ಇಸ್ಲಾಮಾಬಾದ್: ಅಫ್ಘಾನಿಸ್ತಾನದ ಪಕ್ತಿಕಾ ಪ್ರಾಂತ್ಯದ ಮೇಲೆ ಇತ್ತೀಚೆಗೆ ತಾನು ನಡೆಸಿದ ವೈಮಾನಿಕ ದಾಳಿಯನ್ನು ಸಮರ್ಥಿಸಿಕೊಂಡಿರುವ ಪಾಕಿಸ್ತಾನ ಸರ್ಕಾರ, ಅಗತ್ಯ ಬಿದ್ದರೆ ಅಫ್ಘಾನಿಸ್ತಾನದೊಳಗಿನ ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ (ಟಿಟಿಪಿ) ಸಂಘಟನೆಯ ಅಡಗುತಾಣಗಳ ಮೇಲೆ ಮತ್ತೆ ದಾಳಿ ನಡೆಸುವುದಾಗಿ ಸೋಮವಾರ ಹೇಳಿದೆ.
"ಅಫ್ಘಾನಿಸ್ತಾನದ ಭೂಪ್ರದೇಶವನ್ನು ಬಳಸಿಕೊಂಡು ನಮ್ಮ ಮೇಲೆ ದಾಳಿ ಮಾಡಿದರೆ ಪಾಕಿಸ್ತಾನಕ್ಕೆ ಪ್ರತಿದಾಳಿ ನಡೆಸುವ ಕಾನೂನುಬದ್ಧ ಹಕ್ಕಿದೆ" ಎಂದು ಪ್ರಧಾನಿ ಶೆಹಬಾಜ್ ಷರೀಫ್ ಅವರ ರಾಜಕೀಯ ವ್ಯವಹಾರಗಳ ವಿಶೇಷ ಸಹಾಯಕ ರಾಣಾ ಸನಾವುಲ್ಲಾ ಸೋಮವಾರ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಾಲಿಬಾನ್ ದಂಗೆಕೋರರಿಗೆ ಅಫ್ಘಾನಿಸ್ತಾನ ಸುರಕ್ಷಿತ ಆಶ್ರಯವನ್ನು ಒದಗಿಸುತ್ತಿದೆ ಮತ್ತು ಪಾಕಿಸ್ತಾನದೊಳಗೆ ಭಯೋತ್ಪಾದಕ ಚಟುವಟಿಕೆ ನಡೆಸಲು ಅವರನ್ನು ಬೆಂಬಲಿಸುತ್ತಿದೆ ಎಂದು ಇಸ್ಲಾಮಾಬಾದ್ ಆರೋಪಿಸಿದೆ.
ಪಾಕ್ಗೆ ಎಚ್ಚರಿಕೆ ಕೊಟ್ಟ ಅಪ್ಘಾನಿಸ್ತಾನ: ಪಾಕಿಸ್ತಾನದ ದಾಳಿಗಳ ಬಗ್ಗೆ ಕಳೆದ ವಾರಾಂತ್ಯ ಪ್ರತಿಕ್ರಿಯೆ ನೀಡಿದ ಅಫ್ಘಾನಿಸ್ತಾನದ ರಾಜಕೀಯ ವ್ಯವಹಾರಗಳ ಉಪ ವಿದೇಶಾಂಗ ಸಚಿವ ಶೇರ್ ಮೊಹಮ್ಮದ್ ಅಬ್ಬಾಸ್ ಸ್ತಾನಿಕಜೈ, ಪರಮಾಣು ಬಾಂಬ್ಗಿಂತಲೂ ಪ್ರಬಲವಾಗಿ ಕೆಲಸ ಮಾಡಬಲ್ಲ ಹೋರಾಟಗಾರರು ನಮ್ಮ ಬಳಿ ಇದ್ದಾರೆ ಎಂದು ಎಚ್ಚರಿಕೆ ನೀಡಿದ್ದರು.
"ಇಸ್ಲಾಮಾಬಾದ್ ತನ್ನ ಪಶ್ಚಿಮಕ್ಕಿರುವ ನೆರೆಯ ರಾಷ್ಟ್ರದ ತಾಳ್ಮೆಯನ್ನು ಪರೀಕ್ಷಿಸುವುದು ಬೇಡ. ಅಫ್ಘಾನಿಸ್ತಾನ ಸರ್ಕಾರದ ತಾಳ್ಮೆಯನ್ನು ಪಾಕಿಸ್ತಾನ ಹಗುರವಾಗಿ ತೆಗೆದುಕೊಳ್ಳುವುದು ಸರಿಯಲ್ಲ. ಪರಮಾಣು ಬಾಂಬ್ಗೆ ಸಮನಾದ ಸಾಮರ್ಥ್ಯ ಹೊಂದಿರುವ ಹೋರಾಟಗಾರರು ನಮ್ಮಲ್ಲಿದ್ದಾರೆ. ನಾವು ಮಹಮೂದ್ ಘಜ್ನವಿ, ಬಾಬರ್ ಮತ್ತು ಅಹ್ಮದ್ ಷಾ ಅಬ್ದಾಲಿ ಅವರ ಕೇವಲ ಐವರು ಪುತ್ರರನ್ನು ನಮ್ಮ ಗಡಿಯಿಂದ ನಿಮ್ಮ ಕಡೆಗೆ ಬಿಟ್ಟರೆ ಸಾಕು, ಹಿಂದೂ ಮಹಾಸಾಗರಕ್ಕೂ ಅವರನ್ನು ತಡೆಯಲು ಸಾಧ್ಯವಾಗದು" ಎಂದು ಸ್ತಾನಿಕಜೈ ಶನಿವಾರ ಕಾಬೂಲ್ನಲ್ಲಿ ಪದವಿ ಪ್ರದಾನ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಾ ಹೇಳಿದರು.
ಅಫ್ಘಾನಿಸ್ತಾನದ ತಾಲಿಬಾನ್ ಪಾಕಿಸ್ತಾನದ ವಿರುದ್ಧ ದಾಳಿ ಮಾಡಲು ಅಗತ್ಯವಿರುವ ಧನಸಹಾಯ ಸೇರಿದಂತೆ ಟಿಟಿಪಿಗೆ ಎಲ್ಲಾ ರೀತಿಯಿಂದಲೂ ಬೆಂಬಲ ನೀಡುತ್ತಿದೆ ಮತ್ತು ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲು ಕಾಬೂಲ್ ವಿಫಲವಾಗಿದೆ ಎಂದು ಇಸ್ಲಾಮಾಬಾದ್ ಹೇಳಿದೆ. ಏತನ್ಮಧ್ಯೆ, ಟಿಟಿಪಿ ಪಾಕಿಸ್ತಾನದ ಮಿಲಿಟರಿ ಮತ್ತು ಭದ್ರತಾ ನೆಲೆಗಳ ಮೇಲೆ ದಾಳಿ ಮುಂದುವರಿಸಿದ್ದು, ದಾಳಿಗಳ ವ್ಯಾಪ್ತಿಯನ್ನು ವಿಸ್ತರಿಸಲು ಪ್ರಯತ್ನಿಸುತ್ತಿದೆ.
ಟಿಟಿಪಿಯನ್ನು "ಫಿತ್ನಾ ಅಲ್ ಖವಾರಿಜ್" ಎಂದು ಕರೆಯುವುದನ್ನು ನಿಲ್ಲಿಸುವಂತೆ ಆಡಳಿತ ಪಕ್ಷ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (ಪಿಎಂಎಲ್-ಎನ್) ಸೇರಿದಂತೆ ರಾಜಕೀಯ ಪಕ್ಷಗಳಿಗೆ ಟಿಟಿಪಿ ಎಚ್ಚರಿಕೆ ನೀಡಿದೆ. ಟಿಟಿಪಿ ಇಸ್ಲಾಂ ಧರ್ಮಕ್ಕೆ ಹಾನಿಯುಂಟು ಮಾಡಿದೆ ಮತ್ತು ಈ ಭಯೋತ್ಪಾದಕರಿಗೆ ಧರ್ಮದ ಬಗ್ಗೆ ನಿಜವಾದ ಆಸಕ್ತಿ ಇಲ್ಲ ಎಂದು ಪಾಕಿಸ್ತಾನ ಸರ್ಕಾರ ಹೇಳಿದೆ. ಇಸ್ಲಾಮಿಕ್ ಬೋಧನೆಗಳ ಪ್ರಕಾರ, ಇಂಥವರನ್ನು "ಫಿತ್ನಾ ಅಲ್-ಖವಾರಿಜ್" ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ : 'ಬೇರೆಯವರನ್ನು ದೂಷಿಸುವುದು ಇಸ್ಲಾಮಾಬಾದ್ನ ಹಳೆಯ ಚಾಳಿ': ಅಫ್ಘಾನಿಸ್ತಾನ ಮೇಲಿನ ಪಾಕ್ ದಾಳಿಗೆ ಭಾರತದ ಖಂಡನೆ - INDIA CONDEMNS PAK