ಕರ್ನಾಟಕ

karnataka

ETV Bharat / international

ರಷ್ಯಾದಲ್ಲಿ ಭಾರತೀಯ ಚಲನಚಿತ್ರಗಳು ಜನಪ್ರಿಯ: 'ಸ್ನೇಹಿತ' ಮೋದಿಗೆ ರಷ್ಯಾದ 'ಕೃತಜ್ಞತೆ' ಎಂದ ಪುಟಿನ್​ - PUTIN ON INDIAN FILMS

ಮಾಸ್ಕೋದಲ್ಲಿ ನಡೆದ ಸಂವಾದದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಉಕ್ರೇನ್‌ ಯುದ್ಧದ ಅಂತ್ಯ, ಯುದ್ಧದ ಬಗ್ಗೆ ಮೋದಿ ನಿಲುವು, 16 ನೇ ಬ್ರಿಕ್ಸ್ ಶೃಂಗಸಭೆ, ಭಾರತೀಯ ಸಿನಿಮಾಗೆ ಉತ್ತೇಜನ ನೀಡುವ ಬಗ್ಗೆ ಚರ್ಚಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ವ್ಲಾಡಿಮಿರ್​ ಪುಟಿನ್
ಪ್ರಧಾನಿ ನರೇಂದ್ರ ಮೋದಿ ಹಾಗೂ ವ್ಲಾಡಿಮಿರ್​ ಪುಟಿನ್ (ETV Bharat)

By PTI

Published : Oct 19, 2024, 9:39 AM IST

ಮಾಸ್ಕೋ(ರಷ್ಯಾ): ಉಕ್ರೇನ್‌ನಲ್ಲಿ ಸುದೀರ್ಘ ಯುದ್ಧ ಕೊನೆಗೊಳಿಸಲು ಸಮಯವನ್ನು ನಿರ್ದಿಷ್ಟಪಡಿಸುವುದು ಕಷ್ಟ. ಯುದ್ಧದಲ್ಲಿ ಯಾವುದೇ ನಿಯೋಜಿತ ವೇಳಾಪಟ್ಟಿ ಇಲ್ಲ. ಆದರೆ, ತಮ್ಮ ದೇಶವು ಗೆಲ್ಲುತ್ತದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಪ್ರತಿಪಾದಿಸಿದ್ದಾರೆ.

ಮಾಸ್ಕೋದಲ್ಲಿ ಶುಕ್ರವಾರ ಬ್ರಿಕ್ಸ್ ದೇಶಗಳ ಹಿರಿಯ ಸಂಪಾದಕರೊಂದಿಗೆ ನಡೆದ ಸಂವಾದದಲ್ಲಿ ಮಾತನಾಡಿರುವ ಪುಟಿನ್, ಯುದ್ಧದ ಪರಿಸ್ಥಿತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರ ಕಾಳಜಿಯನ್ನು ಶ್ಲಾಘಿಸಿದ್ದಾರೆ. 'ಬ್ರಿಕ್ಸ್ ಪಾಶ್ಚಿಮಾತ್ಯ ವಿರೋಧಿ ಅಲ್ಲ. ಆದರೆ, ಪಾಶ್ಚಿಮಾತ್ಯೇತರ' ಎಂಬ ಮೋದಿ ಅವರ ಹೇಳಿಕೆಗೆ ಭಾರತೀಯ ನಾಯಕ ಸೂಕ್ತವಾಗಿ ವಿಶ್ಲೇಷಿಸಿದ್ದಾರೆ ಎಂದಿದ್ದಾರೆ ಪುಟಿನ್.

ಇನ್ನು ವ್ಲಾಡಿಮಿರ್ ಪುಟಿನ್ ಆಯೋಜಿಸಿರುವ 16ನೇ ಬ್ರಿಕ್ಸ್ ಶೃಂಗಸಭೆ ಅಕ್ಟೋಬರ್ 22 - 23 ರಂದು ನಡೆಯಲಿದ್ದು, ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೋದಿ ರಷ್ಯಾದ ಕಜನ್‌ಗೆ ಭೇಟಿ ನೀಡಲಿದ್ದಾರೆ.

ಭಾರತೀಯ ಸಿನಿಮಾಗಳ ಬಗ್ಗೆ ಪುಟಿನ್​ ಮಾತು: ಸಂವಾದದಲ್ಲಿ ಭಾರತೀಯ ಸಿನಿಮಾಗಳ ಬೆಳವಣಿಗೆ ಬಗ್ಗೆ ಉಲ್ಲೇಖಿಸಿ ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, "ಭಾರತೀಯ ಚಲನಚಿತ್ರಗಳು ರಷ್ಯಾದಲ್ಲಿ ಬಹಳ ಜನಪ್ರಿಯವಾಗಿವೆ. ಪ್ರಧಾನಿ ಮೋದಿ ಅವರನ್ನು ಭೇಟಿಯಾದಾಗ ಭಾರತೀಯ ಚಲನಚಿತ್ರಗಳಿಗೆ ಉತ್ತೇಜನ ನೀಡುವ ಬಗ್ಗೆ ಚರ್ಚಿಸಬಹುದು. ಭಾರತೀಯ ಸ್ನೇಹಿತರು ಆಸಕ್ತಿಯನ್ನು ಹೊಂದಿದ್ದರೆ, ರಷ್ಯಾದ ಮಾರುಕಟ್ಟೆಗೆ ಭಾರತೀಯ ಚಲನಚಿತ್ರಗಳನ್ನು ಉತ್ತೇಜಿಸಲು, ಅದಕ್ಕಾಗಿ ಸಾಮಾನ್ಯ ನೆಲೆಯನ್ನು ಕಂಡುಕೊಳ್ಳಲು ನಾವು ಸಕಾರಾತ್ಮಕವಾಗಿದ್ದೇವೆ" ಎಂದು ಭಾರತೀಯ​ ಸಿನಿಮಾದ ಬಗೆಗಿನ ತಮ್ಮ ಪ್ರೀತಿಯನ್ನು ಪುಟಿನ್​ ವ್ಯಕ್ತಪಡಿಸಿದರು.

'ಸ್ನೇಹಿತ' ಮೋದಿಗೆ ರಷ್ಯಾ 'ಕೃತಜ್ಞತೆ':ರಷ್ಯಾ ಮತ್ತು ಉಕ್ರೇನ್ ನಡುವೆ ಶಾಂತಿ ಮಾತುಕತೆಯಲ್ಲಿ ಭಾರತದ ಪಾತ್ರವನ್ನು ನೀವು ನೋಡಿದ್ದೀರಾ ಎಂಬ ಮಾಧ್ಯಮ ಪ್ರಶ್ನೆಗೆ 'ಸ್ನೇಹಿತ' ಎಂದು ಮೋದಿಯನ್ನು ಕರೆದ ಪುಟಿನ್​, ಯುದ್ಧದ ಕುರಿತು ಮೋದಿ ಕಾಳಜಿಗೆ ರಷ್ಯಾ 'ಕೃತಜ್ಞತೆ ಸಲ್ಲಿಸುತ್ತದೆ' ಎಂದರು.

ಇನ್ನು ಪ್ರಧಾನಿ ಮೋದಿ ಅವರು ಕೀವ್​​ನಲ್ಲಿ ಉಕ್ರೇನ್​ ಅಧ್ಯಕ್ಷ ಝೆಲನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದ ಕೆಲವೇ ದಿನಗಳ ನಂತರ, ಅಂದರೆ ಆಗಸ್ಟ್ 27ರಂದು ಫೋನ್‌ ಕರೆಯಲ್ಲಿ ಪುಟಿನ್‌ಗೆ 'ರಷ್ಯಾ-ಉಕ್ರೇನ್ ಸಂಘರ್ಷಕ್ಕೆ ಆರಂಭಿಕ, ಶಾಂತಿಯುತ ಪರಿಹಾರವನ್ನು ಬೆಂಬಲಿಸುವುದಾಗಿ' ತಿಳಿಸಿದ್ದರು.

ಸೆಪ್ಟೆಂಬರ್ 5 ರಂದು ಪುಟಿನ್​ ತಮ್ಮ ಹೇಳಿಕೆಯಲ್ಲಿ, ಭಾರತ, ಚೀನಾ ಮತ್ತು ಬ್ರೆಜಿಲ್ ಉಕ್ರೇನ್ ಸಂಘರ್ಷವನ್ನು ಪರಿಹರಿಸಲು ರಷ್ಯಾ ಸಂಪರ್ಕದಲ್ಲಿರುವ ದೇಶಗಳೆಂದು ತಿಳಿಸಿದ್ದರು. ರಷ್ಯಾವನ್ನು ಯುದ್ಧಕ್ಕೆ ತಳ್ಳಿದ್ದಕ್ಕಾಗಿ ಅಮೆರಿಕ ಮತ್ತು ನ್ಯಾಟೋವನ್ನು ದೂಷಿಸಿದ ಪುಟಿನ್​, ರಷ್ಯಾ ಮೇಲುಗೈ ಸಾಧಿಸುತ್ತದೆ. ಉಕ್ರೇನ್ ಸೇನೆಯು ತನ್ನದೇ ಆದ ನಿಖರವಾದ ಶಸ್ತ್ರಾಸ್ತ್ರ ವಿತರಣಾ ವ್ಯವಸ್ಥೆಯನ್ನು ನಿಭಾಯಿಸಲು ಸಾಧ್ಯವಿಲ್ಲ ಎಂದು ಅವರು ಇದೇ ವೇಳೆ ಟೀಕಿಸಿದರು.

ಮುಂದುವರೆದು "ಇದೆಲ್ಲವನ್ನೂ ನ್ಯಾಟೋ ವೃತ್ತಿಪರರು ಮಾಡುತ್ತಾರೆ. ಆದರೆ ವ್ಯತ್ಯಾಸ ಏನು ಗೊತ್ತಾ? ನ್ಯಾಟೋ ನಮ್ಮ ವಿರುದ್ಧ ಯುದ್ಧವನ್ನು ನಡೆಸುತ್ತಿದೆ. ರಷ್ಯಾದ ಸೈನ್ಯವು ವಿಶ್ವದ ಅತ್ಯಂತ ಯುದ್ಧ ಪರಿಣಾಮಕಾರಿ ಮತ್ತು ಹೈಟೆಕ್ ಸೈನ್ಯಗಳಲ್ಲಿ ಒಂದಾಗಿದೆ. ನ್ಯಾಟೋ ನಮ್ಮ ವಿರುದ್ಧ ಈ ಯುದ್ಧವನ್ನು ನಡೆಸಿ ನಡೆಸಿ ಬೇಸತ್ತಿದೆ" ಎಂದು ತಮ್ಮ ರಾಷ್ಟ್ರದ ಸಾಮರ್ಥ್ಯವನ್ನು ಸಮರ್ಥಿಸಿಕೊಂಡರು.

'ನಾವು ಮೇಲುಗೈ ಸಾಧಿಸುತ್ತೇವೆ ಮತ್ತು ನಾವು ಗೆಲ್ಲುತ್ತೇವೆ' ಎಂದು ಪುಟಿನ್​ ಮಾಧ್ಯಮ ಸಂವಾದದಲ್ಲಿ ಪುನರುಚ್ಚರಿಸಿದ್ದಾರೆ. ಗಾಜಾದಲ್ಲಿ ಉಲ್ಬಣಗೊಳ್ಳುತ್ತಿರುವ ಪರಿಸ್ಥಿತಿಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪುಟಿನ್​ ಪ್ಯಾಲೆಸ್ತೀನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರನ್ನು ಬ್ರಿಕ್ಸ್ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಕೆನಡಾ ಪ್ರಧಾನಿ ಟ್ರುಡೊ ಭಾರತ ವಿರೋಧಿ ಧೋರಣೆ ಅವಿವೇಕತನದ್ದು ಏಕೆ?: ವಿಶ್ಲೇಷಣೆ

ABOUT THE AUTHOR

...view details