ಕರ್ನಾಟಕ

karnataka

ETV Bharat / international

ಕಜಕಿಸ್ತಾನ್ - ರಷ್ಯಾದ ಗಡಿಭಾಗದಲ್ಲಿ ಭೀಕರ ಪ್ರವಾಹ: 12,000 ಮನೆಗಳು ಜಲಾವೃತ - flood in Russia - FLOOD IN RUSSIA

ಕಜಕಿಸ್ತಾನ್ ಮತ್ತು ರಷ್ಯಾದ ಗಡಿಭಾಗದಲ್ಲಿ ಕಳೆದ ವಾರದಿಂದ ಭೀಕರ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಇದುವರೆಗೆ ಸಾವಿರಾರು ಜನರನ್ನು ಸ್ಥಳಾಂತರಗೊಳಿಸಲಾಗಿದೆ ಎಂದು ಒರೆನ್‌ಬರ್ಗ್​ನ ಗವರ್ನರ್ ತಿಳಿಸಿದ್ದಾರೆ.

ಪ್ರವಾಹ
ಪ್ರವಾಹ

By PTI

Published : Apr 12, 2024, 9:01 AM IST

ಮಾಸ್ಕೋ: ಕಜಕಿಸ್ತಾನ್ ಮತ್ತು ರಷ್ಯಾದ ಗಡಿಭಾಗದಲ್ಲಿ ಪ್ರವಾಹ ಉಂಟಾಗಿದ್ದು, ಉರಲ್​ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಪರಿಣಾಮ ಕಜಕಿಸ್ತಾನದ ಗಡಿಯಲ್ಲಿರುವ ರಷ್ಯಾದ ಪ್ರದೇಶಗಳಲ್ಲಿನ ಸುಮಾರು 12,000 ಮನೆಗಳು ಜಲಾವೃತಗೊಂಡಿವೆ. ಪ್ರವಾಹ ಮಟ್ಟ ತಗ್ಗುವ ಲಕ್ಷಣಗಳು ಕಾಣುತ್ತಿಲ್ಲ ಬದಲಿಗೆ ಹೆಚ್ಚಿನ ಪ್ರವಾಹದ ಭೀತಿ ಎದುರಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಕಳೆದ ವಾರ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿ ಅಣೆಕಟ್ಟು ಒಡೆದಿತ್ತು. ಇದರಿಂದ ಪ್ರವಾಹ ಉಂಟಾಗಿದ್ದು, ಮಾಸ್ಕೋದ ರಾಜಧಾನಿಯ ಆಗ್ನೇಯಕ್ಕೆ ಸುಮಾರು 1,200 ಕಿಲೋಮೀಟರ್ (745 ಮೈಲಿಗಳು) ಇರುವ ಓರೆನ್‌ಬರ್ಗ್ ಪ್ರದೇಶದಲ್ಲಿನ ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ. ಸ್ಥಳೀಯ ಅಧಿಕಾರಿಗಳು ಈ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್ ಅವರೊಂದಿಗೆ ನಡೆದ ವಿಡಿಯೋ ಕಾನ್ಫರೆನ್ಸ್‌ನಲ್ಲಿ, ಒರೆನ್‌ಬರ್ಗ್​ನ ಗವರ್ನರ್ ಡೆನಿಸ್ ಪಾಸ್ಲರ್ ಒಟ್ಟು 11,972 ಮನೆಗಳು ಹಾಗೂ 16 ರಾಜ್ಯ ವೈದ್ಯಕೀಯ ಸೌಲಭ್ಯ ನೀಡುವ ಕೇಂದ್ರಗಳು ಪ್ರವಾಹಕ್ಕೆ ಸಿಲುಕಿವೆ ಎಂದು ವರದಿ ಮಾಡಿದ್ದಾರೆ.

ಹಾಗೇ, 20,000 ಜನರು ಇರುವ 3,600 ಮನೆಗಳು ಕೂಡ ನೀರಿನ ಮಟ್ಟ ಅಧಿಕವಾಗುತ್ತಿರುವುದರಿಂದ ಪ್ರವಾಹದ ಅಪಾಯದಲ್ಲಿದೆ. ಆಡಳಿತ ರಾಜಧಾನಿ ಒರೆನ್‌ಬರ್ಗ್ ನಗರದಲ್ಲಿ ಅತ್ಯಂತ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಉರಲ್ ನದಿಯ ನೀರಿನ ಮಟ್ಟವು 10.87 ಮೀಟರ್ (ಸುಮಾರು 36 ಅಡಿ)ಗೆ ಏರಿದೆ ಎಂದು ಡೆನಿಸ್ ಪಾಸ್ಲರ್ ಹೇಳಿದ್ದಾರೆ. ಇದುವರೆಗೆ ಒಟ್ಟು 7,800 ಜನರನ್ನು ಪ್ರವಾಹ ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ. ಪ್ರವಾಹದಿಂದ ಒಟ್ಟಾರೆ ಹಾನಿ 40 ಮಿಲಿಯನ್​ ರೂಬಲ್​(ಅಮೆರಿಕ ಡಾಲರ್​​ 428 ಮಿಲಿಯನ್​​)ಮೀರಿದೆ ಎಂದು ಅಂದಾಜಿಸಲಾಗಿದೆ.

ಕಜಕಿಸ್ತಾನ್​​ ಗಡಿಯ ಪೂರ್ವದಲ್ಲಿ, ಕುರ್ಗಾನ್​​ ಮತ್ತು ಟ್ಯುಮೆನ್ ಪ್ರದೇಶಗಳಲ್ಲಿನ ಅಧಿಕಾರಿಗಳು ಸ್ಥಳೀಯ ನದಿಗಳಲ್ಲಿ ನೀರಿನ ಮಟ್ಟವು ಹೆಚ್ಚಾಗುತ್ತಿರುವುದನ್ನು ಗಮನಿಸುತ್ತಿದ್ದು, ಸಂಭವನೀಯ ಪ್ರವಾಹಗಳಿಗೆ ಮುನ್ನೆಚ್ಚರಿಕೆಯಾಗಿ ತಯಾರಿ ನಡೆಸುತ್ತಿದ್ದಾರೆ. ರಷ್ಯಾದ ರಾಜ್ಯ ಸುದ್ದಿ ಸಂಸ್ಥೆ ಪ್ರಕಾರ, ಕಜಕಿಸ್ತಾನದಲ್ಲಿ ಉಂಟಾಗಿರುವ ಪ್ರವಾಹಗಳಿಂದ ಅಲ್ಲಿನ ಅಧಿಕಾರಿಗಳು ದೇಶದ 17 ಪ್ರದೇಶಗಳಲ್ಲಿನ 10 ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ. ಗುರುವಾರ ಎಂಟು ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಇನ್ನೂ ಜಾರಿಯಲ್ಲಿತ್ತು. 98,000ಕ್ಕೂ ಹೆಚ್ಚು ಜನರನ್ನು ಪ್ರವಾಹ ಪೀಡಿತ ಪ್ರದೇಶಗಳಿಂದ ಸ್ಥಳಾಂತರಿಸಲಾಗಿದೆ ಎಂದು ಸುದ್ದಿ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ:ರಷ್ಯಾದ ಪರಮಾಣು ವಿದ್ಯತ್​ ಸ್ಥಾವರದ ಮೇಲೆ ಉಕ್ರೇನ್​ ಡ್ರೋನ್ ದಾಳಿ - Drone attack

ABOUT THE AUTHOR

...view details