ಕರ್ನಾಟಕ

karnataka

ETV Bharat / international

ಇರಾನ್ ಅಧ್ಯಕ್ಷ ರೈಸಿ ಹೆಲಿಕಾಪ್ಟರ್​ ಅಪಘಾತಕ್ಕೆ ಕಾರಣಗಳೇನು? ಮೊದಲ ತನಿಖಾ ವರದಿ ಬಿಡುಗಡೆ - Raisi Helicopter Crash

ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತದ ಕಾರಣಗಳ ಬಗ್ಗೆ ಇರಾನ್​ ಮೊದಲ ತನಿಖಾ ವರದಿಯನ್ನು ಬಿಡುಗಡೆ ಮಾಡಿದೆ.

ಅಧ್ಯಕ್ಷ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾದ ಸ್ಥಳ
ಇರಾನ್ ಅಧ್ಯಕ್ಷ ರೈಸಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಅಪಘಾತಕ್ಕೀಡಾದ ಸ್ಥಳ (IANS)

By ETV Bharat Karnataka Team

Published : May 24, 2024, 12:20 PM IST

ಟೆಹ್ರಾನ್: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಮತ್ತು ಅವರ ಸಹೋದ್ಯೋಗಿಗಳ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ಅಪಘಾತದ ಕಾರಣಗಳ ಬಗೆಗಿನ ಮೊದಲ ವರದಿಯನ್ನು ಇರಾನ್​ನ ಸಶಸ್ತ್ರ ಪಡೆಗಳ ಜನರಲ್ ಸ್ಟಾಫ್ ಬಿಡುಗಡೆ ಮಾಡಿದ್ದಾರೆ.

ಅಪಘಾತದ ಕಾರಣಗಳ ಪರಿಶೀಲನೆಗಾಗಿ ನಿಪುಣರು ಮತ್ತು ತಂತ್ರಜ್ಞರನ್ನು ಒಳಗೊಂಡ ಹಿರಿಯ ತನಿಖಾ ಸಮಿತಿಯನ್ನು ನೇಮಿಸಲಾಗಿತ್ತು. ಸಮಿತಿಯು ಸೋಮವಾರ ಬೆಳಗ್ಗೆ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ ಎಂದು ಇರಾನ್​ನ ಸಶಸ್ತ್ರ ಪಡೆಗಳ ಮುಖ್ಯಸ್ಥರು ಹೇಳಿದ್ದಾರೆ ಎಂದು ತಸ್ನಿಮ್ ಸುದ್ದಿ ಸಂಸ್ಥೆ ಶುಕ್ರವಾರ ತಿಳಿಸಿದೆ.

ವರದಿಯ ಪ್ರಕಾರ- ಹೆಲಿಕಾಪ್ಟರ್ ದಾರಿಯುದ್ದಕ್ಕೂ ತನ್ನ ಪೂರ್ವನಿರ್ಧರಿತ ಮಾರ್ಗದಲ್ಲಿಯೇ ಸಾಗಿತ್ತು ಮತ್ತು ನಿಗದಿತ ಹಾರಾಟದ ಮಾರ್ಗದಿಂದ ವಿಮುಖವಾಗಿರಲಿಲ್ಲ. ಅಪಘಾತ ಸಂಭವಿಸುವ ಸುಮಾರು ಒಂದೂವರೆ ನಿಮಿಷ ಮೊದಲು, ಅಪಘಾತಕ್ಕೀಡಾದ ಹೆಲಿಕಾಪ್ಟರ್​ನ ಪೈಲಟ್, ಅಧ್ಯಕ್ಷರ ಬೆಂಗಾವಲು ಪಡೆಯ ಇತರ ಎರಡು ಹೆಲಿಕಾಪ್ಟರ್​ಗಳನ್ನು ಸಂಪರ್ಕಿಸಿದ್ದರು ಎಂದು ವರದಿ ತಿಳಿಸಿದೆ.

ಅಪಘಾತಕ್ಕೀಡಾದ ಹೆಲಿಕಾಪ್ಟರ್​ನ ಅವಶೇಷಗಳಲ್ಲಿ ಗುಂಡು ಅಥವಾ ಆ ರೀತಿಯ ವಸ್ತುಗಳ ಯಾವುದೇ ಕುರುಹು ಪತ್ತೆಯಾಗಿಲ್ಲ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಪರ್ವತಕ್ಕೆ ಅಪ್ಪಳಿಸಿದ ನಂತರ ಹೆಲಿಕಾಪ್ಟರ್​ಗೆ ಬೆಂಕಿ ಹೊತ್ತಿಕೊಂಡಿತು ಎಂದು ವರದಿ ಹೇಳಿದೆ.

"ದಟ್ಟವಾದ ಮಂಜು ಮತ್ತು ಅತ್ಯಂತ ಕಡಿಮೆ ತಾಪಮಾನಗಳ ಕಾರಣದಿಂದ ಅಪಘಾತ ಸಂಭವಿಸಿದ ದುರ್ಗಮ ಪ್ರದೇಶದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಯಾಯಿತು. ಹೀಗಾಗಿ ಇಡೀ ರಾತ್ರಿ ಶೋಧ ಕಾರ್ಯಾಚರಣೆ ನಡೆಸಬೇಕಾಯಿತು. ಕೊನೆಗೆ ಸ್ಥಳೀಯ ಸಮಯ ಸೋಮವಾರ ಬೆಳಗ್ಗೆ 5 ಗಂಟೆಗೆ ಡ್ರೋನ್​ಗಳ ಸಹಾಯದಿಂದ ಘಟನೆಯ ನಿಖರವಾದ ಸ್ಥಳವನ್ನು ಗುರುತಿಸಲು ಸಾಧ್ಯವಾಯಿತು" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಾಚ್ ಟವರ್ ಮತ್ತು ಹೆಲಿಕಾಪ್ಟರ್​ನ ಸಿಬ್ಬಂದಿಯ ಮಧ್ಯೆ ನಡೆದ ಸಂಭಾಷಣೆಯಲ್ಲಿ ಯಾವುದೇ ಅನುಮಾನಾಸ್ಪದ ಅಂಶ ಕಂಡುಬಂದಿಲ್ಲ. ಮತ್ತಷ್ಟು ತನಿಖೆಯ ನಂತರ ಹೆಚ್ಚಿನ ವಿವರಗಳನ್ನು ನೀಡಲಾಗುವುದು ಎಂದು ಅದು ಹೇಳಿದೆ.

ರೈಸಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಪೂರ್ವ ಅಜರ್ ಬೈಜಾನ್ ಪ್ರಾಂತ್ಯಕ್ಕೆ ತೆರಳುತ್ತಿದ್ದಾಗ ಅವರನ್ನು ಕರೆದೊಯ್ಯುತ್ತಿದ್ದ ಹೆಲಿಕಾಪ್ಟರ್ ಭಾನುವಾರ ಪರ್ವತ ಪ್ರದೇಶದಲ್ಲಿ ಅಪಘಾತಕ್ಕೀಡಾಗಿತ್ತು. ಹೆಲಿಕಾಪ್ಟರ್​ನಲ್ಲಿ ವಿದೇಶಾಂಗ ಸಚಿವ ಹುಸೇನ್ ಅಮೀರ್-ಅಬ್ದೊಲ್ಲಾಹಿಯಾನ್ ಮತ್ತು ಪೂರ್ವ ಅಜರ್ ಬೈಜಾನ್​ಗೆ ಇರಾನ್​ನ ಸರ್ವೋಚ್ಚ ನಾಯಕರ ಪ್ರತಿನಿಧಿ ಮೊಹಮ್ಮದ್ ಅಲಿ ಅಲೆ-ಹಾಶೆಮ್ ಕೂಡ ಇದ್ದರು. ಈಶಾನ್ಯ ಇರಾನ್​ನಲ್ಲಿರುವ ಮಶಾದ್​ನಲ್ಲಿರುವ ಇಮಾಮ್ ರೆಜಾ ಅವರ ಪವಿತ್ರ ದೇವಾಲಯದಲ್ಲಿ ಗುರುವಾರ ರೈಸಿ ಅವರ ಅಂತ್ಯಕ್ರಿಯೆ ನಡೆಸಲಾಯಿತು. ಮಶಾದ್ ಇದು ರೈಸಿ ಅವರ ಹುಟ್ಟೂರಾಗಿದೆ.

ಇದನ್ನೂ ಓದಿ: ಇರಾನ್​ ಅಧ್ಯಕ್ಷ ಇಬ್ರಾಹಿಂ ರೈಸಿ ಅಂತ್ಯಕ್ರಿಯೆ: ಉಪ ರಾಷ್ಟ್ರಪತಿ ಜಗದೀಪ್ ಧನಕರ್​​​​​​ರಿಂದ​ ಅಂತಿಮ ನಮನ - IRAN PRESIDENT FUNERAL

ABOUT THE AUTHOR

...view details