ಮಂಗಳೂರು: "ನಗರದ ಮೀನುಗಾರಿಕಾ ಬಂದರಿನ 3ನೇ ಹಂತದ ಕಾಮಗಾರಿಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮಂಗಳೂರು ಹಳೆ ಬಂದರು ವ್ಯಾಪ್ತಿಯಲ್ಲಿ 11 ಫ್ಲೋಟಿಂಗ್ ಜೆಟ್ಟಿ ಕಾಮಗಾರಿಗಳು ಮಂಜೂರಾಗಿವೆ. ಉಳ್ಳಾಲ ಕೋಡಿಯಲ್ಲಿ ನಾಡದೋಣಿಗಳು ತಂಗಲು ಜೆಟ್ಟಿ ನಿರ್ಮಿಸಲು ರಾಜ್ಯ ಸರ್ಕಾರ ಮಂಜೂರಾತಿ ನೀಡಿದೆ" ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ನಗರದ ನೆಹರೂ ಮೈದಾನದಲ್ಲಿ ಜಿಲ್ಲಾಡಳಿತದಿಂದ ಭಾನುವಾರ ಆಯೋಜನೆಗೊಂಡಿದ್ದ ಗಣರಾಜ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು. "ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಡಿ ಜಿಲ್ಲೆಯಲ್ಲಿ ಅಡಿಕೆ ಮತ್ತು ಕಾಳು-ಮೆಣಸು ಬೆಳೆಗಳನ್ನು ಅಧಿಸೂಚಿಸಲಾಗಿದ್ದು, ಜಿಲ್ಲೆಯಲ್ಲಿ 1.32 ಲಕ್ಷ ಪ್ರಕರಣಗಳು ವಿಮೆಗೆ ನೋಂದಣಿಯಾಗಿವೆ" ಎಂದರು.
"ತೋಟಗಾರಿಕೆ ಬೆಳೆಗಳ ಕೀಟ ಮತ್ತು ರೋಗಗಳ ಸಮಗ್ರ ನಿಯಂತ್ರಣ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಗೆ 30 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಇದನ್ನು ಅಡಿಕೆ ಎಲೆ ಚುಕ್ಕೆ ರೋಗ, ಒಣಗುವ ರೋಗ, ಸುಳಿ ಕೊಳೆ ರೋಗ ಹಾಗೂ ಕಾಳು-ಮೆಣಸು ಶೀಘ್ರ ಸೊರಗು ರೋಗ ನಿಯಂತ್ರಣಕ್ಕೆ ವೆಚ್ಚ ಮಾಡಲಾಗುತ್ತಿದೆ. ಅಡಿಕೆ ಹಳದಿ ಎಲೆ ರೋಗ ನಿಯಂತ್ರಣಕ್ಕಾಗಿ ಸಂಶೋಧನೆಯನ್ನು ಕೈಗೊಳ್ಳಲು ಕೇಂದ್ರೀಯ ತೋಟದ ಬೆಳೆಗಳ ಸಂಶೋಧನಾ ಸಂಸ್ಥೆ(CPCRI)ಗೆ ಈಗಾಗಲೇ 50 ಲಕ್ಷ ರೂ. ಅನುದಾನ ಬಿಡುಗಡೆ ಮಾಡಲಾಗಿದೆ" ಎಂದರು.
ಜಲಜೀವನ್ ಮಿಷನ್ ಯೋಜನೆಯಡಿ ಜಿಲ್ಲೆಯಲ್ಲಿ 700 ಕಾಮಗಾರಿಗಳನ್ನು ಕೈಗೊಂಡಿದ್ದು, ರೂ. 573 ಕೋಟಿಗೆ ಅನುಮೋದನೆಗೊಂಡಿದೆ. 57997 ಮನೆಗಳಿಗೆ ನಲ್ಲಿ (ಕೊಳಾಯಿ) ನೀರಿನ ಸಂಪರ್ಕ ನೀಡಲಾಗಿದ್ದು, ಬಾಕಿ ಉಳಿದ ಮನೆಗಳಿಗೆ ತ್ವರಿತಗತಿಯಲ್ಲಿ ಸಂಪರ್ಕ ನೀಡಲಾಗುವುದು. ಜಿಲ್ಲೆಯಲ್ಲಿ 7 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಅಲಂಕಾರು, ಕುಟುಪಾಡಿ, ಮೂಡಬಿದ್ರೆ, ಉಳಾಯಿಬೆಟ್ಟು, ಇಳಂತಿಲ ಹಾಗೂ ಉಳ್ಳಾಲ-ಕೋಟೆಕಾರುಗಳಲ್ಲಿ 1313 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳು ಪ್ರಗತಿಯಲ್ಲಿದೆ" ಎಂದರು.
ಮೆದುಳು ನಿಷ್ಕ್ರಿಯಗೊಂಡ ಉಪನ್ಯಾಸಕಿ ಫ್ಲಾವಿಯಾ ಡಿಸೋಜರ ಅಂಗಾಂಗ ದಾನ ಮಾಡಿದ ಪೋಷಕರನ್ನು ಗಣರಾಜ್ಯೋತ್ಸವದ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಸಿಎಂ ಬದಲಾವಣೆ ವಿಚಾರದಲ್ಲಿ ಪ್ರತಿಕ್ರಿಯೆ ನೀಡಿ, "ಸಿಎಂ ಬದಲಾವಣೆ ಬಗ್ಗೆ ಚರ್ಚೆ ಮಾಡುವ ಅಗತ್ಯವಿಲ್ಲ. ಒಬ್ಬರು ಸಿಎಂ ಇರುವಾಗ ಇನ್ನೊಬ್ಬರು ಸಿಎಂ ಆಗುವ ಪ್ರಶ್ನೆ ಬರೋದಿಲ್ಲ. ಈ ಬಗ್ಗೆ ಏನೇ ಇದ್ದರೂ ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ. ಸಿದ್ದರಾಮಯ್ಯನವರು ಎಲ್ಲರಿಗೂ ಹಂಡ್ರೆಡ್ ಪರ್ಸೆಂಟ್ ವಿಶ್ವಾಸ ಇರುವ ನಾಯಕ" ಎಂದು ಹೇಳಿದರು.
ರಾಜ್ಯಪಾಲರ ಭಾಷಣದಲ್ಲಿ ರಾಜ್ಯ ಸರ್ಕಾರದ ಐದು ಗ್ಯಾರಂಟಿಗಳ ಉಲ್ಲೇಖ ವಿಚಾರವಾಗಿ ಮಾತನಾಡಿದ ಅವರು, "ದೇಶದಲ್ಲಿ ಯಾವುದೇ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿಲ್ಲ. ಸಿದ್ದರಾಮಯ್ಯ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡು ನಾಲ್ಕೇ ತಿಂಗಳಿನಲ್ಲಿ ಎಲ್ಲವನ್ನೂ ಅನುಷ್ಠಾನಗೊಳಿಸಿದೆ. ಎಷ್ಟೇ ಜನ ಟೀಕೆಗಳು ಮಾಡಿದರೂ, ನಾವು ನಮ್ಮ ಬದ್ಧತೆಯನ್ನು ತೋರಿಸಿದ್ದೇವೆ. ಹೇಗೆ ಈ ಗ್ಯಾರಂಟಿಗಳನ್ನು ಅಷ್ಟು ಬೇಗ ಜಾರಿಗೆ ತಂದಿರಿ ಎಂದು ಕೇಂದ್ರ ಸರ್ಕಾರದವರೇ ಕೇಳಿದ್ದಾರೆ" ಎಂದು ತಮ್ಮ ಸರಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ ಪ್ರಕರಣದಲ್ಲಿ ಶೀಘ್ರವೇ ದರೋಡೆಕೋರರನ್ನು ಬಂಧಿಸಿದ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ ದಿನೇಶ್ ಗುಂಡೂರಾವ್, "ಇಂತಹ ಸಮಾಜಘಾತುಕ ಶಕ್ತಿಗಳನ್ನ ನಿಯಂತ್ರಿಸುವುದು, ಆರೋಪಿಗಳನ್ನು ಶಿಕ್ಷೆಗೊಳಪಡಿಸೋದು ಸರ್ಕಾರದ ಕರ್ತವ್ಯ. ಈ ಪ್ರಕರಣವನ್ನು ಕೇವಲ ನಾಲ್ಕು ದಿನಗಳಲ್ಲಿ ಭೇದಿಸಿ ಎಲ್ಲಾ ಚಿನ್ನಾಭರಣವನ್ನ ವಶಪಡಿಸಿಕೊಂಡಿದ್ದಾರೆ. ಬ್ಯಾಂಕ್‌ಗಳು ಹಾಗೂ ಹಣಕಾಸು ಸಂಸ್ಥೆಗಳು ಸುರಕ್ಷತೆ ಬಗ್ಗೆ ಹೆಚ್ಚಿನ ಜಾಗ್ರತೆ ವಹಿಸಬೇಕು. ಸುರಕ್ಷತೆಯ ಬಗ್ಗೆ ಎಲ್ಲಾ ಹಣಕಾಸು ಸಂಸ್ಥೆಗಳಿಗೆ ಸುರಕ್ಷತೆಯ ಮಾರ್ಗಸೂಚಿ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದೇನೆ. ಈ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ. ಹಿಂದಿರುವವರು ಯಾರು ಎಲ್ಲವನ್ನು ಪೊಲೀಸರು ಪತ್ತೆ ಹಚ್ಚಲಿದ್ದಾರೆ" ಎಂದರು.
ಮಸಾಜ್ ಪಾರ್ಲರ್ ಮೇಲೆ ರಾಮಸೇನೆ ಕಾರ್ಯಕರ್ತರ ದಾಳಿ ಪ್ರಕರಣದ ಬಗ್ಗೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವ ದಿನೇಶ್ ಗುಂಡೂರಾವ್, "ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು. ಏನೇ ಆದರೂ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದರೆ ಪೊಲೀಸರ ಗಮನಕ್ಕೆ ತರಬೇಕು. ಈ ರೀತಿ ಗೂಂಡಾಗಿರಿ ಮಾಡಿ ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆಸರು ತರೋದು ಸರಿಯಲ್ಲ. ಇಂತಹ ಘಟನೆಗಳು ನಡೆದರೆ ಬಂಡವಾಳ ಹೂಡಿಕೆ, ಧಾರ್ಮಿಕ ಕ್ಷೇತ್ರಗಳಿಗೆ ಬರುವುದರ ಮೇಲೆ ಪರಿಣಾಮ ಬೀಳುತ್ತದೆ. ಆದ್ದರಿಂದ ಇಂಥವರ ವಿರುದ್ಧ ಎಲ್ಲರೂ ಧ್ವನಿ ಎತ್ತುವ ಅವಶ್ಯಕತೆಯಿದೆ. ಕೆಲವರು ಈ ಘಟನೆಯನ್ನು ಇನ್ನೂ ಖಂಡಿಸಿಲ್ಲ" ಎಂದು ಹೇಳಿದರು.
ಇದನ್ನೂ ಓದಿ: ಸಂವಿಧಾನ ರಕ್ಷಣೆಗೆ, ದೇಶದ ಐಕ್ಯತೆಗೆ ನಾವು ಹೋರಾಡಬೇಕು: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ