ಮಾರ್ಸಿಲ್ಲೆ (ಫ್ರಾನ್ಸ್): ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO - Defense Research and Development Organization) ವಿನ್ಯಾಸಗೊಳಿಸಿದ 'ಪಿನಾಕಾ ಮಲ್ಟಿ ಬ್ಯಾರೆಲ್ ರಾಕೆಟ್ ಲಾಂಚರ್' ಅನ್ನು ಫ್ರಾನ್ಸ್ ಖರೀದಿಸಲು ಮುಂದಾಗಿದ್ದು, ತಮ್ಮ ಕಣ್ಣಾರೆ ಕಂಡು ಇದರ ಬಗ್ಗೆ ಮತ್ತಷ್ಟು ಅಧ್ಯಯನ ಮಾಡಲು ಭಾರತಕ್ಕೆ ಆಗಮಿಸುವಂತೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಫ್ರೆಂಚ್ ಸೈನ್ಯಕ್ಕೆ ಆಹ್ವಾನ ನೀಡಿದ್ದಾರೆ.
ಮೂರು ದಿನಗಳ ಫ್ರಾನ್ಸ್ ಪ್ರವಾಸ ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಭಾರತ – ಫ್ರಾನ್ಸ್ ನಡುವಿನ ದ್ವಿಪಕ್ಷೀಯ ಮಾತುಕತೆ ಸಂದರ್ಭ ಉಭಯ ದೇಶಗಳ ವ್ಯಾಪಾರ, ಹೂಡಿಕೆ ಸಂಬಂಧಗಳನ್ನು ವೃದ್ಧಿಸುವ ಬಗ್ಗೆ ಚರ್ಚಿಸುವುದರೊಂದಿಗೆ ಎಲ್ಲ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ನೀಡುವ ಕುರಿತು ಒಪ್ಪಂದಕ್ಕೆ ಬಂದಿದ್ದಾರೆ ಎಂದು ವರದಿಯಾಗಿದೆ.
ಅದರಲ್ಲಿ 'ಪಿನಾಕಾ ಮಲ್ಟಿ ಬ್ಯಾರೆಲ್ ರಾಕೆಟ್ ಲಾಂಚರ್' ಖರೀದಿ ಕೂಡ ಒಂದಾಗಿದೆ. ದೇಶೀ ನಿರ್ಮಿತ ಪಿನಾಕಾ ರಾಕೆಟ್ ಖರೀದಿಸಲು ಫ್ರಾನ್ಸ್ ಮುಂದಾಗಿದ್ದು, ಆ ದೇಶದ ಅಧ್ಯಕ್ಷ ಇಮಾನ್ಯುವೆಲ್ ಮ್ಯಾಕ್ರನ್ ಜತೆಗಿನ ಮಾತುಕತೆ ವೇಳೆ ಪ್ರಧಾನಿ ಮೋದಿ ಈ ವಿಚಾರ ಪ್ರಸ್ತಾಪಿಸಿದ್ದಾರೆ. ಭಾರತದ ಪಿನಾಕಾ ರಾಕೆಟ್ ಲಾಂಚರ್ ಅನ್ನು ಫ್ರಾನ್ಸ್ ಖರೀದಿಸುವುದರಿಂದ ಎರಡೂ ದೇಶಗಳ ನಡುವಿನ ರಕ್ಷಣಾ ಸಂಬಂಧಗಳು ಬಲಗೊಳ್ಳುತ್ತವೆ. ಹಾಗಾಗಿ ಫ್ರಾನ್ಸ್ ಸೇನೆಯ ಹಿರಿಯ ಅಧಿಕಾರಿಗಳು ಭಾರತಕ್ಕೆ ಭೇಟಿ ನೀಡಿ ರಾಕೆಟ್ ವ್ಯವಸ್ಥೆ ಬಗ್ಗೆ ಪರಿಶೀಲಿಸುವಂತೆಯೂ ಪ್ರಧಾನಿ ಮೋದಿ ಫ್ರೆಂಚ್ ಸೈನ್ಯಕ್ಕೆ ಆಹ್ವಾನ ನೀಡಿದ್ದಾರೆ ಎಂದು ವರದಿಯಾಗಿದೆ.
ಫ್ರಾನ್ಸ್ ದೇಶ ಪಿನಾಕಾ ಖರೀದಿಗೆ ಮುಂದಾಗಿರುವುದು ಇಂಡೋ-ಫ್ರೆಂಚ್ ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ಗಟ್ಟಿ ಮಾಡಿದೆ. ಉಭಯ ದೇಶಗಳ ರಕ್ಷಣಾ ಕ್ಷೇತ್ರಗಳಲ್ಲಿ ಇದೊಂದು ಹೊಸ ಮೈಲಿಗಲ್ಲು. ಪಿನಾಕಾ ರಾಕೆಟ್‌ಗಳನ್ನು ಫ್ರಾನ್ಸ್ಗೆ ಪೂರೈಸಲು ಭಾರತ ಹೆಮ್ಮೆ ಪಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಮೂರು ದಿನಗಳ ಫ್ರಾನ್ಸ್ ಪ್ರವಾಸ ಅಂತ್ಯಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲು ಬುಧವಾರ ಅಮೆರಿಕಕ್ಕೆ ತೆರಳಿದ್ದಾರೆ. ಫ್ರಾನ್ಸ್ ಪ್ರವಾಸದ ವೇಳೆ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗೆ ಭದ್ರತೆ, ಬಾಹ್ಯಾಕಾಶ, ಭಯೋತ್ಪಾದನೆ ನಿಗ್ರಹ ಸಹಕಾರವನ್ನು ಬಲಪಡಿಸುವುದರ ಜೊತೆಗೆ ಅಣುಶಕ್ತಿಯು ಸೇರಿ ಹಲವು ಕ್ಷೇತ್ರಗಳ ಬಗ್ಗೆ ಪ್ರಧಾನಿ ಮೋದಿ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದರು. ಇದರಲ್ಲಿ ಕಿಲ್ಲರ್ ಜಲಾಂತರ್ಗಾಮಿ ಉತ್ಪಾದನೆಯೂ ಸೇರಿದೆ.