ಬೆಂಗಳೂರು : ಮೈಕ್ರೋ ಫೈನಾನ್ಸ್ ಕಿರುಕುಳವನ್ನು ನಿಯಂತ್ರಿಸುವ ಸುಗ್ರೀವಾಜ್ಞೆಗೆ ರಾಜ್ಯಪಾಲರು ಸಹಿ ಹಾಕುತ್ತಾರೆಂಬ ನಿರೀಕ್ಷೆ ಇದೆ ಎಂದು ಗೃಹಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಈಗಾಗಲೇ ಮಸೂದೆಯನ್ನು ರಾಜ್ಯಪಾಲರಿಗೆ ರವಾನೆ ಮಾಡಿದೆ. ಕಾನೂನು ತಜ್ಞರು ಕೂಡ ರಾಜ್ಯಪಾಲರ ಜೊತೆ ಚರ್ಚೆ ಮಾಡಿದ್ದಾರೆ. ಬಹುತೇಕ ಇಂದು ಸಹಿ ಆಗಬಹುದೆಂಬ ನಿರೀಕ್ಷೆಗಳಿವೆ ಎಂದರು.
ಸುಗ್ರೀವಾಜ್ಞೆಗೆ ಅಂಗೀಕಾರ ದೊರೆತ ಬಳಿಕ ಯಾವಾಗಿನಿಂದ ಅನುಷ್ಠಾನಕ್ಕೆ ಬರಲಿದೆ ಎಂಬುದು ಗೊತ್ತಿಲ್ಲ. ಒಂದು ವೇಳೆ ಸುಗ್ರೀವಾಜ್ಞೆಯಲ್ಲಿ ತಿದ್ದುಪಡಿಗಳನ್ನು ರಾಜ್ಯಪಾಲರು ಸೂಚಿಸಿದರೆ ಅದನ್ನು ಮಾಡಲು ನಾವು ಸಿದ್ಧರಿದ್ದೇವೆ. ಇರುವಂತೆಯೇ ಒಪ್ಪಿದರೂ ಮಸೂದೆ ಜಾರಿಯಾಗಲಿದೆ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ನಾಳೆಯಿಂದ ಬಜೆಟ್ ಸಿದ್ಧತೆ ನಡೆಸಲಿದ್ದಾರೆ. ಪೊಲೀಸ್ ಇಲಾಖೆಯ ಜೊತೆಯೂ ಸಭೆ ನಡೆಸಿ ತಮ್ಮ ಬೇಡಿಕೆಗಳನ್ನು ಕೇಳಲಿದ್ದಾರೆ. ಪ್ರಸ್ತಾವನೆಗಳನ್ನು ಸಲ್ಲಿಸುವುದು ನಮ್ಮ ಕರ್ತವ್ಯ. ಅದನ್ನು ಅಂಗೀಕರಿಸುವುದು ಅಥವಾ ಬಿಡುವುದು ಮುಖ್ಯಮಂತ್ರಿಯವರಿಗೆ ಸೇರಿದೆ ಎಂದರು.
ಶಾಲೆಗಳಲ್ಲಿ ಹಿಜಾಬ್ ಧರಿಸುವ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ತೀರ್ಮಾನವಾಗಬೇಕು. ಅದಕ್ಕಾಗಿ ನಾವು ನಮ್ಮ ಅಭಿಪ್ರಾಯವನ್ನು ಹೇಳುತ್ತೇವೆ. ಈ ಕಾರಣಕ್ಕೆ ಚರ್ಚೆ ಮಾಡಲು ಸಭೆ ಕರೆಯಲಾಗಿದೆ. ಪರ-ವಿರೋಧಗಳು ಸಹಜ ಎಂದು ಸಚಿವರು ಹೇಳಿದರು.
ಬೆಂಗಳೂರಿನಲ್ಲಿ ಎರಡನೇ ಅಂತಾರಾಷ್ಟ್ರೀಯ ವಿಮಾನ ನಿರ್ಮಾಣದ ಬಗ್ಗೆ ಚರ್ಚೆಗಳು ಮುಂದುವರೆದಿವೆ. ತುಮಕೂರಿನಲ್ಲಿ ಸ್ಥಳ ಗುರುತಿಸುವಂತೆ ನಾವು ಬೇಡಿಕೆ ಸಲ್ಲಿಸಿದ್ದು, ಮತ್ತೊಂದೆಡೆ ಬಿಡದಿಯಲ್ಲಿ ಏರ್‌ಪೋರ್ಟ್ ಆಗಬೇಕೆಂಬ ಬೇಡಿಕೆಯೂ ಇದೆ. ಅದರ ಕುರಿತು ಚರ್ಚೆಗಳಾಗುತ್ತಿವೆ. ಸೂಕ್ತ ಸ್ಥಳವನ್ನು ನಿರ್ಧಾರ ಮಾಡಲಾಗುತ್ತದೆ ಎಂದು ತಿಳಿಸಿದರು.
ಸಿಎಂ ಬದಲಾವಣೆ ಬಗ್ಗೆ ಪ್ರತಿಪಕ್ಷದ ನಾಯಕ ಆರ್. ಅಶೋಕ್ ಹೇಳಿರುವುದರ ಬಗ್ಗೆ ನಮ್ಮ ತಕರಾರಿಲ್ಲ. ಆದರೆ, ಅವರು ಯಾವಾಗಿನಿಂದ ಜ್ಯೋತಿಷ್ಯ ಹೇಳಲು ಶುರು ಮಾಡಿದರೋ ಗೊತ್ತಿಲ್ಲ. ನಮಗೆ ತಿಳಿದ ಮಟ್ಟಿಗೆ ನಮ್ಮ ಪಕ್ಷದಲ್ಲಿ ಅಂತಹ ಸೂಚನೆಗಳಿಲ್ಲ. ಯಾವುದೇ ಬದಲಾವಣೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ ನವೆಂಬರ್ ಅಂತ್ಯದ ವೇಳೆಗೆ ಅಧಿಕಾರದಿಂದ ಕೆಳಗಿಳಿಯಬಹುದು: ಅಶೋಕ್ - R ASHOK