ದಾವಣಗೆರೆ: "ಡಿ.ಕೆ.ಶಿವಕುಮಾರ್ ಸಿಎಂ ಆಗೇ ಆಗುತ್ತಾರೆ. ನನ್ನ ಹೇಳಿಕೆಯನ್ನು ಹಿಂತೆಗೆದುಕೊಳ್ಳುವ ಮಾತೇ ಇಲ್ಲ. ಹಿಂದೆಯೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ. ಕಷ್ಟಪಟ್ಟವರಿಗೆ ಒಳ್ಳೆಯ ದಿನಗಳು ಇದ್ದೇ ಇರುತ್ತವೆ" ಎಂದು ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಉಪಮುಖ್ಯಮಂತ್ರಿ ಡಿಕೆಶಿ ಪರ ಬ್ಯಾಟಿಂಗ್ ಮಾಡಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಂದಿನ ಸಿಎಂ ಡಿ.ಕೆ. ಶಿವಕುಮಾರ್ ಅವರು ಆಗಬೇಕು ಎಂದು ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ. ಆದರೆ, ಈ ವಿಚಾರದಲ್ಲಿ ಯಾವುದೇ ಶಾಸಕರು ನನಗೆ ಬೆಂಬಲ ನೀಡುವುದು ಬೇಡ ಎಂದು ಡಿಕೆಶಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, "ಡಿ. ಕೆ. ಶಿವಕುಮಾರ್ ಅವರು ಒಳ್ಳೆಯ ಅರ್ಥದಲ್ಲೇ ಆ ರೀತಿ ಹೇಳಿಕೆ ನೀಡಿದ್ದಾರೆ. ಅವರು ನೀಡಿರುವ ಹೇಳಿಕೆಯನ್ನು ನೋಡುವ ದೃಷ್ಟಿಕೋನದ ಮೇಲೆ ಹೋಗುತ್ತದೆ. ಕೆಟ್ಟದಾಗಿ ನೋಡಿದರೆ ಕೆಟ್ಟದ್ದಾಗಿ, ಒಳ್ಳೆಯ ರೀತಿಯಲ್ಲಿ ನೋಡಿದರೆ ಒಳ್ಳೆಯದಾಗಿ ಕಾಣುತ್ತದೆ" ಎಂದು ತಿಳಿಸಿದರು.
"ಡಿ. ಕೆ. ಶಿವಕುಮಾರ್ ಶಾಸಕರನ್ನು ಗೆಲ್ಲಿಸುವಲ್ಲಿ ಸಾಕಷ್ಟು ಕಷ್ಟಪಟ್ಟಿದ್ದಾರೆ. ನಾವೆಲ್ಲ ಒಗ್ಗಟ್ಟಾಗಿಯೇ ಇದ್ದೇವೆ. ಏನಾದರೂ ತೀರ್ಮಾನ ತೆಗೆದುಕೊಳ್ಳಬೇಕಾದರೆ ಅದಕ್ಕೆ ಹೈಕಮಾಂಡ್ ಇದೆ. ಪವರ್ ಶೇರಿಂಗ್ ಏನು ಇಲ್ಲ. ಹೈಕಮಾಂಡ್ ತೀರ್ಮಾನವೇ ಅಂತಿಮ, ಡಿ. ಕೆ. ಶಿವಕುಮಾರ್ ಅವರ ಪರವಾಗಿ ನಾವಿದ್ದೇವೆ" ಎಂದು ಶಾಸಕ ಶಿವಗಂಗಾ ಹೇಳಿದರು.
"ಡಿ. ಕೆ. ಶಿವಕುಮಾರ್ ಅವರು ಐದು ವರ್ಷದ ಕಾಲಾವಧಿಗೆ ಮುಖ್ಯಮಂತ್ರಿ ಆಗಬೇಕಿತ್ತು. ಕೆಲ ಬೆಳವಣಿಗೆಯಿಂದ ಸಿದ್ದರಾಮಯ್ಯ ಅವರು ಆಗಿದ್ದಾರೆ. ಒಳ್ಳೆಯ ಆಡಳಿತ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಮುಖ್ಯಮಂತ್ರಿ ಕುರ್ಚಿ ಖಾಲಿಯಾದ ತಕ್ಷಣ ನಾವು ಕ್ಲೈಮ್ ಮಾಡುತ್ತೇವೆ" ಎಂದು ತಿಳಿಸಿದರು.
"ಜೆಡಿಎಸ್ ಶಾಸಕರು ಅವರಾಗಿಯೇ ಕಾಂಗ್ರೆಸ್ ಪಕ್ಷಕ್ಕೆ ಬರ್ತಾರೆ ಎಂದರೆ ಸೇರಿಸಿಕೊಳ್ಳದಿರಲು ಆಗುತ್ತಾ?. ಡಿ. ಕೆ. ಶಿವಕುಮಾರ್ ಅವರು ಪಕ್ಷ ಸಂಘಟನೆಗೆ ಎಲ್ಲರನ್ನೂ ಒಟ್ಟುಗೂಡಿಸುತ್ತಿದ್ದಾರೆ. ಉಪ ಚುನಾವಣೆಯಲ್ಲಿ ಕೂಡ ಮೂರಕ್ಕೆ ಮೂರು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬಂದಿದ್ದಾರೆ. ಇದನ್ನೆಲ್ಲಾ ಹೈಕಮಾಂಡ್ ಗಮನಿಸುತ್ತಿದೆ" ಎಂದರು.
ಇದನ್ನೂ ಓದಿ: ಅನಗತ್ಯ ಗೊಂದಲ ಬೇಡ, ಒಕ್ಕಲಿಗರ ಸಭೆ ಮುಂದೂಡಿ: ಡಿ.ಕೆ.ಶಿವಕುಮಾರ್ ಸೂಚನೆ
ಇದನ್ನೂ ಓದಿ: ನಮ್ಮ ಡ್ರಾಮ (ಡಿ) ಕಿಂಗ್ (ಕೆ) ಶಿವಕುಮಾರ್ ಇಷ್ಟೆಲ್ಲಾ ಮಾಡ್ತಿರೋದು ಸಿಎಂ ಗಾದಿಗಾಗಿ: ಸಿ.ಟಿ.ರವಿ