ನವದೆಹಲಿ : ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದಾರೆ. ನಾವು ಬಿಜೆಪಿ, ಆರ್ಎಸ್ಎಸ್ ಜೊತೆಗೆ ಭಾರತದ ರಾಜ್ಯದ ವಿರುದ್ಧ ಹೋರಾಟ ನಡೆಸಬೇಕಿದೆ ಎಂದು ಹೇಳಿದ್ದಾರೆ. ಇದು ಕಾಂಗ್ರೆಸ್ನ ಕರಾಳ ಮುಖ ಎಂದು ಬಿಜೆಪಿ ಟೀಕಿಸಿದೆ.
ದೆಹಲಿಯಲ್ಲಿ ಇಂದು (ಬುಧವಾರ) ನಡೆದ ಕಾಂಗ್ರೆಸ್ ಕೇಂದ್ರ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ರಾಹುಲ್ ಗಾಂಧಿ ಮಾತನಾಡುತ್ತಾ, ಆರ್ಎಸ್ಎಸ್ ಮತ್ತು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು. ವಿಪಕ್ಷಗಳು ಇಂದು ಬಿಜೆಪಿ, ಆರ್ಎಸ್ಎಸ್ ವಿರುದ್ಧ ಮಾತ್ರವಲ್ಲ, 'ಭಾರತದ ವಿರುದ್ಧ'ವೂ ಹೋರಾಡುತ್ತಿವೆ ಎಂದರು.
ಪಕ್ಷ ಮತ್ತು ಸಂಘಟನೆಗಳ ಮಧ್ಯೆ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಇರಬಹುದು. ಆದರೆ, ದೇಶ ಎಲ್ಲರಿಗೂ ಒಂದೇ. ಅಂತಹ ದೇಶದ ವಿರುದ್ಧವೇ ರಾಹುಲ್ ಗಾಂಧಿ ಹೋರಾಡಲು ಕರೆ ನೀಡಿದ್ದಾರೆ. ಇದು ರಾಷ್ಟ್ರಕ್ಕೆ ಮಾಡಿದ ಅವಮಾನ ಎಂದು ಬಿಜೆಪಿ ಆರೋಪಿಸಿದೆ.
ಅಪಕ್ವ ವಿಪಕ್ಷ ನಾಯಕ: ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, "ಭಾರತವು ಒಬ್ಬ ಜವಾಬ್ದಾರಿಯುತ ಮತ್ತು ನಿಷ್ಣಾವಂತ ವಿಪಕ್ಷ ನಾಯಕನ ಹೊಂದಲು ಅರ್ಹವಾಗಿದೆ" ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದರು.
ಬಿಜೆಪಿ, ಆರ್ಎಸ್ಎಸ್ ದೇಶ ಕಟ್ಟಲು ಪ್ರಯತ್ನಿಸುತ್ತಿದ್ದರೆ, ಇತ್ತ ರಾಹುಲ್ ಗಾಂಧಿ ದೇಶದ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ರಾಹುಲ್ ಅರೆಕಾಲಿಕ ಮತ್ತು ಅಪಕ್ವ ವಿಪಕ್ಷ ನಾಯಕರಾಗಿದ್ದಾರೆ. ಇದು ದೇಶದ ದೌರ್ಭಾಗ್ಯವಾಗಿದೆ. ವಿದೇಶಿ ವ್ಯಕ್ತಿಗಳೊಂದಿಗೆ ಸೇರಿ ದೇಶದ ಸಮಗ್ರತೆ, ಸಾರ್ವಭೌಮತೆಗೆ ಧಕ್ಕೆ ತರುತ್ತಿದ್ದಾರೆ ಎಂದು ಆರೋಪಿಸಿದರು.
ರಾಹುಲ್ ಗಾಂಧಿ ಹೇಳಿಕೆಗಳು ರಾಷ್ಟ್ರದ ಸಾರ್ವಭೌಮತೆಗೆ ಚ್ಯುತಿ ತರುತ್ತಿರುವುದು ಇದೇ ಮೊದಲಲ್ಲ. ದೇಶ ವಿರೋಧಿ ವ್ಯಕ್ತಿಗಳಿಂದ ಹಣಕಾಸಿನ ನೆರವು ಪಡೆದು ಈ ರೀತಿಯ ಹೇಳಿಕೆಗಳನ್ನು ನೀಡುತ್ತಾರೆ. ರಾಹುಲ್ ವಿಪಕ್ಷ ನಾಯಕನಾಗಿ ಮುಂದುವರಿಯುವುದು ದೇಶದ ಪ್ರತಿಯೊಬ್ಬ ನಾಗರಿಕನಿಗೆ ಮಾಡಿದ ಅವಮಾನ ಎಂದು ಜರಿದರು.
ಭಾಗವತ್ ಹೇಳಿಕೆ ವಿರುದ್ಧ ರಾಹುಲ್ ಟೀಕೆ: ಇನ್ನು ಆರ್ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೀಡಿದ ಸ್ವಾತಂತ್ರ್ಯ ಹೇಳಿಕೆಯ ವಿರುದ್ಧ ರಾಹುಲ್ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "1947 ರಲ್ಲಿ ದೇಶವು ಹೋರಾಟಗಾರರ ಫಲದಿಂದ ಸ್ವಾತಂತ್ರ್ಯ ಪಡೆಯಿತು. ರಾಮಮಂದಿರ ಉದ್ಘಾಟನೆಯಂದು ನಿಜವಾದ ಸ್ವತಂತ್ರ ಸಿಕ್ಕಿತು ಎಂಬ ಆರ್ಎಸ್ಎಸ್ ಮುಖ್ಯಸ್ಥರ ಹೇಳಿಕೆ ದೇಶದ್ರೋಹಕ್ಕೆ ಸಮ" ಎಂದು ಆರೋಪಿಸಿದರು.
ಬೇರೆ ಯಾವುದೇ ದೇಶದಲ್ಲಿ ಇಂತಹ ಹೇಳಿಕೆಯನ್ನು ನೀಡಿದವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಗುತ್ತಿತ್ತು. 1947 ರಲ್ಲಿ ಸಿಕ್ಕ ಸ್ವಾತಂತ್ರ್ಯವು ಸುಳ್ಳೇ. ಇಂತಹ ನುಡಿಗಳು ಪ್ರತಿ ಭಾರತೀಯರಿಗೆ ಮಾಡಿದ ಅವಮಾನ. ಅಜ್ಞಾನದಿಂದ ಕೂಡಿದ ಹೇಳಿಕೆ ಎಂದು ಟೀಕಿಸಿದರು.
ಇದನ್ನೂ ಓದಿ: ಭಾಗವತ್ ಸಂವಿಧಾನ ರಚನೆಕಾರರಲ್ಲ, ರಾಜಕೀಯದಿಂದ ರಾಮನನ್ನು ದೂರವಿಡಿ: ಸಂಜಯ್ ರಾವುತ್