Mira Murati Launches AI Startup: ಓಪನ್‌ಎಐನ ಮಾಜಿ ಚೀಫ್ ಟೆಕ್ನಾಲಾಜಿ ಆಫೀಸರ್ (ಸಿಟಿಒ) ಮೀರಾ ಮುರಾಟಿ ಅವರು 'ಥಿಂಕಿಂಗ್ ಮಷಿನ್ಸ್ ಲ್ಯಾಬ್' ಎಂಬ ಹೊಸ ಕೃತಕ ಬುದ್ಧಿಮತ್ತೆ (ಎಐ) ಸ್ಟಾರ್ಟ್‌ಅಪ್ ಪ್ರಾರಂಭಿಸಿದ್ದಾರೆ. ಈ ಸ್ಟಾರ್ಟ್ಅಪ್ ಮೂಲಕ ಮುರಾಟಿ ಮತ್ತು ಅವರ ತಂಡವು ಎಐ ಟೆಕ್ನಾಲಾಜಿ ಅನ್ನು ಹೆಚ್ಚು ಉಪಯುಕ್ತವಾಗಿಸಲು ಬಯಸುತ್ತದೆ. ಅವರು ಸ್ಥಾಪಿಸಿದ ಕಂಪನಿಯು ಮುಖ್ಯ ವಿಜ್ಞಾನಿ ಜಾನ್ ಶುಲ್ಮನ್ ಅವರ ನೇತೃತ್ವದಲ್ಲಿದೆ. ಅವರು ಓಪನ್‌ಎಐನ ಸಹ-ಸಂಸ್ಥಾಪಕರು. ಜಾನ್ ಶುಲ್ಮನ್ ಅವರು ಈಗ ಓಪನ್‌ಎಐನ ಸದಸ್ಯರಲ್ಲ ಎಂಬುದು ಗಮನಾರ್ಹ.
"ಥಿಂಕಿಂಗ್ ಮಷಿನ್ಸ್ ಲ್ಯಾಬ್ ಒಂದು ಕೃತಕ ಬುದ್ಧಿಮತ್ತೆ ಸಂಶೋಧನೆ ಮತ್ತು ಉತ್ಪಾದನಾ ಕಂಪನಿಯಾಗಿದೆ. ಪ್ರತಿಯೊಬ್ಬರ ವಿಶಿಷ್ಟ ಅಗತ್ಯಗಳು ಮತ್ತು ಗುರಿಗಳಿಗಾಗಿ ಕೆಲಸ ಮಾಡಲು ಎಐ ಜ್ಞಾನ ಮತ್ತು ಸಾಧನಗಳನ್ನು ಹೊಂದಿರುವ ಭವಿಷ್ಯವನ್ನು ನಾವು ನಿರ್ಮಿಸುತ್ತಿದ್ದೇವೆ" ಎಂದು ಕಂಪನಿಯ ವೆಬ್‌ಸೈಟ್ ಹೇಳುತ್ತದೆ.
ಥಿಂಕಿಂಗ್ ಮಷಿನ್ಸ್ ಲ್ಯಾಬ್: ಮೀರಾ ಮುರಾಟಿ ಪ್ರಾರಂಭಿಸಿದ ಈ ಸ್ಟಾರ್ಟ್ಅಪ್ ಜನರ ಅಗತ್ಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಎಐ ವ್ಯವಸ್ಥೆಗಳನ್ನು ರಚಿಸಲು ಪ್ರಯತ್ನಿಸುತ್ತಿದೆ. ವಿಜ್ಞಾನ ಮತ್ತು ಪ್ರೋಗ್ರಾಮಿಂಗ್‌ನಂತಹ ಇತರ ಕ್ಷೇತ್ರಗಳಲ್ಲಿ ಎಐ ಅನ್ನು ಉಪಯುಕ್ತವಾಗಿಸುವುದು ಇದರ ಗುರಿಯಾಗಿದೆ. ಈ ಸಂದರ್ಭದಲ್ಲಿ ಮುರಾಟಿ ಎಐ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡುವತ್ತ ಗಮನಹರಿಸುತ್ತಿದ್ದಾರೆ.
ಹೆಚ್ಚುವರಿಯಾಗಿ ಕಂಪನಿಯು ಹಲವು ಉದ್ದೇಶಗಳಿಗೆ ಬಳಸಬಹುದಾದ ಮಲ್ಟಿಮಾಡೆಲ್ ವ್ಯವಸ್ಥೆಯನ್ನು ರಚಿಸುತ್ತದೆ. ಇದರ ಜೊತೆಗೆ ಕಂಪನಿಯು ಎಐ ಸೇಫ್ ಆ್ಯಂಡ್ ಎಥಿಕಲ್ ಆಗಿ ಬದಲಾಯಿಸಲು ಕೆಲಸ ಮಾಡುತ್ತಿದೆ. ಮುರಾಟಿ ಅವರು ಈ ಹಿಂದೆ ಟೆಸ್ಲಾ ಮಾಡೆಲ್ ಎಕ್ಸ್ ಕಾರು ಯೋಜನೆಯಲ್ಲಿ ಕೆಲಸ ಮಾಡಿದರು.
ಮುರಾಟಿ ಅವರು ಓಪನ್‌ಎಐನಲ್ಲಿದ್ದಾಗ ಅವರು ಚಾಟ್‌ಜಿಪಿಟಿ, ಡಿಎಎಲ್ಎಲ್-ಇ ಮತ್ತು ಕೋಡೆಕ್ಸ್‌ನಂತಹ ಎಐ ತಂತ್ರಜ್ಞಾನಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಈಗ ಮುರಾಟಿ ತಮ್ಮ ಹೊಸ ಸ್ಟಾರ್ಟ್ಅಪ್‌ಗಾಗಿ ಎಐ ಕ್ಷೇತ್ರದಲ್ಲಿ ಕೆಲಸ ಮಾಡುವ ಉನ್ನತ ತಜ್ಞರು ಮತ್ತು ಎಂಜಿನಿಯರ್‌ಗಳನ್ನು ಒಟ್ಟುಗೂಡಿಸುವಲ್ಲಿ ನಿರತರಾಗಿದ್ದಾರೆ. ಈ ಕಂಪನಿಯು ತಂತ್ರಜ್ಞಾನದಲ್ಲಿನ ಹೊಸ ಆವಿಷ್ಕಾರಗಳ ಮೇಲೆ ಕೆಲಸ ಮಾಡುತ್ತಿದೆ ಮತ್ತು ಎಐನಲ್ಲಿ ಪ್ರಮುಖ ಬದಲಾವಣೆಗಳನ್ನು ತರುತ್ತಿದೆ ಎಂದು ಹೇಳಿದರು.
2024ರ ಸೆಪ್ಟೆಂಬರ್‌ನಲ್ಲಿ ರಾಜೀನಾಮೆ: ಮೀರಾ ಮುರಾಟಿ ಸೆಪ್ಟೆಂಬರ್ 2024 ರಲ್ಲಿ ಓಪನ್ ಎಐನಲ್ಲಿ ತಮ್ಮ ಸಿಟಿಒ ಜವಾಬ್ದಾರಿಗಳಿಗೆ ಇದ್ದಕ್ಕಿದ್ದಂತೆ ರಾಜೀನಾಮೆ ನೀಡಿದರು. ಎಐ ಕ್ಷೇತ್ರದಲ್ಲಿ ದೊಡ್ಡ ಯೋಜನೆಗಳನ್ನು ಪೂರ್ಣಗೊಳಿಸುವಲ್ಲಿ ಹೆಸರುವಾಸಿಯಾಗಿದ್ದ ಅವರು, ಸುಮಾರು ಆರೂವರೆ ವರ್ಷಗಳ ಕಾಲ ಓಪನ್‌ಎಐನಲ್ಲಿ ಕೆಲಸ ಮಾಡಿದರು. ಆದರೆ ರಾಜೀನಾಮೆ ನೀಡುವ ಸಮಯದಲ್ಲಿ ತನಗಾಗಿ ಹೆಚ್ಚಿನ ಸಮಯವನ್ನು ಮೀಸಲಿಡಲು ಮತ್ತು ತನ್ನ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ರಾಜೀನಾಮೆ ನೀಡುತ್ತಿರುವುದಾಗಿ ಅವರು ಹೇಳಿದ್ದರು.
ಮೀರಾ ಮುರಾಟಿ ಅವರು ಆ ವೇಳೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ರಾಜೀನಾಮೆ ಮತ್ತು ಭವಿಷ್ಯದ ಪ್ರಯಾಣವನ್ನು ವಿವರಿಸುವ ಪತ್ರವನ್ನು ಪೋಸ್ಟ್ ಮಾಡಿದರು. ಅವರು ಕಂಪನಿಗೆ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಜಾಟ್ಜಿಪಿಟಿ ಯೋಜನೆ ಸೇರಿದಂತೆ ಕಂಪನಿಯೊಂದಿಗೆ ತಮ್ಮ ಆರೂವರೆ ವರ್ಷಗಳು ಬಹಳ ಯಶಸ್ವಿಯಾಗಿದ್ದವು ಮತ್ತು ಅವರಿಗೆ ಅಭೂತಪೂರ್ವ ಸವಲತ್ತುಗಳನ್ನು ನೀಡಲಾಗಿದೆ ಎಂದು ಹೇಳಿದರು. ಉತ್ತಮ ತಂತ್ರಜ್ಞಾನ ಕಂಪನಿಯನ್ನು ಮುನ್ನಡೆಸಲು ತನ್ನನ್ನು ನಂಬಿದ್ದಕ್ಕಾಗಿ ಅವರು ಸ್ಯಾಮ್ ಮತ್ತು ಗ್ರೆಗ್‌ಗೆ ಧನ್ಯವಾದ ಅರ್ಪಿಸಿದ್ದರು.
ಓಪನ್‌ಎಐ ತಂಡದೊಂದಿಗೆ ನನ್ನ ಆರೂವರೆ ವರ್ಷಗಳು ಅಸಾಧಾರಣವಾಗಿವೆ. ನಾವು ಸ್ಮಾರ್ಟ್ ಮಾದರಿಗಳನ್ನು ರಚಿಸಿದ್ದಲ್ಲದೆ, ಎಐ ವ್ಯವಸ್ಥೆಗಳು ಸಂಕೀರ್ಣ ಸಮಸ್ಯೆಗಳ ಮೂಲಕ ಕಲಿಯುವ ಮತ್ತು ತಾರ್ಕಿಕವಾಗಿ ವರ್ತಿಸುವ ವಿಧಾನವನ್ನು ಮೂಲಭೂತವಾಗಿ ಬದಲಾಯಿಸಿದ್ದೇವೆ ಎಂದು ಮುರಾಟಿ ಅವರು ಆ ಸಮಯದಲ್ಲಿ ತಮ್ಮ ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದರು. ಇದಾದ 6 ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಮೀರಾ ಮುರಾಟಿ ಈಗ ತನ್ನದೇ ಆದ ಎಐ ಸ್ಟಾರ್ಟ್ಅಪ್ ಅನ್ನು ಪ್ರಾರಂಭಿಸಿದ್ದಾರೆ. ಇದರೊಂದಿಗೆ ಅವರು ಪ್ರಾರಂಭಿಸಿದ ಈ ಎಐ ಸ್ಟಾರ್ಟ್ಅಪ್ ಓಪನ್‌ಎಐಗೆ ಕಠಿಣ ಸ್ಪರ್ಧೆಯನ್ನು ನೀಡುವ ಸಾಧ್ಯತೆಯಿದೆ.
ಇದನ್ನೂ ಓದಿ: ChatGPTಗೆ ಠಕ್ಕರ್: ಗ್ರೋಕ್ 3 ರೆಡಿ, ಅತ್ಯಂತ ಬುದ್ಧಿವಂತ AI ಚಾಟ್‌ಬಾಟ್ ಇದೇ ಅಂತೆ!