ನವದೆಹಲಿ: ಬಹುಧರ್ಮಗಳನ್ನು ನಂಬುತ್ತಾ ತಾವು ಬೆಳೆದು ಬಂದ ಬಗೆ ಹಾಗೂ ತಮ್ಮ ಸುದೀರ್ಘ ಮಿಲಿಟರಿ ವೃತ್ತಿಜೀವನದ ಬಗ್ಗೆ ಭಾರತೀಯ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಇತ್ತೀಚೆಗೆ ಮಾತನಾಡಿದ್ದಾರೆ.
ಎಎನ್ಐ ಸುದ್ದಿಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ, ಅವರು ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ನ 18ನೇ ಬೆಟಾಲಿಯನ್ನಲ್ಲಿದ್ದಾಗ ವಿವಿಧ ಧಾರ್ಮಿಕ ನಂಬಿಕೆಗಳಿಗೆ ತೆರೆದುಕೊಂಡಿದ್ದನ್ನು ಉಲ್ಲೇಖಿಸಿ ಬಹುಧರ್ಮೀಯರಾಗಿರುವ ಬಗ್ಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.
ಮಸೀದಿ, ಗುರುದ್ವಾರ, ದುರ್ಗಾ ಮಾತಾ ದೇವಾಲಯ ಮತ್ತು ಮಹಾಕಾಲ್ ದೇವಾಲಯವನ್ನು ಒಂದೇ ಸೂರಿನಡಿ ಹೊಂದಿರುವ ಈ ರೆಜಿಮೆಂಟ್ನ ವಿಶೇಷತೆ ಹಾಗೂ ಅಂತರ್ ಧರ್ಮೀಯ ಸಾಮರಸ್ಯದ ವಾತಾವರಣವನ್ನು ಬೆಳೆಸಿದ ಬಗ್ಗೆ ಅವರು ಮಾತನಾಡಿದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರೊಂದಿಗೆ ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿರುವ ಮಹಾಕಾಲೇಶ್ವರ ದೇವಸ್ಥಾನಕ್ಕೆ ಇತ್ತೀಚೆಗೆ ಭೇಟಿ ನೀಡಿದ ಬಗ್ಗೆ ಪ್ರಶ್ನಿಸಿದಾಗ, "ನಾನು ಬಹುಧರ್ಮೀಯ ವ್ಯಕ್ತಿ. ಜಮ್ಮು ಮತ್ತು ಕಾಶ್ಮೀರ ರೈಫಲ್ಸ್ನ 18 ನೇ ಬೆಟಾಲಿಯನ್ನಲ್ಲಿ ನಾನು ನಿಯೋಜಿತನಾಗಿದ್ದೆ. ಇಲ್ಲಿ ಮಸೀದಿ, ಗುರುದ್ವಾರ, ದುರ್ಗಾ ಮಾತಾ ದೇವಸ್ಥಾನ ಮತ್ತು ಮಹಾಕಾಲ್ ದೇವಸ್ಥಾನ ಎಲ್ಲವೂ ಒಂದೇ ಸೂರಿನಡಿ ಇವೆ" ಎಂದರು.
ರೆಜಿಮೆಂಟ್ನಲ್ಲಿದ್ದ ಸುಬೇದಾರ್ ಮೇಜರ್ ಒಬ್ಬರು ಮೌಲ್ವಿಯಾಗಿದ್ದರೂ ಅವರು ಯಾವುದೇ ಹಿಂಜರಿಕೆ ಇಲ್ಲದೆ ದುರ್ಗಾ ಮಾತಾ ಪೂಜೆ ಮಾಡುತ್ತಿದ್ದುದನ್ನು ಜನರಲ್ ದ್ವಿವೇದಿ ನೆನೆಪಿಸಿಕೊಂಡರು. ಇದು ರೆಜಿಮೆಂಟ್ನಲ್ಲಿ ಪರಸ್ಪರ ಗೌರವದ ಮನೋಭಾವಕ್ಕೆ ಸಾಕ್ಷಿಯಾಗಿದೆ. ಅವರ ಸ್ವಂತ ಆಧ್ಯಾತ್ಮಿಕ ಪ್ರಯಾಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತಾವು ಅಧಿಕಾರ ವಹಿಸಿಕೊಂಡ ನಂತರ ಮೊಟ್ಟ ಮೊದಲಿಗೆ ರೆಜಿಮೆಂಟ್ನಲ್ಲಿರುವ ಭಕ್ತಿ ಧಾಮಕ್ಕೆ ತೆರಳಿ ಅಲ್ಲಿನ ಮೌಲ್ವಿ, ಪಂಡಿತರು ಮತ್ತು ಗ್ರಂಥಿಯಿಂದ ಆಶೀರ್ವಾದ ಪಡೆದುಕೊಂಡಿದ್ದನ್ನು ಸ್ಮರಿಸಿಕೊಂಡರು.
ಬಾಲ್ಯದಲ್ಲಿ ತಮ್ಮ ತಂದೆ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಎರಡನೇ ಮಹಾಯುದ್ಧದ ವೀರರ ಕಥೆಗಳನ್ನು ಹೇಳುತ್ತಿದ್ದುದನ್ನು ಮತ್ತು ಸೈನ್ಯಕ್ಕೆ ಸೇರಲು ಹೇಗೆ ಪ್ರೇರೇಪಿಸುತ್ತಿದ್ದರು ಎಂಬುದನ್ನು ದ್ವಿವೇದಿ ನೆನಪಿಸಿಕೊಂಡರು. ತಮ್ಮ ಬಾಲ್ಯದ ಅನುಭವಗಳು ಭಾರತೀಯ ಸೇನೆಗೆ ಸೇರುವ ನಿರ್ಧಾರವನ್ನು ಹೇಗೆ ರೂಪಿಸಿದವು ಎಂಬ ಮಾಹಿತಿಯನ್ನು ಅವರು ಹಂಚಿಕೊಂಡರು. ಆರಂಭದಲ್ಲಿ ಅವರು ತಮ್ಮ ಸಹೋದರರಂತೆ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣ ಪಡೆಯಲು ಯೋಜಿಸಿದ್ದಾಗಿ ಹೇಳಿದರು.
ಆದರೆ ಕೊನೆಗೆ ಸೇನೆಗೆ ಸೇರಬೇಕೆಂಬ ತುಡಿತ ತೀವ್ರವಾಗಿದ್ದರೂ ಮೊದಲಿಗೆ ಗುಪ್ತಚರ ಇಲಾಖೆ ಅಧಿಕಾರಿಯಾಗಬೇಕೆಂಬ ಆಸೆಯಿತ್ತು. ಆದಾಗ್ಯೂ ಅನುಭವ ಬೆಳೆದಂತೆ ಮೊದಲಿಗೆ ಸೈನ್ಯ ಸೇರಿ ನಂತರ ಗುಪ್ತಚರ ಇಲಾಖೆಗೆ ಸೇರಲು ನಿರ್ಧರಿಸಿದ್ದಾಗಿ ಅವರು ಹೇಳಿಕೊಂಡರು.
ಇದನ್ನೂ ಓದಿ: ಅರುಣಾಚಲ ಪ್ರದೇಶದಲ್ಲಿ ಕರಗುತ್ತಿವೆ ಹಿಮನದಿಗಳು: 32 ವರ್ಷಗಳಲ್ಲಿ 100ಕ್ಕೂ ಹೆಚ್ಚು ಗ್ಲೇಸಿಯರ್ಸ್ ಕಣ್ಮರೆ - GLACIERS MELTING