ಕಾರವಾರ(ಉತ್ತರ ಕನ್ನಡ): ಕಳೆದ 45 ವರ್ಷಗಳಿಂದ ಎಣ್ಣೆ ಹಾಗೂ ಬತ್ತಿ ಇಲ್ಲದೆ ಉರಿಯುತ್ತಿದೆ ಎಂದು ನಂಬಲಾಗಿದ್ದ ಜಿಲ್ಲೆಯ ಮುಂಡಗೋಡ ತಾಲೂಕಿನ ಚಿಗಳ್ಳಿಯ ದೀಪನಾಥೇಶ್ವರ ದೇವಸ್ಥಾನದ ಮೂರು ದೀಪಗಳು ಆರಿದ್ದು, ಭಕ್ತರ ಆತಂಕಕ್ಕೆ ಕಾರಣವಾಗಿದೆ.
ಚಿಗಳ್ಳಿ ಗ್ರಾಮದ ಶಾರದಮ್ಮ ದೈವಜ್ಞ ಎಂಬ ದೈವ ಭಕ್ತೆ 1979ರಲ್ಲಿ ದೀಪನಾಥೇಶ್ವರ ದೇವಸ್ಥಾನದಲ್ಲಿ ಸೀಮೆಎಣ್ಣೆ ಹಾಕಿ ಒಂದು ಲಾಟೀನ್ ದೀಪ ಹಚ್ಚಿದಾಗ ಅದು ನಿರಂತರವಾಗಿ ಉರಿಯತೊಡಗಿತು. ಅದನ್ನು ಕಂಡು ಆಶ್ಚರ್ಯಗೊಂಡ ಶಾರದಮ್ಮ 1980ರಲ್ಲಿಯೂ ಮತ್ತೊಂದು ದೀಪವನ್ನು ಹಚ್ಚಿಟ್ಟಾಗ ಅದೂ ಸಹ ನಿರಂತರವಾಗಿ ಬೆಳಗಿತು. ನಂತರ 15 ದಿನ ಬಿಟ್ಟು ಮತ್ತೊಂದು ದೀಪವನ್ನು ಹಚ್ಚಿದಾಗ ಅದೂ ಸಹ ನಿರಂತರವಾಗಿ ಬೆಳಗುತ್ತಿದೆ ಎಂಬುದನ್ನು ಇಂದಿಗೂ ನಂಬಲಾಗುತಿತ್ತು. ಚಿಗಳ್ಳಿಯಲ್ಲಿ ಮೂರು ದೀಪಗಳು ನಿರಂತರವಾಗಿ ಉರಿಯುತ್ತಿರುವ ಪ್ರತೀತಿಯಿಂದಾಗಿ ಇದನ್ನು ನೋಡಲು ಪ್ರತಿ ವರ್ಷವೂ ದೇಶ-ವಿದೇಶಗಳಿಂದ ಜನ ಬರುತ್ತಿದ್ದರು. ಬಳಿಕ ಇಲ್ಲಿ ಗುಡಿಯೊಂದನ್ನು ನಿರ್ಮಿಸಲಾಗಿತ್ತು.
ಈ ದೀಪಗಳನ್ನು ಹಚ್ಚಿದ ಶಾರದಮ್ಮ ಹಲವು ವರ್ಷಗಳ ನಂತರ ಸಾವನ್ನಪ್ಪಿದರು. ಅವರ ಸಂಬಂಧಿಕರು ಈ ದೀಪಗಳನ್ನು ಪೂಜೆ ಮಾಡುತ್ತಾ ಬಂದಿದ್ದರು. ಬುಧವಾರ ಮೂರು ದೀಪಗಳು ಆರಿರುವ ಸುದ್ದಿ ಹರಡಿದ್ದರಿಂದ ಭಕ್ತರ ದಂಡು ಚಿಗಳ್ಳಿಗೆ ಆಗಮಿಸಿದ್ದರು.
ಇದೀಗ ಆ ದೀಪಗಳ ಕುರಿತು ದೀಪನಾಥೇಶ್ವರ ದೇವಸ್ಥಾನ ಟ್ರಸ್ಟ್ನ ಶೇಷಾದ್ರಿ ಕೆ. ಅವರು ಮಾತನಾಡಿ, "ದೀಪನಾಥೇಶ್ವರ ದೇವಸ್ಥಾನದಲ್ಲಿ ಪೂಜೆಯನ್ನು ಮಾಡುತ್ತಿರುವ ವೆಂಕಟೇಶ ಅವರು ಜನವರಿ 23ರಂದು ನಿಧನರಾಗಿದ್ದಾರೆ. ಅವರ ಸಂಸ್ಕಾರ ಕಾರ್ಯವನ್ನು ಗೋಕರ್ಣದಲ್ಲಿ ಮಾಡಲಾಗಿದೆ. ವೈಕುಂಠ ಸಮಾರಾಧನೆ ಮುಗಿಸಿ ದೇವಸ್ಥಾನದ ಗರ್ಭಗುಡಿ ಬಾಗಿಲನ್ನು ತೆರೆದಾಗ ದೀಪಗಳು ಆರಿರುವುದು ಕಾಣಿಸಿದೆ. ಈ ಬಗ್ಗೆ ಇನ್ನಷ್ಟು ವಿಚಾರ ಮಾಡುವ ಅಗತ್ಯವಿದೆ" ಎಂದು ತಿಳಿಸಿದ್ದಾರೆ.
"ಮೂರು ದೀಪಗಳು 45 ವರ್ಷಗಳಿಂದಲೂ ನಿರಂತರವಾಗಿ ಉರಿಯುತ್ತಿದ್ದವು. ಭಕ್ತರಿಗೆ ದರ್ಶನ ನೀಡಿ ಅವರ ಕಷ್ಟಗಳನ್ನು ದೂರ ಮಾಡುತ್ತಿದ್ದವು. ಇದೀಗ ಏಕಾಏಕಿ ದೀಪ ಆರಿರುವುದರಿಂದ ಮುಂದಿನ ಪವಾಡವನ್ನು ನಿರೀಕ್ಷಿಸಲಾಗುತ್ತಿದೆ. ಗ್ರಾಮಸ್ಥರಿಂದ ಹೋಮ ನಡೆಸಲು ನಿರ್ಧರಿಸಲಾಗಿದೆ" ಎಂದು ಅವರು ಮಾಹಿತಿ ನೀಡಿದ್ದಾರೆ.
"ಈಗಾಗಲೇ ಈ ಸ್ಥಳದಲ್ಲಿ ಈಶ್ವರ, ಬಸವಣ್ಣ, ಮಹಾಗಣಪತಿ, ಜ್ಞಾನೇಶ್ವರಿ, ಐದು ತಲೆ ನಾಗ, ದತ್ತಾತ್ರೇಯ, ಚೌಡೇಶ್ವರಿ, ಭೂತರಾಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲು ನಿರ್ಧರಿಸಲಾಗಿದೆ. ಶಿವಮೊಗ್ಗದ ರಾಘವೇಂದ್ರ ಗುಡಿಗಾರ ಅವರು ಶಿಲೆಗಳನ್ನು ರೂಪಿಸುತ್ತಿದ್ದು, ಸಿದ್ಧಿ ಸ್ಥಳದಲ್ಲಿ ಉತ್ತಮ ದೇಗುಲ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ" ಎಂದು ಅವ ಹೇಳಿದರು.
ಇದನ್ನೂ ಓದಿ: ಹಾವೇರಿ: ದೇಗುಲದ ಕಳಸಾರೋಹಣದ ವೇಳೆ ಕ್ರೇನ್ ಬಕೆಟ್ ಕಟ್ ಆಗಿ ಬಿದ್ದು ಓರ್ವನ ಸಾವು - CRANE BUCKET FALLS OFF