ಇಸ್ಲಾಮಾಬಾದ್: ಪಾಕಿಸ್ತಾನ ತೆಹ್ರೀಕ್-ಇ-ಇನ್ಸಾಫ್ (ಪಿಟಿಐ) ಮುಖಂಡ ಶಹಬಾಜ್ ಗಿಲ್ ಮತ್ತು ಯೂಟ್ಯೂಬರ್ ಮೊಯೀದ್ ಪಿರ್ಜಾದಾ ವಿರುದ್ಧ ಇಸ್ಲಾಮಾಬಾದ್ನ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿಯ (ಎಫ್ ಐಎ) ಸೈಬರ್ ಅಪರಾಧ ವಿಭಾಗವು ಪ್ರತ್ಯೇಕ ಪ್ರಕರಣಗಳಡಿ ದೂರು ದಾಖಲಿಸಿಕೊಂಡಿದೆ. ದೇಶ ವಿರೋಧಿ ಚಟುವಟಿಕೆಗಳನ್ನು ಉತ್ತೇಜಿಸಿದ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ದೇಶ ಮತ್ತು ಅದರ ಸಂಸ್ಥೆಗಳ ವಿರುದ್ಧ ಪ್ರಚಾರ ಮಾಡಿದ ಆರೋಪದ ಮೇಲೆ ದೂರುಗಳು ದಾಖಲಾಗಿವೆ ಎಂದು ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ವಿದೇಶದಲ್ಲಿ ನೆಲೆಸಿರುವ ಈ ಇಬ್ಬರೂ ಆರೋಪಿಗಳು ದೇಶ ವಿರೋಧಿ ಚಟುವಟಿಕೆಗಳು ಮತ್ತು ಪ್ರಚಾರದಲ್ಲಿ ಭಾಗಿಯಾಗಿರುವುದು ಕಂಡು ಬಂದಿದೆ ಎಂದು ಹೇಳಿರುವ ಎಫ್ಐಎ, ಇವರೊಂದಿಗೆ ಮತ್ತೆ ಯಾರಾದರೂ ಸಹಚರರು ಇದ್ದಾರಾ ಎಂಬುದು ತನಿಖೆಯ ನಂತರ ಗೊತ್ತಾಗಬೇಕಿದೆ ಎಂದು ಹೇಳಿದೆ. ಇವರಿಬ್ಬರ ಸಾಮಾಜಿಕ ಮಾಧ್ಯಮ ಚಟುವಟಿಕೆಗಳ ಬಗ್ಗೆ ಎಫ್ಐಎ ತನಿಖೆ ನಡೆಸುತ್ತಿದೆ.
ಆರೋಪಗಳನ್ನು ದೃಢಪಡಿಸಿದ ನಂತರ, ಸಬ್ ಇನ್ ಸ್ಪೆಕ್ಟರ್ ಮುನೀಬ್ ಜಾಫರ್ ಅವರ ದೂರಿನ ಮೇರೆಗೆ ಪಿಇಸಿಎ -2016 ಸೈಬರ್ ಅಪರಾಧ ಕಾಯ್ದೆಯ ಸೆಕ್ಷನ್ 9, 10 ಮತ್ತು 11ರ ಅಡಿ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಟಿಕ್ ಟಾಕ್ ಖಾತೆಗಳ ಮೂಲಕ ಸರ್ಕಾರದ ವಿರುದ್ಧ ಪ್ರಚಾರ ಮಾಡಲಾಗುತ್ತಿದೆ ಎಂಬುದು ಇತರ ಅನೇಕ ಆರೋಪಗಳ ಪೈಕಿ ಒಂದು ಆರೋಪವಾಗಿದೆ.
ಶಹಬಾಜ್ ಗಿಲ್ ಮತ್ತು ಮೊಯೀದ್ ಪಿರ್ಜಾದಾ ಟಿಕ್ ಟಾಕ್ನಲ್ಲಿ ಗಂಭೀರ ಸ್ವರೂಪದ ದೇಶ ವಿರೋಧಿ ವಿಚಾರಗಳನ್ನು ಪೋಸ್ಟ್ ಮಾಡಿದ್ದಾರೆ ಹಾಗೂ ಸರ್ಕಾರಿ ಅಧಿಕಾರಿಗಳು ಮತ್ತು ಸಂಸ್ಥೆಗಳ ವಿರುದ್ಧ ಸಾರ್ವಜನಿಕರಲ್ಲಿ ಹಗೆತನದ ಭಾವನೆ ಮೂಡಿಸಲು ಉದ್ದೇಶಪೂರ್ವಕವಾಗಿ ದಾರಿತಪ್ಪಿಸುವ ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂದು ಎಫ್ಐಆರ್ನಲ್ಲಿ ಉಲ್ಲೇಖವಾಗಿರುವುದಾಗಿ ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.
ಇಬ್ಬರು ಆರೋಪಿಗಳ ಕ್ರಮಗಳು ದೇಶ, ಅದರ ಸಂಸ್ಥೆಗಳು ಅಥವಾ ಸಾರ್ವಜನಿಕ ಶಾಂತಿಯ ವಿರುದ್ಧ ಅಪರಾಧಗಳನ್ನು ಎಸಗುವಂತೆ ಇತರರನ್ನು ಪ್ರಚೋದಿಸಬಹುದು. ಸಂಸ್ಥೆಗಳ ಬಗ್ಗೆ ಸುಳ್ಳು ಮತ್ತು ಪೂರ್ವಗ್ರಹ ಪೀಡಿತ ಅಭಿಪ್ರಾಯವನ್ನು ಸೃಷ್ಟಿಸಲು ಆರೋಪಿಗಳು ದೇಶ ವಿರೋಧಿ ವಿಷಯವನ್ನು ಹಂಚಿಕೊಂಡಿರುವುದು ಕಂಡುಬಂದಿದೆ ಎಂದು ಎಫ್ಐಆರ್ಗಳು ತಿಳಿಸಿವೆ. ಈ ಕ್ರಮಗಳು ಪಾಕಿಸ್ತಾನ ದೇಶಕ್ಕೆ ಹಾನಿಯುಂಟು ಮಾಡುವ ಮತ್ತು ದಂಗೆಯನ್ನು ಸೃಷ್ಟಿಸುವ ಪ್ರಯತ್ನಗಳಿಗೆ ಸಮಾನವೆಂದು ಪರಿಗಣಿಸಲಾಗಿದೆ ಎಂದು ದಿ ಎಕ್ಸ್ ಪ್ರೆಸ್ ಟ್ರಿಬ್ಯೂನ್ ವರದಿ ಮಾಡಿದೆ.(ANI)
ಇದನ್ನೂ ಓದಿ : ಗಾಜಾ ಕದನ ವಿರಾಮ ಮಾತುಕತೆಯಲ್ಲಿ ಸಕಾರಾತ್ಮಕ ಪ್ರಗತಿ: ಇಸ್ರೇಲ್ ವಿದೇಶಾಂಗ ಸಚಿವರ ಹೇಳಿಕೆ - QATAR TALKS ON GAZA TRUCE