ಕೊಲಂಬೊ, ಶ್ರೀಲಂಕಾ: ಶ್ರೀಲಂಕಾದ ಒಂಬತ್ತನೇ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಜನತಾ ವಿಮುಕ್ತಿ ಪೆರಮುನಾ (ಜೆವಿಪಿ) ಪಕ್ಷದ ನಾಯಕ ಅನುರ ಕುಮಾರ ದಿಸ್ಸಾನಾಯಕೆ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ. ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ಪುನರುತ್ಥಾನದ ಹೊಸ ಯುಗವನ್ನು ಪ್ರಾರಂಭಿಸುವುದಾಗಿ ಅವರು ಹೇಳಿದ್ದಾರೆ.
"ಇಂದು (23) ಬೆಳಗ್ಗೆ, ನಾನು ಅಧ್ಯಕ್ಷೀಯ ಸಚಿವಾಲಯದಲ್ಲಿ ಮುಖ್ಯ ನ್ಯಾಯಮೂರ್ತಿ ಜಯಂತ ಜಯಸೂರ್ಯ ಅವರ ಸಮ್ಮುಖದಲ್ಲಿ ಡೆಮಾಕ್ರಟಿಕ್ ಸೋಷಿಯಲಿಸ್ಟ್ ರಿಪಬ್ಲಿಕ್ ಆಫ್ ಶ್ರೀಲಂಕಾದ 9 ನೇ ಕಾರ್ಯನಿರ್ವಾಹಕ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ" ಎಂದು ದಿಸ್ಸಾನಾಯಕೆ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ದೇಶಕ್ಕಾಗಿ ಕೆಲಸ;ದೇಶಕ್ಕಾಗಿ ಕೆಲಸ ಮಾಡುವ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದ ದಿಸ್ಸಾನಾಯಕೆ, "ಈ ದೇಶಕ್ಕೆ ಅಭಿವೃದ್ಧಿಯ ಹೊಸ ಯುಗವನ್ನು ಪ್ರಾರಂಭಿಸುವುದಾಗಿ ನಾನು ಭರವಸೆ ನೀಡುತ್ತೇನೆ ಮತ್ತು ಅದರಲ್ಲಿ ನೀವೆಲ್ಲರೂ ಸಾಮೂಹಿಕವಾಗಿ ಭಾಗಿಗಳಾಗಬೇಕೆಂದು ಕೇಳಿಕೊಳ್ಳುತ್ತೇನೆ" ಎಂದು ಅವರು ಬರೆದಿದ್ದಾರೆ.
ಶ್ರೀಲಂಕಾ ಎದುರಿಸುತ್ತಿರುವ ಸಂಕೀರ್ಣ ಸವಾಲುಗಳ ಬಗ್ಗೆ ಮಾತನಾಡಿದ ದಿಸ್ಸಾನಾಯಕೆ, ನಾಗರಿಕರ ನಿರೀಕ್ಷೆಗಳನ್ನು ಪೂರೈಸಲು ಶ್ರದ್ಧೆಯಿಂದ ಕೆಲಸ ಮಾಡುವುದಾಗಿ ಭರವಸೆ ನೀಡಿದರು. ಕೊಲಂಬೋದ ಅಧ್ಯಕ್ಷೀಯ ಸಚಿವಾಲಯದಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ನ್ಯಾಯಮೂರ್ತಿ ಜಯಂತ ಜಯಸೂರ್ಯ ಅವರು ಪ್ರಮಾಣ ವಚನ ಬೋಧಿಸಿದರು. ಶ್ರೀಲಂಕಾದಲ್ಲಿ ಎಡಪಂಥೀಯ ನಾಯಕರೊಬ್ಬರು ಅಧ್ಯಕ್ಷರಾಗಿರುವುದು ಇದೇ ಮೊದಲ ಸಲವಾಗಿದೆ.