ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿ ಕಿಡಿಗೇಡಿಗಳು ಹಸುಗಳ ಕೆಚ್ಚಲು ಕೊಯ್ದಿರುವ ಅಮಾನವೀಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು, ಇದು ಅತ್ಯಂತ ಹೇಯ ವಿಕೃತಿ ಎಂದು ಜರಿದಿದ್ದಾರೆ.
ಪಕ್ಷದ ರಾಜ್ಯದ ಕಚೇರಿ ಜೆಪಿ ಭವನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತೇನೆ. ಕೂಡಲೇ ಆ ದುಷ್ಟರನ್ನು ಪತ್ತೆ ಹಚ್ಚಿ ಕಠಿಣವಾಗಿ ಶಿಕ್ಷಿಸಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಹಸುಗಳ ಕೆಚ್ಚಲು ಕೊಯ್ದ ಘಟನೆ ಬಗ್ಗೆ ಬೆಳಗ್ಗೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ದೃಶ್ಯ ಸಮೇತ ವರದಿಗಳು ಬಂದಾಗ ನನಗೆ ತೀವ್ರ ಆಘಾತ ಉಂಟಾಯಿತು. ಇದು ರಾಕ್ಷಸಿ ಕೃತ್ಯ. ಕಾಂಗ್ರೆಸ್ ಆಡಳಿತ ಇವತ್ತು ಎಲ್ಲಿಗೆ ಬಂದಿದೆ? ಎಂಬುದಕ್ಕೆ ಇದೇ ಸಾಕ್ಷಿ. ಇಲ್ಲಿಯವರೆಗೆ ಮನುಷ್ಯರನ್ನು ಕೊಲ್ಲುವುದನ್ನು ನೋಡಿದ್ದೇವೆ. ಹಸುವನ್ನು ನಾವು ಕಾಮಧೇನು, ಮಹಾಲಕ್ಷ್ಮೀ ಎಂದು ಪೂಜಿಸುತ್ತಿದ್ದೇವೆ. ಅಂಥ ಕಾಮಧೇನುವಿನ ಕೆಚ್ಚಲು ಕೊಯ್ಯುವ ಹೇಯ ಕೃತ್ಯ ಮಾಡಿರುವ ಕೆಟ್ಟ ಮನಸ್ಥಿತಿಗೆ ಏನನ್ನಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೃಹ ಸಚಿವ ಪರಮೇಶ್ವರ್ ಅವರು ಈ ನಿಟ್ಟಿನಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು. ಅವರ ಬೆಣ್ಣೆ ಮಾತು ಇಲ್ಲಿ ನಡೆಯಲ್ಲ. ನಿಮ್ಮ ಡಿನ್ನರ್ ಮೀಟಿಂಗ್ ನಿಲ್ಸಿ, ಆಡಳಿತ ಸರಿ ಮಾಡೋದನ್ನು ನೋಡಿ. ಈ ಪ್ರಕರಣದ ಬಗ್ಗೆ ಮುಲಾಜಿಲ್ಲದೆ ಕ್ರಮ ಜರುಗಿಸಿ. ಇವರ ಸರ್ಕಾರದ ಅವಧಿಯಲ್ಲಿ ರಾಕ್ಷಸಿ ಕೃತ್ಯ ಮೆರೆಯುವ ಇಂಥ ಜನ ಹೆಚ್ಚಾಗುತ್ತಿದ್ದಾರೆ ಎಂದರು.
ನೈಸ್ ಯೋಜನೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಎಲ್ಲಿ?
ಬೆಂಗಳೂರು-ಮೈಸೂರು ಮೂಲಸೌಕರ್ಯ ಕಾರಿಡಾರ್ (NICE) ಯೋಜನೆಗಾಗಿ ವಶಪಡಿಸಿಕೊಂಡ ಭೂಮಿಗೆ ವರ್ಷಗಳೇ ಕಳೆದಿದ್ದರೂ ಈವರೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡದ ಬಗ್ಗೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಆ ಬಗ್ಗೆ ರಾಜ್ಯ ಸರ್ಕಾರ ಏನು ಕ್ರಮ ಕೈಗೊಂಡಿದೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
ನೈಸ್ ಯೋಜನೆ ಹೆಸರಿನಲ್ಲಿ ರೈತರ ಭೂಮಿಯನ್ನು ಲೂಟಿ ಹೊಡೆಯಲಾಗಿದೆ. ಅಧಿಕಾರಿಗಳು, ಕೆಐಎಡಿಬಿ ಅಧಿಕಾರಿಗಳು, ಕಾಂಗ್ರೆಸ್ ನಾಯಕರು ಎಲ್ಲಾ ಸೇರಿ ರೈತರ ಭೂಮಿ ಕೊಳ್ಳೆ ಹೊಡೆದಿದ್ದಾರೆ. 22 ವರ್ಷ ಕಳೆದರೂ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಕೊಟ್ಟಿಲ್ಲ. 2019 ಏಪ್ರಿಲ್ 22ಕ್ಕೆ ಅನ್ವಯ ಆಗುವಂತೆ ರೈತರು ಕಳೆದುಕೊಂಡಿರುವ ಭೂಮಿಗೆ ಮಾರುಕಟ್ಟೆ ಮೌಲ್ಯ ನಿರ್ಧರಿಸಿ ಎರಡು ತಿಂಗಳಲ್ಲಿ ಪರಿಹಾರ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಕೋರ್ಟ್ ಆದೇಶ ಬಂದು ಎಷ್ಟು ದಿನವಾಯಿತು? ಎಂ. ಬಿ. ಪಾಟೀಲ್ ಅವರೇ ಏನು ಮಾಡುತ್ತಿದ್ದೀರಿ? ಎಂದು ಹೆಚ್ಡಿಕೆ ಕೇಳಿದರು.
ಇದನ್ನೂ ಓದಿ: ಹಸುಗಳ ಕೆಚ್ಚಲು ಕೊಯ್ದವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಕರಾಳ ಸಂಕ್ರಾಂತಿ ಆಚರಣೆ : ಆರ್.ಅಶೋಕ್
ಇದನ್ನೂ ಓದಿ: ಹಸುಗಳ ಕೆಚ್ಚಲು ಕೊಯ್ದ ತಪ್ಪಿತಸ್ಥರಿಗೆ ಕಾನೂನು ಪ್ರಕಾರ ಶಿಕ್ಷೆ: ಸಿಎಂ ಸಿದ್ದರಾಮಯ್ಯ