ಬೆಂಗಳೂರು: ರಾಜಕೀಯ ಪಿತೂರಿಯಿಂದ ಸಿಎಂ ಪತ್ನಿ, ಸಚಿವ ಭೈರತಿ ಸುರೇಶ್ ಅವರಿಗೆ ಇಡಿ (ಜಾರಿ ನಿರ್ದೇಶನಾಲಯ) ನೋಟಿಸ್ ನೀಡಿದೆ ಎಂದು ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಆರೋಪಿಸಿದರು.
ಸದಾಶಿವನಗರ ನಿವಾಸದ ಬಳಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಪತ್ನಿ, ಸಚಿವ ಭೈರತಿ ಸುರೇಶ್ ಅವರಿಗೆ ಇಡಿ ಸಂಸ್ಥೆ ನೋಟಿಸ್ ನೀಡಿದೆ ಎಂದು ಕೇಳಿದಾಗ, "ನನ್ನ ವಿರುದ್ಧದ ಪ್ರಕರಣದಲ್ಲೂ ಹೀಗೆ ಆಗಿತ್ತು. ಒಂದು ಪ್ರಕರಣವನ್ನು ಒಂದೇ ಸಮಯದಲ್ಲಿ ಎರಡು ಸಂಸ್ಥೆಗಳು ತನಿಖೆ ನಡೆಸಲು ಸಾಧ್ಯವಿಲ್ಲ. ಲೋಕಾಯುಕ್ತ ಸಂಸ್ಥೆ ಈಗಾಗಲೇ ತನಿಖೆ ಮಾಡುತ್ತಿದೆ. ಲೋಕಾಯುಕ್ತ ತನಿಖೆ ನಡೆಸುತ್ತಿರುವಾಗ ಬೇರೆ ಸಂಸ್ಥೆಗಳು ತನಿಖೆ ನಡೆಸಲು ಆಗುವುದಿಲ್ಲ ಎಂದು ನ್ಯಾಯಾಲಯಗಳು ಅನೇಕ ತೀರ್ಪು ನೀಡಿವೆ. ಈ ವಿಚಾರವಾಗಿ ಸಂಪೂರ್ಣ ಮಾಹಿತಿ ಪಡೆದ ನಂತರ ನಾನು ಮಾತನಾಡುತ್ತೇನೆ ಎಂದು ತಿಳಿಸಿದರು.
ಮುಡಾ ಪ್ರಕರಣ ಸಿಬಿಐ ತನಿಖೆ ನೀಡಬೇಕು ಎಂಬ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ನನ್ನ ಪ್ರಕರಣದಲ್ಲೂ ಸಿಬಿಐ ಹಾಗೂ ಇಡಿ ಒಟ್ಟಿಗೆ ತನಿಖೆ ಮಾಡುತ್ತಿದ್ದವು. ಯಾವುದೇ ಸಂಸ್ಥೆಗಳಾಗಲಿ ಒಟ್ಟಿಗೆ ಒಂದೇ ಪ್ರಕರಣವನ್ನು ಎರಡು ಸಂಸ್ಥೆಗಳು ತನಿಖೆ ಮಾಡುವಂತಿಲ್ಲ. ಈ ಕುರಿತಾಗಿ ಬಂದಿರುವ ನ್ಯಾಯಾಲಯದ ತೀರ್ಪುಗಳನ್ನು ನನ್ನ ಪ್ರಕರಣದಲ್ಲಿ ನ್ಯಾಯಾಲಯದ ಮುಂದೆ ಪ್ರಸ್ತಾಪ ಮಾಡಿದ್ದೆ ಎಂದು ಡಿಕೆಶಿ ತಿಳಿಸಿದರು.
ಸರ್ಕಾರ ಸುಭದ್ರವಾಗಿದೆ : ಸಿಎಂ ಹುದ್ದೆ ವಿಚಾರವಾಗಿ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿ, ಆ ರೀತಿಯಾಗಿ ಯಾರೂ ಏನೂ ಮಾತನಾಡಿಲ್ಲ. ಸರ್ಕಾರ ಸುಭದ್ರವಾಗಿದೆ. ನಾವೆಲ್ಲರೂ ಸಿಎಂ ಅವರ ಕೆಳಗೆ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.
ಪತ್ನಿಗೆ ಇಡಿ ನೋಟಿಸ್ ಬಂದಿದೆ : ಮತ್ತೊಂದೆಡೆ ನಟ ಶಿವರಾಜ್ ಕುಮಾರ್ ಅವರ ನಿವಾಸದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಮುಡಾ ಪ್ರಕರಣ ಸಂಬಂಧ ಇಡಿ ಸಮನ್ಸ್ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದರು. ಹೌದು, ನನ್ನ ಪತ್ನಿಗೆ ನೋಟಿಸ್ ಬಂದಿದೆ ಎಂದು ಸಿಎಂ ಒಪ್ಪಿಕೊಂಡರು.
ಇದನ್ನೂ ಓದಿ: ಮುಡಾ ಪ್ರಕರಣ: ಧಾರವಾಡ ಹೈಕೋರ್ಟ್ಗೆ ತನಿಖಾ ವರದಿ ಸಲ್ಲಿಸಿದ ಲೋಕಾಯುಕ್ತ ಅಧಿಕಾರಿಗಳು!