ನವದೆಹಲಿ: ಅಫ್ಘಾನಿಸ್ತಾನದ ಮೇಲೆ ಇತ್ತೀಚೆಗೆ ಪಾಕಿಸ್ತಾನ ನಡೆಸಿದ ವೈಮಾನಿಕ ದಾಳಿಯನ್ನು ಭಾರತ ಸೋಮವಾರ ಖಂಡಿಸಿದ್ದು, ತನ್ನ ಆಂತರಿಕ ವೈಫಲ್ಯಗಳಿಗೆ ಬೇರೆಯವರನ್ನು ದೂಷಿಸುವುದು ಇಸ್ಲಾಮಾಬಾದ್ನ ಹಳೆಯ ಚಾಳಿಯಾಗಿದೆ ಎಂದು ಹೇಳಿದೆ.
"ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅಫ್ಘಾನ್ ನಾಗರಿಕರ ಮೇಲೆ ವೈಮಾನಿಕ ದಾಳಿ ನಡೆಯುತ್ತಿರುವ ಬಗ್ಗೆ ಮಾಧ್ಯಮ ವರದಿಗಳನ್ನು ನಾವು ಗಮನಿಸಿದ್ದೇವೆ. ದಾಳಿಯಲ್ಲಿ ಹಲವಾರು ಅಮೂಲ್ಯ ಜೀವಗಳು ಕಳೆದುಹೋಗಿವೆ" ಎಂದು ವಿದೇಶಾಂಗ ಸಚಿವಾಲಯದ (ಎಂಇಎ) ವಕ್ತಾರ ರಣಧೀರ್ ಜೈಸ್ವಾಲ್ ಸೋಮವಾರ ಅಫ್ಘಾನ್ ನಾಗರಿಕರ ಮೇಲಿನ ವೈಮಾನಿಕ ದಾಳಿಯ ಬಗ್ಗೆ ಮಾಧ್ಯಮ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
"ಮುಗ್ಧ ನಾಗರಿಕರ ಮೇಲೆ ಯಾವುದೇ ರೀತಿಯ ದಾಳಿಯನ್ನು ನಾವು ನಿಸ್ಸಂದಿಗ್ಧವಾಗಿ ಖಂಡಿಸುತ್ತೇವೆ. ತನ್ನ ಆಂತರಿಕ ವೈಫಲ್ಯಗಳಿಗೆ ನೆರೆಹೊರೆಯವರನ್ನು ದೂಷಿಸುವುದು ಪಾಕಿಸ್ತಾನದ ಹಳೆಯ ಅಭ್ಯಾಸವಾಗಿದೆ. ಈ ನಿಟ್ಟಿನಲ್ಲಿ ಅಫ್ಘಾನ್ ವಕ್ತಾರರ ಪ್ರತಿಕ್ರಿಯೆಯನ್ನು ಸಹ ನಾವು ಗಮನಿಸಿದ್ದೇವೆ" ಎಂದು ಅವರು ಹೇಳಿದರು.
ಡಿಸೆಂಬರ್ 24 ರಂದು, ಅಫ್ಘಾನಿಸ್ತಾನದೊಳಗೆ ಪಾಕಿಸ್ತಾನ ನಡೆಸಿದ ವಾಯು ದಾಳಿಯಲ್ಲಿ ಹಲವಾರು ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 46 ಜನ ಸಾವಿಗೀಡಾಗಿದ್ದಾರೆ. ಪಾಕಿಸ್ತಾನದ ಕ್ರಮಕ್ಕೆ ವಿಶ್ವಾದ್ಯಂತ ತೀವ್ರ ಖಂಡನೆ ವ್ಯಕ್ತವಾಗಿದೆ. ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಎಚ್ಚರಿಕೆ ನೀಡಿದೆ.
ಪಕ್ತಿಕಾ ಪ್ರಾಂತ್ಯದ ಬರ್ಮಲ್ ಜಿಲ್ಲೆಯ ಕೆಲ ಭಾಗಗಳ ಮೇಲೆ ಪಾಕಿಸ್ತಾನದ ಫೈಟರ್ ಜೆಟ್ಗಳು ನಡೆಸಿದ ವೈಮಾನಿಕ ದಾಳಿಯು 2024 ರಲ್ಲಿ ಇಸ್ಲಾಮಾಬಾದ್ ನೇರವಾಗಿ ಅಫ್ಘಾನ್ ಭೂಪ್ರದೇಶದ ನಾಗರಿಕ ಪ್ರದೇಶಗಳ ಮೇಲೆ ದಾಳಿ ನಡೆಸಿದ ಎರಡನೇ ದಾಳಿಯಾಗಿದೆ. ಮಾರ್ಚ್ 2024 ರಲ್ಲಿ, ಇದೇ ರೀತಿಯ ದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ ಎಂಟು ಜನ ಸಾವಿಗೀಡಾಗಿದ್ದರು.
"ಆಫ್ಘನ್ನರು ತಮ್ಮ ಭೂಪ್ರದೇಶದ ಮೇಲಿನ ಆಕ್ರಮಣವನ್ನು ಮರೆಯುವುದಿಲ್ಲ. ಪಾಕಿಸ್ತಾನದ ಆಡಳಿತಗಾರರು ತಮ್ಮ ಕೃತ್ಯಗಳನ್ನು ನಿಯಂತ್ರಿಸಿಕೊಳ್ಳುವುದು ಒಳ್ಳೆಯದು" ಎಂದು ಅಫ್ಘಾನಿಸ್ತಾನದ ಹಂಗಾಮಿ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಾಕಿ ಹೇಳಿದ್ದಾರೆ.
ಸೋವಿಯತ್ ಆಕ್ರಮಣದ 45 ನೇ ವಾರ್ಷಿಕೋತ್ಸವದ ನಿಮಿತ್ತವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಮುತ್ತಾಕಿ, "ಸೋವಿಯತ್ ಒಕ್ಕೂಟ ಮತ್ತು ಯುನೈಟೆಡ್ ಸ್ಟೇಟ್ಸ್ ಗಳ ಗತಿ ಏನಾಯಿತು ಎಂಬುದನ್ನು ನೋಡಿ ಪಾಕಿಸ್ತಾನ ಪಾಠ ಕಲಿಯಲಿ. ಅಫ್ಘಾನಿಸ್ತಾನವು ಎಂದಿಗೂ ಆಕ್ರಮಣಗಳನ್ನು ಸಹಿಸುವುದಿಲ್ಲ" ಎಂದರು.
ಇದನ್ನೂ ಓದಿ : ಪಡೆಗಳನ್ನು ಹಿಂಪಡೆಯದಿದ್ದರೆ ಕದನ ವಿರಾಮ ಒಪ್ಪಂದ ಅಂತ್ಯ: ಹಿಜ್ಬುಲ್ಲಾಗೆ ಇಸ್ರೇಲ್ ಎಚ್ಚರಿಕೆ - ISRAEL HEZBOLLAH WAR