ನವದೆಹಲಿ:ಜಿ-7 ಶೃಂಗಸಭೆಗಾಗಿ ಪ್ರಧಾನಿ ಮೋದಿ ಇಟಲಿ ಪ್ರವಾಸದಲ್ಲಿದ್ದಾರೆ. ಇಂದು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಭೇಟಿ ಮಾಡಿ, ಮಾತುಕತೆ ನಡೆಸಿದರು.
ಇಟಾಲಿ ಅಧ್ಯಕ್ಷೆ ಜಾರ್ಜಿಯಾ ಮೆಲೋನಿ ಆಹ್ವಾನದ ಮೇರೆಗೆ ಪ್ರಧಾನಿ ಮೋದಿ 50ನೇ ಜಿ-7 ಶೃಂಗಸಭೆಯಲ್ಲಿ ಭಾಗವಹಿಸಲು ತೆರಳಿದ್ದಾರೆ. ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರನ್ನು ಮೋದಿ ಭೇಟಿ ಮಾಡಿದರು. ಸತತ ಮೂರನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆಯಾದ ಮೋದಿ ಅವರಿಗೆ ರಿಷಿ ಸುನಕ್ ಅಭಿನಂದಿಸಿದರು. ಇದೇ ವೇಳೆ, ಯುಕೆಯಲ್ಲಿ ಮುಂದಿನ ತಿಂಗಳು ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿನ ಜನರಿಗೆ ಮೋದಿ ತಮ್ಮ ಶುಭಾಶಯ ತಿಳಿಸಿದರು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.
ಭಾರತ-ಬ್ರಿಟನ್ ದ್ವಿಪಕ್ಷೀಯ ಸಂಬಂಧಗಳು, ರಕ್ಷಣೆ ಮತ್ತು ಭದ್ರತೆ, ವ್ಯಾಪಾರ ಮತ್ತು ಆರ್ಥಿಕ ಸಹಯೋಗ, ನಿರ್ಣಾಯಕ ಮತ್ತು ಉನ್ನತ ತಂತ್ರಜ್ಞಾನದ ಕಾರ್ಯತಂತ್ರ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮತ್ತು ಮುಕ್ತ ವ್ಯಾಪಾರ ಒಪ್ಪಂದದ ಪ್ರಗತಿಯನ್ನು ಪರಿಶೀಲಿಸಿದ ಉಭಯ ನಾಯಕರು, ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು ಎಂದು ಸಚಿವಾಲಯ ತನ್ನ ಹೇಳಿಕೆ ಬಿಡುಗಡೆ ಮಾಡಿದೆ.
''ಇಟಲಿಯಲ್ಲಿ ಪ್ರಧಾನಿ ರಿಷಿ ಸುನಕ್ ಅವರನ್ನು ಭೇಟಿ ಮಾಡಿದ್ದು ಸಂತೋಷವಾಯಿತು. ಎನ್‌ಡಿಎ ಸರ್ಕಾರದ ಮೂರನೇ ಅವಧಿಯಲ್ಲಿ ಭಾರತ-ಯುಕೆ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆ ಇನ್ನಷ್ಟು ಬಲಪಡಿಸುವ ನನ್ನ ಬದ್ಧತೆಯನ್ನು ನಾನು ಪುನರುಚ್ಚರಿಸಿದೆ. ಸೆಮಿಕಂಡಕ್ಟರ್‌ಗಳು, ತಂತ್ರಜ್ಞಾನ ಮತ್ತು ವ್ಯಾಪಾರದಂತಹ ವಲಯಗಳಲ್ಲಿ ಬಾಂಧವ್ಯವನ್ನು ಗಾಢವಾಗಿಸಲು ಉತ್ತಮ ಅವಕಾಶವಿದೆ. ರಕ್ಷಣಾ ವಲಯದಲ್ಲಿ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವ ಬಗ್ಗೆಯೂ ಮಾತುಕತೆ ನಡೆಸಿದ್ದೇವೆ'' ಎಂದು ಮೋದಿ ಸಾಮಾಜಿಕ ಜಾಲತಾಣ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಝೆಲೆನ್ಸ್ಕಿ-ಮೋದಿ ಭೇಟಿ:ಮತ್ತೊಂದೆಡೆ, ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನೂ ಪ್ರಧಾನಿ ಭೇಟಿ ಮಾಡಿ, ಮಾತುಕತೆ ನಡೆಸಿದರು. ಭಾರತವು ಮಾನವ ಕೇಂದ್ರಿತ ವಿಧಾನವನ್ನು ನಂಬುತ್ತದೆ ಎಂದು ಝೆಲೆನ್ಸ್ಕಿ ಅವರಿಗೆ ಪ್ರಧಾನಿ ತಿಳಿಸಿದರು. ಇದೇ ವೇಳೆ, ಉಕ್ರೇನ್‌ನಲ್ಲಿನ ಪರಿಸ್ಥಿತಿ ಮತ್ತು ಸ್ವಿಟ್ಜರ್ಲೆಂಡ್‌ನಲ್ಲಿ ನಡೆಯಲಿರುವ ಶಾಂತಿ ಕುರಿತ ಶೃಂಗಸಭೆಯ ಕುರಿತು ಉಭಯ ನಾಯಕರು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು.
''ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಅತ್ಯಂತ ಉತ್ಪಾದಕ ಸಭೆಯನ್ನು ನಡೆಸಿದೆ. ಉಕ್ರೇನ್ ಜೊತೆಗಿನ ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸಲು ಭಾರತ ಉತ್ಸುಕವಾಗಿದೆ. ಸದ್ಯ ನಡೆಯುತ್ತಿರುವ ಬಿಕ್ಕಟ್ಟಿನ ಕುರಿತಂತೆ ಭಾರತವು ಮಾನವ ಕೇಂದ್ರಿತ ವಿಧಾನ ಮತ್ತು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಶಾಂತಿಯ ಮಾರ್ಗವಾಗಿದೆ ಎಂದು ನಂಬುತ್ತದೆ'' ಎಂದು ಪ್ರಧಾನಿ ಮೋದಿ 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ. ಜೊತೆಗೆ ಫ್ರಾನ್ಸ್ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಅವರನ್ನು ಪ್ರಧಾನಿ ಮೋದಿ ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ಇದನ್ನೂ ಓದಿ:ಜಿ7 ಶೃಂಗಸಭೆ: ಇಟಲಿಗೆ ಹೊರಟ ಪ್ರಧಾನಿ ನರೇಂದ್ರ ಮೋದಿ