ಕಾರವಾರ: "ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮೈಕ್ರೋ ಫೈನಾನ್ಸ್ಗಳು, ಲೇವಾದೇವಿ ವ್ಯವಹಾರಸ್ಥರು, ಮೈಕ್ರೋ ಫೈನಾನ್ಸ್ ಹಣಕಾಸು ಸಂಸ್ಥೆಗಳು ಭಾರತೀಯ ರಿಸರ್ವ್ ಬ್ಯಾಂಕ್ನ ಮಾರ್ಗದರ್ಶನಗಳು ಹಾಗೂ ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು" ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯ ಎಚ್ಚರಿಕೆ ನೀಡಿದ್ದಾರೆ.
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ನಿಯಂತ್ರಣದ ಕುರಿತು ಸಭೆ ನಡೆಸಿದ ಅವರು, "ಇತ್ತೀಚಿನ ದಿನಗಳಲ್ಲಿ ರಾಜ್ಯಾದ್ಯಂತ ಮೈಕ್ರೋ ಫೈನಾನ್ಸ್ಗಳಲ್ಲಿ ಸಾಲ ಪಡೆದ ಗ್ರಾಹಕರಿಗೆ ಕಿರುಕುಳದಂತಹ ಪ್ರಕರಣಗಳು ಅಧಿಕವಾಗಿವೆ. ಇದಕ್ಕೆಲ್ಲ ಕಾರಣ ಆರ್ಬಿಐನ ಮಾರ್ಗಸೂಚಿಗಳು ಹಾಗೂ ನಿಯಮಗಳನ್ನು ಪಾಲಿಸದೇ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ" ಎಂದರು.
"ಮೈಕ್ರೋ ಫೈನಾನ್ಸ್ಗಳು ಸಾಲ ಕೊಡುವ ಮುನ್ನ ಸಾಲಗಾರರ ಕುಟುಂಬದ ಆದಾಯ ಸೇರಿದಂತೆ ಮತ್ತಿತರ ಪೂರ್ವಾಪರಗಳನ್ನು ಪರಿಶೀಲನೆ ಮಾಡಿ, ಅವರ ಆದಾಯದ ಶೇ.50ರಷ್ಟು ಮಾತ್ರ ಸಾಲ ನೀಡಬೇಕು. ಆದರೆ, ಅವರು ಸಾಲ ತೆಗೆದುಕೊಳ್ಳುವ ಸಾಮರ್ಥ್ಯ ನೋಡದೆ ಸಾಲ ನೀಡುತ್ತಿರುವುದು ಕಂಡುಬರುತ್ತಿದೆ. ಇದಕ್ಕೆ ಆಸ್ಪದ ನೀಡಬಾರದು. ಸಾಲ ನೀಡುವವರು ಹಾಗೂ ತೆಗೆದುಕೊಳ್ಳುವವರು ಇಬ್ಬರೂ ಸಹ ಆರ್ಥಿಕ ಶಿಸ್ತನ್ನು ಪಾಲಿಸಬೇಕು" ಎಂದು ಸೂಚಿಸಿದರು.
"ಆರ್‌ಬಿಐ ಮಾರ್ಗಸೂಚಿಯ ಪ್ರಕಾರ ಮೈಕ್ರೋ ಫೈನಾನ್ಸ್ಗಳು 3 ಲಕ್ಷ ರೂ. ವರೆಗೆ ಮಾತ್ರ ಸಾಲ ನೀಡಲು ಅವಕಾಶವಿದೆ. ಸಾಲ ಮರುಪಾವತಿಗೆ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಬೇಕು. ಒಬ್ಬನೇ ವ್ಯಕ್ತಿಗೆ ಹಲವು ಸಾಲಗಳನ್ನು ನೀಡಬಾರದು. ಸಾಲ ಮತ್ತು ಬಡ್ಡಿಯ ವಿವರಗಳನ್ನು ಸ್ಪಷ್ಟವಾಗಿ ತಿಳಿಸಿ, ಒಪ್ಪಿಗೆ ಪತ್ರ ಪಡೆದು ಸಾಲ ನೀಡಬೇಕು. ಕಾನೂನನ್ನು ಉಲ್ಲಂಘಿಸಿ, ಸಾಲಗಾರರ ಮೇಲೆ ದೌರ್ಜನ್ಯ, ಅವರ ಗೌರವಕ್ಕೆ ಧಕ್ಕೆಯಾಗುವಂತೆ ಕೆಟ್ಟ ಪದಗಳಲ್ಲಿ ಬೈಯುವುದು, ಫೋನ್ ಮಾಡಿ ಬೆದರಿಸುವುದು, ದಬ್ಬಾಳಿಕೆ, ಕಿರುಕುಳ ನೀಡುವುದು ಮಾಡಿದ್ದಲ್ಲಿ ಅಂತಹವರ ವಿರುದ್ಧ ಪ್ರಕರಣ ದಾಖಲಿಸಲಾಗುವುದು" ಎಂದು ಎಚ್ಚರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ. ಮಾತನಾಡಿ, "ಜಿಲ್ಲೆಯಲ್ಲಿ 201 ಮೈಕ್ರೋ ಫೈನಾನ್ಸ್ ಸಂಸ್ಥೆಗಳಿದ್ದು, ಹಳಿಯಾಳ, ಜೋಯಿಡಾ, ಮುಂಡಗೋಡ, ಸಿದ್ದಾಪುರ, ಬನವಾಸಿ ಭಾಗದಲ್ಲಿ ಮೀಟರ್ ಬಡ್ಡಿ ದಂಧೆ ನಡೆಯುತ್ತಿದೆ. ಸಾಲ ನೀಡುವ ಮತ್ತು ವಸೂಲಿ ಮಾಡುವ ಕ್ರಮಗಳು ಸರಳವಾಗಿ ಆಗಬೇಕು. ಸಾಲ ವಸೂಲಾತಿಗಾಗಿ ಫೈನಾನ್ಸ್ ಕಂಪನಿಗಳು ಬೆಳಗ್ಗೆ 9ಕ್ಕೂ ಮುನ್ನ ಸಂಜೆ 6ರ ನಂತರ ಸಾಲಗಾರರ ಮನೆಗೆ ಹೋಗಬಾರದು. ಯಾವುದೇ ರೀತಿಯ ದೌರ್ಜನ್ಯಗಳನ್ನು ನಡೆಸಬಾರದು. ಜಿಲ್ಲೆಯಲ್ಲಿ ಇದುವರೆಗೂ 7 ಪ್ರಕರಣ ದಾಖಲಿಸಿ, 37 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದ್ದು, ಸಾಲ ವಸೂಲಿಗಾಗಿ ಕ್ರಿಮಿನಲ್ಗಳನ್ನು ಬಳಸಿಕೊಂಡಲ್ಲಿ ಕಾನೂನು ಉಲ್ಲಂಘಿಸಿದ್ದಲ್ಲಿ ಅಂತಹವರ ಮೇಲೆ ನಿರ್ದ್ಯಾಕ್ಷಿಣ್ಯವಾಗಿ ಕಾನೂನಿನ ಕ್ರಮ ಕೈಗೊಳ್ಳಲಾಗುವುದು" ಎಂದು ಖಡಕ್ ಎಚ್ಚರಿಕೆ ರವಾನಿಸಿದರು.
ಜಿಲ್ಲೆಯಲ್ಲಿದ್ದಾರೆ 8144 ಮೈಕ್ರೋ ಪೈನಾನ್ಸ್ ಕ್ರಿಟಿಕಲ್ ಖಾತೆದಾರರು: "ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ ಹಾಗೂ ಎಮ್‌ಬಿಎಮ್ ಸೇರಿದಂತೆ ಒಟ್ಟು 1,84,511 ಖಾತೆದಾರರು ಇದ್ದು, 1143.67 ಕೋಟಿ ರೂ. ಸಾಲ ವಹಿವಾಟು ನಡೆದಿದೆ. ಇವರಲ್ಲಿ 8144 ಖಾತೆದಾರರಿಂದ 9 ಕೋಟಿ 44 ಲಕ್ಷ ರೂ. ಮರು ಸಂದಾಯವಾಗಬೇಕಿದ್ದು ರಾಜ್ಯದ, ಇನ್ನಿತರ ಜಿಲ್ಲೆಗೆ ಹೋಲಿಸಿದಲ್ಲಿ ಜಿಲ್ಲೆಯ ಸ್ಥಿತಿ ತೀರಾ ಕ್ರಿಟಿಕಲ್ ಆಗಿಲ್ಲ" ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಭಾರತಿ ವಸಂತ್ ತಿಳಿಸಿದ್ದಾರೆ.
"ಆರ್‌ಬಿಐನಿಂದ ನೋಂದಣಿ ಆದ ಮೈಕ್ರೋ ಫೈನಾನ್ಸ್ ಕಂಪನಿಗಳಲ್ಲಿರುವ ಈ 184511 ಅಧಿಕೃತ ಖಾತೆದಾರರಾಗಿದ್ದು, ಇನ್ನೂ ಅನಧಿಕೃತವಾಗಿರುವ ಫೈನಾನ್ಸ್ ಕಂಪನಿಗಳಲ್ಲಿ ಖಾತೆದಾರರು ಸಾಕಷ್ಟು ಇರುವ ಬಗ್ಗೆ ದೂರುಗಳು ಇವೆ. ಆದರೆ ಈ ಬಗ್ಗೆ ನಮ್ಮಲ್ಲಿ ಯಾವುದೇ ದಾಖಲೆಗಳಿಲ್ಲ. ಅಲ್ಲದೆ ಒಂದೇ ಗ್ರಾಹಕನಿಗೆ ಹಲವು ಖಾತೆಗಳ ಮೂಲಕ ಸಾಲ ನೀಡಲಾಗುತ್ತಿರುವ ಬಗ್ಗೆಯೂ ಕೇಳಿ ಬಂದಿದೆ. ಸಾಲದ ಬಡ್ಡಿಯನ್ನು ಕಟ್ಟಲಿಲ್ಲ ಎನ್ನುವ ಕಾರಣ ನೀಡಿ ಸಾಲಗಾರರ ಮೇಲೆ ಒತ್ತಡ ಹಾಕಿದರೆ ಅದಕ್ಕೂ ಕ್ರಮಕ್ಕೆ ಮುಂದಾಗಲಾಗುವುದು" ಎಂದು ತಿಳಿಸಿದರು.
"ಇತರೆ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಆರ್‌ಬಿಐ ಪ್ರಕಾರ ಜಿಲ್ಲೆಯಲ್ಲಿ ಕೇವಲ 8144 ಕ್ರಿಟಿಕಲ್ ಖಾತೆದಾರರು ಇದ್ದು, ಇವರೆಲ್ಲ ಸಾಲದ ಕಂತನ್ನು ಮೂರು ನಾಲ್ಕು ತಿಂಗಳ ಕಾಲ ಭರಿಸದೇ ಬಾಕಿ ಇದ್ದ ಪ್ರಕರಣಗಳಲ್ಲಿ ಈ ರೀತಿಯ ಕ್ರಿಟಿಕಲ್ ಪ್ರಕರಣಗಳು ಕಂಡು ಬಂದಿವೆ. ಲೀಗಲ್ ಆ್ಯಕ್ಟ್ ಮಾಡದೇ ತಮ್ಮ ಲಾಭಕ್ಕೋಸ್ಕರ ಈ ರೀತಿ ಸಾಲ ನೀಡಿದ್ದಲ್ಲಿ ಇಂತಹ ಸಮಸ್ಯೆ ಉಂಟಾಗುತ್ತದೆ. ಇದಕ್ಕೆ ಆರ್‌ಬಿಐ ನಿಯಮಾನುಸಾರವೇ ಸಾಲಗಾರರಿಂದ ಮರು ಭರಿಸಿಕೊಳ್ಳತಕ್ಕದ್ದು. ಯಾವುದೇ ಕಾರಣಕ್ಕೂ ನಿಯಮ ಉಲ್ಲಂಘನೆ ಮಾಡುವಂತಿಲ್ಲ" ಎಂದು ಹೇಳಿದರು.
ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳ ತಪ್ಪಿಸಲು ನಿಯಮ ಪಾಲನೆಗೆ ಸಿಎಸ್ ಸೂಚನೆ: ಇಲ್ಲಿದೆ ಸಹಾಯವಾಣಿ