ಕರ್ನಾಟಕ

karnataka

ETV Bharat / opinion

EXPLAINER: ಜನಗಣತಿ ವಿಳಂಬ: ಪರಿಣಾಮಗಳು ಮತ್ತು ಕಾರ್ಯಸಾಧ್ಯತೆಗಳೇನು? - Census in India

ಜನಗಣತಿ ವಿಳಂಬದಿಂದಾಗುವ ಪರಿಣಾಮಗಳು ಮತ್ತು ಕಾರ್ಯಸಾಧ್ಯತೆಗಳ ಬಗ್ಗೆ ಒಂದು ಅವಲೋಕನ ಇಲ್ಲಿದೆ.

By K Narayanan Unni

Published : Jul 11, 2024, 7:48 PM IST

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ 2021 ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಆರಂಭದಲ್ಲಿ ಎರಡು ವರ್ಷಗಳವರೆಗೆ ವಿಳಂಬಗೊಳಿಸಲಾಯಿತು. ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ಹೊರತುಪಡಿಸಿ ಇತರ ಅಂಶಗಳು ಸಹ ವಿಳಂಬಕ್ಕೆ ಕಾರಣವಾಗಿರಬಹುದು. ಕೊರೊನಾ ಸಾಂಕ್ರಾಮಿಕ ಅವಧಿಯ ನಂತರ ಹಲವಾರು ದೇಶಗಳು ಜನಗಣತಿಗಳನ್ನು ನಡೆಸಿದ್ದರೂ, ಅವುಗಳಲ್ಲಿ ಯಾವುದೂ ಭಾರತೀಯ ಜನಗಣತಿಯ ಗಾತ್ರ ಮತ್ತು ಸಂಕೀರ್ಣತೆಗೆ ಸಮನಾಗುವುದಿಲ್ಲ.

ಜನಗಣತಿಯಲ್ಲಿ ಮನೆಗಳ ಪಟ್ಟಿ ತಯಾರಿಸುವ ಸಮಯದಲ್ಲಿ ಎನ್​ಪಿಆರ್ ಅನ್ನು ನವೀಕರಿಸುವ ಮಾಹಿತಿಯನ್ನು ಸಂಗ್ರಹಿಸಲಾಗುವುದು ಎಂದು 2021 ರ ಜನಗಣತಿಗೆ ತಯಾರಿ ನಡೆಸುವಾಗ ನಿರ್ಧರಿಸಲಾಗಿತ್ತು. ಪೌರತ್ವ ಕಾಯ್ದೆಯ ಪ್ರಕಾರ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್ಆರ್ ಸಿ) ಸಿದ್ಧಪಡಿಸುವುದು ಕಡ್ಡಾಯವಾಗಿದೆ ಮತ್ತು ಎನ್​ಪಿಆರ್ ಈ ಗುರಿಯತ್ತ ಮೊದಲ ಹೆಜ್ಜೆಯಾಗಿದೆ.

ಅಸ್ಸಾಂನ ಎನ್ಆರ್​ಸಿ ಮತ್ತು ಪೌರತ್ವ ಕಾಯ್ದೆ (ಸಿಎಎ)ಗೆ ಇತ್ತೀಚಿನ ತಿದ್ದುಪಡಿಗೆ ಸಂಬಂಧಿಸಿದ ವಿವಾದಗಳು ಎನ್​ಪಿಆರ್ ಬಗ್ಗೆ ವ್ಯಾಪಕ ಟೀಕೆಗೆ ಕಾರಣವಾಯಿತು ಮತ್ತು ಕೆಲ ರಾಜ್ಯಗಳು ಎನ್​ಪಿಆರ್ ತಯಾರಿಕೆಯಲ್ಲಿ ಕೇಂದ್ರದೊಂದಿಗೆ ಸಹಕರಿಸುವುದಿಲ್ಲ ಎಂದು ಹೇಳಿವೆ. ಎನ್​ಪಿಆರ್ ಮತ್ತು ಜನಗಣತಿ ಎರಡನ್ನೂ ಏಕಕಾಲದಲ್ಲಿ ನಡೆಸುವ ಕಾರ್ಯಸಾಧ್ಯತೆಯ ಆತಂಕದಿಂದ ಜನಗಣತಿ ನಡೆಸುವುದು ವಿಳಂಬವಾಗುತ್ತಿದ್ದರೆ ಅದು ತುಂಬಾ ದುರದೃಷ್ಟಕರ. ಜನಗಣತಿಗೆ ಯಾವುದೇ ರಾಜ್ಯಗಳ ವಿರೋಧವಿಲ್ಲ. ಹೀಗಾಗಿ ಮೊದಲು ಜನಗಣತಿ ನಡೆಸಿ ನಂತರ ಅದರಲ್ಲಿನ ಎನ್​ಪಿಆರ್ ದತ್ತಾಂಶವನ್ನು ಬೇರ್ಪಡಿಸಬಹುದಿತ್ತು.

ಜನಗಣತಿಯ ವಿಳಂಬದಿಂದ ಉಂಟಾಗುವ ಪರಿಣಾಮಗಳು: ವಿವಿಧ ಉದ್ದೇಶಗಳಿಗಾಗಿ ಬಳಸುವ ಡೇಟಾ ಹಳೆಯದಾಗುತ್ತದೆ: ಹಳ್ಳಿಗಳು ಮತ್ತು ಪಟ್ಟಣಗಳಂತಹ ತಳ ಮಟ್ಟದ ಜನಸಂಖ್ಯಾ ದತ್ತಾಂಶದ ಏಕೈಕ ಮೂಲವೆಂದರೆ ಜನಗಣತಿ. ದೇಶದಲ್ಲಿ ಹಲವಾರು ಹೊಸ ಮುನ್ಸಿಪಲ್ ಪಟ್ಟಣಗಳು ರೂಪುಗೊಂಡಿವೆ ಮತ್ತು ಹಲವಾರು ಇತರ ಪುರಸಭೆಗಳ ಗಡಿಗಳನ್ನು ಬದಲಾಯಿಸಲಾಗಿದೆ. ನಗರ ಕೇಂದ್ರಗಳು ವಲಸಿಗರನ್ನು ಆಕರ್ಷಿಸುವುದರಿಂದ, ಪ್ರತಿ ಪಟ್ಟಣದ ಜನಸಂಖ್ಯೆಯನ್ನು ಊಹಿಸುವುದು ಸುಲಭವಲ್ಲ. ಆದ್ದರಿಂದ ನೀತಿ ಅಥವಾ ಯೋಜನೆ ರೂಪಿಸುವ ಉದ್ದೇಶಗಳಿಗಾಗಿ 2011 ರ ಜನಗಣತಿಯನ್ನು ಆಧರಿಸಿದ ಸ್ಥೂಲ ಅಂದಾಜುಗಳನ್ನು ಅವಲಂಬಿಸಬೇಕಾಗುತ್ತದೆ. ನಗರ ಸ್ಥಳೀಯ ಸಂಸ್ಥೆಗಳು ಮತ್ತು ಪಂಚಾಯತ್ ಗಳಲ್ಲಿನ ಕ್ಷೇತ್ರಗಳ ಡಿಲಿಮಿಟೇಶನ್ ಅಂತಹ ಡೇಟಾವನ್ನು ಆಧರಿಸಿರಲು ಸಾಧ್ಯವಿಲ್ಲ.

ಇಡೀ ದೇಶದಲ್ಲಿರುವ ಹಳ್ಳಿಗಳು ಮತ್ತು ಪಟ್ಟಣಗಳ ಹೊಸ ಪಟ್ಟಿಯು ಲಭ್ಯವಿಲ್ಲ ಎಂಬುದು ಗಮನಿಸಬೇಕಾದ ಅಂಶವಾಗಿದೆ. ಗ್ರಾಮಗಳು ಮತ್ತು ಪಟ್ಟಣಗಳ ಪಟ್ಟಿಯನ್ನು ನಿರಂತರವಾಗಿ ನವೀಕರಿಸಲು ಯಾವುದೇ ಕೇಂದ್ರೀಕೃತ ಕಾರ್ಯವಿಧಾನವು ಲಭ್ಯವಿಲ್ಲದಿರುವುದು ಇದಕ್ಕೆ ಕಾರಣ ಮತ್ತು ಗಣತಿ ಮಾತ್ರ ಈ ಪಟ್ಟಿಯನ್ನು ನವೀಕರಿಸುವ ಏಕೈಕ ಸಂದರ್ಭವಾಗಿದೆ. ಹೊಸ ಪುರಸಭೆ, ಪಟ್ಟಣಗಳನ್ನು ಆಗಾಗ ರಚಿಸಲಾಗುವುದರಿಂದ ಮತ್ತು ಅಸ್ತಿತ್ವದಲ್ಲಿರುವವುಗಳ ಗಡಿಗಳನ್ನು ಬದಲಾಯಿಸುವುದರಿಂದ ಇಂಥ ಪಟ್ಟಿಯನ್ನು ತಯಾರಿಸುವುದು ಬಹಳ ಪ್ರಮುಖವಾಗಿದೆ.

ಆಹಾರ ಸಬ್ಸಿಡಿ ವ್ಯಾಪ್ತಿಯಿಂದ ಹೊರಗುಳಿಯುವ ಸಾಧ್ಯತೆ: ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆ (ಎನ್ಎಫ್ಎಸ್ಎ) ಪ್ರಕಾರ ಜನಗಣತಿ ದತ್ತಾಂಶವನ್ನು ಬಳಸಿಯೇ ಫಲಾನುಭವಿಗಳ ಸಂಖ್ಯೆಯನ್ನು ನಿರ್ಧರಿಸುವುದು ಕಡ್ಡಾಯವಾಗಿದೆ. ಆದರೆ ಜನಗಣತಿಯೇ ವಿಳಂಬವಾದಾಗ ಕೋಟ್ಯಂತರ ಜನ ಆಹಾರ ಸುರಕ್ಷತಾ ಕಾಯ್ದೆಯಿಂದ ಹೊರಗುಳಿಯುವಂತಾಗುತ್ತದೆ. ಜನಗಣತಿಯ ವಿಳಂಬವೇ ಈ ಪರಿಸ್ಥಿತಿಗೆ ಸಂಪೂರ್ಣ ಕಾರಣವಾಗಿದೆ ಎಂದು ಹೇಳಲಾಗದು. ಜನಗಣತಿಯ ಎರಡು ಅಥವಾ ಮೂರು ವರ್ಷಗಳ ನಂತರ ನಗರ ಮತ್ತು ಗ್ರಾಮೀಣ ಜನಸಂಖ್ಯೆಯ ಅಂದಾಜುಗಳನ್ನು ಬಳಸಲು ಎನ್ಎಫ್ಎಸ್ಎ ಅವಕಾಶ ನೀಡಬಹುದಿತ್ತು. ಇದು ಫಲಾನುಭವಿಗಳ ಸಂಖ್ಯೆಯನ್ನು ಆಗಾಗ ನವೀಕರಿಸಲು ಸಹಾಯಕವಾಗಬಹುದಿತ್ತು.

ಎಸ್ಸಿ/ಎಸ್ಟಿಗೆ ಮೀಸಲಾತಿ:ಕಳೆದ ಜನಗಣತಿಯ ನಂತರದ ಅವಧಿಯಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪಂಗಡಗಳ ಪಟ್ಟಿಯು ಹಲವಾರು ಪರಿಷ್ಕರಣೆಗಳಿಗೆ ಒಳಗಾಗಿದೆ. ಆದಾಗ್ಯೂ, ಪಟ್ಟಿಗೆ ಸೇರಿಸಲಾದ ಸಮುದಾಯಗಳ ಜನಸಂಖ್ಯಾ ಅಂಕಿ - ಅಂಶಗಳು 2011 ರ ಜನಗಣತಿಯಲ್ಲಿಯೂ ಲಭ್ಯವಿಲ್ಲ. ಎಸ್ಸಿ / ಎಸ್ಟಿಗಳ ನವೀಕರಿಸಿದ ಸಂಖ್ಯೆಯ ಅನುಪಸ್ಥಿತಿಯಲ್ಲಿ, ಶಿಕ್ಷಣ ಸಂಸ್ಥೆಗಳು, ಉದ್ಯೋಗಗಳು ಮತ್ತು ಚುನಾವಣಾ ಕ್ಷೇತ್ರಗಳಲ್ಲಿ ಅವರಿಗೆ ಕಾಯ್ದಿರಿಸಬೇಕಾದ ಸ್ಥಾನಗಳ ಶೇಕಡಾವಾರು ನಿಖರವಾಗಿಲ್ಲ. ಇದರಿಂದ ಅವರು ಕೆಲ ಪ್ರಯೋಜನಗಳನ್ನು ಕಳೆದುಕೊಳ್ಳುವಂತಾಗಬಹುದು. ಇದು ಕೇವಲ ಒಂದು ಸಣ್ಣ ಭಾಗವಾಗಿದ್ದರೂ, ಇದು ಶಿಕ್ಷಣಕ್ಕೆ ಮತ್ತು ಹೆಚ್ಚಿನ ಸಂಖ್ಯೆಯ ಖಾಲಿ ಹುದ್ದೆಗಳನ್ನು ಹೊಂದಿರುವ ಉದ್ಯೋಗಗಳಿಗೆ ಗಮನಾರ್ಹ ಸಂಖ್ಯೆಯ ಮೀಸಲಾತಿಗೆ ಕಾರಣವಾಗಬಹುದು.

ಹಳೆಯದಾಗುವ ಸ್ಯಾಂಪ್ಲಿಂಗ್ ಚೌಕಟ್ಟುಗಳು : ಎನ್ಎಸ್ಎಸ್, ಎಸ್ಆರ್​ಎಸ್ ಮತ್ತು ಎನ್ಎಫ್ಎಚ್ಎಸ್​ನಂತಹ ಸಮೀಕ್ಷೆಗಳಿಗೆ ಬಳಸುವ ಸ್ಯಾಂಪ್ಲಿಂಗ್ ಚೌಕಟ್ಟುಗಳು 2011 ರ ಜನಗಣತಿಯನ್ನು ಆಧರಿಸಿವೆ. ಇವು ತುಂಬಾ ಹಳೆಯದಾಗಿರಬಹುದು ಮತ್ತು ಅಂತಹ ಸಮೀಕ್ಷೆಗಳ ಫಲಿತಾಂಶಗಳು ಸ್ಯಾಂಪ್ಲಿಂಗ್ ಅಲ್ಲದ ದೋಷಗಳ ಮಟ್ಟವನ್ನು ಹೆಚ್ಚಿಸುತ್ತವೆ. ಇದು ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶಗಳ ಅಂದಾಜುಗಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ. ಕೆಲ ಸಮೀಕ್ಷೆಗಳು ನಗರಗಳು, ಪಟ್ಟಣಗಳು ಮತ್ತು ಹಳ್ಳಿಗಳ ನವೀಕರಿಸಿದ ಸ್ಯಾಂಪ್ಲಿಂಗ್ ಚೌಕಟ್ಟನ್ನು ಬಳಸಲು ಸಾಧ್ಯವಾದರೂ, ಜನಸಂಖ್ಯೆಯ ಆಧಾರದ ಮೇಲೆ ಸೂಕ್ತ ಅಂಶಗಳನ್ನು ಪಡೆಯುವುದು ಅಸಾಧ್ಯ.

ಮುಂದಿನ ಜನಗಣತಿ ನಡೆಯುವುದು ಯಾವಾಗ: 2020 ರಲ್ಲಿ, ಜನಗಣತಿ ಪ್ರಾಧಿಕಾರವು ಮನೆ ಪಟ್ಟಿ ಎಂದು ಕರೆಯಲ್ಪಡುವ ಜನಗಣತಿಯ ಮೊದಲ ಹಂತವನ್ನು ಪ್ರಾರಂಭಿಸಲು ಸಿದ್ಧತೆಯ ಮುಂದುವರಿದ ಹಂತದಲ್ಲಿತ್ತು. ಜನಗಣತಿಯಲ್ಲಿ ನಮೂದಿಸಬೇಕಾದ ಕುಟುಂಬಗಳನ್ನು ಗುರುತಿಸಲು ಯಾವುದೇ ಪ್ರದೇಶದಲ್ಲಿ ವಾಸಿಸುವ ವ್ಯಕ್ತಿಗಳ ಯಾವುದೇ ರೀತಿಯ ವಿಳಾಸ ಪಟ್ಟಿಗಳು ನಮ್ಮಲ್ಲಿಲ್ಲವಾದ್ದರಿಂದ ಈ ಹಂತವು ಕಡ್ಡಾಯವಾಗಿದೆ.

ಮನೆ ಪಟ್ಟಿ ತಯಾರಿಸುವ ಕಾರ್ಯಾಚರಣೆಗಳು ದೇಶಾದ್ಯಂತ ಏಕಕಾಲದಲ್ಲಿ ನಡೆಯುತ್ತಿಲ್ಲ. ಬಹುತೇಕ ರಾಜ್ಯಗಳಲ್ಲಿ, ಜನಗಣತಿಗೆ ಸುಮಾರು ಹತ್ತು ತಿಂಗಳ ಮೊದಲು ಮೇ ತಿಂಗಳಲ್ಲಿ ಇದನ್ನು ಮಾಡಲಾಗುತ್ತಿತ್ತು, ಆದರೆ, ಇತರ ಅನೇಕ ರಾಜ್ಯಗಳು ಮಳೆಗಾಲದ ನಂತರ ಇದನ್ನು ಮಾಡುತ್ತಿದ್ದವು. ಎಲ್ಲಾ ರಾಜ್ಯಗಳಲ್ಲಿ ಮಾನ್ಸೂನ್ ನಂತರ ಮನೆ ಪಟ್ಟಿ ಮಾಡಿದರೆ ಇಡೀ ದೇಶದಲ್ಲಿ ಇದನ್ನು ಮಾಡುವ ಸಮಯವನ್ನು ಸುಮಾರು ಒಂದು ಅಥವಾ ಎರಡು ತಿಂಗಳಿಗೆ ಇಳಿಸಬಹುದು.

ಸಾಕಷ್ಟು ಪೂರ್ವಸಿದ್ಧತಾ ಚಟುವಟಿಕೆಗಳನ್ನು ಕೈಗೊಳ್ಳಬೇಕಾಗಿರುವುದರಿಂದ 2026 ಕ್ಕಿಂತ ಮೊದಲು ಜನಗಣತಿ ನಡೆಸುವುದು ಕಾರ್ಯಸಾಧ್ಯವೆಂದು ತೋರುತ್ತಿಲ್ಲ. ಆಡಳಿತಾತ್ಮಕ ಗಡಿಗಳನ್ನು ಬಲಪಡಿಸುವುದು, ಹಲವಾರು ರಾಜ್ಯಗಳ ಜನಗಣತಿ ನಿರ್ದೇಶಕರು ಸೇರಿದಂತೆ ಜನಗಣತಿ ಅಧಿಕಾರಿಗಳನ್ನು ನೇಮಿಸುವುದು, ಗಣತಿದಾರರ ನೇಮಕಾತಿ ಮತ್ತು ತರಬೇತಿ ಇತ್ಯಾದಿಗಳು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಗಳಾಗಿವೆ. ಜನಗಣತಿ ನಡೆಸುವ ನಿರ್ಧಾರವನ್ನು ಈಗ ತೆಗೆದುಕೊಂಡರೆ, 2025 ರಲ್ಲಿ ಮನೆ ಪಟ್ಟಿ ಕಾರ್ಯಾಚರಣೆಗಳನ್ನು ಮತ್ತು 2026 ರಲ್ಲಿ ಜನಸಂಖ್ಯಾ ಗಣತಿಯನ್ನು ಪ್ರಾರಂಭಿಸಲು ಸಾಧ್ಯವಿದೆ.

2026 ರ ಜನಗಣತಿ ನಡೆದರೆ, ಲೋಕಸಭೆ ಮತ್ತು ರಾಜ್ಯ ವಿಧಾನಸಭಾ ಕ್ಷೇತ್ರಗಳ ಗಡಿಗಳನ್ನು ನಿಗದಿಪಡಿಸುವ ಡಿಲಿಮಿಟೇಶನ್ ಪ್ರಕ್ರಿಯೆಗಾಗಿ ಮುಂದಿನ ಜನಗಣತಿಯವರೆಗೂ ಕಾಯಬೇಕಾಗುತ್ತದೆ. '2026 ರ ನಂತರ ನಡೆಯುವ ಮೊದಲ ಜನಗಣತಿಯನ್ನು ಆಧರಿಸಿ ಡಿಲಿಮಿಟೇಶನ್ ಪ್ರಕ್ರಿಯೆ ನಡೆಸಬೇಕೆಂಬುದು ಸಂವಿಧಾನದ ಆದೇಶವಾಗಿದೆ. ಹೀಗಾಗಿ 2031 ರಲ್ಲಿ ಸರ್ಕಾರ ಮತ್ತೊಂದು ಜನಗಣತಿ ನಡೆಸುತ್ತದೆಯಾ ಎಂಬುದನ್ನು ಈಗ ಊಹಿಸುವುದು ಕಷ್ಟ.

ಮುಂದಿನ ಜನಗಣತಿಯ ಆಧಾರದ ಮೇಲೆ ಈ ಉದ್ದೇಶಕ್ಕಾಗಿ ಕ್ಷೇತ್ರಗಳ ಡಿಲಿಮಿಟೇಶನ್ ನಡೆಸಿದ ನಂತರ ಮಹಿಳೆಯರಿಗೆ ಸ್ಥಾನಗಳ ಮೀಸಲಾತಿಗೆ ಸಂಬಂಧಿಸಿದ ಸಾಂವಿಧಾನಿಕ ನಿಬಂಧನೆ ಜಾರಿಗೆ ಬರಲಿದೆ. ಮಹಿಳಾ ಮೀಸಲಾತಿಯ ಅನುಷ್ಠಾನಕ್ಕಾಗಿ ಮಾತ್ರ ಡಿಲಿಮಿಟೇಶನ್ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ ಎಂದು ಯಾರೂ ವಾದಿಸಲು ಸಾಧ್ಯವಿಲ್ಲ.

ಕ್ಷೇತ್ರಗಳ ಡಿಲಿಮಿಟೇಶನ್​ಗೆ ಸಂಬಂಧಿಸಿದ ಪ್ರಮುಖ ನಿಬಂಧನೆಯು ಅನುಚ್ಛೇದ 82 ರಲ್ಲಿರುವುದರಿಂದ, ಸಂವಿಧಾನದ 106 ನೇ ತಿದ್ದುಪಡಿಯ ಮೂಲಕ ಅನುಚ್ಛೇದ 332 ರಲ್ಲಿ ಪರಿಚಯಿಸಲಾದ ಡಿಲಿಮಿಟೇಶನ್ ನಿಬಂಧನೆಗಿಂತ ಇದು ಆದ್ಯತೆಯನ್ನು ಹೊಂದಿರಬಹುದು. ಹಾಗಿದ್ದಲ್ಲಿ, ಮುಂದಿನ ಜನಗಣತಿಯ ನಂತರ ಡಿಲಿಮಿಟೇಶನ್ ಆಧಾರದ ಮೇಲೆ ಮಹಿಳೆಯರಿಗೆ ಮೀಸಲಾತಿ ನೀಡಬೇಕಾದರೆ, ಜನಗಣತಿಯು 2026 ರ ನಂತರ ನಡೆಯಬೇಕಾಗುತ್ತದೆ. ಪರ್ಯಾಯವಾಗಿ, ಸಂವಿಧಾನದ 88 ನೇ ವಿಧಿಯನ್ನು '2025 ರ ನಂತರ ನಡೆಸಿದ ಮೊದಲ ಜನಗಣತಿ' ಎಂದು ಉಲ್ಲೇಖಿಸಲು ತಿದ್ದುಪಡಿ ಮಾಡಬಹುದು.

ಜನಗಣತಿ ಪ್ರಕ್ರಿಯೆ ಮತ್ತು ಸಂಗ್ರಹಿಸಿದ ದತ್ತಾಂಶದ ಪರಿಶೀಲನೆಯ ಅಗತ್ಯ: 1991 ರ ಜನಗಣತಿಯ ನಂತರ, ಮನೆ ಪಟ್ಟಿಯ ಸಮಯದಲ್ಲಿ ಕುಟುಂಬಗಳಿಗೆ ಲಭ್ಯವಿರುವ ವಸತಿ ಮತ್ತು ಸೌಲಭ್ಯಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ಸಂಗ್ರಹಿಸಲಾಗಿದೆ. 1981 ರ ಜನಗಣತಿಯಲ್ಲಿ, ಈ ದತ್ತಾಂಶ ಸಂಗ್ರಹವನ್ನು ಮುಖ್ಯ ಜನಗಣತಿ ಹಂತದಲ್ಲಿ ಮಾಡಲಾಯಿತು. ಜನಸಂಖ್ಯಾ ಗಣತಿ ಹಂತದಲ್ಲಿ ಮನೆಗೆ ಲಭ್ಯವಿರುವ ವಸತಿ ಮತ್ತು ಸೌಲಭ್ಯಗಳ ಡೇಟಾವನ್ನು ಸಂಗ್ರಹಿಸುವುದರಿಂದ ಹಲವಾರು ಪ್ರಯೋಜನಗಳಿವೆ. ಅವು ಯಾವುವೆಂದರೆ:

  • ವಸತಿ ವಿಧ ಮತ್ತು ಸೌಲಭ್ಯಗಳ ಮಾಹಿತಿಯನ್ನು ಇತರ ಮನೆಯ ಗುಣಲಕ್ಷಣಗಳೊಂದಿಗೆ ಸುಲಭವಾಗಿ ಸಂಪರ್ಕಿಸಬಹುದು.
  • ವಸತಿಯೇತರ ಕಟ್ಟಡಗಳ ನಿರ್ಮಾಣದಲ್ಲಿ ಬಳಸಲಾದ ವಸ್ತುಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವ ಅಗತ್ಯವಿಲ್ಲ. ಸಾಮಾನ್ಯವಾಗಿ ಇಂಥ ಮಾಹಿತಿಯನ್ನು ಯಾವತ್ತಿಗೂ ಸರಿಯಾಗಿ ಸಂಗ್ರಹಿಸಲು ಸಾಧ್ಯವಿಲ್ಲ.
  • ಮನೆ ಪಟ್ಟಿ ಕಾರ್ಯಾಚರಣೆಗಳು ಎಲ್ಲಾ ನಿವಾಸಗಳನ್ನು ಒಳಗೊಳ್ಳುತ್ತವೆ ಎಂದು ಖಚಿತಪಡಿಸಿಕೊಳ್ಳುವತ್ತ ಗಮನ ಹರಿಸಬಹುದು.

ಬಹುತೇಕ ಪ್ರತಿ ನಗರದಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ವಸತಿ ಸಂಕೀರ್ಣಗಳು ಮತ್ತು ಗೇಟೆಡ್ ಸಮುದಾಯಗಳು ತಲೆ ಎತ್ತಿವೆ. ದತ್ತಾಂಶದ ಸಂಪೂರ್ಣ ವ್ಯಾಪ್ತಿ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಅಂತಹ ಸ್ಥಳಗಳಲ್ಲಿ ಜನಗಣತಿಗೆ ಹೊಸ ವಿಧಾನದ ಅಗತ್ಯವಿದೆ.

ಇತರ ರಾಜ್ಯಗಳಿಂದ ಬರುವ ಹೆಚ್ಚಿನ ಸಂಖ್ಯೆಯ ವಲಸಿಗರು ಹೆಚ್ಚಿನ ಮೆಟ್ರೋಪಾಲಿಟನ್ ನಗರಗಳಲ್ಲಿ ಮತ್ತು ದಕ್ಷಿಣದ ಕೆಲವು ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ಕಂಡುಬರುತ್ತಾರೆ. ಜನಗಣತಿ ಪದ್ಧತಿಯ ಪ್ರಕಾರ, ಗಣತಿಯ ಸಮಯದಲ್ಲಿ ಅವರು ಅಲ್ಲಿ ಕಂಡುಬಂದರೆ ಅವರನ್ನು ಅವರ ವಾಸಸ್ಥಳದಲ್ಲಿಯೇ ಎಣಿಕೆ ಮಾಡಬೇಕು. ಅವರಲ್ಲಿ ಅನೇಕರು ತಮ್ಮ ಕುಟುಂಬಗಳಿಲ್ಲದೆ ವಾಸಿಸುತ್ತಿರುವುದರಿಂದ, ಗಣತಿದಾರರು ಮನೆಗಳಿಗೆ ಭೇಟಿ ನೀಡಿದಾಗ ಅವರು ಭೇಟಿಯಾಗುವ ಸಾಧ್ಯತೆಯಿಲ್ಲ. ಅವರ ಗಣತಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅವರ ಸ್ವಂತ ಗ್ರಾಮಗಳು / ಪಟ್ಟಣಗಳಲ್ಲಿ ಅವರು ಗಣತಿಯಾಗದಂತೆ ಖಚಿತಪಡಿಸಿಕೊಳ್ಳಲು ಕೆಲ ನಿಯಮಗಳನ್ನು ರೂಪಿಸಬೇಕಿದೆ.

ರಾಜ್ಯದ ಹೊರಗೆ ವಾಸಿಸುವ ಪರಿಶಿಷ್ಟ ಜಾತಿಗಳು ಮತ್ತು ಬುಡಕಟ್ಟುಗಳ ಜನರನ್ನು ಅವರು ವಾಸಿಸುವ ರಾಜ್ಯದ ಎಸ್ಸಿ / ಎಸ್ಟಿ ಪಟ್ಟಿಯಲ್ಲಿ ಅವರ ಜಾತಿ / ಪಂಗಡವನ್ನು ಸೇರಿಸದ ಹೊರತು ಅವರನ್ನು ಎಸ್ಸಿ / ಎಸ್ಟಿ ಎಂದು ಪಟ್ಟಿ ಮಾಡಲಾಗುವುದಿಲ್ಲ. 2001 ರಲ್ಲಿ ಆಗಿನ ಭಾರತದ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರನ್ನು ಸಹ ಎಸ್ಸಿ ಎಂದು ಪರಿಗಣಿಸಲಾಗಿರಲಿಲ್ಲ. ಭವಿಷ್ಯದ ಜನಗಣತಿಗಳಲ್ಲಿಯೂ ಇದೇ ರೀತಿಯಾಗುವ ಸಾಧ್ಯತೆ ಇದೆ. ಹಿಂದಿನ ಜನಗಣತಿಗಳಲ್ಲಿ ಎಸ್ಸಿ / ಎಸ್ಟಿ ಸ್ಥಾನಮಾನವನ್ನು ಮೌಲ್ಯೀಕರಿಸಲು ಹೆಚ್ಚುವರಿ ಮಾಹಿತಿಯನ್ನು ಸಂಗ್ರಹಿಸುವುದು ಕಷ್ಟಕರವಾಗಿತ್ತು. ಆದಾಗ್ಯೂ, ದತ್ತಾಂಶ ಸಂಗ್ರಹಣೆಗಾಗಿ ಸ್ಮಾರ್ಟ್​ಫೋನ್​ಗಳು ಅಥವಾ ಟ್ಯಾಬ್ಲೆಟ್​ಗಳ ಉದ್ದೇಶಿತ ಬಳಕೆಯೊಂದಿಗೆ, ವ್ಯಕ್ತಿಯು ಎಸ್ಸಿ / ಎಸ್ಟಿ ಆಗಿರುವ ರಾಜ್ಯದ ಬಗ್ಗೆ ಮತ್ತು ಜಾತಿ / ಬುಡಕಟ್ಟಿನ ಹೆಸರನ್ನು ಕೇಳಲು ಸಾಧ್ಯವಿದೆ.

ಜಾತಿ ಜನಗಣತಿ ನಡೆಸುವಂತೆ ದೇಶಾದ್ಯಂತ ಬೇಡಿಕೆ ಹೆಚ್ಚುತ್ತಿದೆ. ಜಾತಿ ದತ್ತಾಂಶಗಳನ್ನು ಸಂಗ್ರಹಿಸುವಲ್ಲಿ ಮತ್ತು ಪಟ್ಟಿ ಮಾಡುವಲ್ಲಿ ಹಲವಾರು ತೊಡಕುಗಳಿದ್ದರೂ, ಕೆಲಸವನ್ನಂತೂ ಆರಂಭಿಸಬೇಕಿದೆ. ಯಾವುದೇ ಹೊಸ ಪ್ರಶ್ನೆಗಳನ್ನು ಸೇರಿಸುವ ಅಗತ್ಯವಿಲ್ಲ. ಪ್ರಶ್ನಾವಳಿಯಲ್ಲಿ ಇರುವ ಜಾತಿ/ಪಂಗಡದ ವಿಷಯವನ್ನು ಎಸ್ಸಿ/ಎಸ್ಟಿಗೆ ಸೀಮಿತಗೊಳಿಸುವ ಬದಲು ಎಲ್ಲರಿಗೂ ಅನ್ವಯಿಸಬಹುದು. ಗಣತಿದಾರರಿಗೆ ಸೂಚನೆಗಳನ್ನು ಪರಿಷ್ಕರಿಸಲು ಮತ್ತು ದತ್ತಾಂಶ ಸಂಗ್ರಹ ತಂತ್ರಾಂಶಗಳಲ್ಲಿ ಬಳಸಬಹುದಾದ ಎಲ್ಲಾ ಜಾತಿಗಳ ಪಟ್ಟಿಯನ್ನು ತಯಾರಿಸಲು ಒಂದಕ್ಕಿಂತ ಹೆಚ್ಚು ಜನಗಣತಿಗಳು ಬೇಕಾಗಬಹುದು.

ಪ್ರಶ್ನಾವಳಿಯ ಉದ್ದವನ್ನು ಕಡಿಮೆ ಮಾಡಲು ಮತ್ತು ಆ ಮೂಲಕ ಸಂಗ್ರಹಿಸಿದ ಮಾಹಿತಿಯ ಗುಣಮಟ್ಟವನ್ನು ಸುಧಾರಿಸಲು ಜನಗಣತಿಯಲ್ಲಿ ಸಂಗ್ರಹಿಸಲಾದ ಕೆಲ ಮಾಹಿತಿಯನ್ನು ಪರಿಶೀಲಿಸಬೇಕು.

  • ಆರ್ಥಿಕ ಚಟುವಟಿಕೆಯ ದತ್ತಾಂಶವನ್ನು ಸಂಗ್ರಹಿಸಲು ಬಳಸುವ ಪರಿಕಲ್ಪನೆಗಳು ಮತ್ತು ವ್ಯಾಖ್ಯಾನಗಳು ಕಾಗದದ ಮೇಲೆ ಚೆನ್ನಾಗಿ ಕಾಣುತ್ತವೆ. ಆದರೆ ಗಣತಿದಾರರಲ್ಲಿ ಕಾಲು ಭಾಗದಷ್ಟು ಜನರಿಗಾದರೂ ಅವು ಅರ್ಥವಾಗುತ್ತವೆಯೇ ಎಂದು ನನಗೆ ಅನುಮಾನವಿದೆ. ಇದಲ್ಲದೆ, ಜನಗಣತಿಯಂತಹ ಬೃಹತ್ ಕಾರ್ಯಾಚರಣೆಯಲ್ಲಿ ಕೈಗಾರಿಕೆ ಮತ್ತು ಉದ್ಯೋಗದ ವಿವರಗಳನ್ನು ಸಂಗ್ರಹಿಸುವಲ್ಲಿ ಪ್ರಾಯೋಗಿಕ ತೊಂದರೆಗಳಿವೆ. ಜನಗಣತಿಯಿಂದ ಸಂಗ್ರಹಿಸಿದ ನಿರುದ್ಯೋಗದ ದತ್ತಾಂಶವು ಪರಿಕಲ್ಪನಾ ಸಮಸ್ಯೆಗಳಿಂದಾಗಿ ನಿಷ್ಪ್ರಯೋಜಕವಾಗಿದೆ.
  • 1981 ರ ಜನಗಣತಿಯಲ್ಲಿ ಇದುವರೆಗೆ ಜನಿಸಿದ / ಬದುಕುಳಿದ ಮಕ್ಕಳ ಸಂಖ್ಯೆಯ ಬಗೆಗಿನ ಮಾಹಿತಿಗಳನ್ನು ಮೊದಲು ಸಂಗ್ರಹಿಸಲಾಯಿತು. ಇಂದು, ಎನ್ಎಫ್ಎಚ್ಎಸ್ ಅನ್ನು ಪ್ರತಿ ಐದು ವರ್ಷಗಳಿಗೊಮ್ಮೆ ನಡೆಸಲಾಗುತ್ತಿರುವುದರಿಂದ, ಈ ಪ್ರಶ್ನೆಗಳು ಅಗತ್ಯವಿಲ್ಲದಿರಬಹುದು.

ಅಂತಹ ಸಂಭಾವ್ಯ ಸುಧಾರಣೆಗಳನ್ನು ಪರಿಶೀಲಿಸಲು ಜನಗಣತಿ ಪ್ರಾಧಿಕಾರವು ಪ್ರಯತ್ನಗಳನ್ನು ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ.

ಲೇಖನ: ಕೆ ನಾರಾಯಣನ್ ಉನ್ನಿ,ಭಾರತೀಯ ಸಂಖ್ಯಾಶಾಸ್ತ್ರ ಇಲಾಖೆಯ ನಿವೃತ್ತ ಅಧಿಕಾರಿ. ಲೇಖಕರು ಹಲವಾರು ಭಾರತೀಯ ಜನಗಣತಿಗಳ ಸಂದರ್ಭಗಳಲ್ಲಿ ಕೆಲಸ ಮಾಡಿದ್ದಾರೆ. 2011 ಮತ್ತು 2021 ರ ಜನಗಣತಿಗಳ ಸಲಹಾ ಸಮಿತಿಯ ಸದಸ್ಯರಾಗಿದ್ದರು.

ಇದನ್ನೂ ಓದಿ : 14 ವರ್ಷಗಳ ನಂತರ ಲೇಬರ್​ ಪಕ್ಷದ ಗೆಲುವು: ಯುಕೆಯಲ್ಲಿ ರಾಜಕೀಯ ಬದಲಾವಣೆ ಅಲೆ - UK Elections

For All Latest Updates

ABOUT THE AUTHOR

...view details