ಬೆಂಗಳೂರು : ದೈನಂದಿನ ಗೃಹೋಪಯೋಗಿ ವಸ್ತುಗಳನ್ನು ನಕಲಿಯಾಗಿ ತಯಾರಿಸಿ ಮಾರಾಟ ಮಾಡುತ್ತಿದ್ದ ಗೋದಾಮುಗಳ ಮೇಲೆ ಸಿಸಿಬಿಯ ಆರ್ಥಿಕ ಅಪರಾಧ ದಳದ ಪೊಲೀಸರು ದಾಳಿ ನಡೆಸಿದ್ದಾರೆ.
ಕಾಟನ್‌ಪೇಟೆ, ಮಾಚೋಹಳ್ಳಿ, ಕಾಚೋಹಳ್ಳಿಯ ಗೋದಾಮಿನಲ್ಲಿ ನಕಲಿಯಾಗಿ ತಯಾರಿಸಿದ್ದ ಲೈಜಾಲ್, ಹಾರ್ಪಿಕ್, ಕಾಲಿನ್, ವಿವಿಧ ಡಿಟರ್ಜಂಟ್ ಪೌಡರ್‌ಗಳು, ಟೀ-ಪುಡಿ, ಗುಡ್ ನೈಟ್ ಲಿಕ್ವಿಡ್ ಸೇರಿದಂತೆ 1.75 ಕೋಟಿ ಮೌಲ್ಯದ ನಕಲಿ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ.
ಪ್ರತಿಷ್ಠಿತ ಕಂಪನಿಯ ಅಧಿಕೃತ ಪ್ರತಿನಿಧಿಯಿಂದ ದೊರೆತ ಮಾಹಿತಿಯನ್ನು ಆಧರಿಸಿ ಸಿಸಿಬಿಯ ಆರ್ಥಿಕ ಅಪರಾಧ ದಳದ ಪೊಲೀಸರು, ಕಾಟನ್‌ಪೇಟೆ, ಮಾಚೋಹಳ್ಳಿ, ಕಾಚೋಹಳ್ಳಿಗಳಲ್ಲಿರುವ ಗೋದಾಮುಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ನಕಲಿಯಾಗಿ ತಯಾರಿಸಿ ಶೇಖರಿಸಿಟ್ಟಿದ್ದ ವಿವಿಧ ಕಂಪನಿಗಳ ಉತ್ಪನ್ನಗಳು ಪತ್ತೆಯಾಗಿವೆ. ಅವುಗಳನ್ನ ವಶಕ್ಕೆ ಪಡೆದು ಸಿಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಇದೇ ರೀತಿ ನಕಲಿ ವಸ್ತುಗಳನ್ನು ತಯಾರಿಸಿ ದಾಸ್ತಾನು ಮಾಡಲಾಗಿರುವ ಸ್ಥಳಗಳ ಕುರಿತು ತನಿಖೆ ಮುಂದುವರೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಕೆಮಿಕಲ್ ಸೇಂದಿ ತಯಾರಿಸುತ್ತಿದ್ದ ಮನೆಯ ಮೇಲೆ ದಾಳಿ: ಸೇಂದಿ ಜಪ್ತಿ, ಮೂವರು ವಶಕ್ಕೆ - CHEMICAL SENDHI SEIZED