ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಫೆಬ್ರವರಿ 12ರಿಂದ ಎರಡು ದಿನಗಳ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಈ ಸಂದರ್ಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಶುಕ್ರವಾರ ಪ್ರಕಟಿಸಿದೆ.
ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ, ಮೋದಿಯವರ ಭೇಟಿ ಭಾರತ-ಯುಎಸ್ ದ್ವಿಪಕ್ಷೀಯ ಸಂಬಂಧಕ್ಕೆ ಮತ್ತಷ್ಟು ಬಲ ತುಂಬಲಿದೆ ಎಂದು ಹೇಳಿದರು.
ಕೆಲವೇ ವಾರಗಳ ಹಿಂದೆ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡಿರುವ ಅಧ್ಯಕ್ಷ ಟ್ರಂಪ್ ಅವರ ಆಹ್ವಾನದ ಮೇರೆಗೆ ಪಿಎಂ ಮೋದಿ ಅಮೆರಿಕಕ್ಕೆ ಹೋಗುತ್ತಿದ್ದಾರೆ. ಅಮೆರಿಕವು ಭಾರತೀಯ ವಲಸಿಗರ ಕೈಗಳಿಗೆ ಕೋಳ ತೊಡಿಸಿ ಅವಮಾನ ಮಾಡಿದೆ ಎಂಬ ವಿಚಾರದಲ್ಲಿ ರಾಜಕೀಯ ವಿವಾದ ಭುಗಿಲೆದ್ದಿರುವ ಮಧ್ಯದಲ್ಲೇ ಪಿಎಂ ಯುಎಸ್ಗೆ ಹೋಗುತ್ತಿರುವುದು ಮತ್ತಷ್ಟು ಮಹತ್ವ ಪಡೆದುಕೊಂಡಿದೆ.
ಅಮೆರಿಕ ಭೇಟಿಗೂ ಮುನ್ನ ಮೋದಿ ಫೆಬ್ರವರಿ 10-12ರಂದು ಫ್ರಾನ್ಸ್ ಗೆ ಭೇಟಿ ನೀಡಲಿದ್ದು, ಅಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ಎಐ ಆ್ಯಕ್ಷನ್ ಶೃಂಗಸಭೆಯ ಸಹ-ಅಧ್ಯಕ್ಷತೆ ವಹಿಸಲಿದ್ದಾರೆ.
"ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ಆಹ್ವಾನದ ಮೇರೆಗೆ ಪ್ರಧಾನಿ ನರೇಂದ್ರ ಮೋದಿ ಅವರು 2025 ರ ಫೆಬ್ರವರಿ 10 ರಿಂದ 12 ರವರೆಗೆ ಫ್ರಾನ್ಸ್ ಗೆ ಭೇಟಿ ನೀಡಲಿದ್ದಾರೆ. ಈ ಭೇಟಿಯು ಫ್ರಾನ್ಸ್ ಆಯೋಜಿಸುತ್ತಿರುವ ಕೃತಕ ಬುದ್ಧಿಮತ್ತೆ ಶೃಂಗಸಭೆಯ ಸಂದರ್ಭದಲ್ಲಿ ನಡೆಯಲಿದೆ. ಪ್ರಧಾನಿಯವರು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಅವರೊಂದಿಗೆ ಈ ಎಐ ಕ್ರಿಯಾ ಶೃಂಗಸಭೆಯ ಸಹ ಅಧ್ಯಕ್ಷತೆ ವಹಿಸಲಿದ್ದಾರೆ." ಎಂದು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಹೇಳಿದರು.
ಇದನ್ನೂ ಓದಿ: ತನ್ನ ಉದ್ಯೋಗಿಗಳಿಗೆ 14.5 ಕೋಟಿ ರೂಪಾಯಿ ಬಂಪರ್ ಬೋನಸ್ ಕೊಟ್ಟ ಕಂಪೆನಿ! - IT COMPANY BONUS