಿರುವಾಗ ಸಿಬಿಐಗೆ ಹಸ್ತಾಂತರ ಮಾಡುವಂತಹ ಅಂಶಗಳು ಪ್ರಕರಣದಲ್ಲಿ ಕಂಡುಬಂದಿಲ್ಲ ಎಂದು ಅಭಿಪ್ರಾಯಪಟ್ಟಿದೆ" ಎಂದು ತಿಳಿಸಿದರು.
"ಲೋಕಾಯುಕ್ತ ಸ್ವತಂತ್ರ ಸಂಸ್ಥೆ ಅಂತ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಸಿಬಿಐಗೆ ವಹಿಸಲು ಕಾರಣವಾದ ಅಂಶಗಳು ಈ ಪ್ರಕರಣದಲ್ಲಿಲ್ಲ ಅಂತ ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ನಾನು ಇನ್ನೂ ತೀರ್ಪಿನ ಪ್ರತಿ ಓದಿಲ್ಲ. ಇ.ಡಿಯವರ ಎರಡೂ ನೋಟೀಸ್ಗಳು ಕೋರ್ಟ್ನಲ್ಲಿವೆ. ಯಾವುದೇ ತನಿಖೆಗೂ ನಾವು ಸಹಕಾರ ಕೊಡುತ್ತೇವೆ. ಕಾನೂನು ಚೌಕಟ್ಟಿನಲ್ಲಿ ಹೋರಾಡುತ್ತೇವೆ" ಎಂದರು.
ಇದನ್ನೂ ಓದಿ: ಮುಡಾ ಪ್ರಕರಣ: ಸಿದ್ದರಾಮಯ್ಯ ವಿರುದ್ಧ ಸಿಬಿಐ ತನಿಖೆಗೆ ಕೋರಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್