ಮೈಸೂರು: ಆಡಳಿತದಲ್ಲಿ ಕಡ್ಡಾಯ ಕನ್ನಡ ಬಳಕೆ ಮಾಡುವ ಮೂಲಕ ನಮ್ಮ ಭಾಷೆಯನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ತಿಳಿಸಿದರು. ಈ ನಿಟ್ಟಿನಲ್ಲಿ ಬ್ಯಾಂಕ್ಗಳಲ್ಲಿರುವ ಹೊರ ರಾಜ್ಯದ ನೌಕರರು 3 ತಿಂಗಳಲ್ಲಿ ಕನ್ನಡ ಕಲಿತು ವ್ಯವಹರಿಸಬೇಕಿದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕನ್ನಡ ಅನುಷ್ಠಾನ ಕುರಿತ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕನ್ನಡವನ್ನು ಆಡಳಿತದಲ್ಲಿ ಅನುಷ್ಠಾನಕ್ಕೆ ತರಲು ಸರ್ಕಾರಗಳು ಹಲವು ಆದೇಶಗಳನ್ನು ಹೊರಡಿಸಿವೆ. 2000 ವರ್ಷಗಳ ಇತಿಹಾಸವಿರುವ ಭಾಷೆಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ. 19519 ಮಾತೃಭಾಷೆಗಳು ಭಾರತದಲ್ಲಿವೆ. ಹಲವು ಭಾಷೆಗಳು ನಶಿಸಿ ಹೋಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ಕನ್ನಡದಲ್ಲಿ ಹೆಚ್ಚು ಕೃತಿಗಳನ್ನು ರಚನೆ ಮಾಡಿದವರು ಕುವೆಂಪು. ಮೈಸೂರು ಸಾಹಿತಿಗಳ ತವರೂರು. ಬೇರೆ ಭಾಷೆಗಳನ್ನು ಕಲಿಯಿರಿ. ಆದರೆ ಕನ್ನಡವನ್ನು ಹೆಚ್ಚು ಬಳಕೆ ಮಾಡಬೇಕು. ಕನ್ನಡ ಬಳಕೆಗೆ 3000 ಆದೇಶಗಳನ್ನು ಮಾಡಲಾಗಿದೆ. ಕೇವಲ ಆದೇಶಗಳಿಂದ ಭಾಷೆ ಉಳಿಸಲು ಸಾಧ್ಯವಿಲ್ಲ. ಕನ್ನಡವನ್ನು ಬಳಕೆ ಮಾಡುವ ಮೂಲಕ ಉಳಿಸಬೇಕು ಎಂದರು.
ಬ್ಯಾಂಕ್ ಸಿಬ್ಬಂದಿ ಕನ್ನಡದಲ್ಲೇ ವ್ಯವಹರಿಸಬೇಕು: ಜಿಲ್ಲಾ ತರಬೇತಿ ಸಂಸ್ಥೆಗಳಲ್ಲಿ ತರಬೇತಿ ಪಡೆಯುವ ಅಧಿಕಾರಿ ಹಾಗೂ ಸಿಬ್ಬಂದಿಗೆ ಕನ್ನಡ ಬೋಧನೆಯನ್ನು ಹೆಚ್ಚಿಸಬೇಕು. ಬ್ಯಾಂಕ್ಗಳಲ್ಲಿ ಹೆಚ್ಚಾಗಿ ಹೊರ ರಾಜ್ಯದವರೇ ಇರುತ್ತಾರೆ. ಆದರೆ ಅವರು 3 ತಿಂಗಳ ಒಳಗೆ ಕನ್ನಡವನ್ನು ಕಲಿತು ವ್ಯವಹಾರ ನಡೆಸಬೇಕು. ಇಲ್ಲದಿದ್ದಲ್ಲಿ ಸ್ಥಳೀಯರೊಂದಿಗೆ ವ್ಯವಹಾರ ಮಾಡಲು ಕಷ್ಟವಾಗುತ್ತದೆ ಎಂದು ಬಿಳಿಮಲೆ ಹೇಳಿದರು.
ಜಿಲ್ಲಾಧಿಕಾರಿ ಜಿ.ಲಕ್ಷ್ಮೀಕಾಂತ ರೆಡ್ಡಿ ಮಾತನಾಡಿ, ಜಿಲ್ಲೆಯಲ್ಲಿ ನಾಮಫಲಕಗಳು ಕನ್ನಡಲ್ಲಿವೆ. ಆದರೆ ಕೆಲವೆಡೆ 60:40 ರೀತಿ ಇಲ್ಲ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಪರವಾನಗಿ ನವೀಕರಣಕ್ಕೆ ಬಂದಾಗ ಈ ಬಗ್ಗೆ ಷರತ್ತು ವಿಧಿಸಿ ಅನುಷ್ಠಾನ ಮಾಡಲಾಗುವುದು ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ ಮಾತನಾಡಿ, ಸರ್ಕಾರದ ಇಲಾಖೆಗಳ ಅಂತರ್ಜಾಲ ಪುಟ ಕನ್ನಡದಲ್ಲಿರಬೇಕು. ಜಿಲ್ಲೆಯ ಅಂಗಡಿ-ಮುಂಗಟ್ಟುಗಳ ಬೋರ್ಡುಗಳು ಶೇಕಡಾ 60ರಷ್ಟು ಕನ್ನಡದಲ್ಲಿರಬೇಕು. ಸರ್ಕಾರಿ ಇಲಾಖೆಗಳ ಕಡತಗಳಲ್ಲಿ ಕನ್ನಡವನ್ನು ಬಳಕೆ ಮಾಡಬೇಕು. ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಮಕ್ಕಳು ಅನುತ್ತೀರ್ಣರಾಗುತ್ತಿರುವ ಬಗ್ಗೆ ವರದಿ ಇದ್ದು, ಕನ್ನಡ ಭಾಷೆಗೆ ಹೆಚ್ಚಿನ ಒತ್ತು ನೀಡಿ ಬೋಧನೆ ಮಾಡಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯ ಟಿ.ಗುರುರಾಜ್ ಮಾತನಾಡಿ, ಶಿಕ್ಷಣ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಎನ್ಪಿಎಸ್ ಶಾಲೆಯ ನಾಮಫಲಕ ಸಂಪೂರ್ಣ ಇಂಗ್ಲಿಷ್ ಮಯವಾಗಿದೆ. ಶೇಕಡಾ 60ರಷ್ಟು ನಾಮಫಲಕ ಕನ್ನಡದಲ್ಲಿ ಇರಬೇಕು ಎಂಬ ಸರ್ಕಾರದ ಆದೇಶವನ್ನು ಉಲ್ಲಂಘಿಸಲಾಗಿದೆ. ಈ ಬಗ್ಗೆ ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹಲವು ಇಲಾಖೆಗಳ ಮೊಹರುಗಳು ಇಂಗ್ಲಿಷ್ನಲ್ಲಿದ್ದು ಕನ್ನಡದ ಮೋಹರುಗಳನ್ನು ಬಳಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಕನ್ನಡ ಕ್ರಿಯಾ ಹೋರಾಟ ಸಮಿತಿಯ ಕಾರ್ಯಾಧ್ಯಕ್ಷ ಸಾರಾ ಸುದರ್ಶನ್, ಜಿಲ್ಲಾ ಪಂಚಾಯತ್ ಸಿಇಒ ಕೆ.ಎಂ.ಗಾಯತ್ರಿ, ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.
ಇದನ್ನೂ ಓದಿ: 'ಕನ್ನಡ ಭಾಷೆ, ನಾಡಗೀತೆ, ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ' ಸೇರಿ 2024ರಲ್ಲಿ ಹೈಕೋರ್ಟ್ ನೀಡಿದ ಅಭಿಪ್ರಾಯಗಳಿವು!
ಇದನ್ನೂ ಓದಿ: ಹೊಸ ಭಾಷೆ ಕಲಿಯಬೇಕೇ; ಹಾಗಾದ್ರೆ ತಜ್ಞರು ನೀಡಿರುವ ಈ ಯಶಸ್ಸಿನ ಮಂತ್ರ ಪಾಲಿಸಿ