ನವದೆಹಲಿ: ಉತ್ತರ ಭಾರತದಲ್ಲಿ ಚಳಿಯ ತೀವ್ರತೆಯು ಪ್ರಾಣಾಂತಕವಾಗಿದೆ. ದೆಹಲಿಯಲ್ಲಿ ಅತಿಯಾದ ಶೀತಕ್ಕೆ ಕಳೆದ ಎರಡು ತಿಂಗಳ ಅವಧಿಯಲ್ಲಿ 474 ನಿರಾಶ್ರಿತರು ಪ್ರಾಣ ಕಳೆದುಕೊಂಡಿದ್ದಾರೆ ಎಂಬ ಆಘಾತಕಾರಿ ಅಂಶ ಬಯಲಾಗಿದೆ.
ನಿರಾಶ್ರಿತರಿಗಾಗಿ ಕೆಲಸ ಮಾಡುವ ಸೆಂಟರ್ ಫಾರ್ ಹೋಲಿಸ್ಟಿಕ್ ಡೆವಲಪ್ಮೆಂಟ್ (ಸಿಎಚ್ಡಿ) ಸಂಸ್ಥೆಯು ಇಂತಹ ಅಚ್ಚರಿ ಮತ್ತು ಮನಕಲಕುವ ದತ್ತಾಂಶವನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ. ಅಲ್ಲದೇ, ನಿರಾಶ್ರಿತರಿಗೆ ರಕ್ಷಣೆ ನೀಡಲು ಕೋರಿ ದೆಹಲಿ ಲೆಫ್ಟಿನೆಂಟ್ ಗವರ್ನರ್, ಸಿಎಂ, ಆರೋಗ್ಯ ಸಚಿವ ಮತ್ತು ಜಿಲ್ಲಾಡಳಿತಗಳಿಗೆ ಪತ್ರ ಬರೆದಿದೆ.
ದೆಹಲಿಯಲ್ಲಿ 2024ರ ನವೆಂಬರ್ 15ರಿಂದ ಜನವರಿ 10, 2025 ವರೆಗೆ ತೀವ್ರ ಚಳಿಗೆ 474 ನಿರಾಶ್ರಿತರ ಸಾವಾಗಿದೆ. 100 ಮೃತದೇಹಗಳು ರಾಷ್ಟ್ರ ರಾಜಧಾನಿಯ ಪ್ರಮುಖ ಸ್ಥಳಗಳಾದ ಸಬ್ಜಿ ಮಂಡಿ, ಆನಂದ್ ವಿಹಾರ್, ನವದೆಹಲಿ, ಹಜರತ್ ನಿಜಾಮುದ್ದೀನ್, ಸರೈ ರೋಹಿಲ್ಲಾ, ದೆಹಲಿ ಕಂಟೋನ್ಮೆಂಟ್ ಮತ್ತು ಮೆಟ್ರೋ ಪ್ರದೇಶಗಳಲ್ಲಿ ಪತ್ತೆಯಾಗಿವೆ ಎಂದು ಹೇಳಿದೆ.
ದಿನಕ್ಕೆ 8 ಮಂದಿ ಸಾವು!?: ಎನ್ಜಿಒದ ದತ್ತಾಂಶಗಳು ನಿಜವೇ ಆಗಿದ್ದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ದಿನಕ್ಕೆ 8 ಜನರು ಮೃತಪಟ್ಟಂತಾಗಿದೆ. ಇದು ನಿಜಕ್ಕೂ ಆಘಾತಕಾರಿ ವಿಷಯವಾಗಿದೆ. ದೇಹ ಮರಗಟ್ಟಿಸುವ ಚಳಿಯಿಂದ ರಕ್ಷಣೆ ನೀಡುವ ಬೆಚ್ಚಗಿನ ಬಟ್ಟೆ, ಕಂಬಳಿ ಮತ್ತು ಆಶ್ರಯದಂತಹ ಮೂಲಭೂತ ಸೌಕರ್ಯಗಳು ಇಲ್ಲದೆ, ಬೀದಿಬದಿಗಳಲ್ಲಿ ಆಶ್ರಯ ಪಡೆದವರು ಬಲಿಯಾಗುತ್ತಿದ್ದಾರೆ ಎಂದು ಸಂಸ್ಥೆಯು ಹೇಳಿದೆ.
ಇದನ್ನೂ ಓದಿ: ತೀವ್ರ ಚಳಿ ಜೊತೆಗೆ ಹದಗೆಟ್ಟ ದೆಹಲಿ ವಾಯು ಗುಣಮಟ್ಟ; ಜಿಆರ್ಎಪಿ 4ನೇ ಹಂತ ಜಾರಿ
ಎನ್ಜಿಒದ ಕಾರ್ಯನಿರ್ವಾಹಕ ನಿರ್ದೇಶಕ ಸುನಿಲ್ ಕುಮಾರ್ ಅಲೆಡಿಯಾ ಅವರು, ಶನಿವಾರ ದೆಹಲಿಯ ಮುಖ್ಯ ಕಾರ್ಯದರ್ಶಿ ಧರ್ಮೇಂದ್ರ ಸಿಂಗ್, ದೆಹಲಿ ನಗರ ಆಶ್ರಯ ಸುಧಾರಣಾ ಮಂಡಳಿಯ (DUSIB) ಸಿಇಒ ಅವರಿಗೆ ಪತ್ರ ಬರೆದು ಸಾವು ತಡೆಗಟ್ಟಲು ಒತ್ತಾಯಿಸಿದ್ದಾರೆ. ಜೊತೆಗೆ ಅದರ ಪ್ರತಿಯನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ, ದೆಹಲಿ ಮುಖ್ಯಮಂತ್ರಿ ಅತಿಶಿ, ಆರೋಗ್ಯ ಸಚಿವ ಸೌರಭ್ ಭಾರದ್ವಾಜ್ ಹಾಗೂ ಎಲ್ಲಾ ಜಿಲ್ಲಾಧಿಕಾರಿಗಳಿಗೆ ರವಾನಿಸಿದ್ದಾರೆ.
ವೆಬ್ಸೈಟ್ನಲ್ಲಿ ಸಾವಿನ ದತ್ತಾಂಶ: ಇನ್ನೂ, ಸಂಸ್ಥೆಯು ನಿರಾಶ್ರಿತರ ಸಾವಿನ ಬಗ್ಗೆ ತನ್ನ ಅಧಿಕೃತ ವೆಬ್ಸೈಟ್ http://zipnet.in ನಲ್ಲಿ ಪ್ರಕಟಿಸಿದೆ. ಪೊಲೀಸ್ ಇಲಾಖೆಯು ಪತ್ತೆ ಮಾಡಿದ ಅಪರಿಚಿತ ಶವಗಳ ಲೆಕ್ಕಾಚಾರದಲ್ಲಿ ಅದು ನಿರಾಶ್ರಿತ ವ್ಯಕ್ತಿಗಳು ಎಂದು ಗುರುತಿಸಿದೆ.
ತೀವ್ರ ಚಳಿಯು ನಿರಾಶ್ರಿತರ ಮೇಲೆ ವಿಪರೀತ ಪರಿಣಾಮ ಬೀತಿದೆ. ಚಳಿಗಾಲವು ಅವರ ನಿದ್ದೆಗೆಡಿಸಿದೆ. ಉಸಿರಾಟದ ಸಮಸ್ಯೆ, ಚರ್ಮ ಕಾಯಿಲೆ, ಸಂಧಿವಾತ, ಅಸ್ತಮಾ, ಹೃದಯರಕ್ತನಾಳ ಸೋಂಕಿನಿಂದ ಸಾವಿಗೀಡಾಗಿದ್ದಾರೆ ಎಂದು ಸಂಸ್ಥೆಯು ಹೇಳಿದೆ.
ನಗರದಲ್ಲಿರುವ ಅನೇಕ ಆಶ್ರಯ ತಾಣಗಳು ಚಳಿಗಾಲಕ್ಕೆ ಬೇಕಾದ ಸವಲತ್ತನ್ನು ಹೊಂದಿಲ್ಲ. ತಾಪಮಾನ ತಡೆಯುವ ಮತ್ತು ಬಿಸಿನೀರಿನ ಸೌಲಭ್ಯ ಹೊಂದಿಲ್ಲ. ಇದರಿಂದಾಗಿ ನಿರಾಶ್ರಿತರು ಅಧಿಕ ಶೀತಕ್ಕೆ ಬಲಿಯಾಗುತ್ತಿದ್ದಾರೆ. ಅವರಿಗೆ ತಕ್ಷಣವೇ ಅಗತ್ಯ ನೆರವು ನೀಡಬೇಕಿದೆ. ಇಲ್ಲವಾದಲ್ಲಿ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಇದನ್ನೂ ಓದಿ: ರಾಜ್ಯದಲ್ಲಿ ಜ.15ರ ವರೆಗೆ ಮೈನಡುಗಿಸುವ ಚಳಿ; ಈ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ!