ಬೆಂಗಳೂರು: ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ಹಲ್ಲೆ ಪ್ರಕರಣದ ಆರೋಪಿಯೊಬ್ಬ ಮಗನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಕಾಣಿಸಿಕೊಂಡು ಪೊಲೀಸರ ಅತಿಥಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನ್ಯಾಯಾಲಯದಲ್ಲಿ ವಾರಂಟ್ ಜಾರಿಯಾದರೂ ಸಹ ತಲೆಮರೆಸಿಕೊಂಡಿದ್ದ ಮೊಹಮ್ಮದ್ ಫಾರೂಕ್ ಅಲಿಯಾಸ್ ಮೋಟಿ ಎಂಬಾತನನ್ನ ಮಡಿವಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ.
12 ವರ್ಷದ ಹಿಂದೆ ನಡೆದ ಘಟನೆ: 12 ವರ್ಷಗಳ ಹಿಂದೆ ನಡೆದಿದ್ದ ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಮೊಹಮ್ಮದ್ ಫಾರೂಕ್ ವಿರುದ್ಧ 2015ರಲ್ಲಿ ನ್ಯಾಯಾಲಯ ವಾರಂಟ್ ಜಾರಿಗೊಳಿಸಿತ್ತು. ಆದರೆ, ಫಾರೂಕ್ ಮಾತ್ರ 2022ರ ಬಳಿಕ ನ್ಯಾಯಾಲಯದಲ್ಲಿ ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದರು. ಫಾರೂಕ್‌ಗಾಗಿ ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದ್ದರು. ಆದರೆ, ಮೊಬೈಲ್ ನಂಬರ್, ವಾಸಸ್ಥಳ ಬದಲಿಸಿಕೊಂಡು ಆರೋಪಿ ಸಿಕ್ಕಿರಲಿಲ್ಲ. ಅಷ್ಟೇ ಅಲ್ಲ ಎರಡನೇ ಮದುವೆಯಾಗಿ ದೊಡ್ಡಕಲ್ಲಸಂದ್ರದಲ್ಲಿ ವಾಸವಾಗಿದ್ದ ಫಾರೂಕ್, ತನ್ನ ತಂದೆಯ ಸಾವಿನ ನಂತರ ಅಂತ್ಯಕ್ರಿಯೆಗೂ ಸಹ ಬಾರದೇ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ.
ಇನ್ಸ್ಟಾಗ್ರಾಂನಿಂದ ಸಿಕ್ಕಿಬಿದ್ದ ಆರೋಪ: ಇತ್ತೀಚೆಗೆ ಇನ್‌ಸ್ಟಾಗ್ರಾಂ ಸ್ಟೋರಿಯೊಂದರಲ್ಲಿ ಮೊಹಮ್ಮದ್ ಫಾರೂಕ್‌ನ ಫೋಟೋ ಪ್ರಕಟಿಸಲಾಗಿತ್ತು. ಫೋಟೋ ಪ್ರಕಟವಾದ ಇನ್‌ಸ್ಟಾಗ್ರಾಂ ಐಡಿ, ಐಪಿ ಅಡ್ರೆಸ್ ಪರಿಶೀಲನೆ ನಡೆಸಿದಾಗ ಅದು ಮೊಹಮ್ಮದ್ ಫಾರೂಕ್‌ನ ಹೆಸರಿನಲ್ಲಿರುವ ಮೊಬೈಲ್ ನಂಬರ್‌ನ ಆಧಾರದಲ್ಲಿ ಆ ಐಡಿ ಕ್ರಿಯೇಟ್ ಆಗಿರುವುದು ಪತ್ತೆಯಾಗಿತ್ತು. ಅಲ್ಲದೇ ಅದೇ ನಂಬರ್‌ನಿಂದ ಆನ್‌ಲೈನ್‌ನಲ್ಲಿ ಫುಡ್ ಆರ್ಡರ್ ಬಂದಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಆ ಆರ್ಡರ್‌ಗಳು ಪ್ಲೇಸ್‌ಮೆಂಟ್ ಆಗುತ್ತಿದ್ದ ಮಾಹಿತಿ ಆಧಾರದಲ್ಲಿ ಮೊಹಮ್ಮದ್ ಫಾರೂಕ್‌ನ ವಿಳಾಸವನ್ನ ಪೊಲೀಸರು ಪತ್ತೆಹಚ್ಚಿದ್ದರು. ನಂತರ ಆತನ ಚಲನವಲನಗಳ ಕುರಿತು ನಿಗಾವಹಿಸಿ, ಕೊನೆಗೆ ಬಂಧಿಸುವಲ್ಲಿ ಯಶಸ್ವಿಯಾಗಿರುವುದಾಗಿ ಪೊಲೀಸರು ಮಾಹಿತಿ ನೀಡಿದರು.
ಆರೋಪಿ ಸದ್ಯ ಮಡಿವಾಳ ಠಾಣೆ ಪೊಲೀಸರ ವಶದಲ್ಲಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಭೀಮಾತೀರದ ರೌಡಿಶೀಟರ್ ಭಾಗಪ್ಪ ಹರಿಜನ ಹತ್ಯೆ: ನಾಲ್ವರು ಆರೋಪಿಗಳ ಬಂಧನ
ಇದನ್ನೂ ಓದಿ: ಹೂಡಿಕೆಯಿಂದ ಹೆಚ್ಚಿನ ಲಾಭಾಂಶದ ಆಮಿಷ, ₹25 ಕೋಟಿ ವಂಚನೆ; ಆರೋಪಿ ಅರೆಸ್ಟ್