ನವದೆಹಲಿ: ಪಾಕಿಸ್ತಾನ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಫೆಬ್ರವರಿ 19ರಿಂದ ಮಾರ್ಚ್ 9ರವರೆಗೆ ನಡೆಯಲಿರುವ 2025ರ ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್‌ಗೆ 12 ಅಂಪೈರ್‌ಗಳು ಮತ್ತು ಮೂವರು ಮ್ಯಾಚ್ ರೆಫರಿಗಳ ಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಬುಧವಾರ ಪ್ರಕಟಿಸಿದೆ.
ಪಾಕಿಸ್ತಾನದ ಕರಾಚಿ, ಲಾಹೋರ್ ಮತ್ತು ರಾವಲ್ಪಿಂಡಿ ಹಾಗೂ ಯುಎಇಯ ದುಬೈನಲ್ಲಿ ಪಂದ್ಯಾವಳಿ ನಡೆಯಲಿದೆ. 12 ಅಂಪೈರ್ಗಳ ವಿಶೇಷ ಸಮಿತಿಯು ಎಂಟು ತಂಡಗಳು ಆಡಲಿರುವ ಪಂದ್ಯಾವಳಿಗೆ ಅಂಪೈರ್ ಆಗಿ ಕಾರ್ಯನಿರ್ವಹಿಸಲಿದ್ದು, ಇವರ ಪೈಕಿ ಆರು ಜನ 2017ರ ಆವೃತ್ತಿಯಲ್ಲಿಯೂ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.
2017ರಲ್ಲಿ ಯುನೈಟೆಡ್ ಕಿಂಗ್ಡಮ್ನಲ್ಲಿ ನಡೆದ ಹಿಂದಿನ ಚಾಂಪಿಯನ್ಸ್ ಟ್ರೋಫಿಯ ಫೈನಲ್ನಲ್ಲಿ ಅಂಪೈರಿಂಗ್ ಮಾಡಿದ್ದ ರಿಚರ್ಡ್ ಕೆಟಲ್ ಬರೋ ಕೂಡ ಪಟ್ಟಿಯಲ್ಲಿ ಸೇರಿದ್ದಾರೆ. ಇವರು 108 ಪುರುಷರ ಏಕದಿನ ಪಂದ್ಯಗಳಲ್ಲಿ ಅಂಪೈರ್ ಆಗಿ ಕೆಲಸ ಮಾಡಿದ್ದಾರೆ. ಕ್ರಿಸ್ ಗಫಾನಿ, ಕುಮಾರ್ ಧರ್ಮಸೇನಾ, ರಿಚರ್ಡ್ ಇಲ್ಲಿಂಗ್ ವರ್ತ್, ಪಾಲ್ ರೀಫೆಲ್ ಮತ್ತು ರಾಡ್ ಟಕರ್ ಕೂಡ ಅಂಪೈರ್ಗಳಾಗಿ ಕಾರ್ಯನಿರ್ವಹಿಸಲಿದ್ದಾರೆ. ರಾಡ್ ಟಕರ್ 2017ರ ಪಾಕಿಸ್ತಾನ ಗೆದ್ದುಕೊಂಡಿದ್ದ ಪಂದ್ಯಾವಳಿಯಲ್ಲಿಯೂ ಅಂಪೈರ್ ಆಗಿದ್ದರು.
ಧರ್ಮಸೇನಾ ಈಗಾಗಲೇ 132 ಪಂದ್ಯಗಳಲ್ಲಿ ಅಂಪೈರ್ ಆಗಿ ಕೆಲಸ ಮಾಡಿದ್ದು, ಇದು ಏಕದಿನ ಪಂದ್ಯಗಳಲ್ಲಿ ಶ್ರೀಲಂಕಾದ ಅಂಪೈರ್ ಒಬ್ಬರು ಅತ್ಯಧಿಕ ಸಂಖ್ಯೆಯ ಪಂದ್ಯಗಳಿಗೆ ಅಂಪೈರಿಂಗ್ ಮಾಡಿರುವ ದಾಖಲೆಯಾಗಿದೆ.
ಅಹಮದಾಬಾದ್ನಲ್ಲಿ ನಡೆದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 2023ರ ಪುರುಷರ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಒಟ್ಟಿಗೆ ಅಂಪೈರಿಂಗ್ ಮಾಡಿದ್ದ ಕೆಟಲ್ ಬರೋ ಮತ್ತು ಇಲ್ಲಿಂಗ್ ವರ್ತ್ ಅವರೊಂದಿಗೆ ಮೈಕೆಲ್ ಗೌಫ್, ಆಡ್ರಿಯನ್ ಹೋಲ್ಡ್ ಸ್ಟಾಕ್, ಅಹ್ಸಾನ್ ರಾಜಾ, ಶರ್ಫುದ್ದೀನ್ ಇಬ್ನೆ ಶಾಹಿದ್, ಅಲೆಕ್ಸ್ ವಾರ್ಫ್ ಮತ್ತು ಜೋಯಲ್ ವಿಲ್ಸನ್ ಕೂಡ ಅಂಪೈರ್ಗಳ ಪಟ್ಟಿಯಲ್ಲಿ ಸೇರಿದ್ದಾರೆ.
ಡೇವಿಡ್ ಬೂನ್, ರಂಜನ್ ಮದುಗಲೆ ಮತ್ತು ಆಂಡ್ರ್ಯೂ ಪೈಕ್ರಾಫ್ಟ್ 2025ರ ಚಾಂಪಿಯನ್ಸ್ ಟ್ರೋಫಿಯ ಮ್ಯಾಚ್ ರೆಫರಿಗಳ ಸಮಿತಿಯ ನೇತೃತ್ವ ವಹಿಸಲಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವಿನ 2017 ರ ಚಾಂಪಿಯನ್ಸ್ ಟ್ರೋಫಿ ಫೈನಲ್ನಲ್ಲಿ ಬೂನ್ ರೆಫರಿ ಆಗಿ ಕಾರ್ಯನಿರ್ವಹಿಸಿದ್ದರೆ, ಮದುಗಲೆ ಭಾರತ ಮತ್ತು ಇಂಗ್ಲೆಂಡ್ ನಡುವಿನ 2013ರ ಫೈನಲ್ನಲ್ಲಿ ರೆಫರಿ ಆಗಿದ್ದರು.
ಅಂಪೈರ್‌ಗಳು: ಕುಮಾರ್ ಧರ್ಮಸೇನಾ, ಕ್ರಿಸ್ ಗಫಾನಿ, ಮೈಕೆಲ್ ಗೌಫ್, ಆಡ್ರಿಯನ್ ಹೋಲ್ಡ್ ಸ್ಟಾಕ್, ರಿಚರ್ಡ್ ಇಲ್ಲಿಂಗ್ ವರ್ತ್, ರಿಚರ್ಡ್ ಕೆಟಲ್ ಬರೋ, ಅಹ್ಸಾನ್ ರಾಜಾ, ಪಾಲ್ ರೀಫೆಲ್, ಶರ್ಫುದ್ದೀನ್ ಇಬ್ನೆ ಶಾಹಿದ್, ರಾಡ್ನಿ ಟಕರ್, ಅಲೆಕ್ಸ್ ವಾರ್ಫ್, ಜೋಯಲ್ ವಿಲ್ಸನ್.
ಮ್ಯಾಚ್ ರೆಫರಿಗಳು: ಡೇವಿಡ್ ಬೂನ್, ರಂಜನ್ ಮದುಗಲೆ, ಆಂಡ್ರ್ಯೂ ಪೈಕ್ರಾಫ್ಟ್.
ಇದನ್ನೂ ಓದಿ: ಭಾರತ-ಪಾಕ್ ಪಂದ್ಯದ ಟಿಕೆಟ್ ಸೋಲ್ಡೌಟ್: 1.8 ಲಕ್ಷ ರೂಪಾಯಿ ಬೆಲೆಯ ಟಿಕೆಟ್‌ಗಳೂ ಖಾಲಿ! - ICC CHAMPIONS TROPHY 2025