ಬೆಂಗಳೂರು: ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ ಆರೋಪದಲ್ಲಿ ಮಾಜಿ ಶಾಸಕ ಸುರೇಶ್ ಗೌಡ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿ ಆದೇಶಿಸಿದೆ.
ತನ್ನ ವಿರುದ್ಧ ಮ್ಯಾಜಿಸ್ಟ್ರೇಟ್ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ಪ್ರಕರಣ ಸಂಬಂಧ ತೆಗೆದುಕೊಂಡಿರುವ ಕಾಗ್ನಿಜೆನ್ಸ್ ಮತ್ತು ಆ ಸಂಬಂಧ ಜಾರಿ ಮಾಡಿರುವ ಸಮನ್ಸ್ ರದ್ದುಪಡಿಸಬೇಕು ಎಂದು ಕೋರಿ ಸುರೇಶ್‌ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೇ, ಅರ್ಜಿದಾರರು ದೂರುದಾರರ ವಿರುದ್ಧ ನೀಡಿರುವ ಹೇಳಿಕೆಗಳು ಮಾನಹಾನಿಕರವಾಗಿಲ್ಲ ಎಂದಾದರೆ, ಆ ಸಂಬಂಧ ಸಂಪೂರ್ಣ ವಿಚಾರಣೆ ಎದುರಿಸಿ ಆರೋಪ ಮುಕ್ತರಾಗಿ ಹೊರ ಬರಬೇಕಾಗಿದೆ ಎಂದು ತಿಳಿಸಿ ಆರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಜೊತೆಗೆ, ಪ್ರಕರಣ ಸಂಬಂಧ ವಿವೇಚನೆ ಬಳಸದೇ ವಿಚಾರಣಾ ನ್ಯಾಯಾಲಯ ಕಾಗ್ನಿಜೆನ್ಸ್ ತೆಗೆದುಕೊಂಡಿದೆ ಎಂಬ ಅರ್ಜಿದಾರರ ಪರ ವಾದವನ್ನು ತಳ್ಳಿ ಹಾಕಿರುವ ನ್ಯಾಯಪೀಠ, ಪ್ರಕರಣದಲ್ಲಿ ವಿವೇಚನೆ ಬಳಸಲಾಗಿದೆ ಎಂದು ಅಭಿಪ್ರಾಯ ಪಟ್ಟಿದೆ.
ಸಚಿವ ಚಲುವರಾಯಸ್ವಾಮಿ ಅವರ 100 ಕೋಟಿ ರೂ. ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬುದಾಗಿ ಸುರೇಶ್‌ಗೌಡ ಆರೋಪಿಸಿರುವ ಸಂಬಂಧ ವಿವಿಧ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಅದರ ಆಧಾರದಲ್ಲಿ ಚಲುವರಾಯಸ್ವಾಮಿ ಅವರು ಸುರೇಶ್ ಗೌಡ ವಿರುದ್ಧ ಮಾನ ನಷ್ಟ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಕೆಎಸ್‌ಪಿಸಿಬಿ ಅಧ್ಯಕ್ಷರಾಗಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ನೇಮಕ ಪ್ರಶ್ನಿಸಿ ಅರ್ಜಿ: ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಅಧ್ಯಕ್ಷರಾಗಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ ಎಂದು ಆಕ್ಷೇಪಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಆರ್. ಆಂಜನೇಯರೆಡ್ಡಿ ಬುಧವಾರ ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದು, ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.
ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ರಾಜ್ಯಗಳ ಮಾಲಿನ್ಯ ನಿಯಂತ್ರಣ ಮಂಡಳಿಗಳ ಅಧ್ಯಕ್ಷರ ನೇಮಕ ಸಂಬಂಧ ಸುಪ್ರೀಂ ಕೋರ್ಟ್ ಸ್ಪಷ್ಟ ಮಾರ್ಗಸೂಚಿ ಹೊರಡಿಸಿದೆ. ಆದರೆ ರಾಜ್ಯ ಸರ್ಕಾರ ಆ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿದೆ. ಅಲ್ಲದೆ, ಪರಿಸರ ವಿಜ್ಞಾನ ಸೇರಿದಂತೆ ಯಾವುದೇ ನಿರ್ದಿಷ್ಟ ಅರ್ಹತೆ ಇಲ್ಲದವರನ್ನು ರಾಜಕೀಯ ಕಾರಣಗಳಿಗೆ ನೇಮಕ ಮಾಡಲಾಗಿದೆ. ಹಾಗಾಗಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧ್ಯಕ್ಷರಾಗಿ ಪಿ.ಎಂ.ನರೇಂದ್ರಸ್ವಾಮಿ ನೇಮಕ ಮಾಡಿ ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಏರ್ ಟ್ಯಾಕ್ಸಿ! ಅಗ್ಗದ ಬೆಲೆಯಲ್ಲಿ ಏರ್ ಟ್ರಾವೆಲ್: ಈ ಎಲೆಕ್ಟ್ರಿಕ್ ಹೆಲಿಕಾಪ್ಟರ್ ವಿಶೇಷತೆಗಳೇನು?
ಇದನ್ನೂ ಓದಿ: 350 ಕಿ.ಮೀ ದೂರದಲ್ಲಿದ್ದರೂ ಶತ್ರುದೇಶದ ವಿಮಾನ ಪತ್ತೆ ಹಚ್ಚಲಿದೆ ವಿಹೆಚ್ಎಫ್ ಸೂರ್ಯ ರಾಡಾರ್