ಇಸ್ಲಾಮಾಬಾದ್: ಪಾಕಿಸ್ತಾನದ 24ನೇ ಪ್ರಧಾನಿಯಾಗಿ ಪಿಎಂಎಲ್ (ಎನ್) ಪಕ್ಷದ ಅಧ್ಯಕ್ಷ ಶೆಹಬಾಜ್ ಷರೀಫ್ ಭಾನುವಾರ ಆಯ್ಕೆಯಾಗಿದ್ದಾರೆ. ಪ್ರಧಾನಿ ಆಯ್ಕೆಯ ಚುನಾವಣೆಯಲ್ಲಿ ಶೆಹಬಾಜ್ ಷರೀಫ್ 201 ಮತಗಳನ್ನು ಪಡೆದಿದ್ದಾರೆ ಎಂದು ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಸರ್ದಾರ್ ಅಯಾಜ್ ಸಾದಿಕ್ ಘೋಷಿಸಿದ್ದಾರೆ. ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷದ ಅಭ್ಯರ್ಥಿ ಒಮರ್ ಅಯೂಬ್ ಖಾನ್ 92 ಮತಗಳನ್ನು ಪಡೆದರು.
72 ವರ್ಷದ ಶೆಹಬಾಜ್ ಷರೀಫ್ ಎರಡನೇ ಅವಧಿಗೆ ದೇಶದ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ. ಇಮ್ರಾನ್ ಖಾನ್ ಸರ್ಕಾರ ಅವಿಶ್ವಾಸ ನಿರ್ಣಯದಲ್ಲಿ ಸೋತ ನಂತರ ಶೆಹಬಾಜ್ ಏಪ್ರಿಲ್ 11, 2022 ರಿಂದ ಆಗಸ್ಟ್ 14, 2023 ರವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಶೆಹಬಾಜ್ ಷರೀಫ್ ಅವರು ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಕಿರಿಯ ಸಹೋದರರಾಗಿದ್ದು, ಪಿಎಂಎಲ್-ಎನ್ ಚುನಾವಣಾ ಪ್ರಚಾರದ ನೇತೃತ್ವ ವಹಿಸಿದ್ದರು.
ಪಿಟಿಐ ಬೆಂಬಲಿತ ಶಾಸಕರ ಗದ್ದಲ ಮತ್ತು ಘೋಷಣೆಗಳ ನಡುವೆ ದೇಶದ ನೂತನ ಪ್ರಧಾನಿ ಆಯ್ಕೆಗಾಗಿ ಹೊಸ ಸಂಸತ್ತಿನ ಅಧಿವೇಶನ ನಡೆಯಿತು. "ಅಭಿವೃದ್ಧಿಯ ಹಿಂದಿನ ಒಳ್ಳೆಯ ದಿನಗಳು ಮರಳಿ ಬಂದಿವೆ. ದೇಶ ಮುಂದೆ ಸಾಗಲಿದೆ. ನವಾಜ್ ಕಾ ವಿಷನ್, ಶೆಹಬಾಜ್ ಕಾ ಮಿಷನ್" ಎಂದು ಪಿಎಂಎಲ್-ಎನ್ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ.