ಕೌಲಾಲಂಪುರ್ (ಮಲೇಷ್ಯಾ): ಪ್ರತಿದಿನ ಕಚೇರಿಗೆ ಹೋಗಿ-ಬರಲು ಬಸ್, ಮೆಟ್ರೋ, ರೈಲು, ಕ್ಯಾಬ್, ಕಾರು, ಬೈಕ್ಗಳನ್ನು ಬಳಸುವುದು ಸಾಮಾನ್ಯ. ಆದರೆ, ಇಲ್ಲೋರ್ವ ಮಹಿಳೆ ಕಚೇರಿ ತೆರಳಲು ಪ್ರತಿದಿನ ವಿಮಾನ ಬಳಸುತ್ತಾರೆ!
ಹೌದು, ಮಹಿಳೆಯೊಬ್ಬಳು ಕಚೇರಿಗೆ ತೆರಳಲು ವಿಮಾನದಲ್ಲಿ ಪ್ರತಿದಿನ 700 ಕಿಲೋ ಮೀಟರ್ ಸಂಚರಿಸುವ ಮೂಲಕ ಗಮನ ಸೆಳೆದಿದ್ದಾರೆ. ವಿಶೇಷ ಎಂದರೆ ವಿಮಾನ ಸಂಚಾರದ ಮೂಲಕ ಹಣ ಉಳಿಸುವುದರ ಜೊತೆಗೆ ಮಕ್ಕಳಿಗೂ ಸಮಯ ನೀಡುತ್ತಿದ್ದಾರೆ ಅನ್ನೋದು ಮತ್ತೊಂದು ಗಮನಾರ್ಹ ವಿಷಯ.
ಏರ್ ಏಷ್ಯಾದಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿರುವ ಭಾರತೀಯ ಮೂಲದ ಮಹಿಳೆ ರೇಚೆಲ್ ಕೌರ್ ಅವರ ಅಪರೂಪದ ಜರ್ನಿ ಇದು. ಪ್ರತಿದಿನ ವಿಮಾನದಲ್ಲಿ ಕಚೇರಿಗೆ ಹೋಗಿ-ಬರುವ ಮೂಲಕ ತಮ್ಮ ಕುಟುಂಬ ಮತ್ತು ವೃತ್ತಿಪರ ಜೀವನ ಎರಡನ್ನೂ ಅಚ್ಚುಕಟ್ಟಾಗಿ ನಿರ್ವಹಿಸುತ್ತಿರುವ ರೇಚೆಲ್ ಕೌರ್ ಅವರನ್ನು ನೆಟ್ಟಿಗರು 'Super-commuter' ಎಂದೇ ಕರೆಯುತ್ತಿದ್ದಾರೆ.
ರೇಚೆಲ್ ಕುಟುಂಬವು ಮಲೇಷ್ಯಾದ ಪೆನಾಂಗ್‌ನಲ್ಲಿ ವಾಸಿಸುತ್ತಿದ್ದು, ಇಬ್ಬರು ಮಕ್ಕಳಿದ್ದಾರೆ. ವಿದ್ಯಾಭ್ಯಾಸದ ಬಳಿಕ ರೇಚೆಲ್ ಏರ್ ಏಷ್ಯಾ ಏರ್ಲೈನ್ಸ್ನಲ್ಲಿ ವೃತ್ತಿ ಆರಂಭಿಸಿದ್ದಾರೆ. ಆದರೆ, ತಾವಿದ್ದ ಪೆನಾಂಗ್ನಿಂದ 354 ಕಿಲೋ ಮೀಟರ್ ದೂರದಲ್ಲಿರುವ ಕೌಲಾಲಂಪುರದ ಕಚೇರಿಗೆ ತೆರಳಿ ಕೆಲಸ ಮಾಡುವುದು ಕಷ್ಟಕರವಾಗಿತ್ತು. ಅದು ಮಕ್ಕಳನ್ನು ಬಿಟ್ಟು ನಿತ್ಯ ಕಚೇರಿಗೆ ಹೋಗಿ ಬರುವುದು ಅಸಾಧ್ಯದ ಮಾತು. ಸಿಕ್ಕ ಕೆಲಸ ಬಿಡುವುದಕ್ಕೂ ಮನಸ್ಸಿಲ್ಲದ್ದರಿಂದ ಆಗ ರೇಚೆಲ್ ಕೌರ್ ಆಯ್ಕೆ ಮಾಡಿಕೊಂಡಿದ್ದೇ ಈ ವಿಮಾನ ಪ್ರಯಾಣ!
ಪ್ರತಿ ದಿನ 354 ಕಿಲೋಮೀಟರ್ ದೂರ ಪ್ರಯಾಣ ಕಷ್ಟ ಎನ್ನಿಸಿ ಆರಂಭದಲ್ಲಿ ನಾನು ಕೌಲಾಲಂಪುರದ ಕಚೇರಿಯ ಬಳಿ ಒಂದೇ ಕೋಣೆಯನ್ನು ಬಾಡಿಗೆಗೆ ಪಡೆದಿದ್ದೆ. ವಾರಕ್ಕೆ ಒಂದು ಸಾರಿ ಪೆನಾಂಗ್‌ಗೆ ಬಂದು ಮಕ್ಕಳನ್ನು ನೋಡಿಕೊಂಡು ಹೋಗುತ್ತಿದ್ದೆ. ಆದರೆ, ಮಕ್ಕಳ ಪರೀಕ್ಷೆಗಳು ಬರುತ್ತಿದ್ದಂತೆ ಪ್ರತಿದಿನ ಅವರೊಂದಿಗೆ ಸ್ವಲ್ಪ ಸಮಯ ಕಳೆಯುವುದು ಬಹಳ ಮುಖ್ಯ ಅನ್ನಿಸಿತು. ವಾರಕ್ಕೊಮ್ಮೆ ಹೋಗಿ - ಬರುವುದನ್ನು ಬಿಟ್ಟು ಸಂದರ್ಭಕ್ಕೆ ತಕ್ಕಂತೆ ಯೋಜನೆ ರೂಪಿಸಿದೆ. ಪ್ರತಿದಿನದವೂ ವಿಮಾನದಲ್ಲಿ ತೆರಳಿ ತನ್ನ ದೈನಂದಿನ ಕಾರ್ಯ ಚಟುವಟಿಕೆ ಮಾಡಲು ಶುರು ಮಾಡಿದೆ. ಇದರಿಂದ ಮಕ್ಕಳಿಗೆ ಸಮಯ ಕೊಟ್ಟಂತಾಗಿದೆ. ಪ್ರತಿದಿನ ವಿಮಾನ ಪ್ರಯಾಣ ಮಾಡುವ ಮೂಲಕ ಹೆಚ್ಚು ಉಳಿತಾಯ ಕೂಡ ಮಾಡುತ್ತಿದ್ದೇನೆ. ಬಾಡಿಗೆಗೆ ನೀಡುತ್ತಿದ್ದ ಹಣ ಕೂಡ ಉಳಿತಾಯ ಆಗುತ್ತಿದೆ. ವಿಮಾನ ಟಿಕೆಟ್, ಕೊಠಡಿ ಬಾಡಿಗೆ ಮತ್ತು ಊಟೋಪಚಾರಕ್ಕಾಗಿ ತಿಂಗಳಿಗೆ ಸುಮಾರು 41,000 ರೂಪಾಯಿಗಳನ್ನು ಖರ್ಚು ಮಾಡುತ್ತಿದ್ದೆ. ಆದರೆ, ಈಗ ಕೇವಲ 27,000 ರೂಪಾಯಿಗಳನ್ನು ಮಾತ್ರ ಖರ್ಚು ಮಾಡುತ್ತಿದ್ದೇನೆ ಎಂದು ರೇಚೆಲ್ ತಮ್ಮ ಈ ಪ್ರಯಾಣದ ಅನುಭವ ಹಂಚಿಕೊಂಡಿದ್ದಾರೆ.
700 ಕಿಮೀ ಸಂಚರಿಸುವ ರೇಚೆಲ್ ದಿನಚರಿ ಹೀಗಿದೆ: ರೇಚೆಲ್ ಪ್ರತಿದಿನ ನಸುಕಿನ 4 ಗಂಟೆಗೆ ಏಳುತ್ತಾರೆ. ಮಕ್ಕಳಿಗೆ ಉಪಹಾರ ಸಿದ್ಧ ಮಾಡಿ, ಶಾಲೆಗೆ ಟಿಫಿನ್ ಬಾಕ್ಸ್ ರೆಡಿ ಮಾಡುವುದು ಸೇರಿ ಮುಂತಾದ ಎಲ್ಲಾ ಕೆಲಸಗಳನ್ನು ಒಂದು ಗಂಟೆಯೊಳಗೆ ಮುಗಿಸಿ, 5 ಗಂಟೆಗೆ ಮನೆಯಿಂದ ಹೊರಡುತ್ತಾರೆ. ಪೆನಾಂಗ್ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಬಂದು ಬೆಳಗ್ಗೆ 6:30ಕ್ಕೆ ಕೌಲಾಲಂಪುರ ವಿಮಾನ ಏರುತ್ತಾರೆ. ಅಲ್ಲಿಂದ ಕೌಲಾಲಂಪುರ ಏರ್ಪೋರ್ಟ್ನಲ್ಲಿ ಇಳಿದುಕೊಂಡು 10 ನಿಮಿಷದ ಕಾಲ್ನಡಿಗೆ ಮೂಲಕ ತೆರಳಿ 7.45ರಷ್ಟೊತ್ತಿಗೆ ಕಚೇರಿ ತಲುಪುತ್ತಾರೆ. ಕಚೇರಿ ಕೆಲಸ ಮುಗಿಸಿ ಸಂಜೆಯ ವೇಳೆ 90 ನಿಮಿಷಗಳ ಕಾಲ ವಿಮಾನ ಪ್ರಯಾಣ ಮಾಡುವ ಮೂಲಕ ರಾತ್ರಿ 8 ಗಂಟೆಗೆ ಮನೆ ಸೇರುತ್ತಾರೆ. ಇದು ರೇಚೆಲ್ ಅವರ ವಾರದ ಐದು ದಿನಗಳ ದಿನಚರಿ. ಉಳಿದ ಎರಡು ದಿನ ಕುಟುಂಬದೊಂದಿಗೆ ಕಾಲ ಕಳೆಯುತ್ತಾರೆ.
ವಿಮಾನಯಾನ ಸಂಸ್ಥೆಯಲ್ಲಿ ಸದ್ಯ ಹಣಕಾಸು ವಿಭಾಗದಲ್ಲಿ ಸಹಾಯಕ ವ್ಯವಸ್ಥಾಪಕಿಯಾಗಿ ಕೆಲಸ ಮಾಡುತ್ತಿರುವ ರೇಚೆಲ್, ಮನೆಯಿಂದಲೇ ಕೆಲಸ ಮಾಡುವ ಅವಕಾಶ ಮಾಡಿಕೊಟ್ಟರೂ ಕಚೇರಿಗೆ ತೆರಳುತ್ತಿದ್ದಾರೆ.
"ತನಗೆ ಕಚೇರಿ ವಾತಾವರಣ, ತನ್ನ ಸಹೋದ್ಯೋಗಿಗಳೊಂದಿಗೆ ಮಾತನಾಡುವುದು, ಅವರ ಪ್ರಶ್ನೆಗಳಿಗೆ ಉತ್ತರಿಸುವುದು ಮತ್ತು ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸುವುದು ಇಷ್ಟ. ಅಲ್ಲದೇ 700 ಕಿಲೋಮೀಟರ್ ಪ್ರಯಾಣಿಸಿ ಮನೆಗೆ ತಲುಪಿ ತನ್ನ ಮಕ್ಕಳನ್ನು ನೋಡಿದ ನಂತರ, ತನ್ನ ಎಲ್ಲಾ ಆಯಾಸ ಮಾಯವಾಗುತ್ತದೆ" ಅಂತಾರೆ ರೇಚೆಲ್.
ಇದನ್ನೂ ಓದಿ: ಬೆಂಗಳೂರಲ್ಲಿ ಏರ್ ಟ್ಯಾಕ್ಸಿ! ಅಗ್ಗದ ಬೆಲೆಯಲ್ಲಿ ಏರ್ ಟ್ರಾವೆಲ್: ಈ ಎಲೆಕ್ಟ್ರಿಕ್ ಹೆಲಿಕಾಪ್ಟರ್ ವಿಶೇಷತೆಗಳೇನು?
ಇದನ್ನೂ ಓದಿ: 350 ಕಿ.ಮೀ ದೂರದಲ್ಲಿದ್ದರೂ ಶತ್ರುದೇಶದ ವಿಮಾನ ಪತ್ತೆ ಹಚ್ಚಲಿದೆ ವಿಹೆಚ್ಎಫ್ ಸೂರ್ಯ ರಾಡಾರ್