ಮಾಸ್ಕೋ, ರಷ್ಯಾ: ಮೂವರು ಸಿಬ್ಬಂದಿಗಳೊಂದಿಗೆ ಸುಖೋಯ್ ಸೂಪರ್‌ಜೆಟ್ ಪ್ರಯಾಣಿಕ ವಿಮಾನವು ಪರೀಕ್ಷಾರ್ಥ ಹಾರಾಟದಲ್ಲಿ ನಿರತವಾಗಿದ್ದಾಗ ಶುಕ್ರವಾರ ಮಾಸ್ಕೋದಲ್ಲಿ ಪತನಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಮಾನವು ಮಾಸ್ಕೋದ ಆಗ್ನೇಯದಲ್ಲಿರುವ ಕೊಲೊಮ್ನಾ ಜಿಲ್ಲೆಯಲ್ಲಿ ಅಪಘಾತಕ್ಕೀಡಾಗಿದೆ ಎಂದು ತಿಳಿದು ಬಂದಿದೆ. ಮಾಹಿತಿ ತಿಳಿಯುತ್ತಿದ್ದಂತೆ ರಕ್ಷಣಾ ಕಾರ್ಯಾಚರಣೆಗೆ ರಕ್ಷಣಾ ಪಡೆಗಳನ್ನು ಅಪಘಾತದ ಸ್ಥಳಕ್ಕೆ ರವಾನಿಸಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ ಎಂದು ಆರ್‌ಟಿ ವರದಿ ಮಾಡಿದೆ.
ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್:ಅಪಘಾತದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಪಘಾತಕ್ಕೀಡಾದ ವಿಮಾನದಿಂದ ಹೊಗೆ ಬರುತ್ತಿರುವುದನ್ನು ಈ ವಿಡಿಯೋದಲ್ಲಿ ಕಾಣಬಹುದಾಗಿದೆ. ಆಂಬ್ಯುಲೆನ್ಸ್ ಮತ್ತು ಅಗ್ನಿಶಾಮಕ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸುತ್ತಿದ್ದಾರೆ ಎಂಬ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋಗಳಿಂದ ತಿಳಿದು ಬರುತ್ತಿದೆ.
ವಿಮಾನದಲ್ಲಿದ್ದ ಮೂವರು ಸಿಬ್ಬಂದಿ ಸಾವು:ಅರಣ್ಯ ಪ್ರದೇಶದಲ್ಲಿ ವಿಮಾನ ಬಿದ್ದಿದೆ ಎಂದು ರಷ್ಯಾದ ತುರ್ತು ಸಚಿವಾಲಯ ತಿಳಿಸಿದೆ. "ವಿಮಾನದಲ್ಲಿ ಮೂವರು ಸಿಬ್ಬಂದಿ ಇದ್ದರು. ಪ್ರಾಥಮಿಕ ಮಾಹಿತಿಯ ಪ್ರಕಾರ, ಅವರೆಲ್ಲರೂ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಹೊರ ಬಿದ್ದಿದೆ. ರಷ್ಯಾದ ಅನಿಲ ದೈತ್ಯ ಗಾಜ್‌ಪ್ರೊಮ್‌ಗೆ ಸೇರಿದ ವಿಮಾನವು ದುರಸ್ತಿಯಲ್ಲಿದೆ ಮತ್ತು ಪರೀಕ್ಷಾರ್ಥ ಹಾರಾಟದ ಭಾಗವಾಗಿ ಟೇಕ್ ಆಫ್ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.