ಟೆಲ್ ಅವೀವ್(ಇಸ್ರೇಲ್):ಹಮಾಸ್ ಉಗ್ರರು ಅಡಗಿರುವ ಗಾಜಾಪಟ್ಟಿಯನ್ನು ಬಾಂಬ್ಗಳ ಸುರಿಮಳೆಯಿಂದ ಧ್ವಂಸಗೊಳಿಸುತ್ತಿರುವ ಇಸ್ರೇಲ್, ಮತ್ತೊಂದು ದೊಡ್ಡ ಯಶಸ್ಸು ಸಾಧಿಸಿದೆ. 2023ರ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ಭೀಕರ ದಾಳಿಯ ಹಿಂದಿನ ಮಾಸ್ಟರ್ಮೈಂಡ್ಗಳಲ್ಲಿ ಒಬ್ಬರಾದ ಯಾಹ್ಯಾ ಸಿನ್ವಾರ್‌ನನ್ನು ಹತ್ಯೆ ಮಾಡಿರುವುದಾಗಿ ಇಂದು ಪ್ರಧಾನಿ ಬೆಂಜಮಿನ್ ನೆತನ್ಯಾಹು ದೃಢಪಡಿಸಿದ್ದಾರೆ.
ಲೆಬನಾನ್ನ ಹಿಜ್ಬುಲ್ಲಾ ಬಂಡುಕೋರರ ಒಬ್ಬೊಬ್ಬ ನಾಯಕನನ್ನೂ ಹತ್ಯೆ ಮಾಡುತ್ತಿರುವ ನಡುವೆಯೇ ಹಮಾಸ್ ನಾಯಕರನ್ನೂ ಇಸ್ರೇಲ್ ಸದೆಬಡಿಯುತ್ತಿದೆ. ಹಮಾಸ್ ನಾಯಕ ಯಾಹ್ಯಾ ಸಿನ್ವಾರ್ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಉಗ್ರರ ಕೈಯಲ್ಲಿ ಒತ್ತೆಯಾಳಾಗಿರುವ ಕುಟುಂಬಗಳಿಗೆ ಮಾಹಿತಿ ನೀಡಿ ಎಂದು ಪ್ರಧಾನಿ ಸೂಚನೆ ನೀಡಿದ್ದಾರೆ.
ಇಸ್ರೇಲ್ ಪಡೆಯಿಂದಲೂ ಹೇಳಿಕೆ:ಇಸ್ರೇಲ್ ರಕ್ಷಣಾ ಪಡೆಗಳು (IDF) ಗಾಜಾದ ಮೇಲೆ ಬಾಂಬ್, ಕ್ಷಿಪಣಿ ದಾಳಿ ನಡೆಸಿದ್ದು ಮೂವರು ಹಮಾಸ್ ಉಗ್ರರನ್ನು ಹೊಡೆದುರುಳಿಸಲಾಗಿದೆ. ಅವರಲ್ಲಿ ಯಾಹ್ಯಾ ಸಿನ್ವಾರ್ ಕೂಡ ಸತ್ತಿದ್ದಾನೆ ಎಂದು ಹೇಳಿದೆ. ಈ ಬಗ್ಗೆ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಐಡಿಎಫ್, "ಗಾಜಾದಲ್ಲಿ ಸೇನಾ ಪಡೆಗಳ ಕಾರ್ಯಾಚರಣೆಯಲ್ಲಿ ಯಾಹ್ಯಾ ಸಿನ್ವಾರ್ ಸೇರಿ ಮೂವರು ಉಗ್ರರನ್ನು ಹತ್ಯೆ ಮಾಡಲಾಗಿದೆ" ಎಂದಿದೆ.
ಇತ್ತೀಚೆಗೆ ಲೆಬನಾನ್ ಮೇಲೆ ವೈಮಾನಿಕ ದಾಳಿ ನಡೆಸಿದ್ದ ಇಸ್ರೇಲ್, ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾನನ್ನು ಹತ್ಯೆ ಮಾಡಿತ್ತು. ಇದರ ಬೆನ್ನಲ್ಲೇ, ತನ್ನ ಟಾರ್ಗೆಟ್ ಆಗಿ ಸಿನ್ವಾರ್‌ನನ್ನು ಕೊಂದಿರುವುದು ಭಾರಿ ಮಹತ್ವ ಪಡೆದುಕೊಂಡಿದೆ.