ಕಾಂತಾರ ಎಂಬ ಬ್ಲಾಕ್ಬಸ್ಟರ್ ಚಿತ್ರದ ಮೂಲಕ ಭಾರತದಾದ್ಯಂತ ಹೆಸರು ಗಳಿಸಿರುವ ರಿಷಬ್ ಶೆಟ್ಟಿ ಅವರ ದಾಂಪತ್ಯ ಜೀವನಕ್ಕೀಗ 9 ವರ್ಷಗಳ ಸಂಭ್ರಮ. ಇತ್ತೀಚೆಗಷ್ಟೇ ರಿಷಬ್ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ಇಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮುದ್ದಾದ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ಜನಪ್ರಿಯ ದಂಪತಿ ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾಗಳಲ್ಲಿ 8 ಫೋಟೋಗಳನ್ನು ಶೇರ್ ಮಾಡಿದ್ದಾರೆ. ಕಡಲ ತೀರದಲ್ಲಿ ರೊಮ್ಯಾನ್ಸ್ ಮಾಡಿದ್ದು, ಫೋಟೋಗಳು ಬಹಳ ಮುದ್ದಾಗಿವೆ.
ಮೊದಲ ಫೋಟೋದಲ್ಲಿ ರಿಷಬ್, ಪ್ರಗತಿ ಪ್ರೀತಿಯ ಬಾಹು ಬಂಧನದಲ್ಲಿರುವುದನ್ನು ಕಾಣಬಹುದು. ಪ್ರಗತಿ ಬ್ಲ್ಯೂ ಆ್ಯಂಡ್ ವೈಟ್ ಫ್ರಾಕ್ ಧರಿಸಿದ್ದರೆ, ರಿಷಬ್ ಶೆಟ್ಟಿ ವೈಟ್ ಶರ್ಟ್, ಬ್ಲ್ಯಾಕ್ ಪ್ಯಾಂಟ್, ಸನ್‌ಗ್ಲಾಸ್ ಧರಿಸಿ ಇಬ್ಬರೂ ಮಾಡರ್ನ್ ಲುಕ್ ಕೊಟ್ಟಿದ್ದಾರೆ. ನಟನ ಬಿಯರ್ಡ್ ಲುಕ್ ಅವರ ಮುಂದಿನ ಚಿತ್ರಗಳ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಎರಡನೇ ಫೋಟೋದಲ್ಲಿ ತಮ್ಮ ಇಬ್ಬರು ಮುದ್ದಾದ ಮಕ್ಕಳ ಕೈ ಹಿಡಿದು ಕಡಲ ತೀರದಲ್ಲಿ ನಡೆದು ಬರುತ್ತಿರುವುದನ್ನು ಕಾಣಬಹುದು. ಸಿನಿಮಾ ಸಾಧಕ ಓರ್ವ ಪಕ್ಕಾ ಫ್ಯಾಮಿಲಿ ಮ್ಯಾನ್ ಅನ್ನೋದನ್ನೂ ಈ ಫೋಟೋ ತಿಳಿಸಿದೆ.
ಮುಂದಿನ ಫೋಟೋದಲ್ಲಿ ಕಡಲ ತೀರ, ಪುಷ್ಪಾಲಂಕಾರದ ಹಿನ್ನೆಲೆಯಲ್ಲಿ ನಿಂತಿರುವ ದಂಪತಿ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ. ಮುದ್ದಿನ ಮಡದಿ ಪ್ರಗತಿಗೆ ಪ್ರೀತಿಯ ಮುತ್ತಿಟ್ಟಿದ್ದು, ಸೂರ್ಯನ ಕಿರಣ ತಾಕಿರುವ ಅವರ ಫೋಟೋ ಬಹಳ ಸುಂದರವಾಗಿ ಮೂಡಿಬಂದಿದೆ. ವಿವಾಹ ವಾರ್ಷಿಕೋತ್ಸವದ ಕೇಕ್ ಅನ್ನೂ ಇಲ್ಲಿ ಕಾಣಬಹುದು. ದಂಪತಿಯ ಕ್ಯೂಟ್ ಫೋಟೋವನ್ನು ಕೇಕ್ ಮೇಲೆ ಚಿತ್ರಿಸಲಾಗಿದ್ದು, ಹಂಚಿಕೊಂಡಿರುವ ಪ್ರತೀ ಫೋಟೋಗಳೂ ಪ್ರೀತಿಯನ್ನು ಹೊರಸೂಸುತ್ತಿವೆ.
ಇದನ್ನೂ ಓದಿ: ಛತ್ರಪತಿ ಶಿವಾಜಿ ಮಹಾರಾಜರ ಪಾತ್ರದಲ್ಲಿ ಡಿವೈನ್ ಸ್ಟಾರ್ : ಮರಾಠಾ ರಾಜನ ಶೌರ್ಯವನ್ನೊಳಗೊಂಡ ಸಿನಿಮಾಗಳಿವು
ಚಿತ್ರಮಂದಿರವೊಂದರಲ್ಲಿ ರಿಷಬ್ ಹಾಗೂ ಪ್ರಗತಿ ಮೊದಲು ಭೇಟಿ ಆದರು. ರಿಷಬ್ ಅವರ ಸಿನಿಮಾಗೆ ಅಭಿಮಾನಿಯಾಗಿ ಪ್ರಗತಿ ಆಗಮಿಸಿದ್ದರು. ಆರಂಭದ ದಿನಗಳಾದ ಹಿನ್ನೆಲೆಯಲ್ಲಿ ರಿಷಬ್ ಅಷ್ಟೊಂದು ಜನಪ್ರಿಯರಾಗಿರಲಿಲ್ಲ. ಪ್ರೇಕ್ಷಕರು ನಾಯಕ, ನಾಯಕಿಯನ್ನು ಸುತ್ತುವರೆದಿದ್ದರು. ಆದರೆ ಪ್ರಗತಿ ಅವರು ನಿರ್ದೇಶಕ ರಿಷಬ್ ಅವರನ್ನು ಗುರುತಿಸಿ ನಿಮ್ಮ ಅಭಿಮಾನಿ ಎಂದು ಪರಿಚಯಿಸಿಕೊಂಡರು. ಅಲ್ಲಿಂದ ಇಬ್ಬರ ಸ್ನೇಹ ಶುರುವಾಯಿತು. ಪ್ರೀತಿಗೆ ತಿರುಗಿ ಹಸೆಮಣೆ ಏರಿದರು. ಜನಪ್ರಿಯ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ.
ಇದನ್ನೂ ಓದಿ: ಶಿವಾಜಿ ಜಯಂತಿ: ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅಭಿನಯದ ಚಿತ್ರದಿಂದ ಪೋಸ್ಟರ್ ರಿಲೀಸ್
ರಿಷಬ್ ಶೆಟ್ಟಿ ಮುಂದಿನ ಸಿನಿಮಾಗಳು: ರಿಷಬ್ ಶೆಟ್ಟಿ ಸದ್ಯ ಕಾಂತಾರ ಪ್ರೀಕ್ವೆಲ್ನಲ್ಲಿ ಬ್ಯುಸಿಯಾಗಿದ್ದಾರೆ. ಇಂದು ಮುಂದಿನ ಬಹುನಿರೀಕ್ಷಿತ ಚಿತ್ರವೊಂದರ ಪೋಸ್ಟರ್ ಅನಾವರಣಗೊಂಡಿದೆ. ಛತ್ರಪತಿ ಶಿವಾಜಿ ಮಹಾರಾಜರ 395ನೇ ಜಯಂತಿ ಹಿನ್ನೆಲೆಯಲ್ಲಿ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ನಿರ್ದೇಶಕ ಸಂದೀಪ್ ಸಿಂಗ್ ಅವರು ಪೋಸ್ಟರ್ ಅನಾವರಣಗೊಳಿಸಿದ್ದಾರೆ. ರಿಷಬ್ ಶೆಟ್ಟಿ ಛತ್ರಪತಿ ಶಿವಾಜಿ ಮಹಾರಾಜರ ಪಾತ್ರ ನಿರ್ವಹಿಸುತ್ತಿದ್ದಾರೆ.