ಒಟ್ಟಾವ: ಕೆನಡಾ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸುವುದಾಗಿ ಜಸ್ಟಿನ್ ಟ್ರುಡೊ ಸೋಮವಾರ ಪ್ರಕಟಿಸಿದರು. ಆಡಳಿತಾರೂಢ ಲಿಬರಲ್ ಪಕ್ಷವು ಹೊಸ ನಾಯಕನನ್ನು ಆಯ್ಕೆ ಮಾಡುವ ಪ್ರಕ್ರಿಯೆ ಪ್ರಾರಂಭಿಸಲು ಕೇಳಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ತಮ್ಮ ನಾಯಕತ್ವದ ಮೇಲೆ ಹೆಚ್ಚುತ್ತಿರುವ ಅಸಮಾಧಾನ ಹಾಗೂ ಕಳೆದ ವರ್ಷಾಂತ್ಯದಲ್ಲಿ ಹಣಕಾಸು ಸಚಿವೆಯ ಹಠಾತ್ ರಾಜೀನಾಮೆಯಂಥ ಬೆಳವಣಿಗೆಗಳು ಸರ್ಕಾರದೊಳಗಿನ ಬಿಕ್ಕಟ್ಟನ್ನು ತೋರಿಸಿದ್ದವು.
ಟ್ರುಡೊ 2015ರಲ್ಲಿ ಆಯ್ಕೆಯಾದಾಗ ಕೆನಡಾದ ಇತಿಹಾಸದಲ್ಲಿ ಎರಡನೇ ಕಿರಿಯ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಪಕ್ಷದಲ್ಲಿ ಅಸಮಾಧಾನ ಹೆಚ್ಚುತ್ತಿದ್ದರೂ ಟ್ರುಡೊ ಮುಂದಿನ ವರ್ಷದ ಚುನಾವಣೆಯಲ್ಲಿ ನಾಲ್ಕನೇ ಅವಧಿಗೆ ಸ್ಪರ್ಧಿಸಲು ಯೋಜಿಸಿದ್ದರು.
ಟ್ರುಡೋ ಅವರ ಲಿಬರಲ್ ಪಕ್ಷಕ್ಕೆ ಪ್ರತಿಪಕ್ಷ ನ್ಯೂ ಡೆಮಾಕ್ರಟಿಕ್ ಪಾರ್ಟಿ(ಎನ್‌ಡಿಪಿ) ಹಲವು ವರ್ಷಗಳಿಂದ ಬೆಂಬಲ ನೀಡಿತ್ತು.
ಎನ್‌ಡಿಪಿ ನಾಯಕ ಜಗ್‌ಮೀತ್ ಸಿಂಗ್ ಅವರು, ಟ್ರುಡೊ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿ, "ಮುಂದಿನ ಲಿಬರಲ್ ಪಕ್ಷದ ನಾಯಕ ಯಾರು ಎಂಬುದು ಮುಖ್ಯವಲ್ಲ. ಟ್ರುಡೊ ನಿಮ್ಮನ್ನು ನಿರಾಸೆಗೊಳಿಸಿದ್ದಾರೆ. ಅವರು ಮತ್ತೊಂದು ಅವಕಾಶ ಪಡೆಯಲು ಅರ್ಹರಲ್ಲ. ವಿಶ್ವಾಸಮತ ಯಾಚನೆ ಪ್ರಕ್ರಿಯೆಯಲ್ಲಿ ನಾವು ಸರ್ಕಾರದ ವಿರುದ್ಧ ಮತ ಚಲಾಯಿಸುತ್ತೇವೆ" ಎಂದು ಹೇಳಿದರು.
ಏತನ್ಮಧ್ಯೆ, ಲಿಬರಲ್ ಪಕ್ಷದ ಅಧ್ಯಕ್ಷರು, ಪಕ್ಷದ ಹೊಸ ನಾಯಕನನ್ನು ಆಯ್ಕೆ ಮಾಡಲು ರಾಷ್ಟ್ರವ್ಯಾಪಿ ಪ್ರಜಾಸತ್ತಾತ್ಮಕ ಪ್ರಕ್ರಿಯೆಯನ್ನು ಪ್ರಾರಂಭಿಸಲು ಈ ವಾರ ರಾಷ್ಟ್ರೀಯ ಮಂಡಳಿ ಸಭೆಯನ್ನು ಕರೆಯುವುದಾಗಿ ತಿಳಿಸಿದ್ದಾರೆ.
ಕಳೆದ ತಿಂಗಳು ಹಣಕಾಸು ಸಚಿವೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಕ್ರಿಸ್ಟಿಯಾ ಫ್ರೀಲ್ಯಾಂಡ್ ಪ್ರತಿಕ್ರಿಯಿಸಿ, ಜಸ್ಟಿನ್ ಟ್ರುಡೊ ಅವರು "ನಂಬಲಾಗದ ರಾಜಕೀಯ ಪಾಲುದಾರ" ಎಂದು ಟೀಕಿಸಿದ್ದಾರೆ. ಇದೇ ವೇಳೆ, ಅವರ ಹಲವು ವರ್ಷಗಳ ಸೇವೆಗೆ ಧನ್ಯವಾದ ಅರ್ಪಿಸಿ, ಶುಭ ಹಾರೈಸಿದ್ದಾರೆ.
ಕ್ರಿಸ್ಟಿಯಾ ಫ್ರೀಲ್ಯಾಂಡ್ ಅವರು ಪ್ರಧಾನಿ ಹುದ್ದೆಗೆ ಲಿಬರಲ್ ಪಕ್ಷದಿಂದ ಸಂಭಾವ್ಯ ಅಭ್ಯರ್ಥಿಯಾಗಿದ್ದಾರೆ.
ಜಸ್ಟಿನ್ ಟ್ರುಡೊ ಅವರ ರಾಜೀನಾಮೆ ಬಗ್ಗೆ ವಿರೋಧ ಪಕ್ಷ ಕನ್ಸರ್ವೇಟಿವ್ ನಾಯಕ ಪಿಯರೆ ಪೊಯ್ಲಿವ್ರೆ ಪ್ರತಿಕ್ರಿಯಿಸಿ, "ನಮ್ಮ ಇತಿಹಾಸದ ಈ ಕರಾಳ ಅಧ್ಯಾಯದ ಪುಟವನ್ನು ತಿರುಗಿಸಲು ಹತಾಶರಾಗಿರುವ ಕೆನಡಿಯನ್ನರು ಇಂದು ಜಸ್ಟಿನ್ ಟ್ರುಡೊ ಅಂತಿಮವಾಗಿ ನಿರ್ಗಮಿಸುತ್ತಿದ್ದಾರೆ ಎಂದು ನಿರಾಳವಾಗಬಹುದು. ಆದರೆ ನಿಜವಾಗಿಯೂ ಏನು ಬದಲಾಗಿದೆ?. ಇಂದು ಅಧಿಕಾರದಲ್ಲಿರುವ ಪ್ರತಿಯೊಬ್ಬ ಲಿಬರಲ್ ಪಕ್ಷದ ಸಂಸದರು ಮತ್ತು ಉನ್ನತ ಹುದ್ದೆಗಾಗಿ ಪೈಪೋಟಿ ನಡೆಸುತ್ತಿರುವವರು ಕಳೆದ ಒಂಬತ್ತು ವರ್ಷಗಳಿಂದ ದೇಶವನ್ನು ಒಡೆಯಲು ಜಸ್ಟಿನ್ ಟ್ರುಡೊಗೆ ಸಹಾಯ ಮಾಡಿದರು" ಎಂದು ದೂರಿದರು.
ಬ್ಯಾಂಕ್ ಆಫ್ ಕೆನಡಾ ಮತ್ತು ಬ್ಯಾಂಕ್ ಆಫ್ ಇಂಗ್ಲೆಂಡ್‌ನ ಮಾಜಿ ಮುಖ್ಯಸ್ಥ ಮಾರ್ಕ್ ಕಾರ್ನಿ ಪ್ರತಿಕ್ರಿಯಿಸಿ, ಜಸ್ಟಿನ್ ಟ್ರುಡೊ ಕೊಡುಗೆಗಳು ಮತ್ತು ಅವರ ತ್ಯಾಗಗಳಿಗಾಗಿ ಧನ್ಯವಾದಗಳನ್ನು ತಿಳಿಸಿದ್ದಾರೆ.