ಕೀವ್(ಉಕ್ರೇನ್):ಉಕ್ರೇನ್‌ನ ಮಧ್ಯ-ಪೂರ್ವ ಪ್ರದೇಶದ ಪೋಲ್ಟವಾ ನಗರದ ಶೈಕ್ಷಣಿಕ ಸಂಸ್ಥೆ ಮತ್ತು ಸಮೀಪದ ಆಸ್ಪತ್ರೆಯ ಮೇಲೆ ರಷ್ಯಾ ಮಂಗಳವಾರ ನಡೆಸಿದ ಭಾರಿ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 51 ಜನರು ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 2022ರಿಂದ ನಡೆಯುತ್ತಿರುವ ಯುದ್ಧದಲ್ಲಿ ರಷ್ಯಾ ನಡೆಸಿದ ಅತ್ಯಂತ ಭೀಕರ ದಾಳಿಗಳ ಪೈಕಿ ಇದು ಒಂದು ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ತಿಳಿಸಿದ್ದಾರೆ.
ಘಟನೆಯಿಂದ ಮೃತಪಟ್ಟವರಿಗೆ ಸಂತಾಪ ವ್ಯಕ್ತಪಡಿಸಿರುವ ಝೆಲೆನ್‌ಸ್ಕಿ, ಹಲವಾರು ಜನರು ಅವಶೇಷಗಳಡಿ ಸಿಲುಕಿದ್ದಾರೆ ಎಂದು ಆಘಾತ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ದಾಳಿಯ ಕುರಿತು ಅಂತಾರಾಷ್ಟ್ರೀಯ ತನಿಖೆಗೂ ಒತ್ತಾಯಿಸಿದ್ದಾರೆ. ಸಂಕಷ್ಟದ ಸಂದರ್ಭದಲ್ಲಿ ನೆರವಿಗೆ ನಿಂತವರಿಗೆ ಧನ್ಯವಾದ ಹೇಳಿದ್ದಾರೆ.