ಬೆಂಗಳೂರು: ನಗರದ ಹಳೆಯ ವಿಮಾನ ನಿಲ್ದಾಣ (ಹೆಚ್ಎಎಲ್) ರಸ್ತೆಯಲ್ಲಿರುವ ಕಮಾಂಡ್ ಆಸ್ಪತ್ರೆಯ ವಿಸ್ತರಣೆ ಉದ್ದೇಶಕ್ಕಾಗಿ 530 ಮರಗಳನ್ನು ಕತ್ತರಿಸಲು ಬಿಬಿಎಂಪಿ ನೀಡಿರುವ ಅನುಮತಿ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.
ಮೆಟ್ರೋ ಯೋಜನೆಗೆ ಮರಗಳನ್ನು ಕಡಿಯುವುದಕ್ಕೆ ಆಕ್ಷೇಪಿಸಿ ಪರಿಸರವಾದಿ ದತ್ತಾತ್ರೇಯ ಟಿ.ದೇವರೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ. ಅರುಣ್ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ. ಜೊತೆಗೆ, ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ಸಂಪರ್ಕ ಕಲ್ಪಿಸುವ ಮೆಟ್ರೋ ರೈಲು ಮಾರ್ಗಕ್ಕಾಗಿ 75 ಮರಗಳನ್ನು ಕಡಿಯಲು ಅನುಮತಿ ನೀಡುವ ಬಗ್ಗೆ ಫೆ.4ಕ್ಕೆ ವಿಚಾರಣೆ ನಡೆಸುವುದಾಗಿ ಪೀಠ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಕಮಾಂಡ್ ಆಸ್ಪತ್ರೆಯ ವಿಸ್ತರಣೆಗಾಗಿ ಬಿಬಿಎಂಪಿಯ ಟ್ರೀ ಅಧಿಕಾರಿ(ಮರ ಅಧಿಕಾರಿ) 530 ಮರಗಳನ್ನು ಕತ್ತರಿಸಲು ಅನುಮತಿ ನೀಡಿದ್ದಾರೆ. ಆದರೆ ಅದಕ್ಕೆ ಪರ್ಯಾಯವಾಗಿ ಎಷ್ಟು ಮರಗಳನ್ನು ನೆಡಲಾಗುತ್ತಿದೆ ಎಂಬ ವಿವರಗಳನ್ನು ಉಲ್ಲೇಖಿಸಿಲ್ಲ. ಜೊತೆಗೆ ಈ ನ್ಯಾಯಾಲಯ ಹಿಂದೆ ನೀಡಿರುವ ಆದೇಶದಂತೆ ಮರಗಳನ್ನು ಕಟಾವು ಮಾಡುವ ಬಗ್ಗೆ ಕೋರ್ಟ್ ನೇಮಕ ಮಾಡಿರುವ ತಜ್ಞರ ಸಮಿತಿ ಅದನ್ನು ಪರಿಶೀಲನೆ ನಡೆಸಿಲ್ಲ ಎಂದು ವಿವರಿಸಿದರು.
ಅಲ್ಲದೆ, ಪರ್ಯಾಯ ಗಿಡಗಳ ನೆಡುವಿಕೆಯನ್ನು ಬಿಬಿಎಂಪಿ ವ್ಯಾಪ್ತಿಯಿಂದ 45 ಕಿ.ಮೀ. ದೂರದಲ್ಲಿ ಅಂದರೆ ನೆಲಮಂಗಲದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದೆ. ನಗರದ ಹೃದಯ ಭಾಗದಲ್ಲಿ ಅಷ್ಟೊಂದು ಮರಗಳನ್ನು ಕಡಿದು, ಅವುಗಳಿಗೆ ಪರ್ಯಾಯವಾಗಿ ದೂರದಲ್ಲಿ ಗಿಡಗಳನ್ನು ನೆಟ್ಟರೆ ಏನು ಪ್ರಯೋಜನ? ಮರಗಳನ್ನು ಕಡಿಯಲು ಅನುಮತಿ ನೀಡುವಾಗ ನಿಯಮಗಳನ್ನು ಪಾಲನೆ ಮಾಡಿಲ್ಲ. ಹಾಗಾಗಿ ಸದ್ಯಕ್ಕೆ ಮರಗಳನ್ನು ಕತ್ತರಿಸಲು ಅನುಮತಿ ನೀಡಬಾರದು ಎಂದು ಪೀಠಕ್ಕೆ ಕೋರಿದರು.
ಅದಕ್ಕೆ ನ್ಯಾಯಪೀಠ, ಹಾಗಿದ್ದರೆ ಮುಂದಿನ ಆದೇಶವರೆಗೆ ಮರಗಳನ್ನು ಕತ್ತರಿಸಬಾರದು ಎಂದು ಮಧ್ಯಂತರ ಆದೇಶಿಸಿ ವಿಚಾರಣೆಯನ್ನು ಮುಂದೂಡಿತು. ನಂತರ ಬಿಎಂಆರ್‌ಸಿಎಲ್ ಪರ ಹಾಜರಾದ ಹಿರಿಯ ನ್ಯಾಯವಾದಿ ಧ್ಯಾನ್ ಚಿನ್ನಪ್ಪ, ವಿಮಾನಯಾನ ಕೈಗೊಳ್ಳುವ ಪ್ರಯಾಣಿಕರಿಗೆ ವಾಹನ ದಟ್ಟಣೆಯಿಂದ ಮುಕ್ತಿ ನೀಡಲು ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಗೆ ಸಂಪರ್ಕ ಕಲ್ಪಿಸುವ ಎತ್ತರಿಸಿದ ಮೆಟ್ರೊ ರೈಲು ಯೋಜನೆ ಕೈಗೊಳ್ಳಲಾಗಿದ್ದು, ಅದಕ್ಕಾಗಿ 75 ಮರಗಳನ್ನು ಕಡಿಯಬೇಕಾಗಿದೆ. ತಜ್ಞರ ಸಮಿತಿ ಪರಿಶೀಲನೆ ನಡೆಸಿ 75 ಮರಗಳ ಪೈಕಿ 15 ಮರಗಳನ್ನು ಉಳಿಸಿಕೊಳ್ಳಬಹುದು, 5 ಮರಗಳನ್ನು ಸ್ಥಳಾಂತರ ಮಾಡಬಹುದು ಮತ್ತು 55 ಮರಗಳನ್ನು ತೆರವು ಮಾಡಬೇಕೆಂದು ವರದಿ ನೀಡಿದೆ. ಅದರಂತೆ 55 ಮರಗಳನ್ನು ಕತ್ತರಿಸಲು ತುರ್ತಾಗಿ ಅನುವು ಮಾಡಿಕೊಡಬೇಕು ಎಂದು ನ್ಯಾಯಪೀಠವನ್ನು ಕೋರಿದರು.
ಆದರೆ ಅದಕ್ಕೆ ತೀವ್ರ ಆಕ್ಷೇಪ ಎತ್ತಿದ ಅರ್ಜಿದಾರರ ಪರ ವಕೀಲರು, ಬಿಎಂಆರ್‌ಸಿಎಲ್ ಪ್ರತಿ ಬಾರಿಯೂ ಮರಗಳನ್ನು ಕಡಿಯುವ ತುರ್ತು ಇದೆ, ಅನುಮತಿ ನೀಡದಿದ್ದರೆ ಯೋಜನಾ ವೆಚ್ಚ ಹೆಚ್ಚಲಿದೆ ಎಂಬ ನೆಪ ಹೇಳಿ ಅನುಮತಿ ಪಡೆಯುತ್ತಿದೆ. ಆದರೆ ಮೆಟ್ರೋ ರೈಲು ನಿಗಮ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ, ಈವರೆಗೆ ಕತ್ತರಿಸಿರುವ ಮರಗಳಿಗೆ ಪರ್ಯಾಯವಾಗಿ 4 ಸಾವಿರ ಸಸಿಗಳನ್ನು ನೆಡಬೇಕಾಗಿತ್ತು. ಈವರೆಗೆ ಈ ಕೆಲಸ ಆಗಿಲ್ಲ, ನ್ಯಾಯಾಲಯದ ಆದೇಶಗಳನ್ನು ನಿಗಮ ಪಾಲನೆ ಮಾಡುತ್ತಿಲ್ಲ. ಹಾಗಾಗಿ ಅನುಮತಿ ನೀಡಬಾರದು ಎಂದು ಪೀಠಕ್ಕೆ ಮನವರಿಕೆ ಮಾಡಿದರು.
ಈ ವೇಳೆ ಪೀಠ, ಮರಗಳನ್ನು ಕತ್ತರಿಸಲು ಅನುಮತಿ ನೀಡುವ ಬಗ್ಗೆ ಫೆ.4ರಂದು ವಿಚಾರಣೆ ನಡೆಸುವುದಾಗಿ ಹೇಳಿ ವಿಚಾರಣೆ ಮುಂದೂಡಿತು.
ಇದನ್ನೂ ಓದಿ: ಹೊಸ ನಕ್ಷೆ ಮಂಜೂರಾತಿಗೆ ಬಿಬಿಎಂಪಿಯಿಂದ 17 ಲಕ್ಷ ರೂ ಶುಲ್ಕ: ಹಿರಿಯ ವಕೀಲರಿಂದ ಹೈಕೋರ್ಟ್ ಮೊರೆ, ಸರ್ಕಾರಕ್ಕೆ ನೋಟಿಸ್