ವಾಷಿಂಗ್ಟನ್: ಅಮೆರಿಕದಲ್ಲಿ ನೂತನವಾಗಿ ಅಧಿಕಾರಕ್ಕೆ ಬಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಹೊಸ ಸರ್ಕಾರವು ಹಲವಾರು ದೇಶಗಳ ವಿವಿಧ ಯೋಜನೆಗಳಿಗಾಗಿ ನೀಡಲಾಗುತ್ತಿದ್ದ ಧನಸಹಾಯವನ್ನು ನಿಲ್ಲಿಸುವುದಾಗಿ ಘೋಷಿಸಿದೆ. ಸದ್ಯ ಇಂಥ ಅನೇಕ ಯೋಜನೆಗಳಿಗೆ ಧನಸಹಾಯ ಸ್ಥಗಿತಗೊಳಿಸಲಾಗುತ್ತಿರುವುದನ್ನು ಎಲೋನ್ ಮಸ್ಕ್ ನೇತೃತ್ವದ ಯುಎಸ್ ಡಿಪಾರ್ಟ್‌ಮೆಂಟ್ ಆಫ್ ಗವರ್ನಮೆಂಟ್ ಎಫಿಷಿಯೆನ್ಸಿ (ಡಿಒಜಿಇ) ಶನಿವಾರ ಪ್ರಕಟಿಸಿದೆ.
ಆದರೆ, "ಭಾರತದಲ್ಲಿ ಮತದಾನದ ಪ್ರಮಾಣ"ಕ್ಕಾಗಿ ನಿಗದಿಪಡಿಸಲಾಗಿದ್ದ 22 ಮಿಲಿಯನ್ ಡಾಲರ್ ಧನಸಹಾಯವನ್ನು ನಿಲ್ಲಿಸುವುದಾಗಿ ಹೇಳಿದ್ದು ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಭಾರತದಲ್ಲಿನ ಮತದಾನ ಪ್ರಮಾಣಕ್ಕಾಗಿ ಇಷ್ಟೊಂದು ದೊಡ್ಡ ಮೊತ್ತದ ಹಣವನ್ನು ಅಮೆರಿಕ ಮೀಸಲಿಟ್ಟಿದ್ದು ಏಕೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿದೆ. ಇನ್ನು "ಭಾರತದಲ್ಲಿ ಮತದಾನದ ಪ್ರಮಾಣ"ಕ್ಕೆ ಹಣ ಮೀಸಲಿಟ್ಟಿದ್ದು ಭಾರತದಲ್ಲಿನ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡುವುದಕ್ಕಾ ಎಂಬ ಗಂಭೀರ ಪ್ರಶ್ನೆಯೂ ಮೂಡಿದೆ.
ಈ ಪ್ರಕಟಣೆಯ ಬಗ್ಗೆ ಬಿಜೆಪಿಯ ಅಮಿತ್ ಮಾಳವೀಯ ಪ್ರತಿಕ್ರಿಯಿಸಿದ್ದು, "ಮತದಾನದ ಪ್ರಮಾಣಕ್ಕೆ 21 ಮಿಲಿಯನ್ ಡಾಲರ್ ಇಡಲಾಗಿತ್ತಾ? ಇದು ಖಂಡಿತವಾಗಿಯೂ ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಬಾಹ್ಯ ಹಸ್ತಕ್ಷೇಪವಾಗಿದೆ. ಇದರಿಂದ ಯಾರಿಗೆ ಲಾಭ? ಖಂಡಿತವಾಗಿಯೂ ಇದರ ಲಾಭ ಆಡಳಿತ ಪಕ್ಷಕ್ಕೆ ಸಿಗಲಾರದು!" ಎಂದು ಅವರು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
- $486M to the “Consortium for Elections and Political Process Strengthening,” including $22M for " inclusive and participatory political process" in moldova and $21m for voter turnout in india.
— Amit Malviya (@amitmalviya) February 15, 2025
$21m for voter turnout? this definitely is external interference in india’s electoral… https://t.co/DsTJhh9J2J
ಯುಎಸ್ ಇಲಾಖೆ ರದ್ದುಗೊಳಿಸಿದ ಇತರ ಧನಸಹಾಯದಲ್ಲಿ, "ಮೊಜಾಂಬಿಕ್ ಸ್ವಯಂಪ್ರೇರಿತ ವೈದ್ಯಕೀಯ ಪುರುಷ ಸುನ್ನತಿ"ಗಾಗಿ 10 ಮಿಲಿಯನ್ ಯುಎಸ್ಡಿ ಸೇರಿದೆ. ಮೊಲ್ಡೊವಾದಲ್ಲಿ 'ಅಂತರ್ಗತ ಮತ್ತು ಭಾಗವಹಿಸುವಿಕೆಯ ರಾಜಕೀಯ ಪ್ರಕ್ರಿಯೆ'ಗಾಗಿ 22 ಮಿಲಿಯನ್ ಡಾಲರ್ ಮತ್ತು ಭಾರತದಲ್ಲಿ ಮತದಾನದ ಪ್ರಮಾಣಕ್ಕಾಗಿ 21 ಮಿಲಿಯನ್ ಡಾಲರ್ ಸೇರಿದಂತೆ 'ಚುನಾವಣೆ ಮತ್ತು ರಾಜಕೀಯ ಪ್ರಕ್ರಿಯೆ ಬಲಪಡಿಸುವ ಒಕ್ಕೂಟ'ಕ್ಕೆ 486 ಮಿಲಿಯನ್ ಡಾಲರ್ ದೇಣಿಗೆ ನೀಡಲಾಗಿದೆ ಎಂದು ಡಿಒಜಿಇ ತಿಳಿಸಿದೆ.
ಬಾಂಗ್ಲಾದೇಶದಲ್ಲಿ ರಾಜಕೀಯ ಸ್ಥಿರತೆಯನ್ನು ಬಲಪಡಿಸಲು ಉದ್ದೇಶಿಸಲಾಗಿದ್ದ 29 ಮಿಲಿಯನ್ ಡಾಲರ್ ಮತ್ತು ನೇಪಾಳದಲ್ಲಿ "ಹಣಕಾಸಿನ ಒಕ್ಕೂಟ ವ್ಯವಸ್ಥೆ" ಮತ್ತು "ಜೀವವೈವಿಧ್ಯ ಸಂರಕ್ಷಣೆ" ಗಾಗಿ 39 ಮಿಲಿಯನ್ ಡಾಲರ್ ಅನ್ನು ಸಹ ರದ್ದುಪಡಿಸಲಾಗಿದೆ.
ಅಂತೆಯೇ, ಲೈಬೀರಿಯಾದಲ್ಲಿ "ಮತದಾರರ ವಿಶ್ವಾಸ" ಕ್ಕಾಗಿ 1.5 ಮಿಲಿಯನ್ ಡಾಲರ್, ಮಾಲಿಯಲ್ಲಿ "ಸಾಮಾಜಿಕ ಒಗ್ಗಟ್ಟಿಗೆ" 14 ಮಿಲಿಯನ್ ಡಾಲರ್, "ದಕ್ಷಿಣ ಆಫ್ರಿಕಾದ ಅಂತರ್ಗತ ಪ್ರಜಾಪ್ರಭುತ್ವಗಳಿಗೆ" 2.5 ಮಿಲಿಯನ್ ಡಾಲರ್ ಮತ್ತು ಏಷ್ಯಾದಲ್ಲಿ ಕಲಿಕೆಯ ಫಲಿತಾಂಶಗಳನ್ನು ಸುಧಾರಿಸಲು 47 ಮಿಲಿಯನ್ ಡಾಲರ್ ಅನ್ನು ಡಿಒಜಿ ರದ್ದುಗೊಳಿಸಿದೆ.
ಇದನ್ನೂ ಓದಿ: ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ: ಎಲೋನ್ ಮಸ್ಕ್ ಜತೆ ಮೋದಿ ಮಹತ್ವದ ಚರ್ಚೆ: ಭಾರತದಲ್ಲೂ ಸುಧಾರಣೆಗೆ ಮುಂದಾಗ್ತಾರಾ ಪ್ರಧಾನಿ