ಇರಾನಿ ಚಾಯ್‌ಗೆ ಪ್ರತಿಸ್ಪರ್ಧಿಯಾದ ಖಡಕ್ 'ಸ್ಪೆಷಲ್ ಮಸಾಲಾ ಟೀ': ಈ ಸೂಪರ್ ಚಹಾ ಮನೆಯಲ್ಲಿ ಮಾಡಿ ನೋಡಿ! - HOW TO MAKE MASALA CHAI
ಬಹುತೇಕ ಎಲ್ಲರೂ ಮನೆಯಲ್ಲಿ ಚಹಾ ಸಿದ್ಧಪಡಿಸುತ್ತಾರೆ. ಆದರೆ, ಹೋಟೆಲ್ ಶೈಲಿಯಲ್ಲಿ ರುಚಿಕರ ಮತ್ತು ಗಟ್ಟಿಯಾದ ಚಹಾ ಮಾಡುವುದು ಬಹುಪಾಲು ಜನರಿಗೆ ತಿಳಿದಿಲ್ಲ. ಈಗ ಸೂಪರ್ ಟೇಸ್ಟಿಯಾದ ಮಸಾಲಾ ಚಹಾ ತಯಾರಿಸುವುದು ಹೇಗೆ ಎಂಬುದನ್ನು ನೋಡೋಣ.
How to Make Masala Chai:ಯಾರಾದರೂ ಟೀ ಕುಡಿಯೋಣ ಎಂದು ಕರೆದರೆ ಸಾಕು, ಎಷ್ಟೇ ಕೆಲಸವಿದ್ದರೂ ಅದೆಲ್ಲವನ್ನೂ ನಿಲ್ಲಿಸಿ ಟೀ ಕುಡಿಯಲು ಹೋಗುತ್ತೇವೆ. ಗಟ್ಟಿಯಾದ ಚಹಾವನ್ನು ಗಾಜಿ ಗ್ಲಾಸಿನಲ್ಲಿ ಒಂದೊಂದೇ ಗುಟುಕು ಕುಡಿಯುವುದು ತುಂಬಾ ಆರಾಮದಾಯಕ ಅನಿಸುತ್ತದೆ. ಕೆಲವರು ಬೆಳಗ್ಗೆ ಒಂದು ಕಪ್ ಚಹಾ ಸೇವಿಸದಿದ್ದರೆ ಅವರ ದಿನವೇ ಪ್ರಾರಂಭಿಸುವುದಿಲ್ಲ. ನಾಲ್ವರು ಗೆಳೆಯರು ಸೇರಿದರೂ, ಸಂಬಂಧಿಕರು ಮನೆಗೆ ಬಂದರೂ ರುಚಿಕರ 'ಚಹಾ' ಇರಲೇಬೇಕು. ಆದ್ದರಿಂದ ಚಹಾ ನಮ್ಮ ಜೀವನದ ಒಂದು ಭಾಗವಾಗಿದೆ.
ಪ್ರತಿಯೊಬ್ಬರಿಗೂ ಚಹಾವನ್ನು ಗಟ್ಟಿಯಾಗಿ ಮತ್ತು ಟೇಸ್ಟಿಯಾಗಿ ಮಾಡಲು ಬರುವುದಿಲ್ಲ. ಡಿಕಾಕ್ಷನ್ ಮಾಡಿ ನಂತರ ಅದಕ್ಕೆ ಹಾಲು ಹಾಕುತ್ತಾರೆ. ಚಹಾ ಸಿದ್ಧವಾದ ನಂತರ ಗಾಜಿನ ಗ್ಲಾಸ್ಗೆ ಹಾಕಲಾಗುತ್ತದೆ. ಹೀಗೆ ಮಾಡಿದರೆ ಟೀ ಗಟ್ಟಿ ಮತ್ತು ರುಚಿಯಾಗಿರದು. ಹಾಗಾದರೆ, ಚಹಾ ಅಂಗಡಿಗಳಲ್ಲಿ ಮಾಡುವಷ್ಟು ಸಖತ್ ರುಚಿಯಾದ ಮಸಾಲಾ ಚಾಯ್ ಅನ್ನು ಮನೆಯಲ್ಲೇ ಮಾಡುವುದು ಹೇಗೆ ಎಂದು ನೋಡೋಣ.
ಸ್ಪೆಷಲ್ ಮಸಾಲಾ ಚಹಾಕ್ಕೆ ಬೇಕಾಗುವ ಪದಾರ್ಥಗಳೇನು?:
ಹಾಲು - ಕಾಲು ಲೀಟರ್
ತುರಿದ ಶುಂಠಿ - 2 ಟೀಸ್ಪೂನ್
ಟೀ ಪುಡಿ - 3 ಟೀಸ್ಪೂನ್
ಲವಂಗ - 4
ಏಲಕ್ಕಿ - 5
ಗುಲಾಬಿ ದಳಗಳು - 2 ಟೀಸ್ಪೂನ್
ದಾಲ್ಚಿನ್ನಿ - ಒಂದು ಸಣ್ಣ ತುಂಡು
ಸಕ್ಕರೆ - ಅಗತ್ಯಕ್ಕೆ ತಕ್ಕಷ್ಟು
ತಯಾರಿಸುವ ವಿಧಾನ:
ಮೊದಲಿಗೆ, ಒಲೆಯ ಮೇಲೆ ಪಾತ್ರೆ ಇಡಿ ಮತ್ತು ಹಾಲು ಹಾಕಿ ಕುದಿಸಿ, ನಂತರ ಹಾಲನ್ನು ಪಕ್ಕಕ್ಕೆ ಇರಿಸಿ.
ಈಗ ಅದೇ ಪಾತ್ರೆಯಲ್ಲಿ ಒಂದು ಲೋಟ ನೀರು ಹಾಕಿ ಚೆನ್ನಾಗಿ ಕುದಿಸಿ.
ನಂತರ ತುರಿದ ಶುಂಠಿ, ಕತ್ತರಿಸಿದ ಏಲಕ್ಕಿ, ಲವಂಗ ಮತ್ತು ದಾಲ್ಚಿನ್ನಿ ಹಾಕಿ ಸ್ವಲ್ಪ ಕುದಿಸಿ.
ನಿಮಗೆ ಟೀ ಮಸಾಲಾ ರುಚಿ ಇಷ್ಟವಾಗದಿದ್ದರೆ, ನೀವು ಲವಂಗ ಮತ್ತು ದಾಲ್ಚಿನ್ನಿಯನ್ನು ಬಿಟ್ಟುಬಿಡಬಹುದು.
ನಂತರ ಟೀ ಪುಡಿ ಮತ್ತು ಸಾಕಷ್ಟು ಸಕ್ಕರೆ ಸೇರಿಸಿ ಎರಡು ನಿಮಿಷ ಕುದಿಸಿ.
ಡಿಕಾಕ್ಷನ್ ಚೆನ್ನಾಗಿ ಕುದಿದ ನಂತರ, ಪಕ್ಕಕ್ಕೆ ಇರಿಸಿದ ಉಗುರು ಬೆಚ್ಚಗಿನ ಹಾಲನ್ನು ಅದರೊಳಗೆ ಸುರಿಯಿರಿ.
ಗುಲಾಬಿ ದಳಗಳನ್ನು ಸಹ ಅದರೊಳಗೆ ಹಾಕಿ. (ಚಹಾದಲ್ಲಿ ಗುಲಾಬಿ ದಳಗಳನ್ನು ಸೇರಿಸುವುದರಿಂದ ಚಹಾವು ತುಂಬಾ ರುಚಿಕರವಾಗಿರುತ್ತದೆ. ಹೊರಗಿನ ಕೆಲವು ಚಹಾ ಅಂಗಡಿಗಳು ಖಂಡಿತವಾಗಿಯೂ ಚಹಾಕ್ಕೆ ಗುಲಾಬಿ ದಳಗಳನ್ನು ಹಾಕುತ್ತಾರೆ. ಆದ್ದರಿಂದ ಚಹಾವು ತುಂಬಾ ರುಚಿಯಾಗಿರುತ್ತದೆ)
ಈಗ ಮಧ್ಯಮ ಉರಿಯಲ್ಲಿ ಸ್ಟವ್ ಹಾಕಿ ಮತ್ತು 5 ನಿಮಿಷಗಳ ಕಾಲ ಚಹಾ ಕುದಿಸಿ.
ನಂತರ ಬಿಸಿ ಬಿಸಿ ಚಹಾವನ್ನು ಗ್ಲಾಸ್‌ಗಳಲ್ಲಿ ಹಾಕಿ. ಹೀಗೆ ತಯಾರು ಮಾಡಿದರೆ ತುಂಬಾ ಟೇಸ್ಟಿ ಮತ್ತು ಗಟ್ಟಿಯಾದ ಚಾಯ್ ನಿಮ್ಮದಾಗುತ್ತದೆ.
ಇಷ್ಟವಾದರೆ ನೀವೂ ಒಮ್ಮೆ ಈ ಸ್ಪೆಷಲ್ ಮಸಾಲಾ ಚಹಾವನ್ನು ಟ್ರೈ ಮಾಡಿ ನೋಡಿ.