ಚಳಿಗಾಲದ ವಿಶೇಷ ರೆಸಿಪಿ: ಎಲ್ಲರಿಗೂ ಇಷ್ಟವಾಗುತ್ತೆ ಬೆಳ್ಳುಳ್ಳಿ ರಸಂ, ಟೇಸ್ಟ್ ಕೂಡ ಸೂಪರ್! - HOW TO MAKE GARLIC RASAM
How To Make Garlic Rasam at Home: ನಿಮಗೆ ಯಾವಾಗಲೂ ಒಂದೇ ರೀತಿಯ ಸಾಂಬಾರ್ ಸೇವಿಸಿ ಬೇಸರವಾಗಿದೆಯೇ? ಹಾಗಾದರೆ, ನಾವು ನಿಮಗಾಗಿ ರುಚಿಕರ ಬೆಳ್ಳುಳ್ಳಿ ರಸಂ ರೆಸಿಪಿ ತಂದಿದ್ದೇವೆ.
How To Make Garlic Rasam at Home:ಅನ್ನದ ಜೊತೆಗೆ ಸಾರು ಅಥವಾ ಪಲ್ಯ ಇದ್ದರೆ ಚೆನ್ನಾಗಿರುತ್ತದೆ. ಅದರಲ್ಲಿ ತಿಳಿಯಾದ ಸಾಂಬಾರ ಇದ್ದರೆ ಇನ್ನೂ ಸಖತ್ ಕಾಂಬಿನೇಷನ್ ಆಗಿರುತ್ತದೆ. ಅನ್ನದೊಂದಿಗೆ ಬಿಸಿ ಬಿಸಿಯಾದ ಸಾರು ಸೈಡ್ ಡಿಶ್ ಆಗಿ ಸೇವಿಸಿದರೆ ಮಸ್ತ್ ಮಜಾ ಬರುತ್ತದೆ. ಚಳಿಗಾಲದಲ್ಲಿ ಅನ್ನದೊಂದಿಗೆ ಬೇರೆ ಏನೂ ಇಲ್ಲದಿದ್ದರೂ ಪರವಾಗಿಲ್ಲ. ಆದರೆ ಈ ರಸಂ ಒಂದಿದ್ದರೆ ಸಾಕು ಆ ಭಾವವೇ ಬೇರೆ. ರಸಂನ ಬಿಸಿ ಗಂಟಲಿಗೆ ತಾಕಿದರೆ ಸಾಕು ಆನಂದ ಭಾವ ಲಭಿಸುತ್ತದೆ. ಟೊಮೆಟೊ ರಸಂಗೆ ಹಲವರು ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ. ಅದಕ್ಕಿಂತಲೂ ಬೆಳ್ಳುಳ್ಳಿ ರಸಂ ಸಖತ್ ಟೇಸ್ಟ್ ನೀಡುತ್ತದೆ.
ಈ ಬಾರಿ ನಾವು ನಿಮಗಾಗಿ ಮಸಾಲೆಯುಕ್ತ ಘಮಘಮಿಸುವ ಬೆಳ್ಳುಳ್ಳಿ ರಸಂ ರೆಸಿಪಿಯನ್ನು ತಂದಿದ್ದೇವೆ. ಈ ರಸಂ ರುಚಿ ಮಾತ್ರ ಅದ್ಭುತವಾಗಿರುತ್ತದೆ. ಇದನ್ನು ಟೊಮೆಟೊ ರಸಂನಂತೆಯೇ ಸುಲಭವಾಗಿ ತಯಾರಿಸಬಹುದು. ರಸಂ ಅನ್ನು ಮಕ್ಕಳು ಹಾಗೂ ವಯಸ್ಕರು ಕೂಡ ಇಷ್ಟಪಡುತ್ತಾರೆ. ಇದಲ್ಲದೇ, ಈ ಚಳಿಗಾಲದಲ್ಲಿ ಇದನ್ನು ತಿನ್ನುವುದು ಶೀತ ಹಾಗೂ ಕೆಮ್ಮು ಸೇರಿದಂತೆ ಗಂಟಲಿನ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ . ಈ ರಸಂ ಮಾಡಲು ಬೇಕಾಗುವ ಸಾಮಗ್ರಿಗಳೇನು? ಬೆಳ್ಳುಳ್ಳಿ ರಸಂ ತಯಾರಿಸುವ ವಿಧಾನ ಹೇಗೆ ಎಂಬುದನ್ನು ತಿಳಿಯೋಣ.
ಬೆಳ್ಳುಳ್ಳಿ ರಸಂಗೆ ಬೇಕಾಗುವ ಪದಾರ್ಥಗಳು:
ಕಾಳುಮೆಣಸು - 1 ಟೀಸ್ಪೂನ್
ಜೀರಿಗೆ - 1 ಟೀಸ್ಪೂನ್
ಬೆಳ್ಳುಳ್ಳಿ - 25 ಎಸಳು (ಸುಮಾರು 35 ಗ್ರಾಂ)
ಎಣ್ಣೆ - ಒಂದೂವರೆ ಟೀಸ್ಪೂನ್
ಮೆಣಸಿನಕಾಯಿ - 3
ಕರಿಬೇವಿನ ಎಲೆಗಳು - 2
ಟೊಮೆಟೊ - 1
ಹುಣಸೆಹಣ್ಣು - 50 ಗ್ರಾಂ
ಅರಿಶಿನ - ಅರ್ಧ ಟೀಸ್ಪೂನ್
ಉಪ್ಪು - ರುಚಿಗೆ
ನೀರು - 800 ಮಿಲಿ
ಒಗ್ಗರಣೆಗಾಗಿ:
ಎಣ್ಣೆ - 1 ಟೀಸ್ಪೂನ್
ಸಾಸಿವೆ - 1 ಟೀಸ್ಪೂನ್
ಜೀರಿಗೆ - ಕಾಲು ಟೀಸ್ಪೂನ್
ಒಣಮೆಣಸಿನಕಾಯಿ - 4
ಕರಿಬೇವಿನ ಎಲೆಗಳು - 2
ನುಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ - 4
ಇಂಗು - ಒಂದು ಚಿಟಿಕೆ
ಕೊತ್ತಂಬರಿ ಸೊಪ್ಪಿನ ಪುಡಿ - ಸ್ವಲ್ಪ
ಬೆಳ್ಳುಳ್ಳಿ ರಸಂ ತಯಾರಿಸುವುದು ಹೇಗೆ?:
ಬೆಳ್ಳುಳ್ಳಿ ಎಸಳಗಳ ಸಿಪ್ಪೆ ತೆಗೆದು ಪಕ್ಕಕ್ಕೆ ಇಟ್ಟುಕೊಳ್ಳಬೇಕಾಗುತ್ತದೆ. ಟೊಮೆಟೊ ಸಣ್ಣಗೆ ಕತ್ತರಿಸಿ ಇಟ್ಟುಕೊಳ್ಳಿ. ಹಾಗೆಯೇ ಹಸಿರು ಮೆಣಸಿನಕಾಯಿ ಉದ್ದವಾಗಿ ಹಾಗೂ ತೆಳುವಾಗಿ ಕಟ್ ಮಾಡಿ ಇಟ್ಟುಕೊಳ್ಳಿ. ಇನ್ನು ಹುಣಸೆ ಹಣ್ಣನ್ನು ನೆನೆಸಿ ರಸವನ್ನು ತೆಗೆದು ಪಕ್ಕಕ್ಕೆ ಇಡಿ.
ಕಾಳು ಮೆಣಸು ಮತ್ತು ಜೀರಿಗೆ ಸೇರಿಸಿ ರುಬ್ಬಿಕೊಳ್ಳಿ. ಇದಕ್ಕೆ ಸಿಪ್ಪೆ ತೆಗೆದ ಬೆಳ್ಳುಳ್ಳಿ ಎಸಳು ಸೇರಿಸಿ ಮತ್ತೊಮ್ಮೆ ರುಬ್ಬಿಕೊಂಡು ಒಂದು ಬೌಲ್ಗೆ ತೆಗೆದುಕೊಳ್ಳಿ.
ಬಳಿಕ ಒಲೆ ಆನ್ ಮಾಡಿ, ಒಂದು ಪಾತ್ರೆ ಇಟ್ಟು ಎಣ್ಣೆ ಸುರಿಯಿರಿ. ಎಣ್ಣೆ ಬಿಸಿಯಾದ ನಂತರ ಹಸಿಮೆಣಸಿನಕಾಯಿ ಮತ್ತು ಕರಿಬೇವಿನ ಎಲೆಗಳನ್ನು ಹಾಕಿ ಸ್ವಲ್ಪ ಫ್ರೈ ಮಾಡಿ. ಅದರ ನಂತರ ಬೆಳ್ಳುಳ್ಳಿ ಮಿಶ್ರಣ ಸೇರಿಸಿ, ತಿಳಿ ಹೊಂಬಣ್ಣ ಬರುವವರೆಗೆ ಫ್ರೈ ಮಾಡಿ ಇಟ್ಟುಕೊಳ್ಳಬೇಕಾಗುತ್ತದೆ.
ಬೆಳ್ಳುಳ್ಳಿ ಹುರಿದ ಬಳಿಕ ಟೊಮೆಟೊ ಚೂರುಗಳನ್ನು ಸೇರಿಸಿದ ನಂತರ ಒಂದು ನಿಮಿಷ ಫ್ರೈ ಮಾಡಿ. ಇದಾದ ನಂತರ ಹುಣಸೆಹಣ್ಣಿನ ರಸವನ್ನು ಸೇರಿಸಿ ಮತ್ತು ಕಂದು ಬಣ್ಣ ಬರುವವರೆಗೆ ಬೇಯಿಸಿಕೊಳ್ಳಬೇಕಾಗುತ್ತದೆ.
ನಂತರ ಅರಿಶಿನ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮತ್ತೆರಡು ನಿಮಿಷ ಬೇಯಿಸಿಕೊಳ್ಳಬೇಕಾಗುತ್ತದೆ.
ನಂತರ ನೀರು ಸೇರಿಸಿ, ಬಳಿ ಪಾತ್ರೆಯ ಮುಚ್ಚಳವನ್ನು ಮುಚ್ಚಿ ಹಾಗೂ ಮಧ್ಯಮ ಉರಿಯಲ್ಲಿ 15 ನಿಮಿಷಗಳ ಕಾಲ ಬೇಯಿಸಬೇಕು, ಬಳಿಕ ಸ್ಟವ್ ಆಫ್ ಮಾಡಿ.
ಇದೀಗ ಒಗ್ಗರಣೆಗಾಗಿ ಸ್ಟವ್ ಆನ್ ಮಾಡಿ ಪಾತ್ರೆಯಲ್ಲಿ ಎಣ್ಣೆ ಹಾಕಬೇಕು. ಎಣ್ಣೆ ಚೆನ್ನಾಗಿ ಕಾದ ನಂತರ ಸಾಸಿವೆ ಮತ್ತು ಜೀರಿಗೆ ಹಾಕಿ ಹುರಿಯಿರಿ.
ಬಳಿಕ ಒಣ ಮೆಣಸಿನಕಾಯಿ, ಕರಿಬೇವಿನ ಸೊಪ್ಪು, ರುಬ್ಬಿದ ಬೆಳ್ಳುಳ್ಳಿ ಎಸಳು ಹಾಗೂ ಇಂಗು ಹಾಕಿ ಹುರಿದುಕೊಳ್ಳಿ.
ಸ್ವಲ್ಪ ಕೊತ್ತಂಬರಿ ಪುಡಿ ಹಾಕಿ ಈಗ ಸ್ಟವ್ ಆಫ್ ಮಾಡಿ, ಮೊದಲು ಸಿದ್ಧಪಡಿಸಿದ ಬೆಳ್ಳುಳ್ಳಿ ರಸಂಗೆ ಒಗ್ಗರಣೆಯನ್ನು ಸೇರಿಸಬೇಕು. ಘಮಘಮಿಸುವ ಬೆಳ್ಳುಳ್ಳಿ ರಸಂ ಸಿದ್ಧವಾಗುತ್ತದೆ. ಬಿಸಿ ಅನ್ನದ ಜೊತೆಗೆ ಸೇವಿಸಿದರೆ ತುಂಬಾ ರುಚಿಯಾಗಿರುತ್ತದೆ.